ನಟ ವಿಷ್ಣುವರ್ಧನ್ ಕುಟುಂಬದ ವಿರುದ್ಧ ಅಶ್ಲೀಲ ಕಮೆಂಟ್, ಕ್ರಮಕ್ಕೆ ಒತ್ತಾಯಿಸಿ ಅನಿರುದ್ಧ್ ದೂರು
ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ ಅವರ ಸಮಾಧಿ ತೆರವುಗೊಳಿಸಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಕುಟುಂಬದ ಬಗ್ಗೆ ಕೆಲವರು ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ ಎಂದು ನಟ ಅನಿರುದ್ಧ್ ದೂರಿನಲ್ಲಿ ತಿಳಿಸಿದ್ದಾರೆ.;
ನಟ ವಿಷ್ಣುವರ್ಧನ್
ಸಾಹಸ ಸಿಂಹ, ನಟ ವಿಷ್ಣುವರ್ಧನ್ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದ ಬಳಕೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ನಟ ಅನಿರುದ್ಧ್ ಅವರು ಬೆಂಗಳೂರಿನ ತಿಲಕ್‌ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲೇನಿದೆ ?
ನಗರದ ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ ಸಮಾಧಿ ತೆರವುಗೊಳಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಕುಟುಂಬದ ಬಗ್ಗೆ ಕೆಲವರು ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ. ಅಂತಹವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಏನಿದು ಸಮಾಧಿ ತೆರವು ವಿವಾದ?
ನಟ ವಿಷ್ಣುವರ್ಧನ್ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಲಾಗಿತ್ತು. ಹಾಗಾಗಿ, ಅವರ ಸ್ಮಾರಕವನ್ನು ಅಲ್ಲೇ ನಿರ್ಮಿಸಬೇಕು ಎಂಬುದು ಅಭಿಮಾನಿಗಳ ಒತ್ತಾಯವಾಗಿತ್ತು. ಆದರೆ, ಸ್ಟುಡಿಯೋ ಮಾಲೀಕರಾದ ದಿವಂಗತ ಬಾಲಕೃಷ್ಣ ಅವರ ಕುಟುಂಬದವರು ಜಾಗದ ವಿಷಯದಲ್ಲಿ ತಕರಾರು ಎತ್ತಿದ್ದರು. ಇದು ಸ್ಮಾರಕ ನಿರ್ಮಾಣಕ್ಕೆ ಕಾನೂನು ತೊಡಕು ಸೃಷ್ಟಿಸಿತ್ತು.
ಅಭಿಮಾನ್ ಸ್ಟುಡಿಯೋದ ಜಾಗದ ವಿವಾದ ಬಗೆಹರಿಯದ ಕಾರಣ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ಮೈಸೂರಿನ ಹಾಲಾಳು ಗ್ರಾಮದಲ್ಲಿ ಸ್ಮಾರಕಕ್ಕೆ ಸರ್ಕಾರ ಜಾಗ ಮಂಜೂರು ಮಾಡಿತ್ತು. ಆದರೂ, ಆ ಜಾಗದ ಸುತ್ತಲಿನ ರೈತರು ಕೂಡ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಅಭಿಮಾನ್ ಸ್ಟುಡಿಯೋದಲ್ಲಿ ಜಾಗಕ್ಕೆ ಭಾರತಿ ಮನವಿ
ನಟ ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ನಡೆದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಕನಿಷ್ಠ 10 ಗುಂಟೆ ಜಾಗವನ್ನು ಸ್ಮಾರಕಕ್ಕಾಗಿ ಮೀಸಲಿಡುವಂತೆ ಭಾರತಿ ವಿಷ್ಣುವರ್ಧನ್ ಸಿಎಂ ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಬೆಂಗಳೂರು ವಿಷ್ಣುವರ್ಧನ್ ಅವರ ವೃತ್ತಿಜೀವನವನ್ನು ರೂಪಿಸಿದ ಸ್ಥಳವಾಗಿದೆ. ಅಭಿಮಾನಿಗಳಿಗೆ ಇದು ಭಾವನಾತ್ಮಕವಾಗಿ ಬಹಳ ಮಹತ್ವದ ಸ್ಥಳವಾಗಿದೆ. ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಂತಿಮ ದರ್ಶನಕ್ಕಾಗಿ ಇಲ್ಲಿಗೆ ಬರುತ್ತಿದ್ದರು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಡಾ.ರಾಜ್‌ಕುಮಾರ್ ಕುಟುಂಬ, ನಟಿ ರಮ್ಯಾ ಬಗ್ಗೆಯೂ ಕೆಟ್ಟ ಕಮೆಂಟ್
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ವರನಟ ಡಾ. ರಾಜ್ ಕುಮಾರ್ ಕುಟುಂಬದ ಬಗ್ಗೆ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ವಜಾಗೊಂಡ ಹಿನ್ನೆಲೆ ನಟಿ ರಮ್ಯಾ ಸತ್ಯಕ್ಕೆ ಜಯ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ್ದರು. ಇದಕ್ಕೆ ದರ್ಶನ್ ಅಭಿಮಾನಿಗಳು ನಟಿಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಇದರ ವಿರುದ್ಧ ನಟಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು ಹಲವರನ್ನು ಬಂಧಿಸಿದ್ದರು.