ನಂದಿನಿ ಹಾಲಿನ ದರ ಏರಿಕೆ | ಕಾಫಿ,ಟೀ ಬೆಲೆ ಏರಿಕೆ? ಹೋಟೆಲ್ ಮಾಲಿಕರ ಸಂಘ ಸ್ಪಷ್ಟನೆ
ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು, ʻʻನಂದಿನಿ ಹಾಲಿನ ದರ ಏರಿಸುವುದರೊಂದಿಗೆ ಹೆಚ್ಚುವರಿಯಾಗಿ 50 ಮಿಲಿಲೀಟರ್ ಹಾಲು ಸೇರಿಸಿ ನೀಡಲಾಗುತ್ತದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದ್ದರಿಂದ ನಾವು ಕಾಫಿ, ಟೀ ದರಗಳನ್ನು ಹೆಚ್ಚಳ ಮಾಡುವುದಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಎಂಎಫ್ ನಂದಿನಿ ಹಾಲಿನ ಬೆಲೆಯನ್ನು 2 ರೂಪಾಯಿಯಷ್ಟು ಏರಿಕೆ ಮಾಡಿದ್ದು, ಜೊತೆಗೆ ಹಾಲಿನ ಪ್ರಮಾಣವನ್ನೂ 50 ಮಿಲಿಲೀಟರ್ ಹೆಚ್ಚುವರಿಯಾಗಿ ನೀಡುತ್ತಿದೆ. ಆದರೆ, ಇದರಿಂದ ಕಾಫೀ ಟೀ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜತೆಗೆ, ನಂದಿನಿ ಹಾಲಿನ ದರ ಹೆಚ್ಚಳವಾದ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್‌ಗಳಲ್ಲಿ ಟೀ, ಕಾಫಿ ದರವೂ ಏರಿಕೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಹೋಟೆಲ್ ಮಾಲೀಕರು ನಾವು ದರ ಏರಿಸುವುದಿಲ್ಲ ಎಂಬ ಹೇಳಿದ್ದಾರೆ. ಇದು ಕಾಫಿ ಟೀ ಪ್ರಿಯರಿಗೆ ಸಿಹಿ ಸುದ್ಧಿ ಅಂತಲೇ ಹೇಳಬಹುದು.
ಈ ಬಗ್ಗೆ ʻದ ಫೆಡರಲ್‌ಕರ್ನಾಟಕʼದೊಂದಿಗೆ ಮಾತನಾಡಿದ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು, ʻʻನಂದಿನಿ ಹಾಲಿನ ದರ ಏರಿಸುವುದರೊಂದಿಗೆ ಹೆಚ್ಚುವರಿಯಾಗಿ 50 ಮಿಲಿಲೀಟರ್ ಹಾಲು ಸೇರಿಸಿ ನೀಡಲಾಗುತ್ತದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದ್ದರಿಂದ ನಾವು ಕಾಫಿ, ಟೀ ದರಗಳನ್ನು ಹೆಚ್ಚಳ ಮಾಡುವುದಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಫಿ ಟೀ ದರ ಹೆಚ್ಚಳ ಸಾಧ್ಯತೆಯನ್ನು ತಳ್ಳಿಹಾಕಿದ್ದ ಸಿಎಂ ಸಿದ್ದರಾಮಯ್ಯ:
ʻʻಹಾಲಿನ ಬೆಲೆ ಎಲ್ಲಿ ಏರಿಕೆ ಆಗಿದೆ? ಹಾಲಿನ ದರ ಹೆಚ್ಚಾಗಿಲ್ಲ. ಹಳೆಯ ದರವೇ ಇದೆ. ಮಾರುಕಟ್ಟೆ ಒದಗಿಸಲು 500 ಎಂಎಲ್ ಬದಲು 550 ಎಂಎಲ್, 1000 ಎಂಎಲ್ ಬದಲು 1050 ಎಂಎಲ್ ಮಾಡಿದ್ದೇವೆ. ಹೆಚ್ಚುವರಿ ಹಾಲನ್ನು ಕೊಡುತ್ತಿರುವ ಪ್ರಮಾಣಕ್ಕೆ ಮಾತ್ರವೇ ಹೆಚ್ಚು ಪಡೆಯುತ್ತಿದ್ದೇವೆ ಅಷ್ಟೇ. ಹೋಟೆಲ್‌ಗಳು ಕಾಫಿ, ಟೀ ದರ ಹೆಚ್ಚಿಸಲು ಸಾಧ್ಯವಿಲ್ಲ. ಹಾಲಿನ ದರ ಹೆಚ್ಚಳವಾದರೆ ಮಾತ್ರ ಕಾಫಿ, ಟೀ ದರ ಹೆಚ್ಚು ಮಾಡಬೇಕು. ಈಗ ಅವರು ಹೇಗೆ ದರ ಹೆಚ್ಚಳ ಮಾಡಲು ಸಾಧ್ಯ?ʼʼ ಎಂದು ಕಾಫಿ ಟೀ ದರ ಹೆಚ್ಚಳ ಸಾಧ್ಯತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ.
ʻʻನಂದಿನಿ ಹಾಲಿನ ದರ ಹೆಚ್ಚಳವಾಗಿಲ್ಲ, ಹೆಚ್ಚುವರಿಯಾಗಿ ಕೊಡುತ್ತಿರುವ ಹಾಲಿಗೆ ಪಡೆಯಬೇಕಾದ ಮೊತ್ತ ಸೇರಿಸಿದ್ದೇವೆ ಅಷ್ಟೆ. ಹೆಚ್ಚುವರಿ ಹಾಲು ಉತ್ಪಾದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಲಿಗೆ ಮಾರುಕಟ್ಟೆ ಒದಗಿಸಲು ಇದು ಅನಿವಾರ್ಯʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ʻʻಕಳೆದ ವರ್ಷ ಈ ಸಮಯದಲ್ಲಿ 90 ಲಕ್ಷ ಲೀಟರ್ ಹಾಲು ಇತ್ತು. ಈಗ 99 ಲಕ್ಷ ಲೀಟರ್‌ಗಿಂತಲೂ ಹೆಚ್ಚಾಗಿದೆ. ನಾವು ರೈತರಿಂದ ಹಾಲು ಖರೀದಿ ಮಾಡಲೇಬೇಕು. ಅವರಿಗೆ ಬೇಡ ಎನ್ನಲು ಸಾಧ್ಯವಿಲ್ಲ. ಉತ್ಪಾದನೆಯಾದ ಹಾಲಿಗೆ ಮಾರುಕಟ್ಟೆ ಒದಗಿಸಲೇಬೇಕು. ಹಾಗಾಗಿ ಅರ್ಧ ಲೀಟರ್‌ಗೆ 50 ಎಂಎಲ್ ಜಾಸ್ತಿ ಮಾಡಿದ್ದೇವೆ. ಕ್ವಾಂಟಿಟಿ ಹೆಚ್ಚು ಮಾಡಿದ್ದೇವೆ. ಆ ಹೆಚ್ಚುವರಿ ಕ್ವಾಂಟಿಟಿಗೆ ಬೇಕಾದ ಬೆಲೆಯನ್ನು ನಿಗದಿ ಮಾಡಿದ್ದೇವೆ. 50 ಮಿಲಿ ಲೀಟರ್‌ಗೆ ಬೇಕಾದ ಹಣವನ್ನು ಹೆಚ್ಚು ಮಾಡಿದ್ದೇವೆ. 50 ಎಂಎಲ್‌ಗೆ 2.10 ರೂ. ಆಗಲಿದೆ. ಅದನ್ನು ಎರಡು ರೂ. ನಿಗದಿ ಮಾಡಿದ್ದೇವೆʼʼ ಎಂದು ದರ ಪರಿಷ್ಕರಣೆಯನ್ನು ಸಿದ್ದರಾಮಯ್ಯ ಅವರು ಸಮರ್ಥಿಸಿಕೊಂಡಿದ್ದಾರೆ.