
HAL Tejas mk2 : ಎಚ್ಎಎಲ್ನಿಂದ ಇನ್ನೂ ಹಾರದ ತೇಜಸ್; ಯುದ್ಧ ವಿಮಾನಗಳ ನಿರ್ಮಾಣಕ್ಕೆ ಯಾರ ಅಡ್ಡಿ?
HAL Tejas Mk2 :ಎಚ್ಎಎಲ್ ಭಾರತೀಯ ವಾಯುಪಡೆಯ ಜತೆ ಒಪ್ಪಂದ ಮಾಡಿಕೊಂಡಂತೆ ಈ ಶಕ್ತಿಯುತ ವಿಮಾನಗಳನ್ನು ಪೂರೈಸಿಲ್ಲ. ಪೂರೈಸುವುದು ಬಿಡಿ ಒಂದೇ ಒಂದು ವಿಮಾನವನ್ನೂ ಸಿದ್ಧಪಡಿಸಿಲ್ಲ.
ಬೆಂಗಳೂರು ನಗರದಲ್ಲಿ ನಡೆದ ವೈಮಾನಿಕ ಪ್ರದರ್ಶನ - ಏರೋ ಶೋದ ನಡುವೆ, ಭಾರತದ ಯುದ್ಧ ವಿಮಾನಗಳ ನಿರ್ಮಾಣ ಸಂಸ್ಥೆಯಾಗಿರುವ ಎಚ್ಎಎಲ್ ಸಣ್ಣ ವಿವಾದಕ್ಕೆ ಒಳಗಾಯಿತು.
ಪ್ರದರ್ಶನದಲ್ಲಿ ಎಚ್ಎಎಲ್ ತನ್ನ ಅತ್ಯಾಧುನಿಕ ವಿಮಾನ (ಎಲ್ಎಸಿ ) ಎಮ್ಕೆ 1ಎ (HAL Tejas mk2) ಹಾರಾಟದ ಮೂಲಕ ನೋಡುಗರ ಕಣ್ಣಿಗೆ ಬೆರಗು ಮೂಡಿಸಿತ್ತು. ಭಾರತದ ವಾಯುಪಡೆಗೆ ಶಕ್ತಿ ತುಂಬಿದಂತೆ ತೋರಿಸಿತ್ತು. ಆದರೆ, ವಾಸ್ತವ ಬೇರೆಯೇ ಇದೆ. ಎಚ್ಎಎಲ್ ಭಾರತೀಯ ವಾಯುಪಡೆಯ ಜತೆ ಒಪ್ಪಂದ ಮಾಡಿಕೊಂಡಂತೆ ಈ ಶಕ್ತಿಯುತ ವಿಮಾನಗಳನ್ನು ಪೂರೈಸಿಲ್ಲ. ಪೂರೈಸುವುದು ಬಿಡಿ ಒಂದೇ ಒಂದು ವಿಮಾನವನ್ನೂ ಸಿದ್ಧಪಡಿಸಿಲ್ಲ.
ಭಾರತದ ವಾಯುಪಡೆಯ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್ ಅವರು ಈ ಕಟು ಸತ್ಯವನ್ನು ಬಹಿರಂಗ ಮಾಡಿದ್ದಾರೆ. ಹೀಗಾಗಿ ಎಚ್ಎಎಲ್ ಸಂಸ್ಥೆಯ ಮತ್ತೊಂದು ವೈಫಲ್ಯ ಈ ಬಾರಿ ಪ್ರದರ್ಶನಗೊಂಡಿದೆ. ಹಾಗೆಂದು ಎಚ್ಎಎಲ್ ಪಾಲಿಗೆ ಇದು ಹೊಸ ಬೆಳವಣಿಗೆಯೇನೂ ಅಲ್ಲ. ಆದರೆ, ಭಾರತೀಯ ಯುದ್ಧ ಸಾಮರ್ಥ್ಯವನ್ನು ಕಡಿಮೆ ಮಾಡುವಂಥ ಜಡ್ಡುಗಟ್ಟಿದ ರಚನೆ ಇದು ಎಂಬುದನ್ನು ಒಪ್ಪಲೇಬೇಕು.
ಯಾಕೆಂದರೆ ಭಾರತದ ಪಾಲಿನ ಅತ್ಯಂತ ಅಪಾಯಕಾರಿ ಶತ್ರು ಎಂದೆನಿಸಿಕೊಂಡಿರುವ ಚೀನಾ, ಆರನೇ ಪೀಳಿಗೆಯ ರೇಡಾರ್ಗಳಿಗೆ ಪತ್ತೆ ಮಾಡಲು ಸಾಧ್ಯವಾಗದಂತಹ ಯುದ್ಧ ವಿಮಾನಗಳನ್ನು ಹೊಂದಿರುವಾಗ ನಾವಿನ್ನೂ ಒಪ್ಪಂದ ಮಾಡಿಕೊಂಡಿರುವ ವಿಮಾನಗಳನ್ನು ಪಡೆಯಲಾಗದ ಸ್ಥಿತಿ ಎದುರಿಸುತ್ತಿರುವುದು ಖೇದದ ಸಂಗತಿ. ಹಾಗಾದರೆ, ಈ ಸಮಸ್ಯೆಗೆ ಮೂಲ ಕಾರಣವೇನು? ಇದರ ಹಿಂದೆ ಆಮದು ಲಾಬಿ ಕೆಲಸ ಮಾಡುತ್ತಿದೆಯೇ? ಆಡಳಿತ ಯಂತ್ರದ ಸಮಸ್ಯೆಯೇ ಇದೆಯೇ ಎಂಬುದರ ಬಗ್ಗೆ 'ದ ಫೆಡರಲ್ ಕರ್ನಾಟಕ'' ವಿಡಿಯೊ ಚರ್ಚೆ ನಡೆಸಿತು.
ಬಾಹ್ಯಾಕಾಶ ಹಾಗೂ ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಹಾಗೂ 'ದ ಫೆಡರಲ್ನ ಬ್ಯುಸಿನೆಸ್ ಎಡಿಟರ್' ಕೆ. ಗಿರಿಪ್ರಕಾಶ್ ಚರ್ಚೆಯಲ್ಲಿ ಭಾಗವಹಿಸಿ, ಪ್ರತಿಷ್ಠಿತ ಎಚ್ಎಎಲ್ ಸಂಸ್ಥೆಯು ಯಾಕೆ ಹಿಂದಕ್ಕೆ ಬೀಳುತ್ತಿದೆ ಎಂಬುದನ್ನು ವಿವರಿಸಿದರು.
ಗಿರೀಶ್ ಲಿಂಗಣ್ಣ ಅವರು ''ಎಚ್ಎಎಲ್, ವಿಮಾನ ಉತ್ಪಾದನೆ ಮಾಡುವಲ್ಲಿ ಕೆಲವು ಸಂದರ್ಭಗಳಲ್ಲಿ ಸೋತಿರುವ ಹೊರತಾಗಿಯೂ, ಇದು ನೇರವಾಗಿ ಒಂದು ಸಂಸ್ಥೆಯ ಮೇಲೆ ಗೂಬೆ ಕೂರಿಸಬಹುದಾದ ವಿಚಾರವಲ್ಲ ಎಂದು ಹೇಳಿದರು. ಯುದ್ಧ ವಿಮಾನಗಳನ್ನು ಸೂಕ್ತ ಸಮಯಕ್ಕೆ ಪೂರೈಕೆ ಮಾಡಲು ಸಾಧ್ಯವಾಗದೇ ಇರುವುದರಿಂದ, ನೆರೆಯ ದೇಶಗಳ ಮುಂದೆ ನಮ್ಮ ಶಕ್ತಿ ಕುಂದಿದಂತೆ ಕಾಣುವುದು ದಿಟ. ಆದರೆ, ಎಚ್ಎಎಲ್ ಅಥವಾ ಅದರ ಮುಖ್ಯಸ್ಥರೇ ಅದಕ್ಕೆ ಪ್ರತ್ಯಕ್ಷ ಹೊಣೆಗಾರರು ಅಲ್ಲ,'' ಎಂದು ವ್ಯಾಖ್ಯಾನಿಸಿದರು.
''ಎಚ್ಎಎಲ್ಗೆ ಸುಧಾರಿತ ತಾಂತ್ರಿಕತೆಗೆ ಪೂರಕವಾಗಿ ಬಿಡಿಭಾಗಗಳು ಸೂಕ್ತ ಸಮಯಕ್ಕೆ ದೊರೆಯದ ಕಾರಣ ಅದರ ಗುರಿಯೂ ಸಮಯಕ್ಕೆ ಸರಿಯಾಗಿ ಮುಟ್ಟುತ್ತಿಲ್ಲ. ಒಂದು ಯುದ್ಧ ವಿಮಾನ ತಯಾರಿಕೆ ಎಂದರೆ, ಒಬ್ಬರೇ ಎಲ್ಲವನ್ನೂ ಸಿದ್ಧಪಡಿಸುವುದಲ್ಲ. ವಿದೇಶದಿಂದ ಬರುವ ಎಂಜಿನ್ಗಳು ಸೇರಿ ಸ್ಥಳೀಯವಾಗಿ ಬೇರೆಬೇ್ರೆ ಕಂಪನಿಗಳು ತಯಾರಿಸುವ ಬಿಡಿಭಾಗಗಳ ಲಭ್ಯತೆ ತಡವಾದರೂ ವಿಮಾನಗಳ ತಯಾರಿ ಪ್ರಕ್ರಿಯೆ ನಿಧಾನಗೊಳ್ಳುತ್ತದೆ,'' ಎಂದು ಅಭಿಪ್ರಾಯಪಟ್ಟರು.
''ಎಚ್ಎಎಲ್ ಸುಧಾರಣೆಯಾಗಬೇಕಾದರೆ ರಚನಾತ್ಮಕ ಬದಲಾವಣೆ ಅತ್ಯಗತ್ಯ. ಹಾಗೆಂದು ಇದು ಎಚ್ಎಎಲ್ ಸಂಸ್ಥೆಯಿಂದ ಮಾತ್ರ ಆಗುವ ಕೆಲಸವಲ್ಲ. ಸರ್ಕಾರವೂ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು. ಟೆಂಡರ್ ಪ್ರಕ್ರಿಯೆ, ಬಿಡಿಭಾಗಗಳ ಆಮದು ಮತ್ತಿತ್ಯಾದಿ ವಿಚಾರಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯದ ಅಗತ್ಯವಿದೆ,'' ಎಂದು ಹೇಳಿದರು.
ಹೆಚ್ಚಿನ ಕ್ರಮ ಅಗತ್ಯ
ಗಿರಿಪ್ರಕಾಶ್ ಅವರು ಮಾತನಾಡಿ, ''ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಆಡಳಿತಗಾರರ ಹೊಣೆಗಾರಿಕೆರಹಿತ ವರ್ತನೆಗಳು ಎಚ್ಎಎಲ್ ಸಮಸ್ಯೆಗೆ ಕಾರಣ,'' ಎಂದರು. ''ಎಚ್ಎಎಲ್ ದಕ್ಷ ಸಂಸ್ಥೆಯಾಗಿದ್ದರೂ ಪೂರೈಕೆ ಮಾಡಲು ವಿಫಲಗೊಂಡಿರುವುದು ಹಿನ್ನಡೆಯೇ ಸರಿ. ಆದರೆ, ದೀರ್ಘಕಾಲೀನ ಯೋಜನೆಯಿಂದ ಮಾತ್ರ ಸುಧಾರಣೆ ಸಾಧ್ಯ,'' ಎಂದು ಹೇಳಿದರು.
''ಎಚ್ಎಎಲ್ ಸಮರ್ಪಕವಾಗಿ ಕೆಲಸ ಮಾಡಬೇಕಾದರೆ ದೊಡ್ಡ ಮಟ್ಟದ ಸುಧಾರಣೆ ಅಗತ್ಯವಿದೆ. ಆ ಸಂಸ್ಥೆಗೆ ಹೆಚ್ಚು ಸ್ವಾಯತ್ತ ಶಕ್ತಿ ಬೇಕಾಗುತ್ತದೆ,'' ಎಂದು ಹೇಳಿದರು. ''ತಕ್ಷಣವೇ ಸುಧಾರಣೆ ನಿಟ್ಟಿನಲ್ಲಿ ಕೆಲಸ ಮಾಡಿದರೆ ಮುಂದಿನ ವರ್ಷಗಳಲ್ಲಿ ಈ ಸಮಸ್ಯೆಗೆ ಕೊನೆ ಹಾಡಬಹುದು,'' ಎಂದು ಹೇಳಿದರು.
ಆಮದು ಲಾಬಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ದೇಶವೆಂದೇನೂ ಅಲ್ಲ. ಯುದ್ಧ ಸಾಮಾಗ್ರಿಗಳ ಖರೀದಿಯಲ್ಲಿ ದೊಡ್ಡ ಮಟ್ಟದ ಲಾಬಿ ಇದೆ. ಭಾರತವೂ ಇದಕ್ಕೆ ಹೊರತಲ್ಲ ಎಂದು ಹೇಳಿದರು.
ಆಮದು ಲಾಬಿ ಎಂದರೇನು?
ವಿದೇಶಗಳಿಂದ ಶಸ್ತ್ರಾಸ್ತ್ರಗಳ ಖರೀದಿ ಮಾಡುವುದು ಕೆಲವೊಬ್ಬರಿಗೆ ಲಾಭದಾಯಕ ವಹಿವಾಟು. ವಿದೇಶಿ ಕಂಪನಿಗಳ ಜತೆ ಒಪ್ಪಂದ ಮಾಡುವ ಮೂಲಕ ಆ ಕಂಪನಿಗಳಿಂದ ಕಿಕ್ಬ್ಯಾಕ್ ಪಡೆದ ಪ್ರಕರಣಗಳು ಈ ಹಿಂದೆ ನಡೆದಿವೆ. ಇದರಲ್ಲಿ ಎಚ್ಎಎಲ್ ಅಥವಾ ವಾಯುಪಡೆಯ ಅಧಿಕಾರಿಗಳು ನೇರವಾಗಿ ಭಾಗಿಯಾಗುತ್ತಾರೆ ಎಂದು ಹೇಳಲಾಗುವುದಿಲ್ಲ. ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಇಂಥ ಲಾಭದ ಮೋಹಕ್ಕೆ ಬೀಳುತ್ತಾರೆ. ಈ ಶಕ್ತಿಗಳು, ದೇಶೀಯ ಬೆಳವಣಿಗೆಗೆ ಅಡ್ಡಿಪಡಿಸುತ್ತವೆ. ಅಂತೆಯೇ ವಿದೇಶದಿಂದ ಯುದ್ಧ ವಿಮಾನಗಳನ್ನು ಖರೀದಿ ಮಾಡುವುದು ದೊಡ್ಡ ವಹಿವಾಟು ಆಗಿರುವ ಕಾರಣ, ಎಚ್ಎಎಲ್ ಬೆಳವಣಿಗೆಗೆ ಕಾಣದ ಕೈಗಳು ಅಡ್ಡಿ ಪಡಿಸುತ್ತವೆಯೇ ಎಂಬ ಗುಮಾನಿ ಇದೆ. ಅದನ್ನು ಆಮದು ಲಾಬಿ ಎಂದು ಕರೆಯಲಾಗುತ್ತದೆ.
ಈ ಎಲ್ಲ ವಿಚಾರಗಳ ಬಗ್ಗೆ ʼದ ಫೆಡರಲ್ ಕರ್ನಾಟಕ" ನಡೆಸಿದ ಚರ್ಚೆಯ ಮಾಹಿತಿಗೆ ಈ ಕೆಳಗಿನ ವೀಡಿಯೋ ಕ್ಲಿಕ್ ಮಾಡಿ.