ಬಿಜೆಪಿಯಲ್ಲಿ ಶುರುವಾಗಿದೆ ಬಿಸಿ ಬಿಸಿ ಚರ್ಚೆ: ಮುಂದಿನ ರಾಜ್ಯಾಧ್ಯಕ್ಷ ಅರವಿಂದ ಬೆಲ್ಲದ್?
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿರುವ "ರಾಜ್ಯದಲ್ಲಿ ಚುನಾವಣೆ ಮೂಲಕ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಆಗಲಿದೆ," ಎಂಬ ಹೇಳಿಕೆ ಇದಕ್ಕೆ ಇಂಬು ಕೊಡುವಂತಿದೆ. ಈ ಎಲ್ಲ ಬೆಳವಣಿಗೆ ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವನ್ನುಂಟು ಮಾಡಿದೆ.;
ಬಿಜೆಪಿಯಲ್ಲಿ ಬಿ.ವೈ. ವಿಜಯೇಂದ್ರ ಬದಲಾವಣೆ ಕೂಗು ಎದ್ದಿರುವ ಬೆನ್ನಲ್ಲೆ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಮುಂದಿನ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ಚರ್ಚೆ ಬಿಜೆಪಿ ವಯಲದಿಂದ ಕೇಳಿಬಂದಿದೆ.
ಜತೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೊಟ್ಟಿರುವ "ರಾಜ್ಯದಲ್ಲಿ ಚುನಾವಣೆ ಮೂಲಕ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಆಗಲಿದೆ," ಎಂಬ ಹೇಳಿಕೆ ಕೂಡ ಇದಕ್ಕೆ ಇಂಬು ಕೊಡುವಂತಿದೆ. ಈ ಎಲ್ಲ ಬೆಳವಣಿಗೆಗಳು ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವನ್ನುಂಟು ಮಾಡಿವೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಬದಲಾವಣೆಗೆ ಬಿ.ಎಸ್. ಯಡಿಯೂರಪ್ಪ ವಿರೋಧ ಬಣಧ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗಾಗಲೇ ಆಗ್ರಹಿಸಿದ್ದಾರೆ. ʼವಿಜಯೇಂದ್ರ ಇನ್ನೂ ಹುಡುಗʼ ಎಂಬಂತಹ ಹೇಳಿಕೆಗಳನ್ನು ಯತ್ನಾಳ್ ಕೊಟ್ಟಿದ್ದಾರೆ. ಅದೂ ಸೇರಿದಂತೆ ಯತ್ನಾಳ್ ಆಗಾಗ ಯಡಿಯೂರಪ್ಪ ಹಾಗೂ ವಿಜಯೇಂದ್ರ ಕುರಿತು ಅಸಮಾಧಾನವನ್ನು ಹೊರಹಾಕುತ್ತಲೇ ಇದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರೀಯ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಕೂಡ ಜಾರಿಮಾಡಿತ್ತು. ಶಿಸ್ತು ಸಮಿತಿ ಎದುರಿಗೆ ಹೇಳಿಕೆಯನ್ನು ಕೊಟ್ಟ ಬಳಿಕ ಯತ್ನಾಳ್ ಮಾಧ್ಯಮಗಳಿಗೆ ಕೊಟ್ಟಿದ್ದ ಹೇಳಿಕೆ ಕೂಡ ಕುತೂಹಲ ಮೂಡಿಸಿತ್ತು. ಹೈಕಮಾಂಡ್ಗೆ ‘ಎಲ್ಲವನ್ನೂ ವಿವರಿಸಿ’ ಬಂದಿದ್ದೇನೆ ಎಂದು ಶೋಕಾಸ್ ನೋಟಿಸ್ಗೆ ಉತ್ತರಿಸಿದ ಬಳಿಕ ಯತ್ನಾಳ್ ತಿಳಿಸಿದ್ದರು. ಹೀಗಾಗಿ ಯತ್ನಾಳ್ ಉತ್ತರವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗುತ್ತಿದೆ.
ಈ ಮಧ್ಯೆ ಡಿ. 2 ರಂದು ಎರಡು ದಿನಗಳ ರಾಜ್ಯ ಪ್ರವಾಸದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿಜಯೇಂದ್ರಗೆ ಎರಡು ವಾರಗಳ ಕಾಲ ಕಾಯಿರಿ. ಎಲ್ಲವೂ ಸರಿಯಾಗಲಿದೆ ಎಂಬ ಭರವಸೆಯನ್ನು ಕೊಟ್ಟಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಬದಲಾಗುತ್ತಾರಾ? ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದು ಸುಲಭಸಾಧ್ಯವೆ?
ವಿಜಯೇಂದ್ರ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ...
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೇಳಗಿಳಿಸಿ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಬಿಜೆಪಿ ಹೈಕಮಾಂಡ್ ಮತ್ತೆ ಯಡಿಯೂರಪ್ಪ ಕೈಗೆ ರಾಜ್ಯ ಬಿಜೆಪಿಯನ್ನು ವಹಿಸಿತ್ತು. ಲೋಕಸಭಾ ಚುನಾವಣೆಗೂ ಮುನ್ನ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಆದರೆ ಅಲ್ಲಿಂದ ಮತ್ತೊಂದು ಸವಾಲು ಹೈಕಮಾಂಡ್ಗೆ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ರಾಜ್ಯ ಬಿಜೆಪಿ ಅಧ್ಯಕ್ಷರಾಗಲಿದ್ದಾರೆ ಎಂಬ ಗುಸುಗುಸು ಬಿಜೆಪಿಯಲ್ಲಿದೆ. ಬೆಲ್ಲದ್ ಕೂಡ ಲಿಂಗಾಯತ ಸಮುದಾಯವರಾಗಿದ್ದಾರೆ. ಅದರಲ್ಲಿಯೂ ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯದಕ್ಕೆ ಸೇರಿರುವುದರಿಂದ ಅವರ ಆಯ್ಕೆಗೆ ಹೈಕಮಾಂಡ್ ಒಲವಿದೆ. ಜೊತೆಗೆ ಇದೇ ಸಂದರ್ಭದಲ್ಲಿ ಬಿಜೆಪಿಯ ಮುಂದಿನ ರಾಜ್ಯಾಧ್ಯಕ್ಷರ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ಕೊಟ್ಟಿದ್ದಾರೆ. ಜೋಶಿ ಅವರೊಂದಿಗೆ ಬೆಲ್ಲದ್ ಉತ್ತಮ ಸಂಬಂಧ ಹೊಂದಿರುವುದರಿಂದ ಈ ಎಲ್ಲ ಬೆಳವಣಿಗೆಗಳು ಒಂದಕ್ಕೊಂದು ತಳಕು ಹಾಕಿಕೊಂಡಿರುವಂತೆ ಕಂಡು ಬರುತ್ತಿವೆ.
ಚರ್ಚೆ ಹುಟ್ಟು ಹಾಕಿದ ಪ್ರಲ್ಹಾದ್ ಜೋಶಿ ಹೇಳಿಕೆ
ಡಿ. 2 ರಂದು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯದಲ್ಲಿ ಚುನಾವಣೆ ಮೂಲಕ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಆಗಲಿದೆ. ಶಿವರಾಜ್ ಸಿಂಗ್ ಚೌಹಾಣ್ ಮೇಲ್ವಿಚಾರಣೆಯಲ್ಲಿ ಚುನಾವಣೆ ನಡೆಯಲಿದೆ. ಈಗಿನ ರಾಜ್ಯಾಧ್ಯಕ್ಷ ವಿಜಯೇಂದ್ರ ಚುನಾವಣೆ ನಡೆದು ಆಯ್ಕೆ ಆಗಿಲ್ಲ. ಎಲ್ಲರ ಸಮ್ಮತಿ ಪಡೆದು ಹೈಕಮಾಂಡ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದೆ. ಈಗ ಬಿಜೆಪಿ ಸದಸ್ಯತ್ವ ಅಭಿಯಾನ ಮುಗಿದ ಬಳಿಕ, ಪಕ್ಷದ ಎಲ್ಲ ಹಂತಗಳಲ್ಲಿ ನಡೆಯುವಂತೆ ಮುಂದಿನ ರಾಜ್ಯಾಧ್ಯಕ್ಷರ ಸ್ಥಾನಕ್ಕೂ ಚುನಾವಣೆ ನಡೆಯಲಿದೆ ಎಂದಿದ್ದಾರೆ.
ಬಿ.ವೈ. ವಿಜಯೇಂದ್ರ ಅವರನ್ನು ಬದಲಾವಣೆ ಮಾಡುವ ಉದ್ದೇಶವನ್ನಿಟ್ಟುಕೊಂಡು ಈ ಹೇಳಿಕೆಯನ್ನು ಜೋಶಿ ಕೊಟ್ಟಿದ್ದಾರೆ ಎಂಬ ವಿಶ್ಲೇಷಣೆ ಶುರುವಾಗಿದೆ.
ಈ ಹಿಂದೆ ಅಧ್ಯಕ್ಷ ಚುನಾವಣೆ ನಡೆದಿದೆತ್ತೆ?
ಈ ಮೊದಲು ಚುನಾವಣೆ ನಡೆದು ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಆಯ್ಕೆ ಮಾಡಿರುವ ಉದಾಹರಣೆ ಇಲ್ಲ. ಆದರೆ ಈಗ ಮಾತ್ರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಜಯೇಂದ್ರ ಅವರು ʼನೇಮಕದಿಂದʼ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದಿದ್ದಾರೆ. ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿ 1 ವರ್ಷ ಮಾತ್ರ ಆಗಿದೆ. ಯಾವುದೇ ಸಾರ್ವತ್ರಿಕ ಚುನಾವಣೆ ಇಲ್ಲದ ಸಂದರ್ಭದಲ್ಲಿ ಬಿಜೆಪಿಯಲ್ಲಿ ಯಾರೇ ಅಧ್ಯಕ್ಷರಾಗಿ ನೇಮಕವಾದರೂ ಎರಡು ವರ್ಷಗಳ ಕಾಲ ಮುಂದುವರೆಯುವುದು ಸಂಪ್ರದಾಯ. ಆದರೆ ವಿಜಯೇಂದ್ರ ಅಧ್ಯಕ್ಷರಾಗಿರುವಾಗ ಈ ಚರ್ಚೆಗಳು ನಡೆಯುತ್ತಿರುವುದು ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ತೋರಿಸುತ್ತಿದೆ.
ಅರವಿಂದ ಬೆಲ್ಲದ್ ಹೇಳುವುದೇನು?
ಈ ವಿಚಾರಕ್ಕೆ ಸಂಬಂಧಿಸಿದಂತೆ 'ದ ಫೆಡರಲ್ ಕರ್ನಾಟಕ' ಅರವಿಂದ ಬೆಲ್ಲದ್ ಅವರನ್ನು ಸಂಪರ್ಕಿಸಿದಾಗ, 'ನಾನು ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಇದ್ದೇನೆ. ಜೊತೆಗೆ ಪಕ್ಷ ನನ್ನನ್ನು ವಿಧಾನಸಭೆ ಉಪನಾಯಕನ್ನಾಗಿ ಮಾಡಿದೆ. ರಾಜ್ಯಾಧ್ಯಕ್ಷರ ಚುನಾವಣೆ ವಿಚಾರ ನನಗೆ ತಿಳಿದಿಲ್ಲ' ಎಂದಿದ್ದಾರೆ.
ಅರವಿಂದ ಬೆಲ್ಲದ್ ನಾನು ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಇಲ್ಲ ಎಂದಿದ್ದಾರೆ. ಆದರೆ ಹಿಂದೆ ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ಕೊಟ್ಟಾಗ ಮುಂದಿನ ಸಿಎಂ ಅರವಿಂದ ಬೆಲ್ಲದ್ ಆಗುತ್ತಾರೆ ಎಂಬ ಚರ್ಚೆಗಳು ಬಿಜೆಪಿಯಲ್ಲಿದ್ದವು. ಆದರೆ ಅದಾದ ಬಳಿಕ ಬಸವರಾಜ ಬೊಮ್ಮಾಯಿ ಮುಂದಿನ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿ, ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಯಡಿಯೂರಪ್ಪ ಪಟ್ಟು ಹಿಡಿದು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದರು ಎಂಬುದು ನಂತರ ಬಹಿರಂಗವಾಗಿತ್ತು.