ಭಾರತದ ಬತ್ತಳಿಕೆಗೆ ಎಎಂಸಿಎ ಫೈಟರ್ ಜೆಟ್; ಯುದ್ಧ ವಿಮಾನ ತಯಾರಿಯಲ್ಲಿ ಹೆಚ್‌ಎಎಲ್ ಮುಂಚೂಣಿ
ಹೆಚ್‌ಎಎಲ್ ಸಂಸ್ಥೆಯು ಒಂದು ಹಂತದ ನಿರ್ಮಾಣ ಕಾರ್ಯ ಕೈಗೊಂಡರೆ, ಖಾಸಗಿ ಕಂಪನಿಗಳು ಮತ್ತೊಂದು ಹಂತದ ಸಾಮಗ್ರಿಗಳ ಉತ್ಪಾದನೆ ಮಾಡಲಿದೆ. 24 ಖಾಸಗಿ ಕಂಪನಿಗಳು ಟೆಂಡರ್‌ಗಳಲ್ಲಿ ಭಾಗಿಯಾಗಿವೆ.;
ಜಾಗತಿಕವಾಗಿ ಯುದ್ಧದ ಸ್ವರೂಪ ಬದಲಾಗುತ್ತಿದೆ. ಜತೆಗೆ ಹೊಸ ತಂತ್ರಜ್ಞಾನಗಳು ಸಹ ಬರುತ್ತಿವೆ. ಭಾರತವು ಸಹ ಆಧುನಿಕತೆಗೆ ತಕ್ಕಂತೆ ರಕ್ಷಣಾ ವಲಯವನ್ನು ಬಲಗೊಳಿಸುತ್ತಿದೆ. ಯುದ್ಧ ವಿಮಾನಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ಹೆಮ್ಮೆಯ ಹೆಚ್‌ಎಎಲ್ ಮತ್ತೊಂದು ಯುದ್ಧ ವಿಮಾನ ನಿರ್ಮಾಣಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದೆ.
ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು ನಿರ್ಮಿಸಲು ಹೆಚ್‌ಎಎಲ್ ಸಜ್ಜಾಗಿದೆ. ಮಹತ್ವಾಕಾಂಕ್ಷಿ ಸ್ವದೇಶಿ ಸೇನಾ ವೈಮಾನಿಕ ಯೋಜನೆಗೆ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಸೂಪರ್‌ಕ್ರೂಸ್ ಸಾಮರ್ಥ್ಯ ಹಾಗೂ ಸುಧಾರಿತ ಫೀಚರ್‌ಗಳನ್ನು ಹೊಂದಿರುವ ಐದನೇ ತಲೆಮಾರಿನ ಯುದ್ಧ ವಿಮಾನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ಅಭಿವೃದ್ಧಿಪಡಿಸುತ್ತಿದೆ. ಈ ಮೂಲಕ ಭಾರತದ ಬತ್ತಳಿಕೆ ಎಎಂಸಿಎ ಫೈಟರ್ ಜೆಟ್ ಸೇರ್ಪಡೆಯಾಗಲಿದೆ. ಸಂಪೂರ್ಣವಾಗಿ ಅಡ್ವಾನ್ಸ್ ಆಗಿರುವ ಈ ಜೆಟ್ ಚೀನಾ, ರಷ್ಯಾ ಜೆಟ್‌ಗಳಿಗಿಂತಲೂ ಬಲಶಾಲಿಯಾಗಲಿದೆ.
ಎಎಂಸಿಎ ಕಾರ್ಯಕ್ರಮವು ಭಾರತೀಯ ವಾಯುಪಡೆಯ ಬಲವನ್ನು ಹೆಚ್ಚಿಸಲು ಮತ್ತು ಸ್ವದೇಶಿ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ. ವೈಮಾನಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಹೆಚ್‌ಎಎಲ್ ಸಂಸ್ಥೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಫೈಟರ್ ಜೆಟ್ ನಿರ್ಮಾಣವಾಗಲಿದೆ. ದೇಶದಲ್ಲಿಯೇ ಉತ್ಪನ್ನ ಮಾಡಲು ತೀರ್ಮಾನಿಸಲಾಗಿದೆ. ಜೆಟ್‌ಗೆ ಬೇಕಾಗಿರುವ ಎಂಜಿನ್, ರೆಕ್ಕೆ ಸೇರಿದಂತೆ ಪ್ರತಿಯೊಂದು ಸಾಮಗ್ರಿಗಳನ್ನು ಸ್ವದೇಶದಲ್ಲಿಯೇ ನಿರ್ಮಿಸುವ ಉದ್ದೇಶವನ್ನು ಹೊಂದಿದೆ. ಖಾಸಗಿ ಸಹಭಾಗಿತ್ವದಲ್ಲಿ ಜೆಟ್ ಸಿದ್ಧಗೊಂಡರೂ ಬಹುತೇಕ ಕಾರ್ಯ ಎಚ್‌ಎಎಲ್ ಕೈಗೊಳ್ಳಲಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೆಚ್‌ಎಎಲ್ ಎಎಂಸಿಎ ತಯಾರಿ ಕಾರ್ಯ ಕೈಗೊಳ್ಳಲಿದೆ.
ಹೆಚ್‌ಎಎಲ್ ಸಂಸ್ಥೆಯು ಜೆಟ್‌ನ ಒಂದು ಹಂತದ ನಿರ್ಮಾಣ ಕಾರ್ಯ ಕೈಗೊಂಡರೆ, ಖಾಸಗಿ ಕಂಪನಿಗಳು ಮತ್ತೊಂದು ಹಂತದ ಸಾಮಗ್ರಿಗಳ ಉತ್ಪಾದನೆ ಮಾಡಲಿದೆ. ಜೆಟ್‌ನ ನಿರ್ಮಾಣಕ್ಕಾಗಿ 24 ಖಾಸಗಿ ಕಂಪನಿಗಳು ಟೆಂಡರ್‌ಗಳಿಗೆ ಹಾಕಲಾಗಿದೆ. ಈ ಪೈಕಿ ಯಾವುದೇ ಕಂಪನಿಗಳು ಅಂತಿಮಗೊಂಡಿಲ್ಲ. ಶೀಘ್ರದಲ್ಲಿಯೇ ಈ ಬಗ್ಗೆ ಅಂತಿಮಗೊಳಿಸಲಾಗುವುದು. ಆದರೆ, ಹೆಚ್‌ಎಎಲ್ ಪ್ರಮುಖ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳಲಿದೆ. ರಷ್ಯಾ ತಂತ್ರಜ್ಞಾನ ಸೇರಿದಂತೆ ಇತರೆ ಪ್ರಮುಖ ದೇಶಗಳ ತಂತ್ರಜ್ಞಾನವನ್ನೂ ಸಹ ಬಳಸಿಕೊಳ್ಳಲು ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ದೇಶದಲ್ಲಿ ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು ನಿರ್ಮಿಸುವ ಎಎಂಸಿಎ ಕಾರ್ಯಕ್ರಮಕ್ಕಾಗಿ ಕಾರ್ಯಗತಗೊಳಿಸುವ ಮಾದರಿಯನ್ನು ರಕ್ಷಣಾ ಇಲಾಖೆಯು ಒಂದು ದಿಟ್ಟ ಮತ್ತು ನಿರ್ಣಾಯಕ ಹೆಜ್ಜೆಯಾಗಿದೆ. ಇದು ದೇಶೀಯ ವೈಮಾನಿಕ ವಲಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಎಎಂಸಿಎ ಯೋಜನೆಯಡಿಯಲ್ಲಿ ಐದು ಮೂಲ ಮಾದರಿಗಳನ್ನು ಅಭಿವೃದ್ಧಿಪಡಿಸುವುದು ಯೋಜನೆಯಾಗಿದ್ದು, ಅದರ ನಂತರ ಸರಣಿ ಉತ್ಪಾದನೆ ನಡೆಯಲಿದೆ. ಇದು ಮೇಕ್-ಇನ್-ಇಂಡಿಯಾ ಕಾರ್ಯಕ್ರಮದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ.
ಎಎಂಸಿಎ ಕಾರ್ಯಕ್ರಮ 10 ವರ್ಷದ ಯೋಜನೆ
ಎಎಂಸಿಎ ಅತ್ಯಾಧುನಿಕ ಯುದ್ಧ ವಿಮಾನವಾಗಿದ್ದು, ಐದನೇ ತಲೆಮಾರಿನ ತಂತ್ರಜ್ಞಾನವನ್ನು ಹೊಂದಿದೆ. ಸ್ಟೆಲ್ತ್ ತಂತ್ರಜ್ಞಾನ ಬಳಕೆ ಮಾಡುತ್ತಿರುವುದರಿಂದ ಇದು ಶತ್ರುಗಳ ರೇಡಾರ್ ಗಳಿಗೆ ಸುಲಭವಾಗಿ ಗೋಚರಿಸುವುದಿಲ್ಲ. ದೇಶೀಯ ಉತ್ಪಾದನೆಯಾಗಿರುವುದರಿಂದ ಯೋಜನೆಯು ಭಾರತದಲ್ಲಿಯೇ ಯುದ್ಧ ವಿಮಾನಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ಸುಮಾರು 10 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
2028 ಮತ್ತು 2029ರ ನಡುವೆ ಮೂಲ ಮಾದರಿ ಅಭಿವೃದ್ಧಿ ಕೈಗೊಳ್ಳಲಾಗುವುದು ಮತ್ತು 2032-33ರ ವೇಳೆಗೆ ಸರಣಿ ಉತ್ಪಾದನೆ ಮಾಡಲಾಗುತ್ತದೆ. ಭಾರತೀಯ ವಾಯುಪಡೆಗೆ 2034ರ ವೇಳೆಗೆ ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಿದೆ. 2035ರಲ್ಲಿ ಕಾರ್ಯಾಚರಣೆಗೆ ಲಭಿಸುವ ನಿರೀಕ್ಷೆಗಳಿವೆ. ಆರಂಭದಲ್ಲಿ ಭಾರತೀಯ ವಾಯು ಸೇನೆ ಎಎಂಸಿಎ ಯುದ್ಧ ವಿಮಾನಗಳ ಎರಡು ಸ್ಕ್ವಾಡ್ರನ್‌ಗಳನ್ನು ಸೇರ್ಪಡೆಗೊಳಿಸಲು ಉದ್ದೇಶಿಸಿದೆ. ದೀರ್ಘಾವಧಿಯಲ್ಲಿ 200ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಸೇರ್ಪಡೆಗೊಳಿಸಬಹುದು. ಈ ಯೋಜನೆಗಾಗಿ ಸುಮಾರು 15 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಹೇಳಲಾಗಿದೆ.
ಫೈಟರ್ ಜೆಟ್‌ನ ವೈಶಿಷ್ಟ್ಯಗಳು
ಫೈಟರ್ ಜೆಟ್‌ನಲ್ಲಿ 1,500 ಕೆಜಿ ಆಂತರಿಕ ಆಯುಧ ಸ್ಥಳ ಇದ್ದು, 5,500 ಕೆಜಿ ತನಕ ಬಾಹ್ಯ ಆಯುಧ ಸ್ಥಳ ಇರಲಿದೆ. ಸೂಪರ್ ಕ್ರೂಸ್ ಸಾಮರ್ಥ್ಯ ಹೊಂದಿದ್ದು, ಶಬ್ದದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರಲಿದೆ. ಆಧುನಿಕ ಏವಿಯಾನಿಕ್ಸ್ ಮತ್ತು ಸೆನ್ಸರ್ ಫ್ಯೂಷನ್ ಇದ್ದು, ಯುದ್ಧ ವಿಮಾನಕ್ಕೆ ನೈಜ ಸಮಯದಲ್ಲಿ ಯುದ್ಧದ ವೇಳೆ ಲಭ್ಯವಾಗುವ ಮಾಹಿತಿಗಳನ್ನು ಪಡೆಯಲು ನೆರವಾಗುತ್ತದೆ.
ಪೈಲಟ್ ಮತ್ತು ವಿಮಾನದ ನಡುವಿನ ಉತ್ತಮ ಸಂವಹನಕ್ಕಾಗಿ ಕೃತಕ ಬುದ್ಧಿಮತ್ತೆಯ ಬಳಕೆ ಮಾಡುವ ಗುರಿಯನ್ನು ಹೊಂದಲಾಗಿದೆ. ದೂರದಿಂದಲೇ ಗುರಿಗಳನ್ನು ಗುರುತಿಸಲು ಮತ್ತು ಹಿಂಬಾಲಿಸಲು ಎಇಎಸ್ಎ ರೇಡಾರ್ ಇರಲಿದ್ದು, ಎಂಕೆ-1 ಆವೃತ್ತಿಗೆ ಅಮೆರಿಕಾದ ಜಿಇ ಎಫ್414 ಇಂಜಿನ್ ಶಕ್ತಿ ನೀಡಲಿದ್ದು, ಎಂಕೆ-2 ಆವೃತ್ತಿಗೆ ಭಾರತದಲ್ಲಿ ಜಿಇ ಏರೋಸ್ಪೇಸ್ ನಂತಹ ಸಂಸ್ಥೆಯ ಸಹಯೋಗದೊಡನೆ ನಿರ್ಮಿಸಲಾಗುವ, ಇನ್ನಷ್ಟು ಶಕ್ತಿಶಾಲಿಯಾದ ಇಂಜಿನ್ ಲಭ್ಯವಾಗುವ ನಿರೀಕ್ಷೆಗಳಿವೆ ಎಂದು ಹೇಳಲಾಗಿದೆ.
ಐದನೇ ತಲೆಮಾರಿನ ಫೈಟರ್ ಜೆಟ್ ಕುರಿತು ದ ಫೆಡರಲ್ ಕರ್ನಾಟಕ ಜತೆಗೆ ಮಾತನಾಡಿದ ಬಾಹ್ಯಾಕಾಶ ಮತ್ತು ರಕ್ಷಣಾ ತಜ್ಞ ಗಿರೀಶ್ ಲಿಂಗಣ್ಣ, ಎಎಂಸಿಎ ಕಾರ್ಯಕ್ರಮವು ಐದನೇ ತಲೆಮಾರಿನ ಯುದ್ಧ ವಿಮಾನ ತಯಾರಿಕೆಯಾಗಿದೆ. ಹೆಚ್‌ಎಎಲ್ ಮತ್ತು ಖಾಸಗಿ ಕಂಪನಿಗಳ ಸಹಯೋಗದಲ್ಲಿ ಉತ್ಪಾದನೆಯಾಗಲಿದೆ. ಇದು ಸಂಪೂರ್ಣ ಮೇಕ್ ಇಂಡಿಯಾ ಪರಿಕಲ್ಪನೆಯಾಗಿದೆ. 24 ಕಂಪನಿಗಳಿಂದ ಟೆಂಡರ್‌ಗಳು ಬಂದಿವೆ. ಈ ಪೈಕಿ ಯಾವ ಕಂಪನಿಗಳು ಸೂಕ್ತ ಎಂಬುದನ್ನು ಪೂರ್ಣಗೊಳಿಸಬೇಕಿದೆ. ಈ ಯುದ್ಧ ವಿಮಾನ ತಯಾರಿಕೆಯಿಂದ ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಲಿದೆ ಎಂದು ಹೇಳಿದರು.
ಒಟ್ಟಾರೆ ಆಧುನಿಕ ವಾಯು ಯುದ್ಧಗಳಲ್ಲಿ ಮೇಲುಗೈ ಸಾಧಿಸುವ ಭಾರತದ ಕನಸುಗಳಿಗೆ ಎಎಂಸಿಎ ಒಂದು ಮಹತ್ವದ ಹೆಜ್ಜೆಯಾಗಿದೆ. ಎಎಂಸಿಎ ಯೋಜನೆ ಕೇವಲ ಒಂದು ಯುದ್ಧ ವಿಮಾನದ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಬದಲಿಗೆ, ಭಾರತೀಯ ವಾಯುಪಡೆಯನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಮಹತ್ವದ ಯೋಜನೆಯೂ ಇದಾಗಿದೆ. ನೆರೆ ದೇಶ ಚೀನಾದಿಂದ ಭಾರತಕ್ಕೆ ಭದ್ರತಾ ಸವಾಲುಗಳು ಹೆಚ್ಚಾಗುತ್ತಿದೆ. ವಿದೇಶೀ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಭಾರತ ಕಡಿಮೆಗೊಳಿಸುವ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಲೆಮಾರಿನ ವೈಮಾನಿಕ ಯುದ್ಧ ಎಎಂಸಿಎ ಭಾರತದ ಬಹುದೊಡ್ಡ, ದಿಟ್ಟ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಗಳು ವ್ಯಕ್ತವಾಗಿವೆ.