ಅಧಿಕಾರ ಹಸ್ತಾಂತರ | ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ- ಡಿ.ಕೆ. ಸುರೇಶ್
ನನ್ನಣ್ಣ ಡಿ.ಕೆ.ಶಿವಕುಮಾರ್‌ಗೆ ಅದೃಷ್ಟ ಇದ್ದರೆ ಸಿಎಂ ಆಗುತ್ತಾರೆ. ಎಲ್ಲದಕ್ಕೂ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡುತ್ತದೆ. ಕಾಂಗ್ರೆಸ್ ಕಾರ್ಯಕರ್ತನಾಗಿ ನಾನು ಎಲ್ಲಾ ಮಾತಿಗೂ ಸಾಕ್ಷಿಯಾಗಿದ್ದೇನೆ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್
ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿ, ಸಚಿವ ಸಂಪುಟ ಪುನಾರಚನೆ ಹಾಗೂ ಅಧಿಕಾರ ಹಸ್ತಾಂತರದ ಚರ್ಚೆಗಳು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಸೋದರ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಹತಾಶೆಯ ಹೇಳಿಕೆ ನೀಡಿದ್ದಾರೆ.
ಗುರುವಾರ (ನ.20) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿಎಂ ಸಿದ್ದರಾಮಯ್ಯ ಅವರು ಹಿರಿಯ ನಾಯಕರು. ಅವರಿಗೂ ಸಾಕಷ್ಟು ಜವಾಬ್ದಾರಿಗಳಿವೆ. ಹಿಂದಿನ ಸರ್ಕಾರದ ಅವಧಿಯಲ್ಲೂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಈಗಲೂ ನಡೆದುಕೊಳ್ಳುತ್ತಿದ್ದಾರೆ. ಮುಂದೆಯೂ ಕೊಟ್ಟ ಮಾತಿನ ಪ್ರಕಾರವೇ ನಡೆದುಕೊಳ್ಳಲಿದ್ದಾರೆ" ಎಂದು ಹೇಳುವ ಮೂಲಕ ಅಧಿಕಾರ ಕೈತಪ್ಪುವ ಭೀತಿ ಹೊರಹಾಕಿದ್ದಾರೆ.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ
ಸಹೋದರ ಡಿ.ಕೆ. ಶಿವಕುಮಾರ್ ಅವರಿಗೆ ಅದೃಷ್ಟ ಇದ್ದರೆ ಸಿಎಂ ಆಗುತ್ತಾರೆ. ಎಲ್ಲದಕ್ಕೂ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡಲಿದೆ. ಕಾಂಗ್ರೆಸ್ ಕಾರ್ಯಕರ್ತನಾಗಿ ನಾನು ಎಲ್ಲಾ ಮಾತಿಗೂ ಸಾಕ್ಷಿಯಾಗಿದ್ದೇನೆ. ಇಂದಿಗೆ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದೆ. ಕೊಟ್ಟ ಮಾತಿನಂತೆ ಗ್ಯಾರಂಟಿ ಕೊಟ್ಟಿದ್ದಾರೆ. ಪಕ್ಷದ ವರಿಷ್ಠರು ಸಿಎಂ ಹಾಗೂ ಡಿಸಿಎಂ ಸ್ಥಾನ ಸೇರಿದಂತೆ ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ. ಎಲ್ಲರಿಗೂ ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಎಂಬ ಆಸೆ ಇದೆ. ಅವರವರ ಅಭಿಮಾನಿಗಳು ಪೂಜೆ, ಹರಕೆ ಎಲ್ಲವನ್ನೂ ಮಾಡುತ್ತಾರೆ. ಸಿಎಂ ಆಗಲಿ, ಡಿಸಿಎಂ ಆಗಲಿ, ಎಲ್ಲರೂ ಹೈಕಮಾಂಡ್ ಆದೇಶ ಪಾಲನೆ ಮಾಡಲಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಇದೀಗ ಪಕ್ಷದ ಅಧ್ಯಕ್ಷರಾಗಿದ್ದಾರೆ. ಬೇರೆ ಯಾರನ್ನಾದರೂ ಹೈಕಮಾಂಡ್ ತೀರ್ಮಾನಿಸಿದರೆ ಅವರಿಗೂ ಸಹಕಾರ ಕೊಡುತ್ತಾರೆ ಎಂದರು.
ಕೊಟ್ಟ ಮಾತು ಪಾಲನೆ ಮುಖ್ಯ
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಪಕ್ಷಕ್ಕಾಗಿ ಏನೆಲ್ಲ ಮಾಡಬೇಕೋ ಮಾಡಿದ್ದಾರೆ. ಆದರೆ, ಕೆಲವರು ಕಾರ್ಯಕರ್ತರ ಉತ್ಸಾಹ ಕುಗ್ಗಿಸುವಂತೆ ಮಾತನಾಡುತ್ತಿರುತ್ತಾರೆ. ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವುದು ಪಕ್ಷದ ಅಧ್ಯಕ್ಷರ ಜವಾಬ್ದಾರಿ. ಅವರಿಗೆ ದಾಖಲೆ ನಿರ್ಮಿಸಬೇಕು ಎಂಬ ಕನಸಿಲ್ಲ. ಯಾರಿಗಾದರೂ ನಾವು ಮಾತು ಕೊಟ್ಟರೆ, ಕೊಟ್ಟ ಮಾತಿನಂತೆ ನಡೆಯುವುದು ಮುಖ್ಯ. ಅಂತಹ ನಾಯಕರು ರಾಜಕಾರಣದಲ್ಲಿ ಶಾಶ್ವತವಾಗಿ ಇರುತ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಸಿಎಂ ಹುದ್ದೆ ಖಾಲಿ ಇಲ್ಲ
ಡಿ.ಕೆ. ಶಿವಕುಮಾರ್ ಸಿಎಂ ಯಾವಾಗ ಆಗುತ್ತಾರೆ ಎಂಬುದು ನಮ್ಮ, ನಿಮ್ಮ ನಡುವೆ ಆಗುವ ಚರ್ಚೆಯಲ್ಲ. ಅದು ಪಕ್ಷದ ವರಿಷ್ಠರ ತೀರ್ಮಾನ, ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಪಕ್ಷದ ಶಾಸಕರ ಬೆಂಬಲದಿಂದ ಆಡಳಿತ ನಡೆಸುತ್ತಿದ್ದಾರೆ. ಏನೇ ತೀರ್ಮಾನ ಮಾಡುವುದಾದರೂ ವರಿಷ್ಠರು ತೀರ್ಮಾನ ಮಾಡಬೇಕು. ಇದರ ಹೊರತಾಗಿ ವೈಯಕ್ತಿಕ ತೀರ್ಮಾನ ಯಾರು ಮಾಡುವಂತಿಲ್ಲ ಎಂದರು.
ಸಿಎಂ ಭೇಟಿ, ವಿಶೇಷ ಅರ್ಥ ಬೇಡ
ಶ್ರಮಕ್ಕೆ ತಕ್ಕ ಫ್ರತಿಫಲ ಖಂಡಿತವಾಗಿಯೂ ಇದೆ. ಒಂದಲ್ಲ ಒಂದು ದಿನ ಡಿ.ಕೆ. ಶಿವಕುಮಾರ್ ಅವರಿಗೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಭರವಸೆ ಹಾಗೂ ನಂಬಿಕೆ ಮೇಲೆಯೇ ನಾವೆಲ್ಲ ಬದುಕುತ್ತಿದ್ದೇವೆ. ವಚನ ಭ್ರಷ್ಟತೆಯ ಬಗ್ಗೆ ಹೈಕಮಾಂಡ್ ಅನ್ನು ಕೇಳಬೇಕು. ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಸಿಎಂ ಬಳಿ ಕೆಲವು ವಿಚಾರ ಮಾತನಾಡುತ್ತೇವೆ. ಆದರೆ, ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಹೇಳಿದರು.
ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಮೊದಲು ಬೇರೆ ಪಕ್ಷದಲ್ಲಿದ್ದರು. ಕಾಂಗ್ರೆಸ್‌ಗೆ ಬಂದು ಮುಖ್ಯಮಂತ್ರಿ ಆದರು. ಅವರ ಹಣೆಯಲ್ಲಿ ಸಿಎಂ ಸ್ಥಾನ ಬರೆದಿತ್ತು. ಈಗ ಹರಿಯಾಣ, ಗುಜರಾತ್‌ನಲ್ಲಿ ಮೊದಲ ಬಾರಿ ಗೆದ್ದ ಶಾಸಕರೇ ಸಿಎಂ ಆಗಿದ್ದಾರೆ. ರಾಜಕಾರಣದಲ್ಲಿ ಯಾವುದೂ ಸಾಧ್ಯವಲ್ಲ, ಅಸಾಧ್ಯವೂ ಇಲ್ಲ ಎಂದರು.
ಹೈಕಮಾಂಡ್ ಸ್ಪಷ್ಟನೆ ನೀಡಲಿ
ದೆಹಲಿಯಲ್ಲಿ ಎರಡೂವರೆ ವರ್ಷದ ಹಿಂದೆ ಏನು ತೀರ್ಮಾನವಾಗುತ್ತದೆ ಎಂಬ ಕುತೂಹಲವಿತ್ತು. ನಾಲ್ಕು ಗೋಡೆಯ ಮಧ್ಯೆ ವರಿಷ್ಠರು ಮಾಡಿದ ತೀರ್ಮಾನವದು. ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಸ್ಪಷ್ಟತೆ ಕೊಡುತ್ತದೆ. ಎಲ್ಲಿಯವರೆಗೆ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಇರುತ್ತಾರೋ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯುತ್ತದೆ ಎಂದು ತಿಳಿಸಿದರು.