ಧರ್ಮಸ್ಥಳ ಪ್ರಕರಣ| 400 ಕಾರುಗಳಲ್ಲಿ ಜಾಥ, ಅಪಪ್ರಚಾರ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹ
ಸೋಮವಾರ ಮುಂಜಾನೆ 6 ಗಂಟೆಗೆ ಜಯನಗರ, ಬಿಟಿಎಂ ಲೇಔಟ್ ನಿಂದ 200 ವಾಹನಗಳು ತೆರಳಲಿವೆ. ಒಟ್ಟು 400 ಕಾರುಗಳಲ್ಲಿ 2 ಸಾವಿರ ಜನರು ಧರ್ಮಸ್ಥಳಕ್ಕೆ ಜಾಥ ಹೊರಡಲಿದ್ದೇವೆ ಎಂದು ಶಾಸಕ ಸಿ.ಕೆ. ರಾಮಮೂರ್ತಿ ತಿಳಿಸಿದರು.;
ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರು ಹಾಗೂ ಅವರ ಹಿಂದಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ ಆಗ್ರಹಿಸಿದರು.
ಶನಿವಾರ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಶಾಸಕರು ಹಾಗೂ ಅನೇಕ ಭಕ್ತಾದಿಗಳು ಸೋಮವಾರ ಮುಂಜಾನೆ 6 ಗಂಟೆಗೆ ಜಯನಗರ, ಬಿಟಿಎಂ ಲೇಔಟ್ ನಿಂದ 200 ವಾಹನಗಳಲ್ಲಿ ತೆರಳಲಿದ್ದೇವೆ. ಒಟ್ಟು 400 ಕಾರುಗಳಲ್ಲಿ 2 ಸಾವಿರ ಜನರು ಧರ್ಮಸ್ಥಳಕ್ಕೆ ಹೋಗುತ್ತಿದ್ದು, ಈ ಯಾತ್ರೆಗೆ ಆರೆಸ್ಸೆಸ್ ಮುಖಂಡರು, ಸಂಸದ ತೇಜಸ್ವಿ ಸೂರ್ಯ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡರು ಚಾಲನೆ ನೀಡಲಿದ್ದಾರೆ ಎಂದರು.
ಆರ್ಧ ಕಿ.ಮೀ ಪಾದಯಾತ್ರೆ
ಸೋಮವಾರ ಮಧ್ಯಾಹ್ನ ಧರ್ಮಸ್ಥಳ ತಲುಪಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ಅರ್ಧ ಕಿ.ಮೀ ಪಾದಯಾತ್ರೆ ಮಾಡಲಾಗುವುದು. ಹಿಂದೂಗಳ ವಿರುದ್ಧ ಧರ್ಮನಿಂದನೆ ನಡೆಯುತ್ತಿದ್ದು, ಈ ಅಪಪ್ರಚಾರದ ವಿರುದ್ಧ ನಮ್ಮ ಸಂಸದರು, ಶಾಸಕರು ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯನವರೂ ಧರ್ಮಸ್ಥಳಕ್ಕೆ ಹೋಗಿ ಕೈ ಮುಗಿದು ಪೂಜೆ ಮಾಡಿದವರು. ಸನಾತನ ಹಿಂದೂ ಧರ್ಮಕ್ಕೆ ಬೆಲೆ ಕೊಡಬೇಕೆಂದರೆ, ಅಪಪ್ರಚಾರದ ಹಿಂದಿರುವವರಿಗೆ ವಿದೇಶ ಹಾಗೂ ಒಂದು ಸಮುದಾಯದಿಂದ ಹಣ ಬರುತ್ತಿದೆ ಎಂಬ ಅನುಮಾನವಿದ್ದು, ಅವರ ಬ್ಯಾಂಕ್ ಖಾತೆ ಪರಿಶೀಲಿಸಬೇಕು ಎಂದರು.
ಅನಾಮಿಕ ದೂರುದಾರ ಚಿನ್ನಯ್ಯ, ಸುಜಾತಾ ಭಟ್ ಹೇಳಿಕೆ ನೀಡುತ್ತಿದ್ದಾರೆ. ಕೋರ್ಟಿನಲ್ಲೂ ವಿಚಾರಣೆ ನಡೆಯುತ್ತಿದೆ. ಸಮೀರ್ ಎಂ.ಡಿ, ಗಿರೀಶ್ ಮಟ್ಟೆಣ್ಣನವರ್, ಮಹೇಶ್ ತಿಮರೋಡಿ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಧಿತರು ಹಾಗೂ ತನಿಖೆಗೆ ಒಳಪಡುತ್ತಿರುವವರು ಕೇವಲ ಪಾತ್ರಧಾರಿಗಳು. ಇವರ ಹಿಂದಿರುವವರನ್ನು ಎಸ್‍ಐಟಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ನಗರ ನಕ್ಸಲ್ಗಳಿಂದ ಎಸ್ಐಟಿ ರಚನೆಗೆ ಒತ್ತಾಯ
ಧರ್ಮಸ್ಥಳದ ಹುಂಡಿಯಲ್ಲಿ ಲೆಕ್ಕ ಸಿಗುತ್ತಿಲ್ಲ, ಲೆಕ್ಕ ಕೊಡಿ ಎಂದು ದ್ವಾರಕಾನಾಥ್ ಹೇಳಿದ್ದಾರೆ. ನಗರ ನಕ್ಸಲೈಟ್‍ಗಳೆಲ್ಲರೂ ಕ್ರಿಮಿನಲ್‍ಗಳೇ, ಮುಖ್ಯಮಂತ್ರಿಗಳ ಸುತ್ತ ಇರುವವರು ಎಸ್‍ಐಟಿ ರಚನೆಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದರು.
ಅನನ್ಯಾ ಭಟ್ ಎಂಬುವವರು ಇದ್ದರು ಎಂಬುದೇ ಸುಳ್ಳು. ಆಸ್ತಿ ಕೇಳಲು ಹೀಗೆ ಮಾಡಿದ್ದಾಗಿ ಸುಜಾತಾ ಭಟ್ ಹೇಳಿದ್ದಾರೆ. ದೆಹಲಿಯಲ್ಲಿ ಕುಳಿತು ಒಂದು ಯೋಜನೆ ರೂಪಿಸಿ ಬುರುಡೆ ಕಥೆ ಹೇಳಿದ್ದಾರೆ. ಒಂದು ಗುಂಡಿ ಅಗೆತದಿಂದ ಆರಂಭವಾಗಿ 15 ಗುಂಡಿ ಅಗೆದಿದ್ದಾರೆ. ಈಗ ಆತ ನಿಜ ಒಪ್ಪಿಕೊಂಡಿದ್ದಾನೆ ಎಂದರು.
ಅಪಪ್ರಚಾರದ ವಿರುದ್ಧ ಕ್ರಮವಾಗಲಿ
ಚಾರಿತ್ರ್ಯವಧೆ ಮಾಡುವವರಿಗೆ, ಜೆಸಿಬಿ ಮೂಲಕ ಧರ್ಮಸ್ಥಳ ಒಡೆಯುತ್ತೇವೆ ಎನ್ನುವವರಿಗೆ ಬೆಂಬಲ ನೀಡುವುದು ತಪ್ಪು. ಪುಲಕೇಶಿನಗರದಲ್ಲಿ ಒಂದು ಸಮುದಾಯದ ವಿರುದ್ಧ ವಾಟ್ಸಪ್ ಸ್ಟೇಟಸ್ ವಿರೋಧಿಸಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದ್ದರು. ದಲಿತ ಶಾಸಕರ ಮನೆಗೇ ಬೆಂಕಿ ಹಾಕಿದ್ದರು. ನೂರಾರು ಯೂಟ್ಯೂಬರ್‌ಗಳು ಧರ್ಮಸ್ಥಳದ ಅವಹೇಳನ ಮಾಡುತ್ತಿದ್ದರೂ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಧರ್ಮಕ್ಕಾಗಿ ಬಿಜೆಪಿಯಿಂದ ಧರ್ಮಯುದ್ಧ ನಡೆದಿದೆ. ನೀವು ದಕ್ಷಿಣ ಕನ್ನಡದಲ್ಲಿ ಹಿಂದೂ ಧರ್ಮದ ಕಾರ್ಯಕರ್ತರು, ಶಾಸಕರ ವಿರುದ್ಧ ಎಫ್‍ಐಆರ್ ಹಾಕಿಸಿದ್ದೀರಿ. ಹಲವರನ್ನು ಗಡಿಪಾರು ಮಾಡಿಸಲು ಹೊರಟಿದ್ದೀರಿ. ಆದರೆ ಇಲ್ಲಿ ಅಪಪ್ರಚಾರ ಮಾಡಿದವರಿಗೆ ಏನು ಶಿಕ್ಷೆ ಕೊಡುತ್ತೀರಿ ಎಂದು ಪ್ರಶ್ನಿಸಿದರು.