ಪುರಾತತ್ವ ಇಲಾಖೆಯ ಬಂಧನದಲ್ಲಿ ಐಹೊಳೆ; ಸಂಪೂರ್ಣ ಸ್ಥಳಾಂತರಕ್ಕೆ ಗ್ರಾಮಸ್ಥರ ಒತ್ತಾಯ

ಐಹೊಳೆಯಲ್ಲಿರುವ 1,200 ಕ್ಕೂ ಹೆಚ್ಚು ಮನೆಗಳನ್ನು ಸ್ಥಳಾಂತರಿಸಬೇಕು ಎನ್ನುವುದು ಗ್ರಾಮಸ್ಥರು ಒತ್ತಾಯ. ಆದರೆ, ಸ್ಮಾರಕಗಳ ಪಕ್ಕದಲ್ಲಿರುವ 124 ಮನೆಗಳನ್ನು ಮಾತ್ರ ಸ್ಥಳಾಂತರಿಸಲು ಸರ್ಕಾರ ಮತ್ತು ಎಎಸ್‌ಐ ಮುಂದಾಗಿದೆ.

Update: 2024-02-05 06:30 GMT

ಉತ್ತರ ಕರ್ನಾಟಕದ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಬಾಗಲಕೋಟೆ ಜಿಲ್ಲೆಯ ಐಹೊಳೆಯನ್ನು ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆಯಲಾಗುತ್ತದೆ. ದೇಶ, ವಿದೇಶದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಆದರೆ, ಈ ಗ್ರಾಮದ ಜನರ ಬದುಕು ಶೋಚನೀಯ ಸ್ಥಿತಿಯಲ್ಲಿದೆ. ಪುರಾತತ್ವ ಇಲಾಖೆಯ ನಿಯಮಗಳಿಂದ ಗ್ರಾಮದ ಜನರು ಕಂಗಾಲಾಗಿದ್ದಾರೆ. ಹಾಗಾಗಿ ಐಹೊಳೆಯನ್ನು ಪೂರ್ತಿ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಐಹೊಳೆಯಲ್ಲಿ ಬೌದ್ಧ, ಹಿಂದೂ ಮತ್ತು ಜೈನ ಸ್ಮಾರಕಗಳು ಸೇರಿ ಒಟ್ಟು 120 ಪುರಾತನ ದೇವಾಲಯಗಳಿವೆ. ಈ ಕಾರಣದಿಂದಾಗಿಯೇ ಇದನ್ನು 'ದೇವಾಲಯಗಳ ತೊಟ್ಟಿಲು' ಎಂದೂ ಕರೆಯುತ್ತಾರೆ. ಇವು 5ರಿಂದ 8ನೇ ಶತಮಾನದಲ್ಲಿಯೇ ನಿರ್ಮಾಣವಾಗಿವೆ. ಈ ಸ್ಮಾರಕಗಳನ್ನು ರಕ್ಷಿಸುವ ಉದ್ದೇಶದಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಗ್ರಾಮದಲ್ಲಿ ಯಾವುದೇ ತರಹದ ನಿರ್ಮಾಣ ಕಾರ್ಯಕ್ಕೆ ತಡೆಯೊಡ್ಡಿತ್ತು. ಇಂಥ ನಿರ್ಬಂಧಗಳಿಂದ ಗ್ರಾಮಸ್ಥರು ತೀವ್ರ ಸಮಸ್ಯೆಗೆ ಒಳಗಾಗಿದ್ದಾರೆ.

ಕಾಯಿದೆ ಏನು ಹೇಳುತ್ತದೆ?: 

ಕಾಯಿದೆ ಪ್ರಕಾರ, ಪ್ರತಿ ಸಂರಕ್ಷಿತ ಸ್ಮಾರಕದ ಸುತ್ತಲಿನ 100 ಮೀಟರ್ ವಿಸ್ತರಣೆಯು ನಿಷೇಧಿತ ಪ್ರದೇಶವಾಗಿರುತ್ತದೆ; ಅಂದರೆ, ಇದು ನಿರ್ಮಾಣರಹಿತ ವಲಯವಾಗಿರುತ್ತದೆ. ಈ ಪ್ರದೇಶದಲ್ಲಿ ಅಧಿಕಾರಿಗಳ ಒಪ್ಪಿಗೆಯೊಂದಿಗೆ ಮಾತ್ರ ನಿರ್ಮಾಣಕ್ಕೆ ಅನುಮತಿಸಲಾಗಿದೆ. ಸ್ಮಾರಕದ ಸುತ್ತಮುತ್ತಲಿನ 200 ಮೀಟರ್ ವಿಸ್ತರಣೆಯಲ್ಲಿ ಕಟ್ಟಡ ಮರುನಿರ್ಮಾಣಕ್ಕೆ ಅವಕಾಶವಿರುವುದಿಲ್ಲ.

ಮಾರ್ಚ್ 2003 ರಲ್ಲಿ ಏಳು ದೇವಾಲಯಗಳ ಸಂಕೀರ್ಣಗಳ ಸುತ್ತಲಿನ 114 ಆಸ್ತಿಗಳನ್ನು ತೆಗೆದುಹಾಕಲು ಪ್ರಸ್ತಾವನೆ ಸಲ್ಲಿಸಲಾಯಿತು. 2006 ರಲ್ಲಿ ರಾಜ್ಯ ಸರ್ಕಾರ  ಅನುಮೋದಿಸಿತು. ನವೆಂಬರ್ 22, 2006 ರಂದು ಗ್ರಾಮಸ್ಥರು ಇಡೀ ಗ್ರಾಮವನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಕಂದಾಯ ಇಲಾಖೆಯ ಮೂಲಗಳ ಪ್ರಕಾರ, 1,200 ಕುಟುಂಬಗಳನ್ನು ಸ್ಥಳಾಂತರಿಸಲು ಅಂದಾಜು 150 ಎಕರೆ ಭೂಮಿ ಅಗತ್ಯವಿದೆ. 124 ಮನೆಗಳ ಸ್ಥಳಾಂತರ ಯೋಜನೆಯಿಂದ ಜನರು ಅತೃಪ್ತರಾಗಿದ್ದಾರೆ. ಸುಮಾರು 30-40 ವರ್ಷಗಳಿಂದ ಐಹೊಳೆಯನ್ನು ಸಂಪೂರ್ಣವಾಗಿ  ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಯಾವ ಸರ್ಕಾರವೂ ಜನರ ಬೇಡಿಕೆಗೆ ಕಿವಿಯಾಗಿಲ್ಲ. ಜನರ ಹೋರಾಟ ಮುಂದುವರಿದೇ ಇದೆ.

ಈ ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 114 ಮನೆಗಳನ್ನು ಸ್ಥಳಾಂತರ ಮಾಡುವುದಾಗಿ ಹೇಳಿ ಭೂಮಿಪೂಜೆಯನ್ನೂ ಮಾಡಿದರು. ಕೋಟ್ಯಂತರ ರೂ. ಬಿಡುಗಡೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು. ಆದರೆ, ಅದು ಚುನಾವಣೆ ಆಶ್ವಾಸನೆಗೆ ಸೀಮಿತವಾಯಿತು. ಇದೀಗ  ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಗುರುತಿಸಿದ 124 ನಿರ್ದಿಷ್ಟ ಮನೆಗಳನ್ನು ಮಾತ್ರ ಸ್ಥಳಾಂತರಿಸಲು ಸೂಚಿಸಿದ್ದಾರೆ. ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಲ್ಲಿ ವಾಸಿಸುವವರಿಗೆ ಅನನುಕೂಲವನ್ನು ಕಡಿಮೆ ಮಾಡಲು ಇಡೀ ಗ್ರಾಮವನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. 5,000 ಜನಸಂಖ್ಯೆ ಹೊಂದಿರುವ ಪಟ್ಟಣ ಎರಡು ಶಾಲೆಗಳು ಮತ್ತು ಆಸ್ಪತ್ರೆಯನ್ನು ಹೊಂದಿದೆ. ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ.

1970ರ ದಶಕದಲ್ಲಿ ದುರ್ಗಾ ದೇವಸ್ಥಾನದ ಜಾಗದಿಂದ ಸ್ಥಳಾಂತರಗೊAಡ 60 ಮನೆಗಳ ಗ್ರಾಮಸ್ಥರಿಗೆ ಇನ್ನೂ ಸರ್ಕಾರದಿಂದ ಪರಿಹಾರ ನೀಡಿಲ್ಲ. ಈಗ 124 ಮನೆ ಸ್ಥಳಾಂತರ ಮಾಡುವುದಾಗಿ ಹೇಳುತ್ತಾರೆ ಆದರೆ ಸರ್ಕಾರ ಪರಿಹಾರ ನೀಡುತ್ತದೆ ಎನ್ನುವ ನಂಬಿಕೆ ನಮಗೆ ಇಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಐಹೊಳೆಯನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಿದರೆ ನಮಗೆ ಮೂಲ ಸೌಕರ್ಯ ಪಡೆದುಕೊಳ್ಳಬಹುದು. ಕೇವಲ 124 ಮನೆಗಳನ್ನು ಸ್ಥಳಾಂತರ ಮಾಡುವುದರಿಂದ ಇನ್ನುಳಿದವರು ಐಹೊಳೆಯಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ. ಪುರಾತತ್ವ ಇಲಾಖೆಯಿಂದ ನಮಗೆ ಮುಕ್ತಿ ಬೇಕು ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಗ್ರಾಮಸ್ಥರ ವಾದಕ್ಕೆ ಪ್ರತಿಕ್ರಿಯಿಸಿದ ಬಾಗಲಕೋಟ ಶಾಸಕ ಎಚ್.ವೈ.ಮೇಟಿ , ‘ಕೆಲವು ಮನೆಗಳನ್ನು ಮಾತ್ರ ಸ್ಥಳಾಂತರಿಸುವುದು ಸರಿಯಲ್ಲ, ಇಡೀ ಗ್ರಾಮವನ್ನು ಸ್ಥಳಾಂತರಿಸಲು ಒತ್ತಾಯಿಸಿದ್ದೇವೆ. ಮನವಿ ಇನ್ನೂ ಸರ್ಕಾರದ ಮುಂದೆ ಬಾಕಿ ಇದೆ' ಎಂದು ಹೇಳಿದ್ದಾರೆ.

ಈ ಬಗ್ಗೆ ದಿ ಫೆಡರಲ್ ಜೊತೆ ಮಾತನಾಡಿರುವ ಪರಶುರಾಮ (ಸ್ಥಳೀಯರು) ಅವರು, ಭಾರತೀಯ ಪುರಾತತ್ವ ಇಲಾಖೆಯ ಐಹೊಳೆ ಜನರನ್ನು ಬಂಧನದಲ್ಲಿ ಇಟ್ಟಂತೆ ನಡೆದುಕೊಳ್ಳುತ್ತಿದೆ. ನಮ್ಮ ಮನೆಯ ಗೋಡೆ ಕುಸಿದರೆ ಅದನ್ನು ಕಟ್ಟಿಕೊಳ್ಳಲು ಇಲಾಖೆಯ ಅನುಮತಿ ಪಡೆಯಬೇಕಿದೆ. ಈ ಸಂಕಷ್ಟದಿಂದ ಸರ್ಕಾರ ನಮ್ಮನ್ನು ಪಾರು ಮಾಡಬೇಕಿದೆ. ನಮ್ಮೂರಿಗೆ ದೇಶ ವಿದೇಶದಿಂದ ಪ್ರವಾಸಿಗರು ಬರುತ್ತಾರೆ, ಆ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ನಮ್ಮ ಸ್ಥಿತಿ ಶೋಚನೀಯವಾಗಿದೆʼ ಎಂದರು. 

ʻಜನರು ಮನೆ ಗೋಡೆಗೆ ಒಂದು ಮೊಳೆ ಹೊಡೆಯೋಕು ಸ್ವತಂತ್ರರಾಗಿಲ್ಲ, ನೀರಿನ ಪೈಪ್ಲೈನ್ ಹಾಕಿಸಿಕೊಳ್ಳುವುದು ದೂರದ ಮಾತು... ವ್ಯವಸ್ಥೆ ಹೇಗಿದೆ ಎಂದರೆ, ನಮ್ಮೂರಿನಲ್ಲಿ ಏನೇ ಕಟ್ಟಡದ ಕಾರ್ಯ ಮಾಡಿಬೇಕೆಂದರೂ ಇಲಾಖೆಯ ಅನುಮತಿ ಪಡೆಯಬೇಕು ಆದರೆ, ಐಹೊಳೆಯಲ್ಲಿ ಇತ್ತೀಚೆಗೆ ಖಾಸಗಿ ಸ್ಟಾರ್ ಹೊಟೆಲ್ ನಿರ್ಮಾಣವಾಗಿದೆ. ಆ ಕಟ್ಟಡ ಕೂಡ ದೇವಾಲಯಕ್ಕೆ ಹೊಂದಿಕೊಂಡೇ ಇದೆ.. ಅದು ಹಿಂದೆ ದೇಸಾಯಿ ಮನೆತನದ ವಾಡೆ ಆಗಿತ್ತು. ಖರೀದಿ ಮಾಡಿರುವ ಕಂಪನಿ ಕಟ್ಟಡವನ್ನು ನವೀಕರಣ ಮಾಡಿ ಹೋಟೆಲ್ ಮಾಡಿದೆ. ಹಣವಂತರಿಗೆ ಒಂದು ನ್ಯಾಯ; ನಮ್ಮ ಜನರಿಗೆ ಇನ್ನೊಂದು ನ್ಯಾಯ ಎಂದರೆ ಹೇಗೆ? ಇಂತಹ ಅನ್ಯಾಯಗಳು ನಡೆಯುತ್ತಲೇ ಇವೆʼ ಎಂದು ಪರಶುರಾಮ ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಮಹಾಂತೇಶ್ ಹೊಸಮನಿ ಮಾತನಾಡಿ, ʻನಮ್ಮಲ್ಲಿ ಎಲ್ಲವೂ ಹಳೆಯ ಮನೆಗಳೇ. ಆಗಾಗ ಮಳೆ-ಗಾಳಿಗೆ ಗೋಡೆಗಳು ಕುಸಿಯುತ್ತಲೇ ಇರುತ್ತವೆ. ಆದರೆ ಅವುಗಳನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಬದುಕು ನಡೆಸಬೇಕು? ಹಾಗಾಗಿಯೇ ಕಳೆದ 30-40 ವರ್ಷಗಳಿಂದ ಐಹೊಳೆಯನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು ಎಂದು ಮನವಿ ಮಾಡುತ್ತಲೇ ಇದ್ದೇವೆ. ಇಂದಿಗೂ ಅದು ಸಾಧ್ಯವಾಗಿಲ್ಲ. ಕೇವಲ ದೇವಸ್ಥಾನಕ್ಕೆ ಅಂಟಿಕೊಂಡಿರುವ ಮನೆಗಳನ್ನ ಮಾತ್ರ ಸ್ಥಳಾಂತರ ಮಾಡುವುದಾಗಿ ಸರ್ಕಾರಗಳು ಹೇಳುತ್ತವೆ. ಆದರೆ ಸಂಪೂರ್ಣ ಸ್ಥಳಾಂತರ ಮಾಡುವುದರಿಂದ ಸ್ಮಾರಕಗಳ ಸಂರಕ್ಷಣೆ ಜೊತೆ ಎಲ್ಲರಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬಹುದುʼ ಎಂದು ಅವರು ಅಭಿಪ್ರಾಯಪಟ್ಟರು.

ಸ್ಥಳೀಯ ರಾಜಕೀಯ ಮುಖಂಡ ಆನಂದ ಅವರು ಮಾತನಾಡಿ, ʻಸ್ಮಾರಕಗಳಿಗೆ ಹೊಂದಿಕೊಂಡಿರುವ ಮನೆಗಳ ಸರ್ವೇ ಮಾಡಲಾಗಿದ್ದು, ಅವುಗಳನ್ನು ಮಾತ್ರ ಸ್ಥಳಾಂತರ ಮಾಡುವುದಾಗಿ ಈ ಹಿಂದೆ ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗಲೂ ಹೇಳಲಾಗಿತ್ತು. ಅದಕ್ಕಾಗಿ 56 ಕೋಟಿ ಹಣ ಬಿಡುಗಡೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಸ್ಥಳಾಂತರಕ್ಕೆ ಜಾಗದ ಸಮಸ್ಯೆಯಿಂದ ಅದು ಯಶಸ್ವಿಯಾಗಲಿಲ್ಲ. ಈಗ ಅವೇ ಮನೆಗಳನ್ನು ಸ್ಥಳಾಂತರ ಮಾಡಲು 300 ಕೋಟಿ ರೂ. ಹಣ ಬೇಕಾಗುತ್ತದೆ. ನಿಧಾನವಾಗುತ್ತಲೇ ಹೋದಲ್ಲಿ ಸರ್ಕಾರ ಮತ್ತಷ್ಟು ಹಣ ವ್ಯಯಿಸಬೇಕಾಗುತ್ತದೆ. ಗ್ರಾಮಸ್ಥರ ಬೇಡಿಕೆಯಂತೆ ಸಂಪೂರ್ಣ ಊರನ್ನು ಸ್ಥಳಾಂತರ ಮಾಡುವುದು ಸುಲಭವಲ್ಲ. ಏಕೆಂದರೆ, ರೈತರು ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಹಾಗಾಗಿ ಸಂಪೂರ್ಣ ಸ್ಥಳಾಂತರ ಕಷ್ಟಕರʼ ಎಂದು ಹೇಳಿದರು.

ಪ್ರವೀಣ ಯಳ್ಳಿಗುತ್ತಿ

Tags:    

Similar News