ನಾಲ್ಕು ದಶಕದ ನಂತರ ಮತ್ತೆ ಅನಂತಮೂರ್ತಿ ಅವರ ʼಅನಂತ-ಆಕಾಶʼದಷ್ಟು ವಿಶಾಲವಾದ ಕಥಾಲೋಕಕ್ಕೆ ಲಗ್ಗೆ ಇಟ್ಟ ಗಿರೀಶ್‌ ಕಾಸರವಳ್ಳಿ

ಸರಿಯಾಗಿ 47 ವರ್ಷಗಳ ಹಿಂದೆ ಅನಂತಮೂರ್ತಿ ಅವರ ಘಟಶ್ರಾದ್ಧ ಕಥೆಯನ್ನು ಆಧರಿಸಿ ಅದೇ ಹೆಸರಿನಲ್ಲಿ ಚಿತ್ರವನ್ನು ನಿರ್ದೇಶಿಸಿ, ವಿಶ್ವವಿಖ್ಯಾತರಾದ, ವಿಶ್ವದ ಶ್ರೇಷ್ಠ ಕಲಾತ್ಮಕ ಚಿತ್ರ ನಿರ್ದೇಶಕರಾದ ಗಿರೀಶ್‌ ಕಾಸರವಳ್ಳಿ ಅವರು ಈಗ ಅನಂತಮೂರ್ತಿ ಅವರು ಎಂಭತ್ತರ ದಶಕದಲ್ಲಿ ಬರೆದ ʻಆಕಾಶ ಮತ್ತು ಬೆಕ್ಕುʼ ಕಥೆಯನ್ನು ಆಧರಿಸಿ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ.

Update: 2024-10-03 11:07 GMT
ಗಿರೀಶ್‌ ಕಾಸರವಳ್ಳಿ
Click the Play button to listen to article

ಸುಮಾರು 47 ವರ್ಷಗಳ ಹಿಂದೆ ಅನಂತಮೂರ್ತಿ ಅವರ ʻಘಟಶ್ರಾದ್ಧʼ ಕಥೆಯನ್ನು ಆಧರಿಸಿ ಅದೇ ಹೆಸರಿನಲ್ಲಿ ಚಿತ್ರವನ್ನು ನಿರ್ದೇಶಿಸಿ, ವಿಶ್ವವಿಖ್ಯಾತರಾದ,  ಶ್ರೇಷ್ಠ ಕಲಾತ್ಮಕ ಚಿತ್ರ ನಿರ್ದೇಶಕರಾದ ಗಿರೀಶ್‌ ಕಾಸರವಳ್ಳಿ, ಆ ಚಿತ್ರದ ಕಾರಣಕ್ಕಾಗಿಯೇ ಇಂದು ಸದಾ ಸುದ್ದಿಯಲ್ಲಿದ್ದಾರೆ.

ಅವರ ʻಘಟಶ್ರಾದ್ಧʼ ಇತ್ತೀಚೆಗೆ ವೆನಿಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತು. ಹಲವು ವರ್ಷಗಳಿಂದ ಸರಿಯಾದ ರೀತಿಯಲ್ಲಿ ಆ ಚಿತ್ರವನ್ನು ಸಂಸ್ಕರಿಸಿ, ಸಂರಕ್ಷಿಸದ ಕಾರಣ, ನಾಶವಾಗುವ ಸ್ಥಿತಿಯಲ್ಲಿದ್ದ ಈ ಚಿತ್ರವನ್ನು, ಹಾಲಿವುಡ್ ನ ನಿರ್ದೇಶಕ ಮಾರ್ಟಿನ್‌ ಸ್ಕಾರ್ಸೆಸಿ ಅವರ ಆರ್ಥಿಕ ನೆರವಿನಿಂದ ಶಿವೇಂದ್ರ ಸಿಂಗ್‌ ಡುಂಗರ್ಪುರ್‌ ಅವರು ತಮ್ಮ India Film Heritage Foundation ಮೂಲಕ ಸಂರಕ್ಷಿಸಿ, ವೆನಿಸ್ ನಲ್ಲಿ ಪ್ರದರ್ಶನ ಮಾಡಿದಾಗ ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಎಲ್ಲರನ್ನೂ ಮೂಕವಿಸ್ಮಿತರಾಗುವಂತೆ ಮಾಡಿತು. ಈ ಸಂದರ್ಭದಲ್ಲಿ ಗಿರೀಶ್‌ ಕಾಸರವಳ್ಳಿ ಅಲ್ಲಿದ್ದರು. ಅಲ್ಲಿಂದ ಹಿಂದಿರುಗಿದ ಅವರು ಪಕ್ಕದ ದ್ವೀಪ ರಾಷ್ಟ್ರ ಶ್ರೀಲಂಕಾದ ಒಂದು ಭಾಗವಾದ ಜಾಫ್ನಾ ಗೆ ತೆರಳಿದರು. ಅಲ್ಲಿ ಅವರ ನಾಲ್ಕು ಚಿತ್ರಗಳನ್ನು ಪ್ರದರ್ಶಿಸಲಾಯಿತು. ಅಲ್ಲದೆ, ಕಾಸರವಳ್ಳಿ ಅವರು ವಿಶ್ವ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಅವರ ಜೀವಮಾನದ ಸಾಧನಾ ಪ್ರಶಸ್ತಿಯನ್ನು ನೀಡಲಾಯಿತು.

ಆದರೆ, ಅಂಥ ಜಾಗತಿಕ ಮಾನ್ಯತೆ ದೊರಕಿದರೂ, ಅದರ ಬಗ್ಗೆ ಹೆಚ್ಚೇನೂ ಭಾವುಕರಾಗದೆ , ಗಿರೀಶ್‌ ತಮ್ಮ ಚಿತ್ರ ಸೃಷ್ಟಿ ಕ್ರಿಯೆಯಲ್ಲಿ ತಲ್ಲೀನರಾದಂತೆ ಕಾಣುತ್ತದೆ. ಅವರ ಗಮನವೆಲ್ಲ ಈಗ ಅನಂತಮೂರ್ತಿ ಅವರು ಸುಮಾರು 47 ವರ್ಷಗಳ ಹಿಂದೆ ಬರೆದ ʻಆಕಾಶ ಮತ್ತು ಬೆಕ್ಕುʼ ಕಥೆಯನ್ನು ದೃಶ್ಯಗಳ ಮೂಲಕ ವ್ಯಾಖ್ಯಾನಿಸುವಲ್ಲಿ ನಿರತರಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಜಯಂತ ಕಾಯ್ಕಿಣಿ ಅವರ ಕಥೆಯನ್ನಾಧರಿಸಿದ ʻಇಲ್ಲಿರಲಾರೆ ಅಲ್ಲಿಗೆ ಹೋಗಲಾರೆʼ ಚಿತ್ರ ನಿರ್ದೇಶಿಸಿದ ನಂತರ ಅದರ ಪ್ರಭಾವದಿಂದ ಬಿಡುಗಡೆಗೊಂಡು, ಅನಂತಮೂರ್ತಿಯವರ ಅನಂತ ಆಕಾಶದಂಥ ಕಥಾ ಲೋಕದತ್ತ ದೃಷ್ಟಿ ನೆಟ್ಟ ಗಿರೀಶ್‌ ಕಾಸರವಳ್ಳಿ ಅವರನ್ನು ಇತ್ತೀಚೆಗೆ ಕಾಡುತ್ತಿರುವ ಅನಂತಮೂರ್ತಿ ಅವರ ಕಥೆ ಇದು.

ತೀರ್ಥಹಳ್ಳಿಯ ಪ್ರತಿಭಾ ಸಂಗಮ

ಮಲೆನಾಡಿನ ಸೆರಗಿನ ತೀರ್ಥಹಳ್ಳಿ ಎಂಬ ಸಾಂಸ್ಕೃತಿಕ ಪಟ್ಟಣದ ʻಅನ್ವೇಷಣೆʼ ಎಂಬ ವೇದಿಕೆ ಈ ಚಿತ್ರವನ್ನು ಸ್ಥಳೀಯರ ಹಣ ಹೂಡಿಕೆಯಿಂದ, ಸ್ಥಳಿಯ ಕಲಾವಿದರು ತಂತ್ರಜ್ಞರ ಸಹಾಯದಿಂದ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಾಗೆ ನೋಡಿದರೆ, ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ತೀರ್ಥಹಳ್ಳಿಗೊಂದು ಸ್ಥಾನವಿದೆ. ಕುವೆಂಪು, ಮತ್ತು ಅನಂತಮೂರ್ತಿ ಇಬ್ಬರೂ ತುಂಗಾ ನದಿಯ ತಟದ ಈ ಊರಿನ ಪ್ರತಿನಿಧಿ ರತ್ನಗಳು. ಈ ಚಿತ್ರದ ನಿರ್ದೇಶಕ ತೀರ್ಥಹಳ್ಳಿ ಅವರು, ಕಥೆಗಾರ ಅಲ್ಲಿಯವರು, ಅಲ್ಲಿಯವರೇ ಕಲಾವಿದರು. ಅವರೆಲ್ಲರ ಚಿತ್ರವಾಗಲಿದೆ ʻಆಕಾಶ ಮತ್ತು ಬೆಕ್ಕುʼ. ಚಿತ್ರದ ಕಥೆಗಾರ ಅನಂತಮೂರ್ತಿ, ತೀರ್ಥಹಳ್ಳಿ ಸಮೀಪದ ಮೇಳಿಗೆಯವರು. ಗಿರೀಶ್‌ ಕಾಸರವಳ್ಳಿ ತೀರ್ಥಹಳ್ಳಿಯಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಕಾಸರವಳ್ಳಿ ಎಂಬ ಪ್ರಕೃತಿ ನಡುವಿನ ಸುಂದರ ಲೋಕದವರು.

ಗಿರೀಶ್‌ ಕಾಸರವಳ್ಳಿ ಅವರಿಗೆ ʼಆಕಾಶ ಮತ್ತು ಬೆಕ್ಕುʼ ತಮ್ಮ ಪ್ರೀತಿಯ ಗುರುಗಳಾದ ಅನಂತಮೂರ್ತಿ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ. “ನಾನೇನೂ ಉತ್ಪ್ರೇಕ್ಷೆ ಮಾಡುತ್ತಿಲ್ಲ. ʻಘಟಶ್ರಾದ್ಧವನ್ನು ಓದಿದ ಯಾವುದೇ ನಿರ್ದೇಶಕ ಸುಖವಾಗಿ ಈ ಚಿತ್ರವನ್ನು ಮಾಡಬಹುದಿತ್ತು. ಅದು ಕೃತಿಯ ಚಿತ್ರಕ ಶಕ್ತಿಯ ಚೌಕಟ್ಟು. ನಾನು ಮೂಲ ಕೃತಿಯಿಂದ ಚೂರೂ ಅತ್ತಿತ್ತ ಚಲಿಸದೆ ಮಾಡಿದ ಚಿತ್ರ ಇದು”. ನಿಜ ʻಘಟಶ್ರಾದ್ಧʼವನ್ನು ಓದಿದವರಿಗೆ ಗಿರೀಶ್‌ ಉತ್ಪ್ರೇಕ್ಷೆ ಮಾಡುತ್ತಿದ್ದಾರೆ ಎನ್ನಿಸುವುದಿಲ್ಲ.

“ಚಿಕ್ಕ ವಯಸ್ಸಿನಿಂದಲೂ, ನನಗೆ ಅನಂತಮೂರ್ತಿ ಅವರ ಬಗ್ಗೆ ಅಪಾರವಾದ ಗೌರವ. ಅವರ ಚಿಂತನೆಯ ರೀತಿ-ನೀತಿ ನನ್ನನ್ನು ಪ್ರಭಾವಿಸಿದೆ. ಒಂದೇ ಸಂಗತಿಯನ್ನು, ಒಂದೇ ತಿಳುವಳಿಕೆಯನ್ನು ಹತ್ತು ಕೋನಗಳಿಂದ ನೋಡುವಂಥ ಪ್ರತಿಭಾವಂತ ಜ್ಞಾನ ಅವರದು. ನಿನಾಸಂ ಸಂಸ್ಕೃತಿ ಶಿಬಿರದಲ್ಲಿ ಅವರಿಗೆ ಚಿತ್ರವೊಂದನ್ನು ತೋರಿಸಿದರೆ, ಅವರು ಅದನ್ನ ಹತ್ತಾರು ಕೋನಗಳಿಂದ ನೋಡಿ ವಿಶ್ಲೇಷಿಸುತ್ತಿದ್ದರು. (ಅನಂತಮೂರ್ತಿ FTIIನ ಮುಖ್ಯಸ್ಥರಾಗಿ ಕೂಡ ದೇಶದ ಪ್ರಾತಿನಿಧಿಕ ಸಂಸ್ಥೆಯೊಂದನ್ನು ಮುನ್ನಡೆಸಿದ್ದರು). ಯಾವುದೇ ವಸ್ತುವನ್ನು ದೇಸಿ ಮತ್ತು ಮಾರ್ಗ ಎರಡೂ ದೃಷ್ಟಿಕೋನಗಳಿಂದ ತುಲನೆ ಮಾಡಬಲ್ಲವರಾಗಿದ್ದರು. ಮಹಾಭಾರತ, ರಾಮಾಯಣ, ವೇದ, ಉಪನಿಷದ್‌ ಹಾಗೂ ಭಗವದ್ಗೀತೆಯ ಜೊತೆಗೆ ಮಾರ್ಕ್ಸ್‌ , ಏಂಜೆಲ್ಸ್‌, ಡಿ.ಎಚ್.‌ ಲಾರೆನ್ಸ್‌, ಶಿವರಾಮ ಕಾರಂತ, ಲೋಹಿಯಾ, ಗಾಂಧಿಯ ಸಂದರ್ಭದಲ್ಲಿಟ್ಟು ಅ ವಸ್ತುವನ್ನು ಚರ್ಚಿಸುತ್ತಿದ್ದ ರೀತಿ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅಂಥಾ ವಿಶ್ವಾತ್ಮಕ ನೋಟ ಅವರದು. ಅವರ ನಿರ್ಗಮನದಿಂದ ನಮ್ಮ ಸಾಂಸ್ಕೃತಿಕ ಚಿಂತನೆಯ ಲೋಕ ಕಳೆದುಕೊಂಡಿರುವುದನ್ನು ಯಾರೂ ತುಂಬಿಕೊಡಲು ಸಾಧ್ಯವಿಲ್” ಎಂದು ಕಾಸರವಳ್ಳಿ ಶೂನ್ಯದತ್ತ ದಿಟ್ಟಿಸಿದರು.

ಘಟಶ್ರಾದ್ಧದ ಹಿರಿಮೆ-ಗರಿಮೆ

ʻಘಟಶ್ರಾದ್ಧʼ ನಿರ್ಮಿಸಿದವರು ಇಂದು ನಮ್ಮೊಂದಿಗಿಲ್ಲದ ಸದಾನಂದ ಸುವರ್ಣ ಎಂಬ ಸೃಜನಶೀಲ ನಿರ್ದೇಶಕ ಮತ್ತು ನಿರ್ಮಾಪಕ. ಈ ಚಿತ್ರ ಮೊದಲು ಪ್ರದರ್ಶನಗೊಂಡು ಜಗದ್ವಿಖ್ಯಾತವಾದದ್ದು 1977ರಲ್ಲಿ. ಈ ಚಿತ್ರದ ಮೂಲಕ ಆಗ ತಾನೇ ತನ್ನ ಅಸ್ತಿತ್ವ ಕಂಡುಕೊಳ್ಳುತ್ತಿದ್ದ ಪ್ರಯೋಗಾತ್ಮಕ ಚಿತ್ರಗಳ ಪ್ರಯತ್ನಕ್ಕೆ ಹೊಸ ಭರವಸೆಯನ್ನು ಹುಟ್ಟು ಹಾಕಿದ್ದು ಆ ಕಾಲದ ಸತ್ಯ. ಆ ಮೂಲಕ ಗಿರೀಶ್‌ ಕಾಸರವಳ್ಳಿ ಎಂಬ ಮಲೆನಾಡಿನ ಮೂಲೆಯ ದೃಶ್ಯ-ರೂಪಕ ವ್ಯಕ್ತಿತ್ವವೊಂದು ನಮ್ಮೊಡನಿರುವುದು ಹೆಮ್ಮೆ ಎನ್ನಿಸುತ್ತಿದ್ದ ದಿನಗಳವು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಗಳು ದಕ್ಕಿದ್ದು ಮತ್ತೊಂದು ಇತಿಹಾಸ. ಸತ್ಯಜಿತ್‌ ರೇ, ಮತ್ತು ಮೃಣಾಲ್‌ ಸೇನ್ ರಂಥ ದಿಗ್ಗಜರ ಚಿತ್ರಗಳು ಆ ವರ್ಷ ಸ್ಪರ್ಧೆಯಲ್ಲಿದ್ದವು. ಅವೆಲ್ಲವುಗಳನ್ನು ಅವರೆಲ್ಲರನ್ನೂ ಹಿಂದಿಕ್ಕಿ ಅಲ್ಲಿಯವರೆಗೆ ವಾಮನ ಸ್ವರೂಪಿಯಾಗಿದ್ದ 27 ರ ಹರೆಯದ ಗಿರೀಶ್‌ ತ್ರಿವಿಕ್ರಮ ಸ್ವರೂಪಿಯಾಗಿದ್ದರು. 2022ರಲ್ಲಿ National Archives of Paris ವಿಶ್ವದಾದ್ಯಂತ ಆಯ್ಕೆ ಮಾಡಿದ 100 ಚಿತ್ರಗಳ ಪೈಕಿ ಒಂದಾಯಿತು. 2009ರಲ್ಲಿ ಭಾರತ ಚಿತ್ರರಂಗ ತನ್ನ ನೂರನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಆಯ್ಕೆ ಮಾಡಿದ 20 ಅತ್ಯುತ್ತಮ ಭಾರತೀಯ ಚಿತ್ರಗಳಲ್ಲಿ ಒಂದೆಂಬ ಮನ್ನಣೆ ಗಳಿಸಿಕೊಂಡಿತು. ಅಷ್ಟೇ ಅಲ್ಲ. ಈ ಚಿತ್ರವನ್ನು ಜಗತ್ತಿನಾದ್ಯಂತ ವಿಮರ್ಶಕರು ಪದೇ ಪದೇ ಉದಹರಿಸುತ್ತಾ, ಅದರ ಮರು ಓದನ್ನು ಸಾಧ್ಯಮಾಡುತ್ತಲೇ ನಡೆದಿದ್ದಾರೆ. ಇಂದಿಗೂ ಚರ್ಚಿತವಾಗುವ ಭಾರತದ ಅತಿ ಮುಖ್ಯ ಚಿತ್ರಗಳ ಪೈಕಿ ʻಘಟಶ್ರಾದ್ಧʼ ಕೂಡ ಒಂದು.

ಕಳೆದೇ ಹೋಗುತ್ತಿದ್ದ ʻಘಟಶ್ರಾದ್ಧʼ ಮತ್ತೆ ಜೀವಂತವಾದದ್ದು

ಆದರೆ, ಆ ಚಿತ್ರವನ್ನು ಸರಿಯಾಗಿ ಸಂರಕ್ಷಿಸದ ಕಾರಣ, ಆ ಚಿತ್ರದ ಮೂಲ ಪ್ರತಿಯನ್ನು ನಾವು ಕಳೆದುಕೊಳ್ಳುವ ಸಾಧ್ಯತೆ ಇತ್ತು. ದುಃಸ್ಥಿತಿಯಲ್ಲಿದ್ದ ಇದರ ಪ್ರತಿಗಳು ಇದ್ದದ್ದು ಎರಡೇ ಕಡೆಗಳಲ್ಲಿ. ಒಂದು; ಪುಣೆಯ National Film Archives of India ಹಾಗೂ, ಅಮೆರಿಕೆಯ ಲೈಬ್ರರಿ ಆಫ್‌ ಕಾಂಗ್ರೆಸ್‌ನಲ್ಲಿ. ಆ ಪೈಕಿಯೂ ಮೂರ್ನಾಲ್ಕು ರೀಲುಗಳು ಬಳಸಲು ಯೋಗ್ಯವಾಗಿರಲಿಲ್ಲ. ಅಂತಿಮವಾಗಿ ಮಾರ್ಟಿನ್‌ ಸ್ಕಾರ್ಸೆಸಿ ಮತ್ತು ಶಿವೇಂದ್ರ ಸಿಂಗ್‌ ಡುಂಗರಾಪುರ್‌ ಅವರ ಪ್ರಯತ್ನದಿಂದ ಮತ್ತೆ ಜೀವಂತವಾಗಿ ಇತ್ತೀಚೆಗೆ ವೆನಿಸ್‌ ನಲ್ಲಿ ಪ್ರದರ್ಶನಗೊಂಡಿತು. “ಇದಕ್ಕಾಗಿ ಸ್ಕಾರ್ಸೆಸಿ ಮಾಡಿದ ವೆಚ್ಚ ಸುಮಾರು 50 ಲಕ್ಷ ರೂಪಾಯಿ” ಎಂದು ಗಿರೀಶ್‌ ಹೇಳುತ್ತಾರೆ.

ನನ್ನ ಎಷ್ಟೋ ಚಿತ್ರದ ನೆಗೆಟೀವ್‌ ಈಗ ನನ್ನ ಬಳಿ ಇಲ್ಲ

“ನನ್ನ ಇಷ್ಟು ಚಿತ್ರಗಳಲ್ಲಿ ಕೊನೆಯ ನಾಲ್ಕು ಚಿತ್ರಗಳು ಹೊರತುಪಡಿಸಿದರೆ, ಮಿಕ್ಕಂತೆ ಯಾವುದೇ ಚಿತ್ರದ ನೆಗೆಟಿವ್‍ ಸಿಗುವುದಿಲ್ಲ. ಒಂದು ಚಿತ್ರ ಬಿಡುಗಡೆಯಾದ ಮೇಲೆ ಕ್ರಮೇಣ ಮರೆತು ಹೋಗುತ್ತದೆ. ಯಾವುದೋ ಲ್ಯಾಬ್‍ನಲ್ಲಿರುತ್ತದೆ. ಆ ಲ್ಯಾಬ್‍ಗೆ ಬೀಗ ಬಿದ್ದರೆ, ನೆಗೆಟಿವ್‍ ಕಳೆದು ಹೋಗುತ್ತದೆ. ಅದನ್ನು ತಂದು ಮನೆಯಲ್ಲಿಟ್ಟುಕೊಂಡು ಸಂರಕ್ಷಿಸುವುದು ಕಷ್ಟದ ಕೆಲಸ. ಅದರಿಂದ ಲಾಭವೇನು ಎಂಬ ಪ್ರಶ್ನೆ ಬರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದೆ ಬರಬೇಕು. ಪಾರಂಪರಿಕ ಚಿತ್ರಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು. ಈ ತರಹದ್ದೊಂದು ವ್ಯವಸ್ಥೆ ಕೇರಳದಲ್ಲಿದೆ. ಅಲ್ಲಿ ಬಹಳ ವೃತ್ತಿಪರವಾಗಿದೆ. ಸಿನಿಮಾ ಸಂರಕ್ಷಣೆ ಸುಲಭದ ಅಥವಾ ಒಂದು ದಿನದ ಕೆಲಸ ಬೇಕು. ಅದಕ್ಕೆ ನುರಿತ ಕಾರ್ಮಿಕರು ಬೇಕು. ಸಂರಕ್ಷಣೆ ಎಂದರೆ ಸುಮ್ಮನೆ ಒಂದು ಗೋಡೌನ್‍ನಲ್ಲಿ ಇಡುವುದಲ್ಲ. ಅದನ್ನು ತಂಪಾದ ವಾತಾವರಣದಲ್ಲಿ ಇಡಬೇಕು ಆಗಾಗ ತೆಗೆದು ರಿವೈಂಡ್ ಮಾಡುತ್ತಿರಬೇಕು. ಇಲ್ಲವಾದರೆ ಒಂದಕ್ಕೊಂದು ಅಂಟಿಕೊಂಡು, ದೃಶ್ಯ ಕಾಣದಂತೆ ಆಗುತ್ತದೆ. ಕೆಮಿಕಲ್‍ಗಳನ್ನು ಬಳಸಿ ಅದನ್ನು ಸಂರಕ್ಷಿಸಬೇಕು. ಇದೊಂದು ದೊಡ್ಡ ಪ್ರಕ್ರಿಯೆ. ಹಾಗಾಗಿ, ಯಾರೂ ಮುಂದೆ ಬರುವುದಿಲ್ಲ. ಹಲವು ಮಹತ್ವದ ಸಿನಿಮಾಗಳು ಕಾಣೆಯಾಗಿವೆ. ಸಿನಿಮಾ ಎಂಬುದು ಒಂದು ಪರಂಪರೆ. ಎಲ್ಲ ಚಿತ್ರಗಳಲ್ಲಿದ್ದರೂ, ನಾಡು, ನುಡಿ ಬಿಂಬಿಸುವ ಮತ್ತು ಕನ್ನಡಕ್ಕೆ ಗರಿಮೆ ತಂದುಕೊಟ್ಟ ಚಿತ್ರಗಳನ್ನು ಸಂರಕ್ಷಿಸುವ ಅಗತ್ಯವಿದೆ” ಎನ್ನುವುದು ಗಿರೀಶ್‌ ಕಾಸರವಳ್ಳಿ ಅವರ ಅನಿಸಿಕೆ.

ಚಿತ್ರ ಸಂಸ್ಕರಣ ದುಬಾರಿ

“ನಮ್ಮ ಸಂದರ್ಭದಲ್ಲಿ ಚಿತ್ರ ಸಂಸ್ಕರಿಸಿ, ರಕ್ಷಿಸುವುದು ಎಷ್ಟು ಕಷ್ಟ ಎಂಬುದನ್ನು ತಮ್ಮ ಚಿತ್ರಗಳ ಸಹಕಾರದಿಂದ ಗಿರೀಶ್‌ ಕಾಸರವಳ್ಳಿ ವಿವರಿಸುತ್ತಾರೆ. “ಒಂದು ಚಿತ್ರ ಸಂರಕ್ಷಿಸುವುದು ದುಬಾರಿಯಷ್ಟೇ ಅಲ್ಲ, ಸಾಕಷ್ಟು ಸಮಯ ಬೇಕಾಗುತ್ತದೆ. ಅದಕ್ಕಿಂತ ಹಣಕಾಸಿನ ನೆರವು ಬಹಳ ಅಗತ್ಯ. ಪ್ರಮುಖವಾಗಿ, ಚಿತ್ರದ ನೆಗೆಟಿವ್‍ಗಳನ್ನು ಡಿಜಿಟಲೈಸ್‍ ಮಾಡಬೇಕು ಮತ್ತು ಆ ನಂತರ ಸಂರಕ್ಷಿಸಬೇಕು. ಮೊದಲನೆಯದು ಹೆಚ್ಚು ದುಬಾರಿಯಲ್ಲ. ಆದರೆ, ಎರಡನೆಯದು ಹೆಚ್ಚು ದುಬಾರಿ. ಪ್ರಮುಖವಾಗಿ ಪ್ರತಿ ಫ್ರೇಮ್‍ ನೋಡಿ, ಅದಕ್ಕೇನು ಸಮಸ್ಯೆ ಆಗಿದೆ ಎಂದು ಅರ್ಥ ಮಾಡಿಕೊಂಡು ಅದನ್ನು ಸಂರಕ್ಷಿಸಬೇಕು. ನಮ್ಮ ದೇಶದಲ್ಲಿ ಸಿನಿಮಾ ಎನ್ನುವುದು ಒಂದು ಪರಂಪರೆ ಎಂದು ಪರಿಗಣಿತವಾಗಿಲ್ಲ. ಹಾಗಾಗಿ, ಅದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಪ್ರಯತ್ನಗಳಾಗಿಲ್ಲ. ಏಳು ವರ್ಷಗಳಲ್ಲಿ ಹಿಂದೆ ಕೇಂದ್ರ ಸರ್ಕಾರವು ಕೆಲವು ಅತ್ಯುತ್ತಮ ಭಾರತೀಯ ಚಿತ್ರಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿತು. ನಾನು ರಾಜ್ಯದಲ್ಲಿ ಅದರ ಸಮಿತಿಯ ಅಧ್ಯಕ್ಷನಾಗಿದ್ದೆ. ಕನ್ನಡದ ಅತ್ಯುತ್ತಮ ಚಿತ್ರಗಳನ್ನು ಸಂರಕ್ಷಿಸುವುದು ನಮ್ಮ ಸಮಿತಿಯ ಉದ್ದೇಶವಾಗಿತ್ತು. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು, ಕನ್ನಡದಲ್ಲಿ ಆದ ಕೆಲವು ಹೊಸ ಪ್ರಯೋಗಗಳ… ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು, ಕನ್ನಡದಲ್ಲಿ ಆದ ಕೆಲವು ಹೊಸ ಪ್ರಯೋಗಗಳು, ಕನ್ನಡದ ಹಿರಿಮೆ ಪಸರಿಸಿದ ಕೆಲವು ಚಿತ್ರಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಒಂದು ಪಟ್ಟಿ ಮಾಡಿಕೊಂಡೆವು. ಆದರೆ, ಈ ವಿಷಯದಲ್ಲಿ ಪ್ರಗತಿಯಾಗಲೇ ಇಲ್ಲ” ಎಂದು ಕಾಸರವಳ್ಳಿ ನೊಂದುಕೊಳ್ಳುತ್ತಾರೆ.

Tags:    

Similar News