ನಟಿಗೆ ಲೈಂಗಿಕ ಕಿರುಕುಳ, ಬ್ಲ್ಯಾಕ್‌ಮೇಲ್: ನಟ-ನಿರ್ದೇಶಕ ಹೇಮಂತ್ ಬಂಧನ
2022ರಲ್ಲಿ 'ರಿಚ್ಚಿ' ಎಂಬ ಸಿನಿಮಾ ನಿರ್ಮಾಣದ ವೇಳೆ ಹೇಮಂತ್, ಸಂತ್ರಸ್ತ ನಟಿಯನ್ನು ಸಂಪರ್ಕಿಸಿದ್ದ.
ನಟ-ನಿರ್ದೇಶಕ ಹೇಮಂತ್ ಬಂಧನ
ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ನಟಿಗೆ ಲೈಂಗಿಕ ಕಿರುಕುಳ, ವಂಚನೆ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಹೇಮಂತ್ ಅವರನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ನಟಿ ನೀಡಿದ ದೂರಿನ ಅನ್ವಯ, ಹೇಮಂತ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
2022ರಲ್ಲಿ 'ರಿಚ್ಚಿ' ಎಂಬ ಸಿನಿಮಾ ನಿರ್ಮಾಣದ ವೇಳೆ ಹೇಮಂತ್, ಸಂತ್ರಸ್ತ ನಟಿಯನ್ನು ಸಂಪರ್ಕಿಸಿದ್ದ. 2 ಲಕ್ಷ ರೂಪಾಯಿ ಸಂಭಾವನೆಗೆ ಒಪ್ಪಂದ ಮಾಡಿಕೊಂಡು, ಮುಂಗಡವಾಗಿ 60 ಸಾವಿರ ರೂಪಾಯಿ ನೀಡಿದ್ದನು. ಆದರೆ, ಚಿತ್ರೀಕರಣದ ವೇಳೆ ಅಸಭ್ಯವಾಗಿ ಮತ್ತು ಅರೆಬರೆ ಬಟ್ಟೆ ಧರಿಸಿ ನಟಿಸುವಂತೆ ಒತ್ತಾಯಿಸಿ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ನಟಿ ದೂರಿನಲ್ಲಿ ಆರೋಪಿಸಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣದ ವೇಳೆ ಹೇಮಂತ್ ಅಸಭ್ಯವಾಗಿ ವರ್ತಿಸಿದ್ದಾನೆ. ನಟಿಯ ಪಾನೀಯದಲ್ಲಿ ಮದ್ಯ ಬೆರೆಸಿ, ಅವರು ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ತನ್ನ ಬೇಡಿಕೆಗೆ ಒಪ್ಪದಿದ್ದರೆ, ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.
ಆತನ ಬೇಡಿಕೆಗಳನ್ನು ನಿರಾಕರಿಸಿದ್ದಕ್ಕೆ ರೌಡಿಗಳನ್ನು ಬಿಟ್ಟು ತನಗೂ ಮತ್ತು ತನ್ನ ತಾಯಿಗೂ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ಚಿತ್ರೀಕರಣ ಮುಗಿದ ನಂತರ ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಅಲ್ಲದೆ, ಸೆನ್ಸಾರ್ ಆಗದ ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ವೈರಲ್ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ರಾಜಾಜಿನಗರ ಪೊಲೀಸರು ಹೇಮಂತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.