Belagavi Session | ಅನ್ವರ್ ಮಾಣಿಪ್ಪಾಡಿಗೆ ಲಂಚದ ಆಮಿಷ ಆರೋಪ: ಸದನದಲ್ಲಿ ಬಿಜೆಪಿ-ಕಾಂಗ್ರೆಸ್ ವಾಕ್ಸಮರ
ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅನ್ವರ್ ಮಾಣಿಪ್ಪಾಡಿಗೆ ಲಂಚದ ಆಮಿಷವೊಡ್ಡಿದ ಆರೋಪ ಕುರಿತ ಹೇಳಿಕೆ ಸೋಮವಾರ ಬೆಳಗಾವಿ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸಿತು.;
ವಕ್ಫ್ ಆಸ್ತಿ ಕುರಿತು ಅನ್ವರ್ ಮಾಣಿಪ್ಪಾಡಿ ವರದಿ ಬಹಿರಂಗಪಡಿಸದಿರಲು ಲಂಚದ ಆಮಿಷವೊಡ್ಡಿದ್ದರು ಎಂಬ ಆರೋಪ ಸೋಮವಾರ ಬೆಳಗಾವಿ ಅಧಿವೇಶನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೋಲಾಹಲಕ್ಕೆ ಕಾರಣವಾಯಿತು.
ಬಿಜೆಪಿ ರಾಜ್ಯಾಧ್ಯಕ್ಷರಾದ ಶಾಸಕ ಬಿ.ವೈ. ವಿಜಯೇಂದ್ರ ಸ್ಪಷ್ಟೀಕರಣಕ್ಕೆ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. ಆಗ ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಕಲಾಪ ಆರಂಭವಾಗುತ್ತಿದ್ದಂತೆ ಶಾಸಕ ಬಿ.ವೈ. ವಿಜಯೇಂದ್ರ ತಮ್ಮ ಮೇಲಿನ ವಕ್ಫ್ ಆರೋಪದ ಕುರಿತು ಸ್ಪಷ್ಟೀಕರಣ ನೀಡಲು ಸಮಯ ನೀಡುವಂತೆ ಸಭಾಧ್ಯಕ್ಷರನ್ನು ಕೋರಿದರು. ಸ್ಪಷ್ಟೀಕರಣಕ್ಕೆ ನೀಡಿದ ಅವಕಾಶದಲ್ಲಿ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಆರಂಭಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿ, ಗದ್ದಲ ಎಬ್ಬಿಸಿದರು.
ಕೃಷ್ಣ ಭೈರೇಗೌಡ ತಿರುಗೇಟು
ಶಾಸಕ ವಿಜಯೇಂದ್ರ ಅವರ ಸ್ಪಷ್ಟೀಕರಣಕ್ಕೆ ಆಕ್ಷೇಪವೆತ್ತಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ರಾಜಕೀಯ ಭಾಷಣ ಬಿಟ್ಟು ಆರೋಪಕ್ಕೆ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು. ವಿಜಯೇಂದ್ರ ಅವರೇ, ನಿಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟೀಕರಣ ನೀಡಿ. ರಾಜಕೀಯ ಭಾಷಣ ಮಾಡುತ್ತಾ ಕಲಾಪದ ಸಮಯ ಹಾಳು ಮಾಡಬೇಡಿ ಎಂದು ಆಗ್ರಹಿಸಿದರು.
ವಕ್ಫ್ ವರದಿ ಬಹಿರಂಗ ಮಾಡದಿರಲು ಬಿ.ವೈ. ವಿಜಯೇಂದ್ರ ಒತ್ತಡ ಹೇರಿದ್ದರು. 150 ಕೋಟಿ ರೂ. ಲಂಚದ ಆಮಿಷವೊಡ್ಡಿದ್ದರು ಎಂದು ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ. ಈ ಸಂಬಂಧ ನೀವು ಸ್ಪಷ್ಟೀಕರಣ ನೀಡಿ. ಸದನದಲ್ಲಿ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಸಮಯ ವ್ಯರ್ಥ ಮಾಡಬೇಡಿ. ಹಾಗೊಮ್ಮೆ ರಾಜಕೀಯ ಭಾಷಣ ಮಾಡಿಯೇ ತೀರುತ್ತೇವೆ ಎಂದಾದರೆ ನಾವು ಕೂಡ ರಾಜಕೀಯ ಭಾಷಣ ಮಾಡಲು ಸಿದ್ಧ. ಸಭಾಧ್ಯಕ್ಷರೇ ನಮಗೂ ಅವಕಾಶ ಕೊಡಿ ಎಂದು ಕೃಷ್ಣ ಬೈರೇಗೌಡ ಕೋರಿದರು.
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಮಾತ್ರ ದಾಳಿ ಮಾಡುತ್ತವೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ, ಅನ್ವರ್ ಮಾಡಿಪ್ಪಾಡಿ ಅವರು ವಿಜಯೇಂದ್ರ ವಿರುದ್ಧ150 ಕೋಟಿ ರೂ. ಲಂಚದ ಆರೋಪ ಮಾಡಿದ್ದರು. ಆಗ ಸಿಬಿಐ-ಇಡಿ ಯಾಕೆ ತನಿಖೆ ಮಾಡಿಲ್ಲ. ಅದಾನಿ ಗ್ರೂಪ್ ಲಂಚದ ಪ್ರಕರಣದಲ್ಲಿ ಮೌನ ವಹಿಸಿರುವುದೇಕೆ?, ಬನ್ನಿ ಈ ಬಗ್ಗೆಯೂ ಚರ್ಚೆ ಮಾಡೋಣ ಎಂದು ವಿಜಯೇಂದ್ರ ಅವರಿಗೆ ಸಚಿವರು ಸವಾಲೆಸೆದರು.
ʼಸದನ ಇರುವುದು ಜನರ ಸಮಸ್ಯೆಗಳ ಚರ್ಚೆಗೆ ವಿನಃ ರಾಜಕೀಯ ಭಾಷಣ ಮಾಡುವುದಕ್ಕಲ್ಲ. ಶೀಘ್ರದಲ್ಲೇ ಉತ್ತರ ಕರ್ನಾಟಕದ ಕಳಸಾ ಬಂಡೂರಿ, ಕೃಷ್ಣ, ತುಂಗಭದ್ರಾ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಬೇಕಿದೆ. ದಯವಿಟ್ಟು ನಿಮ್ಮ ಸ್ಪಷ್ಟೀಕರಣ ನೀಡಿʼ ಎಂದು ತಾಕೀತು ಮಾಡಿದರು.
ಸಿಬಿಐ ಮೇಲೆ ಸಿಎಂಗೆ ವಿಶ್ವಾಸ ಬಂದಿದೆ; ವಿಜಯೇಂದ್ರ ಟೀಕೆ
ಕಲಾಪ ಆರಂಭಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಅನ್ವರ್ ಮಾಣಿಪ್ಪಾಡಿಗೆ 150 ಕೋಟಿ ಲಂಚದ ಆಮಿಷವೊಡ್ಡಿದ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಸಿಬಿಐ ಮೇಲೆ ವಿಶ್ವಾಸ ಬಂದು ಬಿಟ್ಟಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ವ್ಯಂಗ್ಯವಾಡಿದರು. ಸದನದ ಒಳಗೆ ನನ್ನ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಅದನ್ನೇ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ವಾಲ್ಮೀಕಿ, ಮೂಡಾ, ಅಬಕಾರಿ ಹಗರಣದಲ್ಲಿ ಸಿಕ್ಕಿಬಿದ್ದಿರುವ ಸಿಎಂ ಸಿದ್ದರಾಮಯ್ಯ ಬಗ್ಗೆ ಮರುಕವಿದೆ. ಭ್ರಷ್ಟಾಚಾರದಿಂದ ಪಾರಾಗಲು ಪರಿತಪಿಸುತ್ತಿದ್ದಾರೆ. ನನ್ನ ಮೇಲಿನ ಆರೋಪಗಳ ಕುರಿತು ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದರು.