ಐದನೇ ತಲೆಮಾರಿನ ಸ್ಟೆಲ್ತ್‌ ಫೈಟರ್‌ ಜೆಟ್‌ ಘಟಕ ಸ್ಥಾಪನೆಗೆ ಕರ್ನಾಟಕ ಪೈಪೋಟಿ
x

ಐದನೇ ತಲೆಮಾರಿನ ಸ್ಟೆಲ್ತ್‌ ಫೈಟರ್‌ ಜೆಟ್‌ ಘಟಕ ಸ್ಥಾಪನೆಗೆ ಕರ್ನಾಟಕ ಪೈಪೋಟಿ

ಉತ್ಪಾದನಾ ಘಟಕ ಪ್ರಾರಂಭಿಸಲು ಕರ್ನಾಟಕ ಜತೆಗೆ ಮಹಾರಾಷ್ಟ್ರ, ತಮಿಳುನಾಡು, ಉತ್ತರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಪೈಪೋಟಿ ನಡೆಸುತ್ತಿವೆ. ಈ ಸಂಬಂಧ ಎಚ್‌ಎಎಲ್‌ ಜತೆ ಸಚಿವ ಎಂ.ಬಿ.ಪಾಟೀಲ್‌ ಚರ್ಚೆ ಮಾಡಿದ್ದಾರೆ.


ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ತನ್ನ ಶಕ್ತಿ ಏನೆಂಬುದನ್ನು ಇಡೀ ವಿಶ್ವಕ್ಕೆ ತೋರಿಸಿರುವ ಭಾರತ ಐದನೇ ತಲೆಮಾರಿನ ಫೈಟರ್ ಜೆಟ್ ಅಭಿವೃದ್ಧಿಗೆ ವೇಗ ನೀಡಿದೆ. ಇದರ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಸ್ಟೆಲ್ತ್‌ ಫೈಟರ್‌ ಜೆಟ್‌ ಉತ್ಪಾದನಾ ಘಟಕ ಸ್ಥಾಪನೆಗೆ ಪೈಪೋಟಿ ಪ್ರಾರಂಭಿಸಿವೆ.

ದೇಶದ ಮಹತ್ವಾಕಾಂಕ್ಷೆಯಾಗಿರುವ ಸುಧಾರಿತ ಮಧ್ಯಮ ಯುದ್ಧ ವಿಮಾನ (ಎಎಂಸಿಎ) ಕಾರ್ಯಕ್ರಮವು ಭಾರತೀಯ ವಾಯುಸೇನೆಗೆ ಶಕ್ತಿ ಒದಗಿಸುವುದರ ಜತೆಗೆ ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುತ್ತದೆ. ಇಂತಹ ವಿಮಾನ ಉತ್ಪಾದನಾ ಘಟಕವು ತಮ್ಮ ರಾಜ್ಯಗಳ ತೆಕ್ಕೆಗೆ ತೆಗೆದುಕೊಳ್ಳಲು ಕಸರತ್ತು ಆರಂಭಿಸಿವೆ. ಕರ್ನಾಟಕ ಜತೆಗೆ ಮಹಾರಾಷ್ಟ್ರ, ತಮಿಳುನಾಡು, ಉತ್ತರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಪೈಪೋಟಿ ನಡೆಸುತ್ತಿವೆ.ಬೆಂಗಳೂರು, ನಾಸಿಕ್‌, ಕೊಯಮತ್ತೂರು, ಲಖನೌ ಮತ್ತು ಹೈದರಾಬಾದ್‌ ನಗರಗಳಲ್ಲಿ ಫೈಟರ್‌ ಜೆಟ್‌ ಉತ್ಪಾದನಾ ಕೇಂದ್ರ ಆರಂಭಿಸಲು ಆಯಾ ರಾಜ್ಯಗಳು ಸೆಣಸಾಡುತ್ತಿವೆ. ಇದಕ್ಕಾಗಿ ಭೂಮಿ ಮತ್ತು ಪ್ರೋತ್ಸಾಹಧನ ನೀಡುವ ಘೋಷಣೆಗಳನ್ನು ಮಾಡುತ್ತಿವೆ.

ಎಎಂಸಿಎ ಕಾರ್ಯಕ್ರಮವು ಹಿಂದೂಸ್ತಾನ ಏರೋನಾಟಿಕ್ಸ್‌ ಲಿಮಿಟೆಡ್‌ (ಹೆಚ್‌ಎಎಲ್‌) ಮತ್ತು ಖಾಸಗಿ ವಲಯ ಪಾಲುದಾರ ಸಹಯೋಗದಲ್ಲಿ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿಯು (ಎಡಿಎ) ಅಭಿವೃದ್ಧಿಪಡಿಸಿದೆ. ಜೆಟ್‌ ಉತ್ಪಾದನಾ ಘಟಕವನ್ನು ತನ್ನ ನೆಲದಲ್ಲಿ ಭದ್ರಪಡಿಸಿಕೊಳ್ಳಲು ಪ್ರಸ್ತಾಪ ಮಂಡಿಸುತ್ತಿವೆ.

ಯಾವ ಕಾರಣಕ್ಕಾಗಿ ರಾಜ್ಯಗಳ ನಡುವೆ ಸ್ಪರ್ಧೆ?

ಎಎಂಸಿಎ ಉತ್ಪಾದನಾ ಘಟಕ ಸ್ಥಾಪನೆಯಾದರೆ ಸ್ಥಳೀಯವಾಗಿ ಉದ್ಯೋಗಗಳು ಸೃಷ್ಟಿಯಾಗಲಿದೆ. ಆದಾಯವು ಸಹ ಹೆಚ್ಚಳವಾಗಲಿದೆ. 2030ರ ದಶಕದ ಆರಂಭದಲ್ಲಿ ಉತ್ಪಾದನೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಸ್ಟೆಲ್ತ್‌ ಫೈಟರ್‌ ಜೆಟ್‌ ಉತ್ಪಾದನಾ ಘಟಕ ಸ್ಥಾಪನೆಯು ಆತಿಥೇಯ ರಾಜ್ಯಕ್ಕೆ ದೀರ್ಘಾವಧಿಯ ಆರ್ಥಿಕ ಮತ್ತು ಕಾರ್ಯತಂತ್ರದ ಪ್ರಯೋಜನಗಳ ಅಶ್ವಾಸನೆ ನೀಡಲಾಗುತ್ತದೆ. ಈ ಉತ್ಪಾದನಾ ಘಟಕವು ಎಎಂಸಿಎಯನ್ನು ತಯಾರಿಸುವುದಲ್ಲದೆ, ಭವಿಷ್ಯದ ಏರೋಸ್ಪೇಸ್‌‍ ಕಾರ್ಯಕ್ರಮಗಳಿಗೆ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ. ಇದು ನಿರಂತರ ಆರ್ಥಿಕ ಚಟುವಟಿಕೆಯನ್ನೂ ಖಚಿತಪಡಿಸುತ್ತದೆ. ಉತ್ಪಾದನಾ ಘಟಕದ ಬಳಿ ನಾನಾ ಸೌಲಭ್ಯಗಳನ್ನು ಸ್ಥಾಪಿಸುವ ಪೂರೈಕೆದಾರರ ಒಳಹರಿವು ತೆರಿಗೆಗಳು ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಆದಾಯದ ಹರಿವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಮೂಲಗಳು ಹೇಳಿವೆ.

ಘಟಕ ಸ್ಥಾಪನೆಗೆ ಕರ್ನಾಟಕ ಪ್ರಯತ್ನ

ಹೆಚ್‌ಎಎಲ್‌ನ ಪ್ರಧಾನ ಕಚೇರಿ ಮತ್ತು ಅಭಿವೃದ್ಧಿ ಹೊಂದುತ್ತಿರುವ ಏರೋಸ್ಪೇಸ್‌‍ ಪರಿಸರ ವ್ಯವಸ್ಥೆಗೆ ನೆಲೆಯಾಗಿರುವ ಕರ್ನಾಟಕವು, ಎಎಂಸಿಎ ಉತ್ಪಾದನಾ ಸೌಲಭ್ಯವನ್ನು ತನ್ನಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಹೆಚ್‌ಎಎಲ್‌ ಈಗಾಗಲೇ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ನಿರ್ವಹಿಸುತ್ತಿರುವ ತುಮಕೂರು ಬಳಿ ಹೆಚ್ಚುವರಿ ಭೂಮಿ ಒದಗಿಸಲಿದೆ. ಎಎಂಸಿಎ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಎಚ್‌ಎಎಲ್‌ನ ವಿಮಾನ ಸಂಶೋಧನೆ ಮತ್ತು ವಿನ್ಯಾಸ ಕೇಂದ್ರಕ್ಕೂ (ಎಆರ್‌ಡಿಸಿ) ಸಹ ಸಮೀಪ ಇದೆ. ಆರ್‌ ಅಂಡ್‌ ಡಿ ಪ್ರಯತ್ನಗಳಿಗೂ ಸಹಕಾರಿಯಾಗಲಿದೆ.

ಹೆಎಚ್‌ಎಎಲ್‌ ಮತ್ತು ಖಾಸಗಿ ಪಾಲುದಾರರ ನೇತೃತ್ವದಲ್ಲಿ ಬಂಡವಾಳ ಹೂಡಿಕೆ, ಮೂಲಸೌಕರ್ಯ ಲಭ್ಯತೆ ಮತ್ತು ದೀರ್ಘಕಾಲೀನ ಕಾರ್ಯಸಾಧ್ಯತೆಯಂತಹ ಅಂಶಗಳ ಆಧಾರದ ಮೇಲೆ ಅಂತಿಮವಾಗಿ ಎಎಂಸಿಎ ಉತ್ಪಾದನಾ ಘಟಕದ ಸ್ಥಳ ನಿರ್ಧಾರವಾಗಲಿದೆ. ಎಎಂಸಿಎಗೆ ಅಗತ್ಯವಾಗಿರುವ ಎಫ್‌-414 ಎಂಜಿನ್‌ ಉತ್ಪಾದನೆಗೆ ಅಮೆರಿಕದ ಜಿಇ ಕಂಪನಿ ತಂತ್ರಜ್ಞಾನ ವರ್ಗಾವಣೆ ಒಪ್ಪಂದಕ್ಕೆ ಸಹಿ ಮಾಡಿದರೆ, ಆ ಎಂಜಿನ್‌ಗಳನ್ನು ಹೆಚ್‌ಎಎಲ್‌ ಬೆಂಗಳೂರಿನಲ್ಲಿಯೇ ಉತ್ಪಾದಿಸಲು ಹೊಸ ಎಂಜಿನ್‌ ಉತ್ಪಾದನಾ ಘಟಕಕ್ಕಾಗಿ ಭೂಮಿಯನ್ನು ಮೀಸಲಿಟ್ಟಿದೆ. ಪರಿಸರ ಅನುಮತಿಯ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.

ಉಳಿದ ರಾಜ್ಯಗಳಿಂದ ಪೈಪೋಟಿ ಯಾಕೆ?

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಹೆಚ್‌ಎಎಲ್‌ ಈಗಾಗಲೇ ತೇಜಸ್‌‍ ಎಂಕೆ1ಎ ಮತ್ತು ಸುಖೋಯ್‌ ಸು-30 ಎಂಕೆ1 ಉತ್ಪಾದನಾ ಘಟಕ ಹೊಂದಿದೆ. ಅದರ ಅಸ್ತಿತ್ವದಲ್ಲಿರುವ ಮೂಲಸೌಕರ್ಯದಿಂದಾಗಿ ಕರ್ನಾಟಕಕ್ಕೆ ಪ್ರಬಲ ಸ್ಪರ್ಧಿಯಾಗಿದೆ. ತಮಿಳುನಾಡು ರಕ್ಷಣಾ ಕೈಗಾರಿಕಾ ಕಾರಿಡಾರ್‌ (ಟಿಎನ್‌ ಡಿಐಸಿ)ನಲ್ಲಿ ಕೊಯಮತ್ತೂರಿನಲ್ಲಿ ಹೊಸ ಎಎಂಸಿಎ ಉತ್ಪಾದನಾ ಸೌಲಭ್ಯ ಸ್ಥಾಪನೆಗಾಗಿ ಪ್ರಸ್ತಾವನೆ ಸಲ್ಲಿಸಿದೆ. ಅದು ದೃಢವಾದ ಕೈಗಾರಿಕಾ ನೆಲೆ ಮತ್ತು ಎಎಂಸಿಎ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಖಾಸಗಿ ಏರೋಸ್ಪೇಸ್‌‍ ಸಂಸ್ಥೆಗಳಿಗೆ ಸಮೀಪದಲ್ಲಿದೆ. ಇದಲ್ಲದೇ ಉತ್ತರ ಪ್ರದೇಶದ ಲಖನೌ ಕೂಡ ಸಂಭಾವ್ಯ ತಾಣವಾಗಿದೆ. ವೇಗವಾಗಿ ಬೆಳೆಯುತ್ತಿರುವ ಏರೋಸ್ಪೇಸ್‌‍ ಕೇಂದ್ರವಾದ ತೆಲಂಗಾಣದ ಹೈದರಾಬಾದ್‌ ಕೂಡ ಸ್ಪರ್ಧೆಯಲ್ಲಿದೆ. ಇವು ಆಧುನಿಕ ಮೂಲಸೌಕರ್ಯ ನೀಡಲಿವೆ ಎಂಬ ಅಶ್ವಾಸನೆಯನ್ನು ನೀಡಿವೆ.

ಸರ್ಕಾರವನ್ನು ಸಂಪರ್ಕಿಸಿದ ಎಚ್‌ಎಎಲ್‌

ಎಎಂಸಿಎ ಸ್ಥಾಪನೆಗೆ ಸಂಬಂಧಿಸಿದಂತೆ ಹೆಚ್‌ಎಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಕೆ. ಸುನೀಲ್‌ ಅವರು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್‌ ಅವರನ್ನು ಭೇಟಿ ಮಾಡಿದರು. ಹೊಸ ಸ್ಥಾಪನೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಕರ್ನಾಟಕದ ನಾಯಕತ್ವವು ಭಾರತದ ಏರೋಸ್ಪೇಸ್‌‍ ಉತ್ಪಾದನೆ ಮತ್ತು ಅದರ ಸ್ಥಾಪಿತ ಪೂರೈಕೆ ಸರಪಳಿಯಲ್ಲಿ ರಾಜ್ಯದ ಪಾಲಿನ ಬಗ್ಗೆ ಸಮಾಲೋಚಿಸಿದ್ದಾರೆ.

ಈ ವೇಳೆ ಸಚಿವ ಎಂ.ಬಿ.ಪಾಟೀಲ್‌, ತಮ್ಮನ್ನು ಭೇಟಿಯಾದ ಹೆಚ್‌ಎಎಲ್‌ ಅಧ್ಯಕ್ಷರಿಗೆ ಏರೋಸ್ಪೇಸ್‌‍ ಉತ್ಪಾದನೆಯ ಕುರಿತಾಗಿ ಕರ್ನಾಟಕದ ಆಶಯ ಮನವರಿಕೆ ಮಾಡಿದ್ದೇವೆ. ಹೆಚ್‌ಎಎಲ್‌ಗೆ ಏನೆಲ್ಲ ಬೇಕೋ ಅದನ್ನು ಮುಕ್ತವಾಗಿ ಒದಗಿಸುವುದಕ್ಕೆ ಮುಖ್ಯಮಂತ್ರಿಯವರ ಪರವಾಗಿ ಭರವಸೆ ನೀಡಿದ್ದೇವೆ. ಅವರಿಗೆ ಅಗತ್ಯವಿರುವ ಭೂಮಿಯನ್ನು ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ನೀಡುವುದು ಸೇರಿದಂತೆ ಯಾವ ಅನುಕೂಲತೆ ಅಗತ್ಯವಿದೆಯೋ, ಎಲ್ಲವನ್ನೂ ಕೊಡುತ್ತೇವೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ. ರಕ್ಷಣೆ ಮತ್ತು ವೈಮಾಂತರಿಕ್ಷ ವಲಯದಲ್ಲಿ ನಾವು ದೇಶಕ್ಕೇ ಅಗ್ರಸ್ಥಾನದಲ್ಲಿದ್ದೇವೆ. ಹೀಗಾಗಿ ನಮಗೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಒಂದೊಂದು ಡಿಫೆನ್ಸ್ ಕಾರಿಡಾರ್ ಅಗತ್ಯವಾಗಿ ಬೇಕಾಗಿದೆ. ಬೇರೆ ರಾಜ್ಯದವರಿಗೆ ಡಿಫೆನ್ಸ್ ಕಾರಿಡಾರ್ ಕೊಡುವುದರಲ್ಲಿ ತಪ್ಪಿಲ್ಲ. ಆದರೆ, ನಮಗೆ ಸಲ್ಲಬೇಕಾದ್ದು ಸಲ್ಲಲೇಬೇಕು ಎಂದಿದ್ದಾರೆ.

ಚೀನಾ, ರಷ್ಯಾಗಿಂತ ಬಲಿಶಾಲಿ ಜೆಟ್‌

ರಕ್ಷಣಾ ಇಲಾಖೆ ಎಎಂಸಿಎ ಕಾರ್ಯನಿರ್ವಹಣೆಗೆ ಅನುಮೋದನೆ ನೀಡಿದೆ. ಈಗಾಗಲೇ ಸಾಲು ಸಾಲು ಅಸ್ತ್ರಗಳು ಭಾರತದ ಬತ್ತಳಿಕೆಗೆ ಸೇರುತ್ತಿದ್ದು, ಇದರ ಜೊತೆ ಈಗ ಐದನೇ ತಲೆಮಾರಿನ ಫೈಟರ್ ಜೆಟ್ ಸೇರುತ್ತಿರುವುದು ಭಾರತವನ್ನು ಮತ್ತಷ್ಟು ಬಲಿಷ್ಠ ಮಾಡಲಿದೆ. ಐದನೇ ತಲೆಮಾರಿನ ವಾಯುಶಕ್ತಿಗೆ ಭಾರತದ ಉತ್ತರ ಎಂದು ಎಎಂಸಿಎ ಅನ್ನು ಕರೆಯಲಾಗುವುದು. ಇದು ಭಾರೀ ಅಡ್ವಾನ್ಸ್ ಆಗಿದ್ದು, ವೈರಿಗಳಿಗೆ ಗುರಿಯಿಟ್ಟರೆ ಮಿಸ್‌ ಆಗುವ ಸಾಧ್ಯತೆಯೇ ಇಲ್ಲ. ಸದ್ಯ ಚೀನಾ ಹಾಗೂ ರಷ್ಯಾ ಬಳಿಯಿರುವ ಫೈಟರ್ ಜೆಟ್‌ಗಳಿಗಿಂತಲೂ ಬಲಶಾಲಿಯಾಗಿದೆ. ಈಗಾಗಲೇ ರಫೇಲ್ ಕಾಟದಿಂದ ಉಸಿರು ಕಟ್ಟಿಕೊಂಡಿರುವ ಪಾಕಿಸ್ತಾನಕ್ಕೆ ಭಾರತದ ಬತ್ತಳಿಕೆಗೆ ಐದನೇ ತಲೆಮಾರಿನ ಫೈಟರ್ ಜೆಟ್ ಸೇರುತ್ತಿರುವುದು ನಿದ್ದೆಗೆಡಿಸಿದೆ.

ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಗೆ ಪಾತ್ರ:

ಒಂದು ವೇಳೆ ಎಎಂಸಿಎ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡರೆ, ಭಾರತ ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನಗಳನ್ನು ಕಾರ್ಯನಿರ್ವಹಿಸುವ ಜಗತ್ತಿನ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಪ್ರಸ್ತುತ ಅಮೆರಿಕಾ (ಎಫ್-22 ಮತ್ತು ಎಫ್-35), ಚೀನಾ (ಜೆ-20), ಮತ್ತು ರಷ್ಯಾಗಳು (ಸು-57) ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನಗಳನ್ನು ಹೊಂದಿವೆ. ಎಎಂಸಿಎ ಭಾರತದ ರಕ್ಷಣಾ ಸಾಮರ್ಥ್ಯದಲ್ಲಿ ಬಹುದೊಡ್ಡ ಜಿಗಿತವಾಗಲಿದೆ.

ಎಎಂಸಿಎ ಸಾಮರ್ಥ್ಯಗಳು ಮತ್ತು ವಿನ್ಯಾಸ

ಎಎಂಸಿಎ ಒಂದು ಆಸನದ, ಅವಳಿ ಇಂಜಿನ್‌ಗಳು, ಮಧ್ಯಮ ತೂಕದ ಯುದ್ಧ ವಿಮಾನವಾಗಿದ್ದು, 25 ಟನ್‌ಗಳ ಗರಿಷ್ಠ ಟೇಕಾಫ್ ತೂಕವನ್ನು ಹೊಂದಿರಲಿದೆ. ಇದು ಗರಿಷ್ಠ 55 ಸಾವಿರ ಅಡಿಗಳಷ್ಟು ಎತ್ತರದಲ್ಲಿ, 6,500 ಕೆಜಿ ತೈಲ ಸಾಮರ್ಥ್ಯದೊಡನೆ ಹಾರಬಲ್ಲದಾಗಿದ್ದು, ದೀರ್ಘ ವ್ಯಾಪ್ತಿಯ ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ.

Read More
Next Story