ಧರ್ಮಸ್ಥಳ ಪ್ರಕರಣ; ತಲೆಬುರುಡೆ ಹಿಡಿದು ಬಂದ 'ಭೀಮ', ಅರೆಸ್ಟ್ ಆದ ಮೇಲೆ ಚಿನ್ನಯ್ಯನಾದ
ಚಿನ್ನಯ್ಯನ ಬಂಧನ ಬಗ್ಗೆ ಗೃಹಸಚಿವ ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿ ದೂರುದಾರನ ಬಂಧನವಾಗಿದ್ದು, ಮುಂದಿನ ಕ್ರಮ ಎಸ್ಐಟಿ ನಿರ್ಧರಿಸಲಿದೆ ಎಂದಿದ್ದಾರೆ.;
ಕೆಲವು ತಿಂಗಳ ಹಿಂದೆ, ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದ್ದ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣವು ಇದೀಗ ಮತ್ತೊಂದು ನಾಟಕೀಯ ತಿರುವು ಪಡೆದುಕೊಂಡಿದೆ. ಪ್ರಕರಣದ ಆರಂಭಕ್ಕೆ ಕಾರಣವಾಗಿದ್ದ, ತಾನೇ ಪ್ರಮುಖ ಸಾಕ್ಷಿ ಎಂದು ಹೇಳಿಕೊಂಡು ರಾಜ್ಯದ ಗಮನ ಸೆಳೆದಿದ್ದ ಮುಸುಕುಧಾರಿ ವ್ಯಕ್ತಿಯೇ ಇದೀಗ ತನಿಖೆಯ ದಾರಿ ತಪ್ಪಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಆರಂಭದಲ್ಲಿ 'ಭೀಮ' ಎಂದು ಗುರುತಿಸಿಕೊಂಡಿದ್ದ ಈತನ ನಿಜನಾಮ 'ಚಿನ್ನಯ್ಯ' ಎಂಬುದು ಬಹಿರಂಗಗೊಂಡಿದ್ದು, ಒಬ್ಬ ಸಂಭಾವ್ಯ 'ವಿಶಲ್ ಬ್ಲೋವರ್' ಆರೋಪಿಯಾಗಿ ಬದಲಾದ ಈತನ ಕಥೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಚಿನ್ನಯ್ಯನ ಬಂಧನ ಬಗ್ಗೆ ಗೃಹಸಚಿವ ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿ ದೂರುದಾರನ ಬಂಧನವಾಗಿದ್ದು, ಮುಂದಿನ ಕ್ರಮ ಎಸ್ಐಟಿ ನಿರ್ಧರಿಸಲಿದೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ಶನಿವಾರ ಹೇಳಿದ್ದಾರೆ.
ತಲೆಬುರುಡೆಯೊಂದಿಗೆ ನಿಗೂಢ ಪ್ರವೇಶ
ಈ ಇಡೀ ಪ್ರಕರಣದ ಆರಂಭವೇ ಅತ್ಯಂತ ನಾಟಕೀಯವಾಗಿತ್ತು. 'ಭೀಮ' ಎಂಬ ಹೆಸರಿನ ಮುಸುಕುಧಾರಿ ವ್ಯಕ್ತಿಯೊಬ್ಬ, ತನ್ನ ವಕೀಲರ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ, ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ತಾನೇ ನೂರಾರು ಶವಗಳನ್ನು ಹೂತಿರುವುದಾಗಿ ಸ್ಫೋಟಕ ಹೇಳಿಕೆ ನೀಡಿದ್ದ. ಅಲ್ಲಿಂದ ನೇರವಾಗಿ, ತನ್ನ ಹೇಳಿಕೆಗೆ ಸಾಕ್ಷ್ಯ ಎಂಬಂತೆ ಮಾನವನ ತಲೆಬುರುಡೆಯೊಂದನ್ನು ಕೈಯಲ್ಲಿ ಹಿಡಿದು ನ್ಯಾಯಾಲಯದ ಮೆಟ್ಟಿಲೇರಿದ್ದ. ಮಾಧ್ಯಮಗಳ ಕ್ಯಾಮರಾಗಳ ಮುಂದೆ, "ನನ್ನ ಕೈಯಾರೆ ಹೆಣಗಳನ್ನು ಹೂತಿದ್ದೇನೆ. ನನಗೆ ಪ್ರಾಣಭಯವಿದೆ, ಆದರೆ ಸತ್ಯ ಹೊರಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು," ಎಂಬ ಆತನ ಮಾತುಗಳು ಕಾಳ್ಗಿಚ್ಚಿನಂತೆ ಹರಡಿ, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದವು. ಒಬ್ಬ ಅನಾಮಿಕ ವ್ಯಕ್ತಿಯ ನಡೆ, ಸರ್ಕಾರದ ಮೇಲೆ ತೀವ್ರ ಒತ್ತಡವನ್ನು ಸೃಷ್ಟಿಸಿತ್ತು.
ಎಸ್ಐಟಿ ರಚನೆ ಮತ್ತು ವಿಫಲ ಶೋಧ
ಪ್ರಕರಣದ ಗಂಭೀರತೆ ಮತ್ತು ಸಾರ್ವಜನಿಕ ಒತ್ತಡವನ್ನು ಮನಗಂಡ ರಾಜ್ಯ ಸರ್ಕಾರ, ತಕ್ಷಣವೇ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಿತ್ತು. ಚಿನ್ನಯ್ಯ (ಅಂದಿನ ಭೀಮ) ನೀಡಿದ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು, ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿತ್ತು. ಚಿನ್ನಯ್ಯ ತೋರಿಸಿದ ಸುಮಾರು 17 ಸ್ಥಳಗಳಲ್ಲಿ, ಭಾರೀ ಪೊಲೀಸ್ ಬಂದೋಬಸ್ಟ್ನಲ್ಲಿ ಜೆಸಿಬಿಗಳ ಮೂಲಕ ಸಮಾಧಿಗಳನ್ನು ಅಗೆಯುವ ಕಾರ್ಯ ನಡೆಯಿತು. ದಿನಗಟ್ಟಲೆ ನಡೆದ ಈ ಶೋಧ ಕಾರ್ಯಾಚರಣೆಯನ್ನು ಇಡೀ ರಾಜ್ಯವೇ ಕುತೂಹಲದಿಂದ ಗಮನಿಸುತ್ತಿತ್ತು. ಆದರೆ, ಹಲವು ದಿನಗಳ ಶ್ರಮದ ನಂತರವೂ, ಕೇವಲ ಎರಡು ಕಡೆಗಳಲ್ಲಿ ಮಾತ್ರ ಕೆಲವು ಮಾನವ ಮೂಳೆಗಳು ಮತ್ತು ಅಸ್ಥಿಪಂಜರದ ಭಾಗಗಳು ಪತ್ತೆಯಾಗಿವೆ. ಈ ಮಾಹಿತಿಯನ್ನು ವಿಧಾನಸಭೆಯ ಕಲಾಪದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಬಹಿರಂಗಪಡಿಸಿದ್ದಾರೆ. ಈ ವೇಳೆ ಸಾರ್ವಜನಿಕವಾಗಿ ಚಿನ್ನಯ್ಯನ ಮೇಲೆ ಅನುಮಾನಗಳು ಶುರುವಾದವು. ಒಂದು ಅನುಮಾನದ ಎಳೆ ಆತನ ಹೇಳಿಕೆಗಳ ನಡುವಿನಿಂದ ಹೊರಬಂತು ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.
ರಾಷ್ಟ್ರೀಯ ಮಾಧ್ಯಮಗಳಲ್ಲಿ 'ಭೀಮ'ನ ಅಬ್ಬರ
ಒಂದೆಡೆ ಎಸ್ಐಟಿ ತನಿಖೆ ಸಾಗುತ್ತಿದ್ದರೆ, ಇನ್ನೊಂದೆಡೆ ಮುಸುಕುಧಾರಿಯಾಗಿಯೇ ಚಿನ್ನಯ್ಯ ರಾಷ್ಟ್ರೀಯ ಮಾಧ್ಯಮಗಳವರೆಗೂ ತಲುಪಿದ್ದ. ತಾನೊಬ್ಬ ಸತ್ಯಕ್ಕಾಗಿ ಹೋರಾಡುತ್ತಿರುವ ಸಂತ್ರಸ್ತ, ವ್ಯವಸ್ಥೆಯ ವಿರುದ್ಧ ಸಿಡಿದು ನಿಂತಿರುವ ಒಬ್ಬಂಟಿ ಹೋರಾಟಗಾರ ಎಂಬಂತೆ ಬಿಂಬಿಸಿಕೊಂಡಿದ್ದ. ತನ್ನ ಜೀವಕ್ಕೆ ಅಪಾಯವಿದೆ, ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ಬೇಕು ಎಂದು ಪದೇ ಪದೇ ಹೇಳುತ್ತಾ, ಪ್ರಕರಣದ ಹಿಂದೆ ದೊಡ್ಡ ರಾಜಕೀಯ ಮತ್ತು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂದು ಆರೋಪಿಸುತ್ತಿದ್ದ. ಈ ನಿರಂತರ ಸಂದರ್ಶನಗಳು ಮತ್ತು ಹೇಳಿಕೆಗಳು, ಆತನಿಗೆ ಸಾರ್ವಜನಿಕವಾಗಿ ಸಹಾನುಭೂತಿ ಮತ್ತು 'ವಿಷಲ್ ಬ್ಲೋವರ್' ಎಂಬ ಇಮೇಜ್ ತಂದುಕೊಟ್ಟಿದ್ದವು ಎಂದು ಈ ಪ್ರಕರಣವನ್ನು ಗಮನಿಸುತ್ತಿದ್ದವರು ಅಭಿಪ್ರಾಯಪಡುತ್ತಾರೆ.
ಚಿನ್ನಯ್ಯ ಯಾರು?
ಚಿನ್ನಯ್ಯ 1995ರಿಂದ 2014ರವರೆಗೆ, ಸುಮಾರು 19 ವರ್ಷಗಳ ಕಾಲ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. 14 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾಗಲೇ ತೆಗೆಸಿಕೊಂಡಿದ್ದ ಫೋಟೋವೊಂದು ತನಿಖೆ ನಡುವೆ ಬಹಿರಂಗವಾಗಿದೆ. ಚಿನ್ನಯ್ಯನ ಮೂಲ ಊರು ಮಂಡ್ಯ ಜಿಲ್ಲೆಯ ಹಲ್ಲೆಗೆರೆ ಎನ್ನಲಾಗುತ್ತಿದೆ. ಆದರೆ, ಅಲ್ಲಿನ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಇಟ್ಟಿಗೆ ಫ್ಯಾಕ್ಟರಿಯಲ್ಲೂ ಕೆಲಸ ಮಾಡಿಕೊಂಡಿದ್ದ ಎಂದು ಕೆಲವು ದಿನಗಳ ಹಿಂದೆ ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಆದಾದ ಬಳಿಕ ಧರ್ಮಸ್ಥಳಕ್ಕೆ ಹೋಗಿದ್ದ. ಅಲ್ಲಿ ಕಸಗುಡಿಸುವುದು, ಬಾತ್‌ರೂಂ ತೊಳೆಯುವ ಕೆಲಸ ಮಾಡಿಕೊಂಡಿದ್ದ. ಅಲ್ಲಿಂದ ಹೋಗಿದ್ದ ಆದ ಐದಾರು ವರ್ಷಗಳ ಹಿಂದೆ ಮತ್ತೆ ಗ್ರಾಮಕ್ಕೆ ಬಂದು ಇದ್ದು ಹೋಗಿದ್ದ ಎನ್ನಲಾಗಿದೆ.
ಇನ್ನೊಂದು ಕಡೆ, 2014ರಲ್ಲಿ ತನ್ನ ಕುಟುಂಬದ ಹೆಣ್ಣುಮಗುವಿನ ಮೇಲೆ ದೌರ್ಜನ್ಯ ನಡೆದ ನಂತರ, ಆತ ಭಯದಿಂದ ಧರ್ಮಸ್ಥಳವನ್ನು ತೊರೆದು ತಮಿಳುನಾಡಿನಲ್ಲಿ ಅಜ್ಞಾತವಾಗಿದ್ದ ಎಂಬುದಾಗಿ ಹೇಳಲಾಗುತ್ತಿದೆ.
ಪತ್ನಿಯಿಂದಲೇ ಸತತ ಆರೋಪ
ಚಿನ್ನಯ್ಯ ವಿರುದ್ಧ ಆತನ ಪತ್ನಿಯೇ ಗಂಭೀರ ಆರೋಪಗಳು ಮಾಡುವ ಮೂಲಕ ಮತ್ತೊಂದು ತಿರುವು ದೊರೆಯಿತು. ಚೆನ್ನಯ್ಯನ ಸಾರ್ವಜನಿಕ ವರ್ಚಸ್ಸನ್ನು ಸಂಪೂರ್ಣವಾಗಿ ಬುಡಮೇಲು ಮಾಡುವಂತಹ ಹೇಳಿಕೆಗಳನ್ನು ಪತ್ನಿ ನೀಡಿದ್ದರು. ಅವರ ಪ್ರಕಾರ, ಚಿನ್ನಯ್ಯನು ಮಾನಸಿಕವಾಗಿ ಸ್ಥಿರವಾಗಿಲ್ಲ, ಸುಳ್ಳು ಕಥೆಗಳನ್ನು ಕಟ್ಟಿ ಜನರ ಗಮನ ಸೆಳೆಯುವುದು ಆತನ ಹಳೆಯ ಚಾಳಿ. ಆಸ್ತಿ ಆಸೆ ಮತ್ತು ಪ್ರಚಾರದ ಹುಚ್ಚಿಗಾಗಿ ಆತ ಈ ಇಡೀ ನಾಟಕವನ್ನು ಸೃಷ್ಟಿಸಿದ್ದಾನೆ.
ಚಿನ್ನಯ್ಯ ತನ್ನ ಪತ್ನಿಯೊಂದಿಗೆ ಏಳು ವರ್ಷಗಳ ಕಾಲ ಧರ್ಮಸ್ಥಳ ಸಮೀಪದ ನೇತ್ರಾವತಿ ನದಿಯ ಬದಿಯಲ್ಲಿನ ಮನೆಯೊಂದರಲ್ಲಿ ಏಳು ವರ್ಷಗಳ ಕಾಲ ಸಂಸಾರ ನಡೆಸಿದ್ದ ಎನ್ನಲಾಗಿದೆ. ಪತ್ನಿ ಮಂಡ್ಯ ಮೂಲದವರಾಗಿದ್ದಾರೆ. ತಮಿಳುನಾಡಿನ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ನಂತರ ಚಿನ್ನಯ್ಯ ತಮ್ಮನ್ನು ತೊರೆದು ಹೋಗಿದ್ದ ಎಂದು ಪತ್ನಿ ಆರೋಪಿಸಿದ್ದಾರೆ. ಚೆನ್ನಯ್ಯ ಮಾಡಿದ ಯಾವುದೇ ಆರೋಪಗಳು ಧರ್ಮಸ್ಥಳದಲ್ಲಿ ನಡೆದಿಲ್ಲ ಎಂಬುದಾಗಿ ಆ ಮಹಿಳೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.
ಬಂಧನದೊಂದಿಗೆ ಅಂತ್ಯವೇ?
ಚಿನ್ನಯ್ಯ ತೋರಿಸಿದ ಸ್ಥಳಗಳಲ್ಲಿ ನಿರೀಕ್ಷಿತ ಸಾಕ್ಷ್ಯಾಧಾರಗಳು ಲಭ್ಯವಾಗದಿದ್ದಾಗ, ಎಸ್ಐಟಿ ಅಧಿಕಾರಿಗಳು ತಮ್ಮ ತನಿಖೆಯ ದಿಕ್ಕನ್ನೇ ಬದಲಾಯಿಸಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. ಬಳಿಕ ಆತನ ಹಿನ್ನೆಲೆ, ಉದ್ದೇಶ ಮತ್ತು ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮುಂದಾದರು. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಹೇಳಿಕೆಗಳಲ್ಲಿ ತಾಳಮೇಳವಿಲ್ಲದಿರುವುದು ಮತ್ತು ಅನೇಕ ಕಟ್ಟುಕಥೆಗಳು ಸೇರಿಕೊಂಡಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತನಿಖೆಯ ದಾರಿ ತಪ್ಪಿಸಿದ, ಸುಳ್ಳು ಮಾಹಿತಿ ನೀಡಿ ಸರ್ಕಾರಿ ವ್ಯವಸ್ಥೆಯ ಸಮಯ ಮತ್ತು ಸಂಪನ್ಮೂಲವನ್ನು ವ್ಯರ್ಥ ಮಾಡಿದ ಗಂಭೀರ ಆರೋಪದ ಮೇಲೆ ಎಸ್ಐಟಿ, ಶುಕ್ರವಾರ ಆತನನ್ನು ಬಂಧಿಸಿದೆ. ಇದೇ ಸಂದರ್ಭದಲ್ಲಿ, ಇಷ್ಟು ದಿನ 'ಭೀಮ' ಎಂದು ಹೇಳಿಕೊಳ್ಳುತ್ತಿದ್ದ ಆತನ ನಿಜವಾದ ಹೆಸರು 'ಚಿನ್ನಯ್ಯ' ಎಂಬುದು ಅಧಿಕೃತವಾಗಿ ಬಹಿರಂಗಗೊಳಿಸಲಾಗಿದೆ. ಜತೆಗೆ ಆತನ ಭಾವ ಚಿತ್ರವನ್ನೂ ಬಿಡುಗಡೆ ಮಾಡಲಾಗಿದೆ.
ಧರ್ಮಸ್ಥಳದ ನಿಗೂಢ ಪ್ರಕರಣವು ಒಬ್ಬ ವ್ಯಕ್ತಿಯ ಪ್ರವೇಶದಿಂದ ಆರಂಭವಾಗಿ, ಇದೀಗ ಆತನ ಬಂಧನದೊಂದಿಗೆ ಭಾರೀ ತಿರುವುದು ಪಡೆದುಕೊಂಡಿದೆ. ಚಿನ್ನಯ್ಯನ ನಿಜವಾದ ಉದ್ದೇಶವೇನಿತ್ತು? ಆಸ್ತಿ ವಿವಾದ, ವೈಯಕ್ತಿಕ ದ್ವೇಷ ಅಥವಾ ಆತನ ಹಿಂದೆ ಬೇರೆ ಯಾವುದಾದರೂ ಪ್ರಭಾವಿ ಶಕ್ತಿಗಳು ಕೆಲಸ ಮಾಡಿದ್ದವೇ? ಎಂಬ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುವುದು ಖಚಿತ. . ಮುಂದುವರಿದ ತನಿಖೆಯಲ್ಲಿ ಆತ ಹೇಳಿದ ಮಾತುಗಳಲ್ಲಿ ಸತ್ಯಾಂಶಗಳು ಕಂಡು ಬಂದರೆ ಅದರ ಬಗ್ಗೆಯೂ ತನಿಖೆ ನಡೆಯುವ ವಿಶ್ವಾಸವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಚಿನ್ನಯ್ಯನಿಗೆ ನಿರ್ದಿಷ್ಟವಾಗಿ ಯಾರು ಕಾನೂನು ಬೆಂಬಲ ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ. ಆದರೆ, ಆತ ಆರಂಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹೋಗಿದ್ದು ವಕೀಲರ ತಂಡದ ಜತೆ. ಆದಾಗ್ಯೂ ಪ್ರಕರಣದ ಆರಂಭದಲ್ಲಿ ಅನಾಮಿಕ ದೂರುದಾರನಾಗಿ ಕಾಣಿಸಿಕೊಂಡಿದ್ದ ಚಿನ್ನಯ್ಯನನ್ನು 'ಸಾಕ್ಷಿದಾರ' ಎಂದು ಪರಿಗಣಿಸಿ, ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ (Witness Protection Act) ರಕ್ಷಣೆ ನೀಡಲಾಗಿತ್ತು. ವಿಶೇಷ ತನಿಖಾ ತಂಡ (SIT) ಈ ರಕ್ಷಣೆಯನ್ನು ಒದಗಿಸಿತ್ತು. ಆದರೆ, ದೈನಂದಿನ ಶೋಧ ಕಾರ್ಯ ಮುಗಿದ ಬಳಿಕ ಆತ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟೆಣ್ಣವರ್ ಜತೆ ಹೋಗುತ್ತಿದ್ದ. ಇದೀಗ ಈ ಆರೋಪಗಳಿಗೆ ಅವರ ಕುಮ್ಮಕ್ಕು ಇದೆ ಎಂಬ ಆರೋಪಗಳು ಕೇಳಿ ಬಂದಿವೆ.