ಕುಲಪತಿ ನೇಮಕ| ರಾಜ್ಯಪಾಲರ ಅಧಿಕಾರ: ಕೇಂದ್ರ-ರಾಜ್ಯ ಹಗ್ಗಜಗ್ಗಾಟ

ಯುಜಿಸಿ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ, ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಸರ್ವಾಧಿಕಾರ ನೀಡುವ ಕೇಂದ್ರದ ಕ್ರಮವನ್ನು ಸಿದ್ದರಾಮಯ್ಯ ಖಂಡಿಸಿದ್ದಾರೆ.;

Update: 2025-01-08 13:30 GMT
ಮುಖ್ಯಮಂತ್ರಿ ಸಿದ್ದರಾಮಯ್ಯ
Click the Play button to listen to article

ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿ ನೇಮಕಾತಿ ಸಂಬಂಧಿಸಿದಂತೆ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೈಗೊಂಡ ನಿರ್ಧಾರ ಬಗ್ಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಮೂಲಕ  ರಾಜ್ಯದ ವ್ಯಾಪ್ತಿಯಲ್ಲಿರುವ ವಿಶ್ವವಿದ್ಯಾನಿಲಯಗಳ ಮೇಲೆ ರಾಜ್ಯಪಾಲರಿಗಿರುವ ಹತೋಟಿಯನ್ನು ನಿಯಂತ್ರಿಸುವ ರಾಜ್ಯದ ನಿಲುವಿಗೆ ಕೇಂದ್ರ ಸೆಡ್ಡು ಹೊಡೆದಂತಾಗಿದೆ.

ಪಶ್ಚಿಮ ಬಂಗಾಲ, ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತದಲ್ಲಿಲ್ಲದ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಹತೋಟಿ ತೆಗೆದುಕೊಳ್ಳುತ್ತಿರುವ ಆರೋಪ ಕೇಂದ್ರ ಸರ್ಕಾರದ ಮೇಲಿದೆ.  ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣ ತನಿಖೆಗೆ  ಅನುಮತಿ ಸೇರಿದಂತೆ ರಾಜ್ಯಸರ್ಕಾರದ ವಿರುದ್ಧ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ಅವರು ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್‌ ಮುಖಂಡರು ಮಾಡಿದ್ದರು.  ಜತೆಗೆ ಸರ್ಕಾರದ ಹಲವು ಮಸೂದೆಗಳನ್ನು, ನಿರ್ಣಯಗಳನ್ನು ರಾಜ್ಯಪಾಲರು ನಿರಾಕರಿಸಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಶೀತಲ ಸಮರ ನಡೆಯುತ್ತಿತ್ತು.

ಕೇಂದ್ರ ರಾಜ್ಯಪಾಲರ ಮೂಲಕ ರಾಜ್ಯದ ಅಧಿಕಾರ ವ್ಯಾಪ್ತಿಯಲ್ಲಿ ಕೈಯ್ಯಾಡಿಸುತ್ತಿದೆ ಎಂಬ ಆರೋಪ ಮಾಡಿದ್ದ ಸಿದ್ದರಾಮಯ್ಯ ಸರ್ಕಾರ ವಿಶ್ವವಿದ್ಯಾನಿಲಯಗಳ ಮೇಲಿನ ರಾಜ್ಯಪಾಲರ ಅಧಿಕಾರ ವ್ಯಾಪ್ತಿಯನ್ನು ಕಡಿಮೆ ಮಾಡುವ ಪ್ರಯತ್ನಕ್ಕೆ ಮುಂದಾಗಿತ್ತು. ವಿ.ವಿ. ಕುಲಪತಿಗಳ ನೇಮಕ ಮತ್ತಿತರ ಅಧಿಕಾರವನ್ನು ರಾಜ್ಯಪಾಲರು ಹೊಂದಿರುವುದರಿಂದ ಅವರ ಅಧಿಕಾರ ವ್ಯಾಪ್ತಿಯನ್ನು ಕುಗ್ಗಿಸುವ ಸಂಬಂಧ ಮಸೂದೆಯೊಂದನ್ನು ರಾಜ್ಯ ಸರ್ಕಾರ ಇತ್ತೀಚಿನ ವಿಧಾನಸಭೆ ಅಧಿವೇಶನದಲ್ಲಿ ಮಂಡನೆ ಮಾಡಲಾಗಿತ್ತು.

ಈಗ ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ವಿಶ್ವವಿದ್ಯಾನಿಲಯಗಳ ಮೇಲೆ ರಾಜ್ಯಪಾಲರಿಗಿರುವ ಅಧಿಕಾರ ವ್ಯಾಪ್ತಿಯನ್ನು ಕುಂಠಿತಗೊಳಿಸುವ ಸಂಬಂಧ ತಮಿಳುನಾಡು, ಕೇರಳ, ಕರ್ನಾಟಕ ಸೇರದಂತೆ ಆಯಾ ಸರ್ಕಾರಗಳು ಪ್ರಯತ್ನ ನಡೆಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿಲುವು ತೆಗೆದುಕೊಂಡಿದೆ ಎನ್ನಲಾಗಿದೆ.  ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ, ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಸರ್ವಾಧಿಕಾರ ನೀಡುವ ನಿರ್ಣಯಕ್ಕೆ ಕೇಂದ್ರ  ಮುಂದಾಗಿದೆ.

ಈ ಬಗ್ಗೆ ಕಿಡಿಕಾರಿರುವ ಸಿದ್ದರಾಮಯ್ಯ,  ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುವ ಸಣ್ಣ ಅವಕಾಶವನ್ನೂ ಬಿಟ್ಟುಕೊಡದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ಕಣ್ಣು ಈಗ ರಾಜ್ಯದ ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ. ಯುಜಿಸಿ ನೇಮಕಾತಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಕರಡು ನಿಯಮಾಳಿಗಳನ್ನು ನಮ್ಮ ಸರ್ಕಾರ ಪರಿಶೀಲಿಸಿ, ಇದರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಚನೆ ಮಾಡಲಾಗುವುದು ಎಂದು ಹೇಳಿದ್ದಾರೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ, ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಸರ್ವಾಧಿಕಾರ ನೀಡಿ ರಾಜ್ಯ ಸರ್ಕಾರಗಳ ಅಧಿಕಾರವನ್ನು ಕಿತ್ತುಕೊಳ‍್ಳಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದು ಅವರು ತಿಳಿಸಿದ್ದಾರೆ. 

ಈಗಿರುವ ನಿಯಮಾವಳಿಗಳ ಪ್ರಕಾರ ಉಪಕುಲಪತಿಗಳ ನೇಮಕಾತಿಗೆ ರಾಜ್ಯ ಸರ್ಕಾರ ಶೋಧನಾ ಸಮಿತಿಯನ್ನು ರಚಿಸುತ್ತಿತ್ತು. ಅದರಲ್ಲಿ ಕುಲಪತಿಗಳಾಗಿರುವ ರಾಜ್ಯಪಾಲರು ಶಿಫಾರಸು ಮಾಡುವ ವ್ಯಕ್ತಿಗಳು ಕೂಡಾ ಸದಸ್ಯರಾಗಿರುತ್ತಿದ್ದರು. ಹೊಸ ನಿಯಮಗಳ ಪ್ರಕಾರ ರಾಜ್ಯಪಾಲರು ಸೂಚಿಸುವ ವ್ಯಕ್ತಿಯೇ ಶೋಧನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇದು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದ ಮೇಲಿನ ನೇರ ಸವಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ. 

ರಾಜ್ಯದ ವಿಶ‍್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗಾಗಿ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅರ್ಜಿಗಳನ್ನು ಆಹ್ವಾನಿಸಬೇಕೆಂದು ಯುಜಿಸಿ ಹೊಸ ನಿಯಮಾವಳಿಗಳು ಹೇಳುತ್ತಿದೆ. ಇಲ್ಲಿಯ ವರೆಗೆ ಆಯಾ ರಾಜ್ಯಗಳ ವಿದ್ವಾಂಸರಿಗಷ್ಟೇ ಸೀಮಿತವಾಗಿದ್ದ ರಾಜ್ಯಪಾಲರ ಹುದ್ದೆ ಹೊಸ ನಿಯಮಗಳು ಜಾರಿಗೆ ಬಂದರೆ ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಸ್ಥಾನದಲ್ಲಿ ಅನ್ಯಭಾಷಿಕರು ಬಂದು ಕೂರುವ ಅಪಾಯ ಇದೆ ಎಂದು ಅವರು ತಿಳಿಸಿದ್ದಾರೆ. 

ಉಪಕುಲಪತಿಗಳ ನೇಮಕಾತಿಯ ಅರ್ಹತೆಗೆ ಸಂಬಂಧಿಸಿದಂತೆಯೂ ಕೆಲವು ಪ್ರಮುಖ ಬದಲಾವಣಿಗಳನ್ನು ಮಾಡಲಾಗಿದೆ. ಹೊಸ ನಿಯಮಗಳ ಪ್ರಕಾರ ಉಪಕುಲಪತಿಗಳನ್ನು ಕೇವಲ ಅಕಾಡೆಮಿಕ್ ವಲಯದಿಂದ ಮಾತ್ರ ನೇಮಿಸಿಕೊಳ್ಳದೆ, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಉದ್ಯಮಿಗಳು, ಸಾರ್ವಜನಿಕ ಆಡಳಿತದ ನೀತಿ ನಿರೂಪಕರು ಸೇರಿದಂತೆ ಬೇರೆ ಕ್ಷೇತ್ರದಲ್ಲಿರುವ ತಜ್ಞರನ್ನು ನೇಮಕಮಾಡಿಕೊಳ್ಳಬಹುದಾಗಿದೆ. ಇದು ಕನ್ನಡಿಗರಿಗೆ ಬಗೆಯುವ ದ್ರೋಹವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಯಲ್ಲಿ ರಾಜ್ಯಪಾಲರು ಅನಗತ್ಯವಾಗಿ ಮೂಗುತೂರಿಸುತ್ತಾ ಬಂದಿ‍ದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ರಾಜ್ಯ ಸರ್ಕಾರದ ಶಿಫಾರಸನ್ನು ನಿರ್ಲಕ್ಷಿಸಿ ತಮ್ಮ ಆಯ್ಕೆಯನ್ನು ನಮ್ಮ ಮೇಲೆ ಹೇರುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ನಿರ್ವಹಣೆ ರಾಜ್ಯ ಸರ್ಕಾರದ ಪರಮಾಧಿಕಾರವಾಗಿದ್ದು ಇದರಲ್ಲಿ ಅನಗತ್ಯವಾದ ಮಧ್ಯಪ್ರವೇಶದಿಂದಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಘರ್ಷಣೆ ಏರ್ಪಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. 

ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಇಂತಹ ನಡವಳಿಕೆಗಳನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ. ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ಜೊತೆಯಲ್ಲಿ ಈ ಬಗ್ಗೆ ಚರ್ಚಿಸಿ ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Tags:    

Similar News