![ಸಿಎಂಗೆ ಮಂಡಿನೋವು; ರಾಜಕೀಯದಲ್ಲಿ ʼಕಾಲು ಜೋಪಾನʼ ಎಂದು ಕಾಲೆಳೆದ ರಾಜನಾಥ್ ಸಿಂಗ್ ಸಿಎಂಗೆ ಮಂಡಿನೋವು; ರಾಜಕೀಯದಲ್ಲಿ ʼಕಾಲು ಜೋಪಾನʼ ಎಂದು ಕಾಲೆಳೆದ ರಾಜನಾಥ್ ಸಿಂಗ್](https://karnataka.thefederal.com/h-upload/2025/02/12/512245-rajnth1.webp)
ಸಿಎಂಗೆ ಮಂಡಿನೋವು; ರಾಜಕೀಯದಲ್ಲಿ ʼಕಾಲು ಜೋಪಾನʼ ಎಂದು ಕಾಲೆಳೆದ ರಾಜನಾಥ್ ಸಿಂಗ್
ಕಾಲು ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗುವಂತೆ ರಾಜನಾಥ್ ಸಿಂಗ್ ಹಾರೈಸಿದರು.
ಮಂಡಿನೋವಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ಜಾಗತಿಕ ಹೂಡಿಕೆದಾರರ ಸಮಾವೇಶದ ಕರ್ನಾಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ಗಾಲಿ ಕುರ್ಚಿಯಲ್ಲಿ ಆಗಮಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಅವರಿಗೆ ನೆರವಾದ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗಲಿ ಎಂದು ವೇದಿಕೆಯಲ್ಲಿ ಹಾರೈಸಿದರು.
ಈ ವೇಳೆ ಲಘು ಧಾಟಿಯಲ್ಲಿ ಸಿದ್ದರಾಮಯ್ಯ ಅವರ ಕಾಲೆಳೆದರು. ʼರಾಜಕೀಯದಲ್ಲಿ ಕಾಲುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವುದು ಮುಖ್ಯ. ನೀವು ಅತ್ಯಂತ ಜಾಗರೂಕರಾಗಿರಬೇಕು. ಏಕೆಂದರೆ ಎಲ್ಲೆಡೆ ಅಡೆತಡೆಗಳಿರುತ್ತವೆʼ ಎಂದು ಮಾರ್ಮಿಕವಾಗಿ ಹೇಳಿದಾಗ ಸಭಿಕರು ನಗೆಗಡಲಲ್ಲಿ ತೇಲಿದರು. ನಾನು ಬೆಂಗಳೂರಿಗೆ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರ ಕಾಲಿಗೆ ಪೆಟ್ಟಾಗಿದೆ ಎಂದು ತಿಳಿಯಿತು. ಇಲ್ಲಿ ಅವರನ್ನು ನೋಡಿ ಖುಷಿಯಾಯಿತು. ಅವರು ಬೇಗ ಗುಣಮುಖರಾಗಲಿ ಎಂದು ಹೇಳಿದರು.
"ಸಿದ್ದರಾಮಯ್ಯ ಒಬ್ಬ ಅನುಭವಿ ರಾಜಕಾರಣಿ, ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿದ್ದಾರೆ. ಇಂದು ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಬೇಗನೆ ಚೇತರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹಾರೈಸುತ್ತೇನೆ" ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಮಂಡಿನೋವಿನ ಸಮಸ್ಯೆಯಿಂದ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ತಮ್ಮ ಅಧಿಕೃತ ನಿವಾಸ ಕೃಷ್ಣಾದಲ್ಲಿಯೇ ಬಜೆಟ್ ಕುರಿತು ಇಲಾಖೆ ವಾರು ಸಭೆಗಳನ್ನು ನಡೆಸಿದ್ದರು. ಸುಮಾರು 10ದಿನಗಳ ನಂತರ ಹೂಡಿಕೆದಾರರ ಸಮಾವೇಶದ ಮೂಲಕ ಬಹಿರಂಗ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.