7 ಕೋಟಿ ದರೋಡೆ ಪ್ರಕರಣ|ಸಿಎಂಎಸ್ ಸಿಬ್ಬಂದಿ ಕೈವಾಡದ ಶಂಕೆ; ವಿಚಾರಣೆ ತೀವ್ರ
ಸಿಎಂಎಸ್ ವಾಹನದ ನಾಲ್ವರು ಸಿಬ್ಬಂದಿ ಒಂದೇ ರೀತಿಯ ಹೇಳಿಕೆ ನೀಡುತ್ತಿದ್ದು, ದರೋಡೆ ಪ್ರಕರಣದಲ್ಲಿ ತಮ್ಮ ಕೈವಾಡದ ಶಂಕೆಯನ್ನು ನಿರಾಕರಿಸಿದ್ದಾರೆ. ಇದರಿಂದ ಪ್ರಕರಣ ಜಟಿಲವಾಗಿದ್ದು, ಪೊಲೀಸರು ಸಿಎಂಎಸ್ ವಾಹನ ಸಿಬ್ಬಂದಿಯ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದಾರೆ.
ಸಿಎಂಎಸ್ ವಾಹನ
ಬೆಂಗಳೂರಿನಲ್ಲಿ ಮಂಗಳವಾರ ಹಾಡಹಗಲೇ ಎಟಿಎಂಗೆ ಹಣ ತುಂಬುವ ವಾಹನದಿಂದ 7 ಕೋಟಿಗೂ ಹೆಚ್ಚು ಹಣ ದರೋಡೆ ಮಾಡಿದ ಪ್ರಕರಣ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಆರೋಪಿಗಳು ಹಾಗೂ ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪರಿಶೀಲಿಸಲು ತನಿಖೆ ತೀವ್ರಗೊಳಿಸಿದ್ದಾರೆ. ಸಿಎಂಎಸ್ ವಾಹನದಲ್ಲಿದ್ದ ನಾಲ್ವರು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.
ವಾಹನ ಚಾಲಕ ವಿನೋದ್, ಸೆಕ್ಯೂರಿಟಿ ಗಾರ್ಡ್ ಅಫ್ತಾಬ್, ಗನ್‌ಮ್ಯಾನ್ ರಾಜಣ್ಣ ಮತ್ತು ಮತ್ತೊಬ್ಬ ಸಿಬ್ಬಂದಿ ತಮ್ಮಯ್ಯ ಎಂಬುವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ ಅವರ ಬ್ಯಾಂಕ್ ಖಾತೆ ಹಾಗೂ ಮೊಬೈಲ್‌ಗಳನ್ನು ಜಾಲಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆಯ ವೇಳೆ ನಾಲ್ವರು ಸಿಎಂಎಸ್ ಸಿಬ್ಬಂದಿ ಒಂದೇ ರೀತಿಯ ಹೇಳಿಕೆ ನೀಡುತ್ತಿದ್ದು, ದರೋಡೆ ಪ್ರಕರಣದಲ್ಲಿ ತಮ್ಮ ಪಾತ್ರವನ್ನು ಅಲ್ಲಗಳೆಯುತ್ತಿದ್ದಾರೆ. ಹಾಗಾದರೆ, ದರೋಡೆಕೋರರಿಗೆ ಸೂಕ್ಷ್ಮ ಮಾಹಿತಿ ರವಾನೆಯಾಗಿದ್ದು ಹೇಗೆ ಎಂಬುದು ಪೊಲೀಸರ ನಿದ್ದೆಗಡಿಸಿದೆ. ಸಿಎಂಎಸ್ ವಾಹನದ ಸಿಬ್ಬಂದಿಯ ಮೊಬೈಲ್ ಜಪ್ತಿ ಮಾಡಲಾಗಿದೆ. ಅಲ್ಲದೇ ಅಪರಾಧ ನಡೆದ ಸಂದರ್ಭದಲ್ಲಿ ಆ ಸ್ಥಳದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಸಂಖ್ಯೆಗಳನ್ನು ಗುರುತಿಸುವ ಸಲುವಾಗಿ 'ಟವರ್ ಡಂಪ್ ವಿಶ್ಲೇಷಣೆ' ಕೂಡ ಆರಂಭಿಸಿದ್ದಾರೆ.
ಭದ್ರತಾ ಲೋಪಗಳ ಪರಿಶೀಲನೆ
ದರೋಡೆಕೋರರು ತೆರಿಗೆ ಇಲಾಖೆ ಹಾಗೂ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದು ಕೃತ್ಯ ಎಸಗಿದ್ದಾರೆ. ಪ್ರಕರಣದಲ್ಲಿ ಒಳಗಿನವರೇ ಭಾಗಿಯಾಗಿರುವ ಶಂಕೆ ಹಾಗೂ ಭದ್ರತಾ ಲೋಪಗಳ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಹಣ ಸಾಗಿಸುವ ವೇಳೆ ಭದ್ರತಾ ಸಿಬ್ಬಂದಿಯು ಶಸ್ತ್ರಾಸ್ತ್ರ ಬಳಸದಿರುವುದು, ಪೊಲೀಸರಿಗೆ ತಕ್ಷಣ ಮಾಹಿತಿ ನೀಡದಿರುವುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.
ವಾಟ್ಸಾಪ್ ಕರೆ, ನಕಲಿ ನಂಬರ್ ಪ್ಲೇಟ್
ಸಿಎಂಎಸ್ ಸಿಬ್ಬಂದಿ ನೀಡಿದ ಪ್ರಾಥಮಿಕ ಮಾಹಿತಿಯಂತೆ ದರೋಡೆಕೋರರು ವಾಟ್ಸಾಪ್ ಕರೆಗಳ ಮೂಲಕ ಕನ್ನಡದಲ್ಲಿ ಸಂವಹನ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ. ದರೋಡೆಕೋರರು ಎರಡು ತಂಡಗಳಲ್ಲಿ ಬಂದು ಕೃತ್ಯ ಎಸಗಿದ್ದಾರೆ. ಒಂದು ತಂಡವು ಸಿಎಂಎಸ್ ಸಿಬ್ಬಂದಿಯನ್ನು ಅಪಹರಿಸಿದರೆ, ಮತ್ತೊಂದು ತಂಡ ಹಣವನ್ನು ದೋಚಿದೆ. ಕೋರಮಂಗಲ ಮೇಲ್ಸೇತುವೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದನ್ನು ತಿಳಿದೇ ಹಣವನ್ನು ಬೇರೆ ವಾಹನಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಹೇಳಲಾಗಿದೆ. ಹಣ ಸಾಗಣೆಗೆ ಬಳಸಿದ ಟೊಯೋಟಾ ಇನ್ನೋವಾ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದು ಬಯಲಾಗಿದೆ.
ಕರ್ನಾಟಕದಾದ್ಯಂತ ಶೋಧ ಕಾರ್ಯಾಚರಣೆ
ದರೋಡೆಕೋರರನ್ನು ಪತ್ತೆಹಚ್ಚಲು ಕರ್ನಾಟಕದಾದ್ಯಂತ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಹೊಸಕೋಟೆ ಮತ್ತು ಹೊಸೂರು ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಟೋಲ್ ಪ್ಲಾಜಾಗಳು ಮತ್ತು ಎಲ್ಲಾ ಪ್ರಮುಖ ನಿರ್ಗಮನ ಮಾರ್ಗಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಪೊಲೀಸರು ಇತ್ತೀಚೆಗೆ ರಾಜೀನಾಮೆ ನೀಡಿದ ಸಿಎಂಎಸ್ ಉದ್ಯೋಗಿಗಳು, ಹೊಸದಾಗಿ ನೇಮಕಗೊಂಡವರು ಮತ್ತು ಅಪರಾಧ ಇತಿಹಾಸ ಹೊಂದಿರುವ ಎಲ್ಲರ ಮೇಲೂ ಕಣ್ಣಿಟ್ಟಿದ್ದಾರೆ.
ನಡೆದಿದ್ದೇನು?
ನಗರದಾದ್ಯಂತ ಎಟಿಎಂಗಳಿಗೆ ಹಣ ತುಂಬುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿಎಂಎಸ್ ಇನ್ಫೋ ಸಿಸ್ಟಮ್ ಲಿಮಿಟೆಡ್‌ಗೆ ಸೇರಿದ ನಗದು ವ್ಯಾನ್‌ನಿಂದ 7.11 ಕೋಟಿ ರೂ. ದರೋಡೆಗೆ ಭಾರತ ಸರ್ಕಾರದ ಸ್ಟಿಕ್ಕರ್ ಹೊಂದಿರುವ ಎಸ್‌ಯುವಿ ಬಳಸಲಾಗಿದೆ. ಆರೋಪಿಗಳು ತಮ್ಮನ್ನು ಆರ್‌ಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು.
ಬೆಳಿಗ್ಗೆ 9.30ಕ್ಕೆ ಜೆ.ಪಿ.ನಗರದಿಂದ ಹಣ ತುಂಬಿಸಿಕೊಂಡು ಹೊರಟಿದ್ದ ವ್ಯಾನ್‌ನಲ್ಲಿ ಚಾಲಕ ಬಿನೋದ್ ಕುಮಾರ್, ಸೆಕ್ಯುರಿಟಿ ಗಾರ್ಡ್ ಅಫ್ತಾಬ್ ಮತ್ತು ಇಬ್ಬರು ಶಸ್ತ್ರಸಜ್ಜಿತ ಗನ್‌ಮನ್‌ಗಳಾದ ರಾಜಣ್ಣ ಮತ್ತು ತಮ್ಮಯ್ಯ ಇದ್ದರು. ಮಧ್ಯಾಹ್ನ 12.24 ರ ಹೊತ್ತಿಗೆ ತಂಡವು ಜೆಪಿ ನಗರದಲ್ಲಿರುವ ಎಚ್‌ಡಿಎಫ್‌ಸಿ ಕರೆನ್ಸಿ ಚೆಕ್‌ನಿಂದ 7.11 ಕೋಟಿ ರೂ.ತೆಗೆದುಕೊಂಡು ನಗರದ ಎಟಿಎಂಗಳಿಗೆ ತುಂಬಲು ಹೊರಟಿತ್ತು.
ವಾಹನವು ಜಯನಗರದ ಅಶೋಕ ಪಿಲ್ಲರ್ ಮೂಲಕ ಲಾಲ್‌ಬಾಗ್‌ನ ಸಿದ್ದಾಪುರ ಗೇಟ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಭಾರತ ಸರ್ಕಾರದ ಸ್ಟಿಕ್ಕರ್ ಹೊಂದಿದ್ದ ಎಸ್‌ಯುವಿ ದಿಢೀರನೆ ಅಡ್ಡಗಟ್ಟಿದೆ. ಅದರಿಂದ ಇಳಿದ ಐದರಿಂದ ಆರು ಮಂದಿ, ತಾವು ದಾಖಲೆ ಪರಿಶೀಲನೆ ನಡೆಸುತ್ತಿರುವ ಆರ್‌ಬಿಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ಸಿಬ್ಬಂದಿಯನ್ನು ವ್ಯಾನ್‌ನಿಂದ ಹೊರಬರುವಂತೆ ತಿಳಿಸಿದ್ದಾರೆ. ಆರಂಭದಲ್ಲಿ ಐಟಿ ಅಧಿಕಾರಿಗಳು ಎಂದು ಶಂಕಿಸಲಾಗಿದ್ದರೂ ನಂತರ ಆರೋಪಿಗಳು ಆರ್‌ಬಿಐ ದಾಖಲೆಗಳನ್ನು ಬಳಸಿದ್ದರು ಎನ್ನಲಾಗಿದೆ.
ಡೈರಿ ಸರ್ಕಲ್ ಫ್ಲೈಓವರ್ ಮೇಲೆ ದರೋಡೆ
ವಂಚಕರು ಅಫ್ತಾಬ್, ರಾಜಣ್ಣ ಮತ್ತು ತಮ್ಮಯ್ಯ ಅವರನ್ನು ತಮ್ಮ ಇನ್ನೋವಾ ಎಸ್‌ಯುವಿನಲ್ಲಿ ಕರೆದೋಯ್ದರು. ಚಾಲಕ ಬಿನೋದ್ ಕುಮಾರ್ ಅವರಿಗೆ ಒಂಟಿಯಾಗಿ ವಾಹನದೊಂದಿಗೆ ಬರುವಂತೆ ಸೂಚಿಸಿದರು. ಸಿಎಂಎಸ್ ವಾಹನವು ಡೈರಿ ಸರ್ಕಲ್ ಮೇಲ್ಸೇತುವೆ ಮೇಲೆ ಬರುತ್ತಿದ್ದಂತೆ ಶಂಕಿತರು ತಮ್ಮ ಕಾರ್ಯಾಚರಣೆ ತೀವ್ರಗೊಳಿಸಿದರು. ಚಾಲಕನಿಗೆ ಪಿಸ್ತೂಲ್ ತೋರಿಸಿ ಬೆದರಿಸಿ ಸಂಪೂರ್ಣ 7.11 ಕೋಟಿ ರೂ. ಹಣವನ್ನು ತಮ್ಮ ಎಸ್‌ಯುವಿಗೆ ವರ್ಗಾಯಿಸಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಾರ್ಯಾಚರಣೆ ತೀವ್ರ
ಪ್ರಕರಣ ದಾಖಲಿಸಿಕೊಂಡ ಪೊಲೀಸರು 50 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳು ತಪ್ಪಿಸಿಕೊಂಡಿರುವ ಮಾರ್ಗವನ್ನು ಪತ್ತೆಹಚ್ಚಲು ಯತ್ನಿಸುತ್ತಿದ್ದಾರೆ. ನಗರದಾದ್ಯಂತ ಹಲವು ತಂಡಗಳು ಶೋಧ ನಡೆಸುತ್ತಿದ್ದು, ಪ್ರಮುಖ ಮಾರ್ಗಗಳಲ್ಲಿ ನಾಕಬಂದಿ ಹಾಕಲಾಗಿದೆ.
ಗೃಹ ಸಚಿವ ಎಚ್. ಪರಮೇಶ್ವರ್ ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ನಡೆದ ದೊಡ್ಡ ದರೋಡೆ ಪ್ರಕರಣ ಇದಾಗಿದೆ. ಆರೋಪಿಗಳ ಬಗ್ಗೆ ಸುಳಿವು ಲಭ್ಯವಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಮಧ್ಯೆ, ಸಿಎಂ ಸಿದ್ದರಾಮಯ್ಯ ಅವರ ಕೂಡ ಪ್ರಕರಣವನ್ನು ತ್ವರಿತವಾಗಿ ಪತ್ತೆ ಹಚ್ಚುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.