ತಮನ್ನಾ ಔಟ್, ಮೈಸೂರು ಸ್ಯಾಂಡಲ್‌ಗೆ ಸ್ಯಾಂಡಲ್ವುಡ್ ತಾರೆ ಹೊಸ ರಾಯಭಾರಿ!
ಇದೀಗ ಕನ್ನಡದ 'ಶಾಕುಂತಲೆ' ಎಂದೇ ಖ್ಯಾತರಾದ ನಟಿ ಐಶಾನಿ ಶೆಟ್ಟಿ ಅವರನ್ನು ರಾಜ್ಯದ ಹೆಮ್ಮೆಯ ಉತ್ಪನ್ನದ ಹೊಸ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ.;
ರಾಜ್ಯದ ಸ್ವಾಭಿಮಾನದ ಸಂಕೇತ, ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯಾಗಿ ಪರಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ, ಕೊನೆಗೂ ಜನರ ಭಾವನೆಗಳಿಗೆ ಮಣಿದಿದೆ. ತೀವ್ರ ವಿವಾದ ಮತ್ತು ಪ್ರತಿಭಟನೆಗಳ ನಂತರ, ಇದೀಗ ಕನ್ನಡದ 'ಶಾಕುಂತಲೆ' ಎಂದೇ ಖ್ಯಾತರಾದ ನಟಿ ಐಶಾನಿ ಶೆಟ್ಟಿ ಅವರನ್ನು ರಾಜ್ಯದ ಹೆಮ್ಮೆಯ ಉತ್ಪನ್ನದ ಹೊಸ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಜನರ ದನಿಗೆ ಮಣಿದ ಸರ್ಕಾರ?
ಕೆಲ ತಿಂಗಳ ಹಿಂದೆ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮೈಸೂರು ಸ್ಯಾಂಡಲ್ ಸೋಪನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ತಮನ್ನಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದರು. "ಕನ್ನಡದಲ್ಲಿ ಪ್ರತಿಭಾನ್ವಿತ ನಟಿಯರಿಲ್ಲವೇ? ನಮ್ಮ ಹೆಮ್ಮೆಯ ಉತ್ಪನ್ನಕ್ಕೆ ಪರಭಾಷಾ ನಟಿಯೇಕೆ?" ಎಂದು ವಿಪಕ್ಷ ಬಿಜೆಪಿ ಮತ್ತು ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಆದರೆ, "ಇದು ಉದ್ಯಮದ ಬೆಳವಣಿಗೆಗೆ ಪೂರಕ" ಎಂದು ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು.
ಆದರೆ, ಇದೀಗ ಸದ್ದಿಲ್ಲದೆ ಈ ಮಹತ್ವದ ಬದಲಾವಣೆ ಮಾಡಲಾಗಿದ್ದು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL) ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಐಶಾನಿ ಶೆಟ್ಟಿ ಅವರು ಕಾಣಿಸಿಕೊಂಡಿರುವ ಹೊಸ ಜಾಹೀರಾತನ್ನು ಹಂಚಿಕೊಳ್ಳಲಾಗಿದೆ. ಈ ಮೂಲಕ, ತಮನ್ನಾ ಅವರನ್ನು ಕೈಬಿಟ್ಟು, ಕನ್ನಡಿಗರ ಹೆಮ್ಮೆಯ ನಟಿಗೆ ಮಣೆ ಹಾಕಲಾಗಿದೆ.
ಹಬ್ಬದ ಋತುವಿಗೆ 'ಶಾಶ್ವತ ಉಡುಗೊರೆ'
ಹಬ್ಬದ ಋತುವನ್ನು ಗುರಿಯಾಗಿಸಿಕೊಂಡು ಈ ಹೊಸ ಜಾಹೀರಾತನ್ನು ಬಿಡುಗಡೆ ಮಾಡಲಾಗಿದೆ. "100 ವರ್ಷಗಳ ಪರಂಪರೆಯೊಂದಿಗೆ, ಶುದ್ಧ ಶ್ರೀಗಂಧದ ಎಣ್ಣೆಯಿಂದ ಸಮೃದ್ಧವಾಗಿರುವ ಮೈಸೂರು ಸ್ಯಾಂಡಲ್ ಸೋಪ್, ಚರ್ಮವನ್ನು ಪೋಷಿಸುತ್ತದೆ, ಮೃದುಗೊಳಿಸುತ್ತದೆ ಮತ್ತು ತೇವಗೊಳಿಸುತ್ತದೆ. ಇದು ಚರ್ಮದ ಆರೈಕೆ ಮತ್ತು ಸಂಪ್ರದಾಯದ ಶಾಶ್ವತ ಉಡುಗೊರೆಯಾಗಿದೆ" ಎಂಬ ಸುಂದರ ಸಂದೇಶದೊಂದಿಗೆ ಐಶಾನಿ ಶೆಟ್ಟಿ ಅವರು ಕಂಗೊಳಿಸಿದ್ದಾರೆ. ಈ ನಡೆಯು, ಸಾರ್ವಜನಿಕರ ಅಭಿಪ್ರಾಯಕ್ಕೆ ಸರ್ಕಾರ ನೀಡಿದ ಗೌರವ ಎಂದು ಬಣ್ಣಿಸಲಾಗುತ್ತಿದೆ.