ಸಿದ್ದರಾಮಯ್ಯ ಭೇಟಿಯಾದ ಅಲೆಮಾರಿ ಸಮುದಾಯದ ಮುಖಂಡರು: ಒಳಮೀಸಲಾತಿಯಲ್ಲಿ ಕಡೆಗಣಿಸದಂತೆ ಮನವಿ

ಒಳಮೀಸಲಾತಿ ಜಾರಿಯ ಮೂಲ ಆಶಯವೇ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವುದಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ತಮ್ಮ ಸಮುದಾಯವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದರು.;

Update: 2025-08-23 12:26 GMT

ಅಲೆಮಾರಿ ಸಮುದಾಯದೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಯ ಪ್ರಕ್ರಿಯೆಗಳು ಚುರುಕುಗೊಂಡಿರುವ ಬೆನ್ನಲ್ಲೇ, ತಮ್ಮ ಸಮುದಾಯವನ್ನು ಸಮೀಕ್ಷೆ ಮತ್ತು ವರ್ಗೀಕರಣದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಗಂಭೀರ ಆತಂಕದೊಂದಿಗೆ ಅಲೆಮಾರಿ ಜನಾಂಗದ ಮುಖಂಡರು, ಹೋರಾಟಗಾರರು ಮತ್ತು ಚಿಂತಕರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಅಹವಾಲು ಮಂಡಿಸಿದರು.

ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ನಡೆದ ಈ ಸುದೀರ್ಘ ಸಭೆಯಲ್ಲಿ, ಅಲೆಮಾರಿ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವರ ಬೇಡಿಕೆಗಳ ಕುರಿತು ಗಂಭೀರ ಚರ್ಚೆ ನಡೆಯಿತು.

ಒಳಮೀಸಲಾತಿ ಜಾರಿಯ ಮೂಲ ಆಶಯವೇ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವುದಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ತಮ್ಮ ಸಮುದಾಯವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದರು. 

ನಮ್ಮದು ಅಲೆಮಾರಿ ಜೀವನ. ನಾವು ಒಂದೆಡೆ ಸ್ಥಿರವಾಗಿಲ್ಲದ ಕಾರಣ, ಸರ್ಕಾರ ನಡೆಸುವ ಯಾವುದೇ ಸಮೀಕ್ಷೆಗಳಿಂದ ನಾವು ಸದಾ ಹೊರಗುಳಿಯುತ್ತಿದ್ದೇವೆ. ಒಳಮೀಸಲಾತಿಗಾಗಿ ನಡೆಯುತ್ತಿರುವ ಸಮೀಕ್ಷೆಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ," ಎಂದು ಮುಖಂಡರು ದೂರಿದರು. "ಒಂದು ವೇಳೆ ನಮ್ಮ ನಿಖರ ಜನಸಂಖ್ಯೆ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ದಾಖಲಿಸದಿದ್ದರೆ, ಜನಸಂಖ್ಯೆ ಆಧಾರದ ಮೇಲೆ ಹಂಚಿಕೆಯಾಗುವ ಒಳಮೀಸಲಾತಿಯ ಲಾಭದಿಂದ ನಾವು ಸಂಪೂರ್ಣವಾಗಿ ವಂಚಿತರಾಗುತ್ತೇವೆ. ಇದು ನಮಗೆ ಮಾಡುವ ದೊಡ್ಡ ಅನ್ಯಾಯ," ಎಂದು ಅವರು ವಿವರಿಸಿದರು.

"ಅಲೆಮಾರಿ ಸಮುದಾಯಗಳ ಜೀವನಶೈಲಿಯನ್ನು ಅರ್ಥಮಾಡಿಕೊಂಡು, ನಮಗಾಗಿಯೇ ಒಂದು ವಿಶೇಷ ಸಮೀಕ್ಷೆ ಅಥವಾ ಕಾರ್ಯವಿಧಾನವನ್ನು ರೂಪಿಸಬೇಕು. ಆಗ ಮಾತ್ರ ನೈಜ ಅಂಕಿಅಂಶಗಳು ಲಭ್ಯವಾಗಿ, ನಮಗೆ ನ್ಯಾಯ ಸಿಗಲು ಸಾಧ್ಯ," ಎಂದು ಮುಖಂಡರು ಸಿಎಂಗೆ ಒತ್ತಾಯಿಸಿದರು.

ಮುಖ್ಯಮಂತ್ರಿಗಳಿಂದ ಭರವಸೆ

ಮುಖಂಡರ ಅಹವಾಲನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾವುದೇ ಸಮುದಾಯಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡಿದರು ಎನ್ನಲಾಗಿದೆ.

"ಸಾಮಾಜಿಕ ನ್ಯಾಯ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಅಲೆಮಾರಿ ಸಮುದಾಯಗಳಂತಹ ಅತ್ಯಂತ ಹಿಂದುಳಿದ ಸಮುದಾಯಗಳನ್ನು ಗುರುತಿಸಿ, ಅವರಿಗೆ ಸಿಗಬೇಕಾದ ಸಾಂವಿಧಾನಿಕ ಸೌಲಭ್ಯಗಳನ್ನು ಖಚಿತಪಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು," ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Tags:    

Similar News