ಮತ್ತೊಮ್ಮೆ ಹಾಡು ಕದ್ದ ಆರೋಪದ ಸುಳಿಯಲ್ಲಿ ನಟ ರಕ್ಷಿತ್‌ ಶೆಟ್ಟಿ: ಎಫ್‌ಐಆರ್‌ ದಾಖಲು

Update: 2024-07-15 10:51 GMT

ಕಾಪಿರೈಟ್ ಉಲ್ಲಂಘನೆ ಆರೋಪದಡಿ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 

ಅಭಿಜಿತ್ ಮಹೇಶ್ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ 'ಬ್ಯಾಚುಲರ್ ಪಾರ್ಟಿ' ಇದೇ ವರ್ಷದ ಜ.26 ರಂದು ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ 'ಗಾಳಿಮಾತು' ಹಾಗೂ 'ನ್ಯಾಯ ಎಲ್ಲಿದೆ' ಎಂಬ ಹಾಡುಗಳನ್ನು ಅನುಮತಿ ಇಲ್ಲದೇ ಬಳಸಿಕೊಂಡಿರುವ ಆರೋಪ ರಕ್ಷಿತ್ ಶೆಟ್ಟಿ ಮೇಲೆ ಬಂದಿದೆ. ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ನಿರ್ಮಾಣ ಮಾಡಿತ್ತು.

ರಕ್ಷಿತ್ ಶೆಟ್ಟಿ ವಿರುದ್ಧ ಎಂಆರ್‌ಟಿ ಮ್ಯೂಸಿಕ್ ಪಾಲುದಾರ ನವೀನ್ ಕುಮಾರ್ ದೂರು ನೀಡಿದ್ದಾರೆ. ʼನ್ಯಾಯ ಎಲ್ಲಿದೆʼ ಚಿತ್ರದ ‘ನ್ಯಾಯ ಎಲ್ಲಿದೆ ಹಾಡು’ ಮತ್ತು ʼಗಾಳಿ ಮಾತುʼ ಚಿತ್ರದ ‘ಒಮ್ಮೆ ನಿನ್ನನ್ನು’ ಅನಧಿಕೃತವಾಗಿ ಬಳಕೆ ಮಾಡಿದ ಆರೋಪದಲ್ಲಿ ಪರಂವಃ ಸ್ಟುಡಿಯೋಸ್ ಮತ್ತು ರಕ್ಷಿತ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಬಳಕೆಯಾದ ‘ಗಾಳಿ ಮಾತು’ ಮತ್ತು ‘ನ್ಯಾಯ ಎಲ್ಲಿದೆ’ ಚಿತ್ರದ ಹಾಡುಗಳನ್ನು ಅಕ್ರಮವಾಗಿ ಬಳಕೆ ಮಾಡಿದ್ದಾರೆ. ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕನ್ನ ಖರೀದಿ ಮಾಡದೇ ಹಾಡುಗಳ ಬಳಕೆಯಾಗಿದೆ ಎಂದು ನವೀನ್ ಕುಮಾರ್ ಆರೋಪಿಸಿದ್ದಾರೆ.

2024ರ ಜನವರಿಯಲ್ಲಿ ಚಿತ್ರದ ಹಾಡುಗಳ ಬಳಕೆ ಬಗ್ಗೆ ಮಾತುಕತೆಯಾಗಿತ್ತು. ಆದರೆ ಈ ಸಿನಿಮಾದ ಹಾಡಿನ ಬಳಕೆ ಬಗ್ಗೆ ಮಾತುಕತೆ ಸರಿ ಹೊಂದದೇ ಇದ್ದರಿಂದ ಅಲ್ಲಿಗೆ ನಿಲ್ಲಿಸಲಾಗಿತ್ತು. ಬಳಿಕ 2024ರ ಮಾರ್ಚ್‌ನಲ್ಲಿ ಒಟಿಟಿಯಲ್ಲಿ ರಕ್ಷಿತ್ ಶೆಟ್ಟಿ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ, ಸಿನಿಮಾ ಗಮನಿಸಿದಾಗ ಎರಡು ಚಿತ್ರಗಳ ಹಾಡು ಬಳಕೆಯಾಗಿರುವುದು ಗೊತ್ತಾಗಿತ್ತು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

ಬೆಂಬಿಡದ ಕಾಪಿ ರೈಟ್‌ ಭೂತ

ರಕ್ಷಿತ್ ಶೆಟ್ಟಿ ಅವರಿಗೆ ಕಾಪಿರೈಟ್ಸ್ ವಿವಾದ ಎದುರಾಗಿರುವುದು ಇದೇ ಮೊದಲಲ್ಲ. ಈ ಹಿಂದೆ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ರವಿಚಂದ್ರನ್ ಅವರ 'ಶಾಂತಿ ಕ್ರಾಂತಿ' ಚಿತ್ರ ಹಾಡನ್ನು ಅನುಮತಿಯಿಲ್ಲದೆ ಬಳಸಿ ಸಂಕಷ್ಟಕ್ಕೆ ಸಿಲುಕಿದ್ದರು.

ಆ ವಿಷಯದಲ್ಲಿ ಸಿನಿಮಾದ ನಿರ್ಮಾಪಕರು ಮತ್ತು ಶೆಟ್ಟಿ ನಡುವೆ ಸಾಕಷ್ಟು ಚರ್ಚೆ ನಡೆದು ವಿವಾದಕ್ಕೆ ಕಾರಣವಾಗಿತ್ತು.

Tags:    

Similar News