ಧರ್ಮಸ್ಥಳ ಪ್ರಕರಣದ ಹಿಂದೆ ದೊಡ್ಡ ಪಿತೂರಿ; ಅಣ್ಣಾಮಲೈ ಆರೋಪ

ಸನಾತನ ಧರ್ಮದ ಸ್ತಂಭಗಳಲ್ಲಿ ಒಂದಾಗಿರುವ ಧರ್ಮಸ್ಥಳ ದೇವಾಲಯವನ್ನು ಅಪಪ್ರಚಾರ ಮಾಡಲು ಒಬ್ಬ ವ್ಯಕ್ತಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಸರ್ಕಾರಿ ಯಂತ್ರವನ್ನು ದುರುಪಯೋಗ ಮಾಡಿಕೊಂಡಿರುವುದು ಬೇಸರದ ಸಂಗತಿ ಎಂದು ಅಣ್ಣಾಮಲೈ ಹೇಳಿದ್ದಾರೆ.;

Update: 2025-08-23 11:05 GMT

ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನನ್ನೇ ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವುದನ್ನು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ ಸ್ವಾಗತಿಸಿದ್ದಾರೆ.

ಸನಾತನ ಧರ್ಮದ ಸ್ತಂಭಗಳಲ್ಲಿ ಒಂದಾಗಿರುವ ಧರ್ಮಸ್ಥಳ ದೇವಾಲಯವನ್ನು ಅಪಪ್ರಚಾರ ಮಾಡಲು ಒಬ್ಬ ವ್ಯಕ್ತಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಸರ್ಕಾರಿ ಯಂತ್ರವನ್ನು ದುರುಪಯೋಗ ಮಾಡಿಕೊಂಡಿರುವುದು ಬೇಸರದ ಸಂಗತಿ. ಈ ವ್ಯಕ್ತಿಯ ಹಿಂದೆ ದೊಡ್ಡ ಪಿತೂರಿ ಗುಂಪಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವು ಆಧಾರರಹಿತ ಆರೋಪಗಳ ಆಧಾರದ ಮೇಲೆ ಯಾವುದೇ ಪ್ರಾಥಮಿಕ ಪುರಾವೆಗಳಿಲ್ಲದೆ ತನಿಖೆ ಆರಂಭಿಸಿದ್ದು ಮೂರ್ಖತನ. ಹತಾಶೆಯಲ್ಲಿ ಎಸ್‌ಐಟಿ ರಚಿಸಿ 17 ಸ್ಥಳಗಳಲ್ಲಿ ಉತ್ಖನನ ನಡೆಸಿತು. ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಮೃತದೇಹಗಳನ್ನು ಹೂತಿಡಲಾಗಿದೆ ಎಂದು ಸುಳ್ಳು ಅಪಪ್ರಚಾರ ಮಾಡಲಾಯಿತು. ಆದರೆ ತನಿಖೆಯಲ್ಲಿ ಆ ಆರೋಪಗಳು ಸಂಪೂರ್ಣ ಸುಳ್ಳು ಎಂದು ಸಾಬೀತಾಗಿದೆ. ದೊರೆತಿರುವ ಮೂಳೆಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ ವ್ಯಕ್ತಿಯದ್ದಾಗಿದ್ದು, ಉಳಿದವು ಕೂಡ ಪುರುಷನದ್ದೇ ಎಂದು ಬಹಿರಂಗವಾಗಿದೆ ಎಂದು ಹೇಳಿದ್ದಾರೆ.

ಸುಜಾತಾ ಭಟ್ ಎಂಬ ಮಹಿಳೆ 2003ರಲ್ಲಿ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಸುಳ್ಳು ದೂರು ದಾಖಲಿಸಲು ಒತ್ತಾಯಿಸಿರುವುದು ಕೂಡ ಬಯಲಾಗಿದೆ.  ಸುಜಾತಾ ಭಟ್‌ ಅವರಿಗೆ ಮಗಳೇ ಇರಲಿಲ್ಲ ಎಂಬುದು ಬಹಿರಂಗವಾಯಿತು. ಒತ್ತಡಕ್ಕೆ ಒಳಗಾಗಿ ದೂರು ದಾಖಲಿದ್ದಾಗಿ ಸ್ವತಃ ಸುಜಾತಾ ಭಟ್‌ ಅವರೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಮುಸುಕುಧಾರಿಯ ಬಂಧನವನ್ನು ಪ್ರಕರಣದ ಅಂತ್ಯ ಎಂದು ಭಾವಿಸಬಾರದು. ಅವನಿಗೆ ಯಾರು ಮಾರ್ಗದರ್ಶನ ನೀಡಿದರು, ಯಾರು ಹಣಕಾಸು ಒದಗಿಸಿದರು, ಧರ್ಮಸ್ಥಳವನ್ನು ದೂಷಿಸುವುದರಿಂದ ಯಾರಿಗೆ ಲಾಭ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ಕಾಂಗ್ರೆಸ್ ಸರ್ಕಾರವು ಈ ಪ್ರಶ್ನೆಗಳನ್ನು ಹೂತು ಹಾಕಲು ಬಯಸುತ್ತಿದೆ. ನಿಜವಾದ ಸೂತ್ರಧಾರಿಗಳನ್ನು ಬಹಿರಂಗಪಡಿಸಬೇಕು. ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Tags:    

Similar News