Air Show 2025 | ಮಾಂಸ ಮಾರಾಟಕ್ಕೆ ಏರ್‌ ಶೋ ಬ್ರೇಕ್‌; ಬಾಡೂಟಕ್ಕಾಗಿ ಜನರ ಪರದಾಟ

ಬೆಂಗಳೂರು ಹೊರವಲಯದಲ್ಲಿರುವ ಯಲಹಂಕದಲ್ಲಿ ಇದೀಗ ಮಾಂಸಾಹಾರ ಪ್ರಿಯರಿಗೆ ಮಾಂಸ ಸಿಗುವುದೇ ದುಬಾರಿಯಾಗಿದೆ. ಇಷ್ಟದ ಬಾಡೂಟ ಸವಿಯಲು ದೂರದ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.;

Update: 2025-02-08 02:00 GMT
ಯಲಹಂಕದಲ್ಲಿ ಮುಚ್ಚಿರುವ ಮಟನ್‌ ಶಾಪ್‌

ವಾರಾಂತ್ಯದ ಭಾನುವಾರ ಬಂತೆಂದರೆ ಸಾಕು ಬಹುತೇಕ ಮಾಂಸಾಹಾರ ಪ್ರಿಯರ ಮನೆಗಳಲ್ಲಿ ʼಸಂಡೆ ಸ್ಪೆಷಲ್‌ʼ ಘಮಲು. ವಾರವಿಡೀ ದಣಿದವರು ಭಾನುವಾರ ಕುಟುಂಬದೊಂದಿಗೆ ಮಾಂಸಾಹಾರ ಸೇವಿಸಿ ವಿಶ್ರಾಂತಿ ಬಯಸುತ್ತಾರೆ. ಅದಕ್ಕಾಗಿಯೇ ಬೆಳಿಗ್ಗೆಯೇ ಮೇಕೆ, ಕುರಿ, ಕೋಳಿ ಅಥವಾ ಮೀನು ಅಂಗಡಿಗಳ ಮುಂದೆ ಕ್ಯೂ ನಿಂತು ಖರೀದಿಸುತ್ತಾರೆ.

ಆದರೆ, ಬೆಂಗಳೂರು ಹೊರವಲಯದ ಯಲಹಂಕದಲ್ಲಿ 'ಏರ್‌ ಶೋ' ಹಿನ್ನೆಲೆಯಲ್ಲಿ ಮಾಂಸ ಮಾರಾಟ ನಿರ್ಬಂಧಿಸಿರುವುದರಿಂದ ಆ ಭಾಗದ ಮಾಂಸಾಹಾರ ಪ್ರಿಯರಿಗೆ ಸದ್ಯ ಮನೆಯೂಟದ ಮಾಂಸಾಹಾರಕ್ಕೆ ಬ್ರೇಕ್‌ ಬಿದ್ದಿದೆ. ಮನೆಮಂದಿಯೊಂದಿಗೆ ನಿತ್ಯ ಮಾಂಸಾಹಾರ ಸೇವಿಸುವವರು ಅಥವಾ ವಾರಕ್ಕೊಮ್ಮೆ ಜೊತೆ ನಾನ್‌ ವೆಜ್‌ ಸೇವಿಸುವವರಿಗೆ ಇದೀಗ ಫ್ರೆಶ್‌ ಮಾಂಸ ಮತ್ತು ಮೀನು ಸಿಗದ ಕಾರಣ ದೂರದ ಊರುಗಳಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಕಾರ್ತೀಕ ಮಾಸದ ದೀಕ್ಷೆಯಂತೆ ಮಾಂಸಾಹಾರ ತ್ಯಜಿಸಿದ್ದಾರೆ.

ವಾಯುನೆಲೆಯ 13ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಬಂಧ

ಯಲಹಂಕ ವಾಯುನೆಲೆಯಲ್ಲಿ ಇದೇ ಫೆ.10 ರಿಂದ 14 ರವರೆಗೆ ಏಷ್ಯಾದ ಅತಿ ದೊಡ್ಡ ಏರ್‌ ಶೋ ನಡೆಯಲಿದೆ. ಏರ್‌ ಶೋ ಸಂದರ್ಭದಲ್ಲಿ ಪಕ್ಷಿಗಳ ಹಾರಾಟ ನಿಯಂತ್ರಿಸುವ ಸಲುವಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಮಾಂಸ, ಮೀನು ಮಾರಾಟ ನಿರ್ಬಂಧಿಸಲಾಗಿದೆ. ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವುದರಿಂದ ಹದ್ದು ಸೇರಿದಂತೆ ಇತರೆ ಪಕ್ಷಿಗಳ ಹೆಚ್ಚು ಬರುತ್ತವೆ. ಏರ್‌ ಶೋ ವಿಮಾನ ಹಾರಾಟಕ್ಕೆ ಈ ಪಕ್ಷಿಗಳು ಅಪಾಯ ತಂದೊಡ್ಡುತ್ತವೆ ಎಂಬ ಹಿನ್ನೆಲೆಯಲ್ಲಿ ಏರ್‌ ಶೋ ನಡೆಯುವ ಒಂದು ತಿಂಗಳ ಹಿಂದಿನಿಂದಲೇ ಬಿಬಿಎಂಪಿ ವ್ಯಾಪ್ತಿಯ ಯಲಹಂಕ ವಲಯದಲ್ಲಿ ಮಾಂಸ ಮತ್ತು ಮೀನು ಮಾರಾಟ ನಿಷೇಧಿಸಲಾಗಿದೆ. 

ವಾಯುಪಡೆ ಮಾರ್ಗಸೂಚಿಗಳ ಆಧಾರದ ಮೇಲೆ ಬಿಬಿಎಂಪಿ ಅಧಿಕಾರಿಗಳು ವಾಯುನೆಲೆಯ 13 ಕಿ.ಮೀ ಸುತ್ತಳತೆಯಲ್ಲಿ ಮಾಂಸ ಮಾರಾಟ ನಿರ್ಬಂಧಿಸಿದ್ದಾರೆ. ಇದಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರನ್ನು ಒಳಗೊಂಡ ಎರಡು ತಂಡಗಳು ಬೆಳಿಗ್ಗೆ 8 ರಿಂದ ಸಂಜೆ 8ರ ವರೆಗೆ ಕಾರ್ಯಾಚರಣೆ ನಡೆಸುತ್ತಿವೆ. ಬೀದಿ ಬದಿ ವ್ಯಾಪಾರಿಗಳು ಮಾಂಸಾಹಾರ ಮಾರಾಟ ನೆಚ್ಚಿಕೊಂಡು ಜೀವನ ಸಾಗಿಸುತ್ತಾರೆ. ಹಾಗಾಗಿ ಅಂತವರಿಗೆ ರಿಲ್ಯಾಕ್ಸ್‌ ನೀಡಲಾಗಿದೆ. ಆದರೆ, ಹೋಟೆಲ್‌ ಹಾಗೂ ಡಾಬಾಗಳು ಮಾಂಸಾಹಾರದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಬಿಬಿಎಂಪಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.   

"ಮಾಂಸ ಮಾರಾಟ ನಿಷೇಧದ ಆದೇಶ ಉಲ್ಲಂಘಿಸಿದವರಿಗೆ ಮೊದಲು ನೋಟಿಸ್ ನೀಡುತ್ತೇವೆ. ಪುನರಾವರ್ತನೆಯಾದರೆ ಅಂಗಡಿಗಳಿಗೆ ದಂಡ ವಿಧಿಸುತ್ತೇವೆ. ಇಲ್ಲಿಯವರೆಗೆ 50 ಸಾವಿರ ದಂಡ ವಿಧಿಸಲಾಗಿದೆ" ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಹೇಶ್‌ ಕುಮಾರ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಮಾಂಸ ಮತ್ತು ಮೀನು ಮಾರಾಟದ ಅಂಗಡಿಗಳನ್ನು ಮುಚ್ಚಿಸಿದ್ದರೂ ಹೋಟೆಲ್, ಡಾಬಾಗಳಿಗೆ ಯಾವುದೇ ಕಡಿವಾಣ ಹಾಕಿಲ್ಲ. ಹಾಗಾಗಿ ಮಾಂಸಾಹಾರ ಸುಲಭವಾಗಿ ಸಿಗಲಿದೆ. ಆದರೆ, ತಾಜಾ ಮಾಂಸ ಮತ್ತು ಮೀನು ತಂದು ಮನೆಗಳಲ್ಲೇ ತಯಾರಿಸಿ ಸೇವಿಸುವವರು ಮಾತ್ರ ಇದರಿಂದ ಬಾಧಿತರಾಗಿದ್ದಾರೆ. ಇಡೀ ಕುಟುಂಬಕ್ಕೆ ಹೋಟೆಲ್‌ನಿಂದ ಮಾಂಸಾಹಾರ ತಂದು ಸೇವಿಸುವುದು ದುಬಾರಿ. ಹೀಗಾಗಿ ಹಲವರು ವಾರಾಂತ್ಯದಲ್ಲಿ ಊರುಗಳಿಗೆ ತೆರಳಿ ಮಾಂಸಾಹಾರ ಸೇವಿಸುತ್ತಿದ್ದಾರೆ. ಇನ್ನೂ ಕೆಲವರು ಏರ್‌ ಶೋ ಮುಗಿಯುವವರೆಗೂ ಮಾಂಸಾಹಾರ ಸೇವನೆಯ ಗೋಜಿಗೆ ಹೋಗುತ್ತಿಲ್ಲ!

ಕೆರೆಗಳ ಬಳಿ ಹದ್ದುಗಳು

"ಯಲಹಂಕ ವಲಯ ಗ್ರಾಮೀಣ ಪ್ರದೇಶಗಳಿಂದ ಕೂಡಿದೆ. ಬೆಟ್ಟಹಲಸೂರು, ಗಂಟಿಗಾನಹಳ್ಳಿ ಕೆರೆಗಳಲ್ಲಿ ಮೀನುಗಳನ್ನು ಹಿಡಿಯಲು ಹದ್ದುಗಳು ಬರುತ್ತವೆ. ಅವನ್ನು ನಿಯಂತ್ರಿಸುವುದು ಕಷ್ಟ. ಯಲಹಂಕ ಭಾಗದಲ್ಲಿ ಅತಿ ಹೆಚ್ಚು ಮರಗಿಡಗಳಿವೆ. ಸಾಮಾನ್ಯವಾಗಿ ಪಕ್ಷಿಗಳ ಸಂಚಾರ ಇರುತ್ತದೆ. ಮಾಂಸದ ತ್ಯಾಜ್ಯ ಎಲ್ಲೆಂದರಲ್ಲಿ ಸುರಿಯಲು ಆಸ್ಪದ ನೀಡದಿರುವ ಕಾರಣ ಪಕ್ಷಿಗಳ ಸಂಚಾರ ಕೊಂಚ ಕಡಿಮೆಯಾಗಿದೆ. ಇನ್ನು ಆಸುಪಾಸಿನ ಕೆಲ ಗ್ರಾಮಗಳಲ್ಲಿ ಮಾಂಸ ಮಾರಾಟ ಕಂಡು ಬಂದಿದೆ. ಅಂಥವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಅಂಗಡಿ ಮುಚ್ಚಿಸಲಾಗಿದೆ" ಎಂದು ಮಹೇಶ್ ಕುಮಾರ್ ತಿಳಿಸಿದರು.

ಯಲಹಂಕ-ಕೋಗಿಲು ಕ್ರಾಸ್‌ನಲ್ಲಿರುವ ಜನದಟ್ಟಣೆಯ ಕಬಾಬ್‌ ಸೆಂಟರ್‌ನಲ್ಲಿ ನಿತ್ಯ ಸಂಜೆ ಮಾಮೂಲಿಯಂತೆ ವ್ಯಾಪಾರ ನಡೆಯುತ್ತಿದೆ. ಆದರೆ, ಈ ರಸ್ತೆಗಳಲ್ಲಿರುವ ಮಾಂಸ ಮಾರಾಟದ ಅಂಗಡಿಗಳನ್ನು ಬಂದ್‌ ಮಾಡಿರುವುದು ಕಂಡು ಬಂದಿದೆ. 

ಯಲಹಂಕ ವಲಯದ ರಾಜಾನುಕುಂಟೆ, ಎಂ.ಎಸ್‌. ಪಾಳ್ಯ, ದೇವನಹಳ್ಳಿಯ ರಸ್ತೆ ಸಾದಹಳ್ಳಿ, ಬ್ಯಾಟರಾಯನಪುರದವರೆಗೆ ಮಾಂಸದ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಗ್ರಾಮೀಣ ಭಾಗ ಹಾಗೂ ನಗರದ ಒಳ ಪ್ರದೇಶಗಳಲ್ಲಿರುವ ಕೆಲ ಅಂಗಡಿಗಳಲ್ಲಿ ಕದ್ದುಮುಚ್ಚಿ ಮಾಂಸ ಮಾರಾಟ ನಿರಾತಂಕವಾಗಿದೆ. 

ಕೊಡಿಗೇಹಳ್ಳಿ ನಿವಾಸಿ, ಜಿಕೆವಿಕೆಯ ನಿವೃತ್ತ ಗ್ರಂಥಪಾಲಕ ಡಾ. ದೇವರಾಜು ಅವರು ʼದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿ, “ಏರ್‌ ಶೋ ಸ್ವಾಗತಾರ್ಹ. ಪಕ್ಷಿಗಳಿಂದ ಸಮಸ್ಯೆ ಆಗಬಹುದೆಂಬ ಸಾಧ್ಯತೆ ಹಿನ್ನೆಲೆಯಲ್ಲಿ ಮಾಂಸ ಮತ್ತು ಮೀನು ಮಾರಾಟ ನಿರ್ಬಂಧಿಸಲಾಗಿದೆ. ನಮಗಂತೂ ಮಾಂಸಾಹಾರ ಬೇಕೆ ಬೇಕು ಅಂತೇನಿಲ್ಲ. ತಿನ್ನಬೇಕು ಎನ್ನಿಸಿದರೆ ಆನ್‌ಲೈನ್‌ನಲ್ಲಿ ಮಾಂಸಾಹಾರ ಲಭ್ಯವಿದೆ. ಹಾಗಾಗಿ ಚಿಂತಿಸಬೇಕಾಗಿಲ್ಲ” ಎಂದು ತಿಳಿಸಿದರು.

ಮಾಂಸಾಹಾರಿಗಳ ಮೇಲೆ ಏರ್‌ ಶೋ ಪ್ರಭಾವ

ಯಲಹಂಕದ ವಾಯುನೆಲೆಯಲ್ಲಿ 23ನೇ ಆವೃತ್ತಿಯ ಏರ್‌ ಶೋ ಹಿನ್ನೆಲೆಯಲ್ಲಿ ಜ.23 ರಿಂದ ಯಲಹಂಕ ವಲಯದ 13 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ. ಫೆ.17 ರವರೆಗೂ ಮಾಂಸ ಮತ್ತು ಮೀನು ಮಾರಾಟ ಇರುವುದಿಲ್ಲ. ಏರ್‌ ಶೋಗಾಗಿ ನಿತ್ಯ ಪೂರ್ವಾಭ್ಯಾಸ ನಡೆಯಲಿದೆ. ಲೋಹದ ಹಕ್ಕಿಗಳ (ವಿಮಾನ) ಕಲರವಕ್ಕೆ ಪಕ್ಷಿಗಳಿಂದ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಮಾಂಸ ಮಾರಾಟ ನಿರ್ಬಂಧಿಸಲಾಗಿದೆ.  

 “ಪ್ರತಿ ಸಲ ಏರ್‌ ಶೋ ಸಮಯದಲ್ಲಿ ಒಂದು ತಿಂಗಳ ಕಾಲ ಮಾಂಸ ಮಾರಾಟ ಇರುವುದಿಲ್ಲ. ಈ ಅವಧಿಯಲ್ಲಿ ನಾವು ಕೂಡ ಮಾಂಸಾಹಾರ ಬಿಡುತ್ತೇವೆ. ಕಳೆದ 10ವರ್ಷಗಳಿಂದ ಇದು ರೂಢಿಯಾಗಿ ಬಿಟ್ಟಿದೆ. ಆರೋಗ್ಯದ ದೃಷ್ಟಿಯಿಂದ ಹೋಟೆಲ್‌ ನಲ್ಲಿ ಸಿಗುವ ಮಾಂಸಾಹಾರ ಬಳಸುವುದಿಲ್ಲ. ಏರ್‌ ಶೋ ಮುಗಿದ ಬಳಿಕ ಮಾಮೂಲಿಯಂತೆ ಬಾಡೂಟ ಸವಿಯುತ್ತೇವೆ” ಎಂದು ಯಲಹಂಕ ಉಪನಗರದ ಚಿಕ್ಕಬೊಮ್ಮಸಂದ್ರ ನಿವಾಸಿ ಟಿ. ರಂಗನಾಥ್‌ ತಿಳಿಸಿದರು.

ಮಾಲ್‌ಗಳಲ್ಲಿ ಸಿದ್ಧ ಮಾಂಸ ಲಭ್ಯ

ಏರ್‌ ಶೋ ಹಿನ್ನೆಲೆಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಆದರೆ, ಮಾಲ್‌ಗಳಲ್ಲಿ ಮಾತ್ರ ಸಿದ್ಧ ಮಾಂಸ ಸಿಗುತ್ತಿದೆ. ಕೋಲ್ಡ್‌ ಸ್ಟೋರೇಜ್‌ನಲ್ಲಿ ಸಂರಕ್ಷಿಸಿರುವ ಮಾಂಸ ಮಾರಾಟಕ್ಕೆ ನಿಯಮದಲ್ಲಿ ಅವಕಾಶವಿದೆ ಎಂಬುದು ಅಧಿಕಾರಿಗಳು ಮಾತು.

ಇನ್ನು ಕೆಲ ನಿವಾಸಿಗಳು ಮಾಲ್‌ಗಳಿಂದಲೇ ಮಾಂಸ ತಂದು ಸವಿಯುತ್ತಾರೆ. ಏರ್ ಶೋಗಾಗಿ ಮಾಂಸ ಮಾರಾಟ ನಿರ್ಬಂಧಿಸಲಾಗಿದೆ. ಆದರೆ, ಹೋಟೆಲ್, ಡಾಬಾಗಳಲ್ಲಿ ಮಾಂಸಾಹಾರ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಝೊಮೆಟೊ, ಸ್ವಿಗ್ಗಿ, ಜೆಪ್ಟೊ ಸೇರಿದಂತೆ ಇತರೆ ಆನ್‌ಲೈನ್‌ ವೇದಿಕೆಗಳ ಮೂಲಕವೂ ತರಿಸಿಕೊಳ್ಳಲಾಗುತ್ತಿದೆ. ನಾವು ಈ ಮೊದಲು ಅಂಗಡಿಗಳಿಗೆ ಹೋಗಿ ಕುರಿ, ಕೋಳಿ, ಮೇಕೆಯ ತಾಜಾ ಮಾಂಸ ಖರೀದಿಸುತ್ತಿದ್ದೆವು. ಈಗ ನಿಷೇಧ ಹೇರಿರುವುದರಿಂದ ಮಾಲ್‌ಗಳಿಂದ ತಂದು ಸೇವಿಸುತ್ತೇವೆ. ವಾರಕ್ಕೊಮ್ಮೆ ಊರಿಗೆ ಹೋದಾಗ ಅಲ್ಲಿಯೇ ಬಾಡೂಟ ಸವಿದು ಬರುತ್ತೇವೆ ಎಂದು ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿ ವಾಸವಿರುವ ಡಾ. ಸತೀಶ್ ಹೇಳಿದರು.

ಮಾಂಸ ಮಾರಾಟ ನಿರ್ಬಂಧಿಸಿದ್ದರೂ ಕೆಲವು ಕಡೆ ಕದ್ದುಮುಚ್ಚಿ ಮಾರಾಟ ಮಾಡಲಾಗುತ್ತಿದೆ. ಹೋಟೆಲ್‌ಗಳಲ್ಲಿ ಮಾಂಸಾಹಾರ ಸಿಗುತ್ತಿದೆ. ಹಾಗಾಗಿ ಬಾಡೂಟಕ್ಕಾಗಿ ಪರಿತಪಿಸುವ ಅಗತ್ಯವಿಲ್ಲ. ಮಾಂಸ ಮಾರಾಟ ನಿಲ್ಲಿಸಿರುವುದರಿಂದ ಪಕ್ಷಿಗಳ ಸಂಚಾರ ಕಡಿಮೆಯಾಗಿದೆ. ಇಲ್ಲಿ ಜಿಕೆವಿಕೆ ಆವರಣವೇ ಪಕ್ಷಿಗಳ ಆವಾಸಸ್ಥಾನವಾಗಿದೆ. ಹಣ್ಣು, ಹಂಪಲಿಗಾಗಿ ಹೆಚ್ಚು ಪಕ್ಷಿಗಳು ಇಲ್ಲಿ ನೆಲೆಸಿವೆ. ಮಾಂಸದ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವುದನ್ನು ನಿಯಂತ್ರಿಸಿರುವುದರಿಂದ ಪಕ್ಷಿಗಳ ಸಂಚಾರ ಕೊಂಚ ಕಡಿಮೆಯಾಗಿದೆ ಎಂಬುದು ಅವರ ಮಾತು.

Tags:    

Similar News