ಶಕ್ತಿ ಯೋಜನೆ ಪರಿಷ್ಕರಣೆ ಹೇಳಿಕೆ| ಡಿ.ಕೆ. ಶಿವಕುಮಾರ್ ಹೇಳಿಕೆಗೆ ಖರ್ಗೆ ತರಾಟೆ
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಶಕ್ತಿ' ಯೋಜನೆ ಮರು ಪರಿಶೀಲಿಸುವ ಕುರಿತು ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಮಾಧ್ಯಮಗಳ ಎದುರೇ ನೇರವಾಗಿ ತರಾಟೆಗೆ ತೆಗೆದುಕೊಂಡರು;
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಶಕ್ತಿ' ಯೋಜನೆ ಮರು ಪರಿಶೀಲಿಸುವ ಕುರಿತು ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಧ್ಯಮಗಳ ಎದುರೇ ಉಪಮುಖ್ಯಮಂತ್ರಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಮಾಜಿ ಪ್ರಧಾನಿ ವಲ್ಲಭಬಾಯಿ ಪಟೇಲ್ ಜಯಂತಿ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಮುಂದೆಯೇ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಅಸಮಾಧಾನ ಹೊರಹಾಕಿದರು.
ನೀವು (ಡಿ.ಕೆ.ಶಿವಕುಮಾರ್) ಒಂದಷ್ಟು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೀರಿ. ಅವನ್ನು ನೋಡಿ ನಾನು ಕೂಡ ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದೇನೆ. ಈಗ ನೀವು ಒಂದು ಗ್ಯಾರಂಟಿ ಬಿಡಿ ಎಂದು ಹೇಳಿರುವುದು ಸರಿಯಲ್ಲ ಎಂದು ಹೇಳಿದರು. ಆಗ ಡಿ.ಕೆ. ಶಿವಕುಮಾರ್ ಅವರು, ತಾವು ಶಕ್ತಿ ಯೋಜನೆ ಪರಿಷ್ಕರಿಸುವ ಕುರಿತು ಹೇಳಿಲ್ಲ. ಕೆಲ ಪ್ರಯಾಣಿಕರು ಉಚಿತ ಟಿಕೆಟ್‌ಗೆ ಹಣ ಪಾವತಿಸುವ ವಿಚಾರವಾಗಿ ಟ್ವೀಟ್ ಮಾಡಿದ್ದರು ಎಂದಷ್ಟೇ ಹೇಳಿದ್ದೆ ಎಂದು ಸಮಜಾಯಿಷಿ ನೀಡುವ ಪ್ರಯತ್ನ ನಡೆಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ ಅವರು , ‘ನೀವು ಏನು ಹೇಳಿದ್ದೀರೋ ಅದು ಬಿಜೆಪಿಗೆ ಟೀಕೆಗೆ ಅವಕಾಶ ನೀಡಿದಂತಾಗುತ್ತದೆ. ಕಾಂಗ್ರೆಸ್ ಅಧ್ಯಕ್ಷರು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕಾಗುತ್ತದೆ. ಯಾವುದೇ ಸಂದರ್ಭದಲ್ಲೂ ವಿಭಜಿಸುವಂತಹ ಹೇಳಿಕೆ ನೀಡಬಾರದು ಎಂದು ಸಲಹೆ ನೀಡಿದರು.
ಬುಧವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಐಷಾರಾಮಿ ಕ್ಲಬ್ ಕ್ಲಾಸ್ 2.0 ಬಸ್‌ಗಳಿಗೆ ಚಾಲನೆ ನೀಡಿದ ವೇಳೆ ಶಕ್ತಿ ಯೋಜನೆ ಪರಿಷ್ಕರಿಸುವ ಕುರಿತ ಹೇಳಿಕೆ ನೀಡಿದ್ದರು. ಇದಕ್ಕೆ ಖರ್ಗೆ ಅವರು ಹಾಸ್ಯಭರಿತವಾಗಿಯೇ ಡಿಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡರು.