Annamalai| ವಿಕ್ರಂ ಗೌಡ ಎನ್‌ಕೌಂಟರ್, ನಕ್ಸಲರ ಶರಣಾಗತಿ ಸಂಶಯ ಮೂಡಿಸುತ್ತಿದೆ: ಅಣ್ಣಾಮಲೈ
Annamalai| ನಕ್ಸಲ್ ಶರಣಾಗತಿಯ ಮೊದಲು ಹಲವು ಚರ್ಚೆಗಳನ್ನು ನಡೆಸಬೇಕಿದೆ. ಅವರು ಜೀವನದಲ್ಲಿ ಏನು ಆಗಬೇಕು ಎನ್ನುವುದು ನಿರ್ಧರಿಸಿಯೇ ಬರುತ್ತಾರೆ.;
ಕಳೆದ ನವೆಂಬರ್‌ನಲ್ಲಿ ನಡೆದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಹಾಗೂ ಇತ್ತೀಚೆಗೆ ನಡೆದ ನಕ್ಸಲ್ ಶರಣಾಗತಿ ಪ್ರಕ್ರಿಯೆ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆಯೂ ಚಿಕ್ಕಮಗಳೂರಿನಲ್ಲಿ ನಕ್ಸಲ್ ಶರಣಾಗತಿ ಪ್ರಕ್ರಿಯೆ ಮಾಡಲಾಗಿದೆ. ಇದೊಂದು ದೊಡ್ಡ ಪ್ರಕ್ರಿಯೆ, ರಾಜ್ಯದಲ್ಲಿ ನಕ್ಸಲ್ ಶರಣಾಗತಿ ನೀತಿ ಕೂಡಾ ಇದೆ. ನಕ್ಸಲ್ ಶರಣಾಗತಿಯ ಮೊದಲು ಹಲವು ಚರ್ಚೆಗಳನ್ನು ನಡೆಸಬೇಕಿದೆ. ಅವರು ಜೀವನದಲ್ಲಿ ಏನು ಆಗಬೇಕು ಎನ್ನುವುದು ನಿರ್ಧರಿಸಿಯೇ ಬರುತ್ತಾರೆ. ಅವರಿಗೆ ತರಬೇತಿ, ಬ್ಯಾಂಕ್ ಸಾಲ ಸೌಲಭ್ಯಗಳ ವ್ಯವಸ್ಥೆ ಈ ಎಲ್ಲಾ ವಿಚಾರಗಳು ಚರ್ಚೆಯಾಗಬೇಕಿದೆ. ನಂತರ ನಕ್ಸಲರು ಶರಣಾಗತಿ ಆಗುತ್ತಾರೆ ಎಂದು ಅವರು ಹೇಳಿದರು.
ಈ ಎಲ್ಲ ಚರ್ಚೆಯ ಬಳಿಕ ಅವರ ಮೇಲಿದ್ದ ಕೇಸುಗಳನ್ನು ಅವರು ಎದುರಿಸಬೇಕು. ನ್ಯಾಯಾಲಯದ ಮುಂದೆ ಹಾಜರಾಗಬೇಕು ಎನ್ನುವ ಷರತ್ತುಗಳೂ ಇವೆ. ಅವರು ಜಿಲ್ಲಾಡಳಿತ ಅಥವಾ ಪೊಲೀಸ್ ಠಾಣೆಯಲ್ಲಿ ಶರಣಾಗಬೇಕು ಎನ್ನುವ ನಿಯಮ ಇದೆ. ಪೊಲೀಸರಿಗೆ ಹಲವು ವರ್ಷಗಳಿಂದ ಬೇಕಾದ ನಕ್ಸಲರಾಗಿರುತ್ತಾರೆ. ಆದರೆ ಮುಖ್ಯಂತ್ರಿಗಳ ಮುಂದೆ ನಡೆದ ನಕ್ಸಲ್ ಶರಣಾಗತಿ ಪ್ರಕ್ರಿಯೆಯ ಮೇಲೆ ಸಹಜವಾಗಿ ಸಂಶಯ ಮೂಡುತ್ತದೆ ಎಂದರು.
ವಿಕ್ರಂ ಗೌಡನ ಎನ್‌ಕೌಂಟರ್ ಕೂಡ ಸಂಶಯಕ್ಕೆ ಕಾರಣವಾಗಿದೆ. ವಿಕ್ರಂ ಗೌಡ ಒಂದು ಮನೆಗೆ ಬಂದಿದ್ದರು.ಆ ಮನೆಯವರು ಮಾಧ್ಯಮಗಳಿಗೆ ಮಾಹಿತಿಯನ್ನೂ ನೀಡಿದ್ದರು. ಆ ಬಳಿಕ ತಕ್ಷಣ ಎನ್‌ಕೌಂಟರ್ ಸುದ್ಧಿಯಾಗುತ್ತದೆ. ಬಳಿಕ ಶರಣಾಗತಿಯ ಬಗ್ಗೆ ಸರಕಾರ ಹೇಳುತ್ತದೆ. ಈ ಕಾರಣಕ್ಕಾಗಿಯೇ ಬಿಜೆಪಿ ಮುಖಂಡರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟರು.
ವಿಕ್ರಂ ಗೌಡ ಅವರದ್ದು ಎನ್ನಲಾದ ಆಡಿಯೊ ಒಂದು ಇದೀಗ ವೈರಲ್ ಆಗಿದ್ದು, ಅದರಲ್ಲಿ ಅವರು ಶರಣಾಗತಿ ವಿರೋಧ ಮಾಡಿ ಮಾತನಾಡಿದ್ದಾರೆ. "ರಾಜಿಗೆ ಹೋಗುವುದೆಂದರೆ ಅರ್ಥ ಏನು? ದುಡಿಯುವ ಜನರಿಗೆ ದ್ರೋಹ ಮಾಡಿ, ದುಡ್ಡು ಮಾಡಲು ಹೋಗುತ್ತೇವೆ ಎಂದರ್ಥ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ವಿಕ್ರಂ ಗೌಡ ಎನ್‌ಕೌಂಟರ್ ಬಳಿಕ ಉಳಿದ ನಕ್ಸಲರು ಶರಣಾಗಿದ್ದಾರೆ. ಹೀಗಾಗಿ ಹತ್ಯೆಗೂ ನಕ್ಸಲರ ಶರಣಾಗತಿಗೂ ಸಂಬಂಧ ಇದೆ ಎನ್ನುವ ರೀತಿಯಲ್ಲಿ ಅಣ್ಣಾಮಲೈ ಸಂಶಯ ವ್ಯಕ್ತಪಡಿಸಿದ್ದಾರೆ.
ಒಬ್ಬ ಪೊಲೀಸ್ ಅಧಿಕಾರಿಯಾಗಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅನುಭವದಲ್ಲಿ ಹೇಳುತ್ತೇನೆ. ಈ ಬಾರಿಯ ಶರಣಾಗತಿ ಪ್ರಕ್ರಿಯೆ ಬಗ್ಗೆ ಸಂಶಯವಿದೆ ಎನ್ನುತ್ತಿದ್ದೇನೆ. ಈ ವಿಚಾರದಲ್ಲಿ ನಕ್ಸಲ್ ಬೆಂಬಲಿಗರ ಒತ್ತಡ ಮುಖ್ಯಮಂತ್ರಿಗಳ ಮೇಲಿದೆ ಅನ್ನಿಸುತ್ತದೆ. ಸಾಮಾಜಿಕ ಜೀವನಕ್ಕೆ ಬರುವಾಗ ಸರಕಾರ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಇಲ್ಲಿ ಈ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ.,