ಅಡಿಕೆ ಆತಂಕ | ಮಂಡಳಿ ಸ್ಥಾಪನೆ ಪ್ರಸ್ತಾವನೆ ತಳ್ಳಿಹಾಕಿದ ಕೇಂದ್ರ: ಎದುರಾಯ್ತು ಮತ್ತೊಂದು ಆಘಾತ
ಅಡಿಕೆ ಮಂಡಳಿಯ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಒತ್ತಡಗಳಿಗೆ, ಸಹಕಾರ ಸಂಘಗಳ ಲಾಬಿಗೆ ಮಣಿಯದೆ ಬೆಳೆಗಾರರ ಪರ ನಿಲ್ಲಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ;
ಅಡಿಕೆ ಕ್ಯಾನ್ಸರ್‌ಕಾರಕ ಎಂಬ ವಿಶ್ವಸಂಸ್ಥೆಯ ಅಂಗಸಂಸ್ಥೆಯ ವರದಿಯ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಅಡಿಕೆ ಮಂಡಳಿ ರಚನೆಯ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಈಗಾಗಲೇ ನಿಷೇಧದ ಆತಂಕದಲ್ಲಿರುವ ಅಡಿಕೆ ಬೆಳೆಗಾರರಿಗೆ ಕೇಂದ್ರ ಬಿಜೆಪಿ ಸರ್ಕಾರದ ಈ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಡಿಕೆ ಬೆಳೆ ಸಂಶೋಧನೆ, ಬೆಲೆ ನಿಗದಿ, ಸ್ಥಿರ ಮಾರುಕಟ್ಟೆ, ರೋಗ ನಿಯಂತ್ರಣ, ಕೃಷಿ ಬೆಂಬಲ, ಪರಿಹಾರ ಮುಂತಾದ ವಿಷಯಗಳಲ್ಲಿ ಅಡಿಕೆ ಬೆಳೆಗಾರರು ಮತ್ತು ನೀತಿ ನಿರೂಪಕ ಸರ್ಕಾರದ ನಡುವೆ ಅಧಿಕೃತ ಸಂಸ್ಥೆಯೊಂದು ಬೇಕಾಗಿದೆ. ಆ ಹಿನ್ನೆಲೆಯಲ್ಲಿ ರಬ್ಬರ್, ಕಾಫಿ, ಟೀ ಮಂಡಳಿಗಳಂತೆಯೇ ಆ ಎಲ್ಲಾ ವಾಣಿಜ್ಯ ಬೆಳೆಗಳ ದುಪ್ಪಟ್ಟು ಬೆಳೆ ಮತ್ತು ವಹಿವಾಟು ಹೊಂದಿರುವ ಅಡಿಕೆಗೂ ರಾಷ್ಟ್ರಮಟ್ಟದಲ್ಲಿ ಒಂದು ಮಂಡಳಿ ಬೇಕು ಎಂಬುದು ಈ ಹಿಂದಿನ ರಾಜ್ಯ ಸರ್ಕಾರಗಳ ಬೇಡಿಕೆಯಾಗಿತ್ತು.
ಆ ಬೇಡಿಕೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾಗಿದ್ದ ಡಾ ಡಿ ಎಲ್ ಮಹೇಶ್ವರ್ ಅವರ ನೇತೃತ್ವದಲ್ಲಿ 2016-17ರಲ್ಲಿ ಒಂದು ಸಮಿತಿ ನೇಮಿಸಲಾಗಿತ್ತು. ಆ ಸಮಿತಿಯ ವರದಿಯನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಂಟೇಷನ್ ಮ್ಯಾನೇಜ್ಮೆಂಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದ ಅಡಿಯಲ್ಲಿ ಅಡಿಕೆ ಮಂಡಳಿ(areca board) ರಚನೆ ಮಾಡಬೇಕಾದ ಅಗತ್ಯವೇನಿದೆ? ಮಂಡಳಿಯ ಸ್ವರೂಪ ಮತ್ತು ಹೊಣೆಗಾರಿಕೆಗಳೇನು? ಅದರ ಸ್ಥಾಪನೆಯ ಕರ್ಚುವೆಚ್ಚಗಳು, ಅದರ ಕಾರ್ಯನಿರ್ವಹಣೆಯ ವಿಧಿವಿಧಾನಗಳೇನು? ಎಂಬ ಎಲ್ಲಾ ವಿವರಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ಇದೀಗ ಪ್ರಸ್ತಾವನೆ ಸಲ್ಲಿಸಿದ ಏಳು ವರ್ಷಗಳ ಬಳಿಕ ಪತ್ರ ಬರೆದಿರುವ ಕೇಂದ್ರ ಸರ್ಕಾರ, ಅಡಿಕೆ ಮಂಡಳಿಯ ಅಗತ್ಯವೇ ಇಲ್ಲ ಎಂದು ಸಾರಾಸಗಟಾಗಿ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಳ್ಳಿಹಾಕಿದೆ.
ಮಂಡಳಿ ಬೇಡ ಎನ್ನಲು ಕಾರಣ?
ಮಂಡಳಿ ರಚನೆಯ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರ, ತನ್ನ ನಿರ್ಧಾರಕ್ಕೆ ನೀಡಿರುವ ಕಾರಣ, ಈಗಾಗಲೇ ಅಡಿಕೆ ಬೆಳೆ ಮತ್ತು ಬೆಳೆಗಾರರಿಗೆ ಸಂಬಂಧಿಸಿದಂತೆ ಕ್ಯಾಂಪ್ಕೊ, ಮ್ಯಾಮ್ಕೋಸ್ ಮುಂತಾದ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಕಾಸರಗೋಡಿನ ಅಡಿಕೆ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ, ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದಂತಹ ಸಂಸ್ಥೆಗಳು ಬೆಳೆ ಸಂಶೋಧನೆ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಹಾಗಾಗಿ ಮಾರುಕಟ್ಟೆ ಅಥವಾ ಸಂಶೋಧನೆ ಸೇರಿದಂತೆ ಅಡಿಕೆಗೆ ಪ್ರತ್ಯೇಕ ಮಂಡಳಿಯ ಅಗತ್ಯವಿಲ್ಲ ಎಂದು ಕೇಂದ್ರ ಹೇಳಿದೆ ಎನ್ನಲಾಗಿದೆ.
ಆದರೆ, ವಾಸ್ತವವಾಗಿ ಅಡಿಕೆ ಬೆಳೆ ಮತ್ತು ಬೆಳೆಗಾರರಿಗೆ ಕೇಂದ್ರ ಸರ್ಕಾರ ಉಲ್ಲೇಖಿಸಿರುವ ಈ ಸಂಸ್ಥೆಗಳಿಂದ ನಿಜವಾಗಿಯೂ ಸಕಾಲಿಕ ಮತ್ತು ಸೂಕ್ತ ನೆರವು, ಮಾರ್ಗದರ್ಶನ ಸಿಗುತ್ತಿದೆಯೇ? ಎಂಬ ಪ್ರಶ್ನೆಗೂ ಕೇಂದ್ರದ ಈ ಪ್ರತಿಕ್ರಿಯೆ ಇಂಬು ನೀಡಿದೆ.
ಬೆಂಬಲ- ಮಾರ್ಗದರ್ಶನ ಸಿಗುತ್ತಿದೆಯೇ?
ರಾಜ್ಯದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಕೊಡಗು, ಹಾಸನ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಮೈಸೂರು, ಮಂಡ್ಯ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 16 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯುತ್ತಿರುವ ಅಡಿಕೆಯಿಂದ ಸುಮಾರು 40 ಸಾವಿರ ಕೋಟಿಯಷ್ಟು ವಾರ್ಷಿಕ ವಹಿವಾಟು ನಡೆಯುತ್ತಿದೆ.
ಆದರೆ, ಎಲೆ ಚುಕ್ಕೆ ರೋಗ, ಹಳದಿ ಎಲೆ ರೋಗ, ಬೇರು ಹುಳು ಬಾಧೆ, ಕೊಳೆರೋಗಗಳ ಜೊತೆಗೆ ಅಡಿಕೆ ಕ್ಯಾನ್ಸರ್ ಕಾರಕ ಎಂಬ ಹಣೆಪಟ್ಟಿ ಹಚ್ಚಿ ಬೆಳೆಯನ್ನೇ ನಿಷೇಧಿಸುವ ಹುನ್ನಾರಗಳು ಕೂಡ ನಡೆಯುತ್ತಿವೆ. ಜೊತೆಗೆ ಮಾರುಕಟ್ಟೆ ಏಳಿತದ ವೈಪರೀತ್ಯಗಳು ಸಣ್ಣ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡುತ್ತಿವೆ.
ಅಡಿಕೆ ಮಾರುಕಟ್ಟೆಯಲ್ಲಿ ಸರ್ಕಾರದ ಅಥವಾ ಸಹಕಾರ ಸಂಸ್ಥೆಗಳ ಮಧ್ಯಪ್ರವೇಶವೇ ಇಲ್ಲದೆ ಕೇವಲ ಗುಟ್ಕಾ ಕಂಪನಿಗಳ ಏಕಸ್ವಾಮ್ಯಕ್ಕೆ ಒಳಪಟ್ಟಿರುವುದರಿಂದ ಸಂಪೂರ್ಣವಾಗಿ ಬೆಳೆಗಾರ ಅತಂತ್ರನಾಗಿದ್ದಾನೆ. ಕ್ಯಾಂಪ್ಕೋ ಮತ್ತು ಮ್ಯಾಮ್ಕೋಸ್ನಂತಹ ಸಂಸ್ಥೆಗಳು ಬೆಳೆಗಾರರ ಹಿತಕಾಯುವ ಧ್ಯೇಯದ ಮಾತನಾಡುತ್ತಿದ್ದರೂ, ವಾಸ್ತವವಾಗಿ ಅವುಗಳು ಉತ್ತರ ಭಾರತದ ಗುಟ್ಕಾ ಕಂಪನಿಗಳಿಗೆ ಅಡಿಕೆ ಸರಬರಾಜು ಮಾಡುವ ಏಜೆನ್ಸಿಗಳಂತೆ ಕೆಲಸ ಮಾಡುತ್ತಿವೆ. ಹಾಗಾಗಿ ಅಡಿಕೆ ಬೆಳೆಗಾರರ ಹಿತಕ್ಕಿಂತ ಅಲ್ಲಿ ಮಂಡಿ ಮಾಲೀಕರು ಮತ್ತು ಸಗಟು ಖರೀದಿದಾರರ ಹಿತವೇ ಮೇಲುಗೈ ಸಾಧಿಸುತ್ತಿದೆ ಎಂಬ ಮಾತುಗಳು ಎರಡು ದಶಕಗಳಿಂದ ಮತ್ತೆಮತ್ತೆ ಮಾರ್ದನಿಸುತ್ತಲೇ ಇವೆ.
ಈ ನಡುವೆ ಸಹಕಾರ ಸಂಸ್ಥೆಗಳಲ್ಲಿ ಬೆಳೆಗಾರರ ಪ್ರತಿನಿಧಿಗಳಿಗಿಂತ ಪಕ್ಷ ಮತ್ತು ಸಿದ್ಧಾಂತದ ಪ್ರತಿನಿಧಿಗಳೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದರಿಂದ ಅಲ್ಲಿ ನಿಜವಾಗಿಯೂ ಬೆಳೆಗಾರರ ಹಿತವಾಗಲೀ, ಅಡಿಕೆ ಬೆಳೆಯ ಹಿತವಾಗಲೀ ಆದ್ಯತೆಯಾಗಿ ಉಳಿದಿಲ್ಲ ಎಂಬ ಮಾತುಗಳೂ ಇವೆ. ಅದಕ್ಕೆ ಸಾಕ್ಷಿ ಎಂಬಂತೆ ಅಡಿಕೆ ಕುರಿತ ಆರೋಗ್ಯ ಸಂಬಂಧಿ ಆತಂಕಗಳಿಗೆ, ಕ್ಯಾನ್ಸರ್ ಕಾರಕ ಎಂಬ ಸಂಶೋಧನೆಗಳಿಗೆ ಸಂಬಂಧಿಸಿದಂತೆ ವಾಸ್ತವಾಂಶಗಳನ್ನು ಸರಿಯಾದ ವೈಜ್ಞಾನಿಕ ಸಂಶೋಧನೆ ಮತ್ತು ಕ್ಲಿನಿಕಲ್ ಟ್ರಯಲ್ ಮೂಲಕ ನ್ಯಾಯಾಲಯ, ಸರ್ಕಾರ ಮತ್ತು ಜನರ ಮುಂದಿಡುವ ಗಟ್ಟಿ ಪ್ರಯತ್ನಗಳು ಪರಿಣಾಮಕಾರಿಯಾಗಿ ನಡೆದೇ ಇಲ್ಲ. ಇನ್ನು ರೋಗಬಾಧೆ, ಮಾರುಕಟ್ಟೆ ವೈಪರೀತ್ಯಗಳು ಅಡಿಕೆ ಬೆಳೆಗಾರರನ್ನು ದಶಕಗಳಿಂದ ಪೀಡಿಸುತ್ತಿದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ನೈಜ ಪ್ರಯತ್ನಗಳಿಗೆ ಈಗಲೂ ಬರವಿದೆ.
ಅಡಿಕೆ ವಲಯದ ಸಹಕಾರ ಸಂಸ್ಥೆಗಳು ಮತ್ತು ಸರ್ಕಾರಿ ಸಂಶೋಧನಾ ಸಂಸ್ಥೆಗಳ ಈ ನಿಷ್ಕ್ರಿಯತೆ ಮತ್ತು ರಾಜಕೀಯ ಪ್ರೇರಿತ ನಡವಳಿಕೆಗಳೇ ವಾಸ್ತವವಾಗಿ ಅಡಿಕೆ ಮಂಡಳಿಯ ಬೇಡಿಕೆಗೆ ಜೀವ ನೀಡಿದ್ದವು.
ಬೆಳೆಗಾರರ ಒಳಿತಿಗೆ ಮಂಡಳಿ ಬೇಕು
ಆ ಹಿನ್ನೆಲೆಯಲ್ಲಿ ಕೃಷಿ ಆರ್ಥಿಕ ತಜ್ಞ ಡಾ ಟಿ ಎನ್ ಪ್ರಕಾಶ್ ಕಮ್ಮರಡಿ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, ಅಡಿಕೆ ಬೆಳೆಯನ್ನು ಬಾಧಿಸುತ್ತಿರುವ ನಿಷೇಧದ ಗುಮ್ಮ, ಎಲೆಚುಕ್ಕೆ ರೋಗ ಸೇರಿದಂತೆ ವಿವಿಧ ರೋಗಗಳು, ಮಾರುಕಟ್ಟೆ ಬಿಕ್ಕಟ್ಟು, ಸಂಶೋಧನೆ ಮತ್ತು ಪ್ರಯೋಗಗಳಿಗೆ ಮಂಡಳಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಮಂಡಳಿ ಕುರಿತ ರಾಜ್ಯ ಸರ್ಕಾರದ ಪ್ರಸ್ತಾವನೆಯ ವಿಷಯದಲ್ಲಿ ಮಹತ್ವದ ಪಾತ್ರ ವಹಿಸಿದ ಅಂದಿನ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ಕಮ್ಮರಡಿ ಅವರು, ಕೇಂದ್ರ ಸರ್ಕಾರದ ಕಾನೂನು ಅಡಿಯಲ್ಲಿಯೇ ಮಂಡಳಿ ರಚಿಸಬೇಕಿದೆ. ಕಾಫಿ, ಟೀ, ರಬ್ಬರ್ ಬೆಳೆಗಳಿಗೆ ಮಂಡಳಿ ರಚಿಸಿರುವ ಕೇಂದ್ರ ಸರ್ಕಾರ, ಆ ಎಲ್ಲಾ ಬೆಳೆಗಳಿಗಿಂತ ಅಧಿಕ ಬೆಳೆ ಪ್ರದೇಶ ಮತ್ತು ದುಪ್ಪಟ್ಟು ವಹಿವಾಟು ಹೊಂದಿರುವ ಅಡಿಕೆ ಬೆಳೆಯ ವಿಷಯದಲ್ಲಿ ಮಾತ್ರ ಮಂಡಳಿ ರಚಿಸಲು ನಿರಾಕರಿಸಿರುವುದು ದುರಾದೃಷ್ಟಕರ. ಆಮದು ಅಡಿಕೆ, ಕ್ಯಾನ್ಸರ್ ಕಾರಕ ಎಂಬ ವರದಿಗಳು ಮತ್ತು ಮಾರುಕಟ್ಟೆ ವೈಪರೀತ್ಯಗಳೂ ಸೇರಿದಂತೆ ಅಡಿಕೆಗೆ ಸಂಬಂಧಿಸಿದ ರಾಷ್ಟ್ರ ಮತ್ತು ಅಂತಾರಾಷ್ಟೀಯ ವಿಷಯಗಳನ್ನು ನಿರ್ವಹಿಸಲು ಕೇಂದ್ರ ಮಟ್ಟದಲ್ಲೇ ಮಂಡಳಿಯ ಅಗತ್ಯವಿದೆ. ರಾಷ್ಟ್ರಮಟ್ಟದಲ್ಲಿ ಬೆಳೆಗಾರರ ಹಿತಕಾಯುವುದು ಕೂಡ ಅಂತಹ ಕೇಂದ್ರೀಯ ಮಂಡಳಿಯಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕೋಟ್ಯಂತರ ಬೆಳೆಗಾರರ ಹಿತ ಕಾಯದ ಕೇಂದ್ರ
ಅಡಿಕೆ ಬೆಳೆ ಎಂಬುದು ಇಂದು ಕೇವಲ ಮಲೆನಾಡು, ಕರಾವಳಿಯ ಸಾಂಪ್ರದಾಯಿಕ ಬೆಳೆಯಾಗಿ ಉಳಿದಿಲ್ಲ. ಬೆಲೆ ಮತ್ತು ಮಾರುಕಟ್ಟೆಯ ಕಾರಣದಿಂದ ರಾಜ್ಯದ 15-20 ಜಿಲ್ಲೆಗಳಲ್ಲಿ ಬೆಳೆ ವಿಸ್ತರಿಸಿದೆ. ಜೊತೆಗೆ ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮಬಂಗಾಳ, ಅಸ್ಸಾಂ ಮತ್ತಿತರ ಈಶಾನ್ಯ ರಾಜ್ಯಗಳಲ್ಲೂ ಅಡಿಕೆ ಬೆಳೆ ಇದೆ. ಆ ಹಿನ್ನೆಲೆಯಲ್ಲಿ ದೇಶದ 25 ಲಕ್ಷ ಎಕರೆ ಬೆಳೆ ಪ್ರದೇಶ ಹೊಂದಿರುವ ಅಡಿಕೆಗೆ ಒಂದು ಕೇಂದ್ರ ಮಂಡಳಿಯ ಅಗತ್ಯ ಇದೆ ಎಂದು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ ಎ ರಮೇಶ್ ಹೆಗ್ಡೆ ಹೇಳಿದರು.
ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ಸಹಕಾರ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳ ನೆಪವೊಡ್ಡಿ ಮಂಡಳಿ ಅಗತ್ಯವಿಲ್ಲ ಎಂಬುದು ರಾಜ್ಯದ ಅಡಿಕೆ ಬೆಳೆಗಾರರಿಗೆ ಮಾಡುವ ಅನ್ಯಾಯ. ಅಡಿಕೆಯ ಭವಿಷ್ಯದ ದೃಷ್ಟಿಯಿಂದ ಅದರ ಮಾರುಕಟ್ಟೆ ವಿಸ್ತರಣೆ, ಮೌಲವರ್ಧನೆ, ಉತ್ಪಾದನೆ ಮತ್ತು ಬೇಡಿಕೆಯ ಸಮತೋಲನ, ಸಂಶೋಧನೆ ಮತ್ತು ಪ್ರಯೋಗಗಳ ಅಗತ್ಯಗಳನ್ನು ಪೂರೈಸಲು ಕೇಂದ್ರದ ಅನುದಾನದಡಿ ಮಂಡಳಿ ಸ್ಥಾಪಿಸಬೇಕು. ಇಲ್ಲವಾದಲ್ಲಿ ಈಗಾಗಲೇ ಸಂಕಷ್ಟದಲ್ಲಿರುವ, ಆತಂಕದಲ್ಲಿರುವ ಬೆಳೆಗಾರರ ಬದುಕು ಕೂಡ ಮುಳಗಲಿದೆ. ಅಡಿಕೆ ಮಂಡಳಿಯ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಒತ್ತಡಗಳಿಗೆ, ಸಹಕಾರ ಸಂಘಗಳ ಲಾಬಿಗೆ ಮಣಿಯದೆ ಬೆಳೆಗಾರರ ಪರ ನಿಲ್ಲಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ನಿಷೇಧದ ಭೀತಿ, ರೋಗ ಬಾಧೆ, ಮಾರುಕಟ್ಟೆ ಲಾಬಿಗಳ ಕಾರಣದಿಂದ ಡೋಲಾಯಮಾನ ಸ್ಥಿತಿಯಲ್ಲಿರುವ ಅಡಿಕೆ ಬೆಳೆಗಾರರಿಗೆ ಕೇಂದ್ರ ಸರ್ಕಾರದ ಈ ನಿರ್ಧಾರ ಆಘಾತ ತಂದಿದೆ. ಕೇಂದ್ರ ಮಂಡಳಿಯ ಮೂಲಕ ತಮ್ಮೆಲ್ಲಾ ಆತಂಕಗಳಿಗೆ ಪರಿಹಾರ ಸಿಗಬಹುದು, ತಮ್ಮ ಬೆಂಬಲಕ್ಕೆ ಪ್ರಬಲ ಸಾಂಸ್ಥಿಕ ಬಲ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಈಗ ಆಕಾಶವೇ ಕಳಚಿಬಿದ್ದಂತಹ ಸ್ಥಿತಿ ಎದುರಾಗಿದೆ.
ಈ ಮೊದಲು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ವೇಳೆ ಅಡಿಕೆ ಬೆಳೆಗಾರರ ಹಿತಕಾಯಲು ಬದ್ಧ ಎಂಬ ಭರವಸೆ ನೀಡಿದ್ದ ಬಿಜೆಪಿ ಮುಖಂಡರು ಇದೀಗ ಮಂಡಳಿ ರಚನೆಯ ವಿಷಯದಲ್ಲಿ ಬೆಳೆಗಾರರ ಹಿತವನ್ನು ಗಾಳಿಗೆ ತೂರಿರುವುದು ಆಘಾತಕರ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.