Airplane restaurant | ಹಾರದ ವಿಮಾನದೊಳಗೆ ಬಗೆಬಗೆಯ ಆಹಾರ
ಜನರು ಬಂದು ನಿರ್ಮಾಣ ಹಂತದ ವಿಮಾನ ರೆಸ್ಟೋರೆಂಟ್ ನೋಡಿ ಆನಂದಿಸುತ್ತಿದ್ದಾರೆ. ವಿಮಾನದೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸುತ್ತಿದ್ದಾರೆ. ಈ ರೆಸ್ಟೋರೆಂಟ್ ಜನವರಿ 2025 ರಲ್ಲಿ ಉದ್ಘಾಟನೆಗೊಳ್ಳಲಿದೆ.
ಜಗತ್ತಿನಲ್ಲಿ ಒಂದಕ್ಕಿಂತ ಹೆಚ್ಚು ವಿಭಿನ್ನ ಅದ್ಭುತ ರೆಸ್ಟೋರೆಂಟ್‌ಗಳಿವೆ. ನೀವು ಕೂಡ ಅಂತಹ ಕೆಲವೊಂದು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಅಲ್ಲಿನ ಖಾದ್ಯಗಳನ್ನು ಆಸ್ವಾದಿಸಿರಬಹುದು. ಆದರೆ, ನೀವು ಎಂದಾದರೂ ಎರೋಪ್ಲೇನ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದೀರಾ? ಇದು ಸ್ವಲ್ಪ ವಿಚಿತ್ರವೆನಿಸಬಹುದು. ಆದರೆ ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ʻಟೈಗರ್ ಏರೋ ರೆಸ್ಟೋರೆಂಟ್ʼಈ ಅನುಭವ ನೀಡಲು ಸಜ್ಜಾಗಿದೆ. ಇಲ್ಲಿ ನೀವು ಏರೋಪ್ಲೇನ್‌ನಲ್ಲಿ ಕುಳಿತು ಊಟ ಮಾಡುವ ಅನುಭವ ಪಡೆಯಬಹುದು.
ಸಂಪೂರ್ಣ ವಿಮಾನದ ಅನುಭವ
ಇದೇ ಮೊದಲ ಬಾರಿಗೆ ಇಂಥದ್ದೊಂದು ರೆಸ್ಟೋರೆಂಟ್ ದಕ್ಷಿಣ ಭಾರತದಲ್ಲಿ ಅದೂ ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಜಿಗಣಿಯಲ್ಲಿ ಈ ವಿಮಾನ ರೆಸ್ಟೋರೆಂಟ್ ಆರಂಭಗೊಳ್ಳಲಿದ್ದು, ಅದು ಸಂಪೂರ್ಣವಾಗಿ ವಿಮಾನವನ್ನೇ ಹೋಲುತ್ತದೆ. ಇದರಲ್ಲಿ ನೀವು ವಿಮಾನದಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು. ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ರುಚಿಕರವಾದ ಆಹಾರ ಸವಿಯಬಹುದು.
ಜನವರಿ -2025ಕ್ಕೆ ಆರಂಭ
ಏರೋಪ್ಲೇನ್ ರೆಸ್ಟೋರೆಂಟ್ ವಿಮಾನದ ವಿನ್ಯಾಸದಂತೆಯೇ ಇದೆ. ರೆಸ್ಟೋರೆಂಟ್ ಒಳಗೆ ನೀವು ರುಚಿಕರವಾದ ನಾರ್ತ್, ಸೌತ್ ಮತ್ತು ಚೈನೀಸ್ ಆಹಾರ ಸವಿಯಬಹುದು. ಇದಲ್ಲದೇ ಮಕ್ಕಳ ಆಟಕ್ಕಾಗಿ ಇಲ್ಲಿ ಪ್ಲೇ ಗ್ರೌಡ್‌ಗಳನ್ನು ಕೂಡ ನಿರ್ಮಾಣ ಮಾಡಲಾಗುತ್ತದೆ. ಬಹಳಷ್ಟು ಜನರು ನಿರ್ಮಾಣಹಂತದಲ್ಲಿಯೇ ರೆಸ್ಟೋರೆಂಟ್ ನೋಡಿ ಆನಂದಿಸುತ್ತಿದ್ದಾರೆ. ವಿಮಾನದೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸುತ್ತಿದ್ದಾರೆ. ಈ ರೆಸ್ಟೋರೆಂಟ್ ಜನವರಿ 2025 ರಲ್ಲಿ ಉದ್ಘಾಟನೆಗೊಂಡು ಗ್ರಾಹಕರಿಗೆ ಸೇವೆ ನೀಡಲಿದೆ.
ಮಗಳಿಂದ ಸ್ಪೂರ್ತಿ ಪಡೆದು ರೆಸ್ಟೋರೆಂಟ್‌ನ ನಿರ್ಮಾಣ
ಮಾಲೀಕರಾಗಿರುವ ಅಬ್ದುಲ್ ಮತೀನ್ ಮಗಳಿಂದ ಸ್ಫೂರ್ತಿ ಪಡೆದು ಈ ವಿಭಿನ್ನ ರೆಸ್ಟೋರೆಂಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.ಮತೀನ್ ಅವರಿಗೆ ಈ ವಿಶೇಷ ಮಾದರಿಯ ರೆಸ್ಟೋರೆಂಟ್ ನಿರ್ಮಾಣದ ಆಲೋಚನೆ ಬಂದಿದ್ದು ತಮ್ಮ 10 ವರ್ಷದ ಮಗಳು ಫಾತಿಮಾ ರಜಿಯಾಳಿಂದ. ರಜಿಯಾಳಿಗೆ ವಿಮಾನ ಪ್ರಯಾಣವೆಂದರೆ ಬಹಳಷ್ಟು ಅಚ್ಚುಮೆಚ್ಚು. ತಮ್ಮ ಬಿಸಿನೆಸ್‌ನ ಬ್ಯುಸಿ ಶೆಡ್ಯೂಲ್‌ನಲ್ಲಿ ಮಗಳನ್ನು ಕರೆದುಕೊಂಡು ಹೋಗಲು ಅವರಿಗೆ ಆಗುತ್ತಿಲ್ಲ. ಆಕೆಯ ಖುಷಿಗಾಘಿ ರೆಸ್ಟೋರೆಂಟ್‌ನ್ನು ನಿರ್ಮಾಣ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಗುಜರಾತ್ ವಿಮಾನ ರೆಸ್ಟೋರೆಂಟ್ ಮಾದರಿಯಿಂದ ಮಾಹಿತಿ ಪಡೆದ ಮತೀನ್
ಗುಜರಾತ್ ವಡೋದರಾದಲ್ಲಿ ವಿಮಾನ ಮಾದರಿಯ ರೆಸ್ಟೋರೆಂಟ್ ಇದೆ. ಅಲ್ಲಿಗೆ ಭೇಟೀ ನೀಡಿದ ಅಬ್ದುಲ್ ಮತೀನ್ ಅವರು ಎಲ್ಲವನ್ನೂ ತಿಳಿದುಕೊಂಡು ಈ ರೆಸ್ಟೋರೆಂಟ್‌ಗೆ ಬೇಕಾಗುವ ತಯಾರಿ, ರೀತಿ ನೀತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಗುಜರಾತ್‌ನಿಂದಲೇ ವಿಮಾನ ರೆಸ್ಟೋರೆಂಟ್‌ಗೆ ಬೇಕಾಗುವ ಎಲ್ಲಾ ಅಗತ್ಯ ವಸ್ತುಗಳನ್ನು ತಂದಿದ್ದಾರೆ.
120 ಜನರಿಗೆ ಆಸನ ವ್ಯವಸ್ಥೆ
ಒಂದು ವರ್ಷದಿಂದ ಈ ವಿಮಾನ ರೆಸ್ಟೋರೆಂಟ್‌ನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಹೊಸ ಮಾದರಿಯ ರೆಸ್ಟೋರೆಂಟ್ ಜನವರಿ 2025ರಲ್ಲಿ ಉದ್ಘಾಟನೆಗೊಳ್ಳಲಿದೆ. A3- 20 ಮಾಡೆಲ್‌ನ ಈ ಎರೋಪ್ಲೇನ್‌ನಲ್ಲಿ 120 ಜನರಿಗೆ ಆಸನ ವ್ಯವಸ್ಥೆ ಇದೆ. ಈ ರೆಸ್ಟೋರೆಂಟ್‌ನಲ್ಲಿ ಸೌತ್, ನಾರ್ತ್, ಚೈನೀಸ್, ವೆಜ್, ನಾನ್ ವೆಜ್ ಆಹಾರ ಸವಿಯಬಹುದು.
ಪೈಲೆಟ್, ಗಗನಸಖಿ, ಕ್ಯಾಬಿನ್ ಸಿಬ್ಬಂದಿಯೂ ಇರುತ್ತಾರೆ
ಪೈಲೆಟ್, ಗಗನಸಖಿಯರು ಮತ್ತು ಕ್ಯಾಬಿನ್ ಸಿಬ್ಬಂದಿಯಂತಹ ಉದ್ಯೋಗಿಗಳು ಸಹ ಇಲ್ಲಿ ಇರುತ್ತಾರೆ. ಇದರಿಂದ ಜನರು ವಿಮಾನದಲ್ಲಿ ಕುಳಿತು ರುಚಿಕರ ಆಹಾರವನ್ನು ತಿನ್ನುವ ಅನುಭವ ಪಡೆಯುತ್ತಾರೆ ಎಂದು ಮತೀನ್ ಹೆಮ್ಮೆಯಿಂದ ಹೇಳಿದ್ದಾರೆ.
ಒಟ್ಟಿನಲ್ಲಿ ಗುಜರಾತ್‌ನಲ್ಲಿ ಹಾಗೂ ಬಿಹಾರದ ಗಯಾದಲ್ಲಿ ವಿಮಾನ ಥೀಮ್‌ನ ರೆಸ್ಟೋರೆಂಟ್ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿಯೂ ಇದೇ ಮೊದಲ ಬಾರಿಗೆ ಎರೋಪ್ಲೇನ್ ಮಾದರಿಯ ರೆಸ್ಟೋರೆಂಟ್ ನಲ್ಲಿ ಊಟ ಮಾಡಲು ಸಂಪೂರ್ಣ ಸಿದ್ದತೆ ನಡೆಯುತ್ತಿದೆ.