ಕರ್ನಾಟಕ ಪಾಕಿಸ್ತಾನವಿದ್ದಂತೆ ಎಂದ ಅಣ್ಣಾಮಲೈ: ಬಿಜೆಪಿ ನಾಯಕನ ವಿರುದ್ಧ ಕನ್ನಡಿಗರ ಆಕ್ರೋಶ

"ಪಾಕಿಸ್ತಾನದವರೂ ಹೀಗೇ, ನಮಗೆ ಹಣ ಕೊಡದೇ ಇದ್ದರೆ ಹಣೆಗೆ ಶೂಟ್ ಮಾಡಿಕೊಂಡು ಸಾಯುತ್ತೇವೆ ಎಂದು ಅಮೆರಿಕವನ್ನು ಬೆದರಿಸಿ ಅನುದಾನ ಪಡೆಯುತ್ತಿದ್ದರು. ಕರ್ನಾಟಕವೂ ಪಾಕಿಸ್ತಾನದ ವರಸೆಯಲ್ಲಿ ಈಗ ಕೇಂದ್ರ ಸರ್ಕಾರವನ್ನು ಪೀಡಿಸುತ್ತಿದೆ" ಎಂದ ಬಿಜೆಪಿ ನಾಯಕ;

Update: 2024-04-22 13:38 GMT

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿ ಹೇಳಿಕೆ ನೀಡಿರುವುದು ಭಾರೀ ವಿವಾದಕ್ಕೇ ಈಡಾಗಿದೆ.

ಕೊಯಮತ್ತೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಅಣ್ಣಾಮಲೈ ಕಳೆದ ಮೂರು ವಾರಗಳ ಹಿಂದೆ ಎಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ  ಕರ್ನಾಟಕ ಕೂಡ ಪಾಕಿಸ್ತಾನದಂತೆ ಎಂದು ಹೋಲಿಸಿ ಮಾತನಾಡಿದ್ದರು. 

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ತೆರಿಗೆ ವಂಚನೆ, ಬರ ಪರಿಹಾರ ನೀಡದಿರುವುದು ಮತ್ತು ವಿಶೇಷ ಅನುದಾನಗಳಲ್ಲಿ ಆಗುತ್ತಿರುವ ಅನ್ಯಾಯಗಳ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ನಡೆಸುತ್ತಿದೆ. ಈ ಬಗ್ಗೆ ಸಂದರ್ಶಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ, ʻʻಪಾಕಿಸ್ತಾನದವರೂ ಹೀಗೇ, ನಮಗೆ ಹಣ ಕೊಡದೇ ಇದ್ದರೆ ಹಣೆಗೆ ಶೂಟ್ ಮಾಡಿಕೊಂಡು ಸಾಯುತ್ತೇವೆ ಎಂದು ಅಮೆರಿಕವನ್ನು ಬೆದರಿಸಿ ಅನುದಾನ ಪಡೆಯುತ್ತಿದ್ದರು. ಕರ್ನಾಟಕವೂ ಪಾಕಿಸ್ತಾನದ ವರಸೆಯಲ್ಲಿ ಈಗ ಕೇಂದ್ರ ಸರ್ಕಾರವನ್ನು ಪೀಡಿಸುತ್ತಿದೆ. ಕರ್ನಾಟಕ ಸರ್ಕಾರ ಹಣೆಯ ಮೇಲೆ ರಿವಾಲ್ವರ್ ಇಟ್ಟುಕೊಂಡು ಅನುದಾನ ಕೊಡಿ, ಇಲ್ಲದೇ ಇದ್ದರೆ ಶೂಟ್ ಮಾಡಿಕೊಂಡು ಸಾಯುತ್ತೇವೆ ಎನ್ನುತ್ತಿದೆʼʼ ಎಂದು ನಾಲಿಗೆ ಹರಿಬಿಟ್ಟು ಮಾತನಾಡಿದ್ದರು.

ʻʻಕರ್ನಾಟಕ ಎಷ್ಟೇ ತೆರಿಗೆ ಕಟ್ಟಿದರೂ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ತಾನೇ ಹಣ ಹೊಂದಿಸಿಕೊಳ್ಳಬೇಕು, ಕೇಂದ್ರ ಸರ್ಕಾರವನ್ನು ದೂರಬಾರದು. ನೀವು ಉಚಿತ ಯೋಜನೆಗಳನ್ನು ಜಾರಿಗೊಳಿಸಿದರೆ ಅದಕ್ಕೆ ಹಣ ಹೊಂದಿಸಬೇಕಾದ ಜವಾಬ್ದಾರಿ ನಿಮ್ಮದೇ" ಎಂದು ಅಣ್ಣಾಮಲೈ ಹೇಳಿದ್ದರು.

"ಪಾಕಿಸ್ತಾನದಲ್ಲಿ ಅಲ್ಲಿನ ದುರಾಡಳಿತದಿಂದಾಗಿ ದೇಶ ದಿವಾಳಿಯಾದಾಗೆಲ್ಲ ಅದು ತನ್ನ ತಲೆಗೆ ತಾನೇ ರಿವಾಲ್ವರ್‌ ಹಿಡಿದುಕೊಂಡು ಅಮೆರಿಕವನ್ನು ಬೆದರಿಸುತ್ತಿತ್ತು. ನೀವು ಹಣ ಕೊಡದೇ ಹೋದರೆ ನಾವು ಶೂಟ್‌ ಮಾಡಿಕೊಂಡು ಸತ್ತುಬಿಡುತ್ತೇವೆ ಎಂದು ಹೇಳಿ ಅಮೆರಿಕದಿಂದ ಅನುದಾನ ಪಡೆಯುತ್ತಿತ್ತು. ಈಗ ಕರ್ನಾಟಕ ಕೂಡ ಪಾಕಿಸ್ತಾನದ ವರಸೆಯಲ್ಲೇ ಕೇಂದ್ರ ಸರ್ಕಾರವನ್ನು ಬೆದರಿಸುತ್ತಿದೆ. ಆದರೆ, ಇವರು ಬಿಟ್ಟಿ ಯೋಜನೆ ಕೊಟ್ಟು ರಾಜ್ಯದ ಬೊಕ್ಕಸ ಖಾಲಿ ಮಾಡಿದರೆ, ಅದಕ್ಕೆ ಮೋದೀಜಿ ಏನು ಮಾಡಲಾಗುತ್ತದೆ" ಎಂದು ಅಣ್ಣಾಮಲೈ ಕೇಳಿರುವ ವಿಡಿಯೋ ತುಣುಕು ವೈರಲ್‌ ಆಗಿದ್ದು, ಕಾಂಗ್ರೆಸ್‌ ಮಾತ್ರವಲ್ಲದ ಹಲವು ಕನ್ನಡ ಹೋರಾಟಗಾರರು, ಕಲಾವಿದರು ಕೂಡ ಈ ಹೇಳಿಕೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Similar News