ವಾಯುಭಾರ ಕುಸಿತ| ರಾಜ್ಯಾದ್ಯಂತ ಮೂರು ದಿನ ಭಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ
ಕಳೆದ ನಾಲ್ಕು ತಿಂಗಳ ಕಾಲ ಉತ್ತಮ ಮುಂಗಾರು ಮಳೆಯಾದ ಬೆನ್ನಲ್ಲೇ, ಅಕ್ಟೋಬರ್ ತಿಂಗಳಲ್ಲೂ ದೇಶಾದ್ಯಂತ ವಾಡಿಕೆಗಿಂತ ಶೇ. 15ರಷ್ಟು ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ (ಸೆ.30) ತಿಳಿಸಿತ್ತು.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಗುರುವಾರದಿಂದ ಮೂರು ದಿನ (ಅ. 2 ರಿಂದ 5 ರವರೆಗೆ) ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಮಳೆ ?
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹೆಚ್ಚಿನ ಕಡೆಗಳಲ್ಲಿ ಭಾರಿ ಮಳೆ ಮುಂದುವರಿಯಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಕಡೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು ಯೆಲ್ಲೋ ಅಲರ್ಟ್ ಘೋಷಿಸಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು , ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್‌ನಲ್ಲಿ ವಾಡಿಕೆಗಿಂತ ಶೇ.15 ಹೆಚ್ಚು ಮಳೆ
ಕಳೆದ ನಾಲ್ಕು ತಿಂಗಳ ಕಾಲ ಉತ್ತಮ ಮುಂಗಾರು ಮಳೆಯಾದ ಬೆನ್ನಲ್ಲೇ, ಅಕ್ಟೋಬರ್ ತಿಂಗಳಲ್ಲೂ ದೇಶಾದ್ಯಂತ ವಾಡಿಕೆಗಿಂತ ಶೇ. 15ರಷ್ಟು ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ (ಸೆ.30) ತಿಳಿಸಿತ್ತು.
ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಅವರ ಪ್ರಕಾರ, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಹಿಂಗಾರು ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಸಾಮಾನ್ಯ ಅಥವಾ ಅದಕ್ಕಿಂತ ಕಡಿಮೆ ಮಳೆಯಾಗಬಹುದು. ಜೊತೆಗೆ, ಅಕ್ಟೋಬರ್ ತಿಂಗಳಲ್ಲಿ ಪೂರ್ವ-ಈಶಾನ್ಯ ಮತ್ತು ವಾಯುವ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ಅವರು ಹೇಳಿದ್ದರು.
ದಕ್ಷಿಣ ಭಾರತದಲ್ಲಿ ಹಿಂಗಾರು ಅಬ್ಬರ
ದಕ್ಷಿಣ ಭಾರತಕ್ಕೆ ಸಂಬಂಧಿಸಿದಂತೆ, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಈಶಾನ್ಯ ಮುಂಗಾರು (ಹಿಂಗಾರು) ಮಳೆಯು ದಕ್ಷಿಣ ಪರ್ಯಾಯ ದ್ವೀಪದಲ್ಲಿ (ತಮಿಳುನಾಡು, ಕರಾವಳಿ ಆಂಧ್ರ, ರಾಯಲಸೀಮೆ, ಕೇರಳ ಮತ್ತು ದಕ್ಷಿಣ ಒಳನಾಡು ಕರ್ನಾಟಕ) ವಾಡಿಕೆಗಿಂತ ಹೆಚ್ಚಾಗುವ (ದೀರ್ಘಾವಧಿಯ ಸರಾಸರಿಯ ಶೇ. 112ಕ್ಕಿಂತ ಹೆಚ್ಚು) ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಈ ಭಾಗದ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣ 334.13 ಮಿ.ಮೀ. ಆಗಿದೆ.