ನಟಿ ಸಂಜನಾ ಗಲ್ರಾನಿಗೆ ವಂಚನೆ: ಆರೋಪಿಗೆ 61.50 ಲಕ್ಷ ರೂ. ದಂಡ, 6 ತಿಂಗಳ ಜೈಲು ಶಿಕ್ಷೆ
ರಾಹುಲ್ ತೋನ್ಸೆ , ನಟಿ ಸಂಜನಾ ಗಲ್ರಾನಿಯನ್ನು ಸಂಪರ್ಕಿಸಿ, ಚಿನ್ನದ ವ್ಯಾಪಾರದಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿದ್ದ. ವ್ಯಾಪಾರದಲ್ಲಿ ಭಾರೀ ಲಾಭ ಗಳಿಸುವ ಭರವಸೆ ನೀಡಿ, ಒಟ್ಟು 61 ಲಕ್ಷ ರೂಪಾಯಿ ಪಡೆದುಕೊಂಡಿದ್ದ.;
ನಟಿ ಸಂಜನಾ ಗಲ್ರಾನಿ ಹಾಗೂ ಶಿಕ್ಷೆಗೆ ಒಳಗಾದ ರಾಹುಲ್ ತೋನ್ಸೆ
ಕನ್ನಡ ನಟಿ ಸಂಜನಾ ಗಲ್ರಾನಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿ ರಾಹುಲ್ ತೋನ್ಸೆ ಎಂಬುವರಿಗೆ ಬೆಂಗಳೂರಿನ ಕೋರ್ಟ್ 61.50 ಲಕ್ಷ ರೂಪಾಯಿ ದಂಡದ ಜೊತೆಗೆ ಆರು ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ರಾಹುಲ್ ತೋನ್ಸೆ , ನಟಿ ಸಂಜನಾ ಗಲ್ರಾನಿಯನ್ನು ಸಂಪರ್ಕಿಸಿ, ಚಿನ್ನದ ವ್ಯಾಪಾರದಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿದ್ದ. ವ್ಯಾಪಾರದಲ್ಲಿ ಭಾರೀ ಲಾಭ ಗಳಿಸುವ ಭರವಸೆ ನೀಡಿ, ಒಟ್ಟು 61 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ಆದರೆ, ಹಣ ಪಡೆದ ಬಳಿಕ ರಾಹುಲ್ ತನ್ನ ಮಾತು ಮರೆತು , ಸಂಜನಾ ಅವರನ್ನು ವಂಚಿಸಿದ್ದ. ಈ ಬಗ್ಗೆ ಸಂಜನಾ ಗಲ್ರಾನಿ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ಪ್ರಕರಣದ ತನಿಖೆ ಆರಂಭಿಸಿ, ರಾಹುಲ್ ತೋನ್ಸೆಯನ್ನು ಬಂಧಿಸಿದ್ದರು. ತನಿಖೆಯಲ್ಲಿ ಆರೋಪಿಯು ಸಂಜನಾ ಅವರಿಂದ ಹಣ ಪಡೆದು, ಯಾವುದೇ ಚಿನ್ನದ ವ್ಯಾಪಾರದಲ್ಲಿ ಹೂಡಿಕೆ ಮಾಡದಿರುವುದು ಸಾಬೀತಾಯಿತು.
ಬೆಂಗಳೂರು ನಗರದ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ, ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿತು. ಈ ವೇಳೆ ರಾಹುಲ್ ತೋನ್ಸೆ ಉದ್ದೇಶಪೂರ್ವಕವಾಗಿ ವಂಚನೆ ಮಾಡಿರುವುದು ಸಾಬೀತಾಯಿತು. ಈ ಹಿನ್ನೆಲೆಯಲ್ಲಿ, ಆರೋಪಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 61.50 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿತು. ದಂಡದ ಮೊತ್ತವನ್ನು ಸಂಜನಾ ಗಲ್ರಾನಿಗೆ ಪರಿಹಾರವಾಗಿ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಸಂಜನಾ ಗಲ್ರಾನಿ ಪ್ರತಿಕ್ರಿಯಿಸಿ, "ನ್ಯಾಯಾಲಯದ ನನಗೆ ನ್ಯಾಯ ಒದಗಿಸಿದೆ. ಇಂತಹ ವಂಚಕರಿಂದ ಎಲ್ಲರೂ ಎಚ್ಚರಿಕೆಯಿಂದಿರಬೇಕು ಎಂದು ನಾನು ಬಯಸುತ್ತೇನೆ. ಈ ಘಟನೆಯಿಂದ ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ಇದು ಇತರರಿಗೂ ಪಾಠವಾಗಲಿ" ಎಂದು ಹೇಳಿದ್ದಾರೆ.