Actor Darshan Case | ದರ್ಶನ್‌ಗೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ; ಜಾಮೀನು ರದ್ದತಿಗೆ ಕ್ರಮ: ಡಾ.ಜಿ.ಪರಮೇಶ್ವರ್‌

ಜಾಮೀನು ದೊರೆತು ವಾರ ಕಳೆದರೂ ದರ್ಶನ್‌ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂಬುದು ಗೊತ್ತಾಗಿದೆ. ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಗೃಏಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

Update: 2024-11-25 07:18 GMT

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದಿರುವ ನಟ ದರ್ಶನ್‌ಗೆ ಮತ್ತೆ ದೊಡ್ಡ ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿ ಕೊಲೆಯಾದ ಸ್ಥಳದಲ್ಲಿ ದರ್ಶನ್ ಇರುವ ಪೋಟೊ ಪೊಲೀಸರಿಗೆ ದೊರೆತಿರುವ ಹಿನ್ನೆಲೆಯಲ್ಲಿ ಜಾಮೀನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ದರ್ಶನ್‌ಗೆ ಬೆನ್ನುನೋವಿನ ಶಸ್ತ್ರಚಿಕಿತ್ಸೆ ಅಗತ್ಯವಿರುವ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಜಾಮೀನು ಪಡೆದಿದ್ದಾರೆ. ಆದರೆ, ಜಾಮೀನು ದೊರೆತು ವಾರ ಕಳೆದರೂ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂಬುದು ತಿಳಿದುಬಂದಿದೆ. ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಜೊತೆಗಿದ್ದ ಇತರೆ ಆರೋಪಿಗಳ ಮೊಬೈಲ್ ಜಪ್ತಿ ಮಾಡಿ ಪರೀಕ್ಷೆಗಾಗಿ ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಆ ಮೊಬೈಲ್‌ಗಳಲ್ಲಿ ದರ್ಶನ್ ಇರುವ ಚಿತ್ರಗಳು ಲಭ್ಯವಾಗಿವೆ. ಮೇಲ್ನೋಟಕ್ಕೆ ಪ್ರಕರಣದಲ್ಲಿ ದರ್ಶನ್ ಪಾತ್ರ ದೊಡ್ಡದಾಗಿ ಕಾಣುತ್ತಿದೆ. ಹಾಗಾಗಿ  ಜಾಮೀನು ರದ್ದು ಮಾಡುವಂತೆ ಕೋರಲಾಗುವುದು ಎಂದು ತಿಳಿಸಿದರು.

ಇನ್ನು ದರ್ಶನ್ ಜೊತೆಗೆ ಇದ್ದ ವ್ಯಕ್ತಿಯೊಬ್ಬರು ಕೃತ್ಯದ ವಿಡಿಯೋ ಮಾಡಿದ್ದರು. ಅದನ್ನೂ ಕೂಡ ನ್ಯಾಯಾಲಯಕ್ಕೆ ಸಲ್ಲಿಸಿ, ಜಾಮೀನು ರದ್ದತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪೊಲೀಸರು ದರ್ಶನ್ ಹಾಗೂ ಇತರೆ ಆರೋಪಿಗಳ ವಿರುದ್ಧ 1300 ಪುಟಗಳ ದೋಷಾರೋಪ ಪಟ್ಟಿಯನ್ನು 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಡಿಜಿಟಲ್ ಸಾಕ್ಷ್ಯಗಳು, ವಿಧಿವಿಜ್ಞಾನ ಪ್ರಯೋಗಾಲಯ ವರದಿ, ಕರೆಗಳ ವಿವರ(ಸಿಡಿಆರ್) ಕೂಡ ಇದೆ ಎಂದು ಪರಮೇಶ್ವರ್ ತಿಳಿಸಿದರು.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಮಾಡಿದ ಬಳಿಕ ಚಿತ್ರದುರ್ಗದ ಅನುಕುಮಾರ್ ಹಾಗೂ ದರ್ಶನ್ ಇಬ್ಬರು ಒಟ್ಟಿಗೆ ಹೊರಬರುತ್ತಿರುವ ಚಿತ್ರವನ್ನು ಭದ್ರತಾ ಸಿಬ್ಬಂದಿ ತೆಗೆದಿದ್ದಾರೆ. ಎಫ್ಎಸ್‌ಎಲ್‌ ನಲ್ಲಿ ಈ ಪೋಟೊಗಳನ್ನು ಮರು ಸಂಗ್ರಹಿಸಲಾಗಿದೆ. ಆರೋಪಿಗಳ ದೂರವಾಣಿ ಕರೆಗಳ ಮಾಹಿತಿ ಸಂಗ್ರಹಿಸಿ ದೋಷಾರೋಪ ಪಟ್ಟಿಯಲ್ಲಿ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾದ ನಟ ದರ್ಶನ್ ಆರೋಗ್ಯ ತಪಾಸಣೆಗಾಗಿ ಹೈಕೋರ್ಟ್ ಅ.30 ರಂದು ಆರು ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ನೇತೃತ್ವದ ನ್ಯಾಯಪೀಠ ಎಂಟು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತ್ತು.

Tags:    

Similar News