ನಟ ದರ್ಶನ್ ಅವರ ನ್ಯಾಯಾಂಗ ಬಂಧನ ವಿಸ್ತರಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್​ಗೆ ಅವರ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.

Update: 2024-07-18 11:33 GMT
ನಟ ದರ್ಶನ್‌

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟದರ್ಶನ್​ಗೆ ಅವರ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ದರ್ಶನ್​, ಪವಿತ್ರಾ ಗೌಡ ಹಾಗೂ ಇನ್ನುಳಿದ ಆರೋಪಿಗಳನ್ನು ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಎದುರು ಹಾಜರಾದರು.

ಸರ್ಕಾರಿ ವಕೀಲರು ಹಾಗೂ ದರ್ಶನ್ ಪರ ವಕೀಲರ ವಾದ- ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ವಿಶ್ವನಾಥ‌ ಸಿ. ಗೌಡರ್ ಅವರು ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸುವಂತೆ ಅದೇಶಿಸಿದ್ದಾರೆ. ಎಲ್ಲರಿಗೂ ಆಗಸ್ಟ್​ 1ರ ತನಕ ನ್ಯಾಯಾಂಗ ಬಂಧನ ಮುಂದುವರಿಯಲಿದೆ.

ಮನೆ ಊಟದ ಬಗ್ಗೆ ನಾಳೆ ನಿರ್ಧಾರ

ತಮಗೆ ಮನೆ ಊಟ ಬೇಕು, ಜೈಲಿನಲ್ಲಿರುವ ತಮ್ಮ ಸೆಲ್ ನಲ್ಲಿ ಮಲಗಲು ಹಾಸಿಗೆ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ಜು. 18ರಂದು ಕರ್ನಾಟಕ ಹೈಕೋರ್ಟ್ ಮುಂದೆ ಬಂದಿದ್ದು, ಆ ಅರ್ಜಿಯ ವಿಚಾರಣೆಯನ್ನು ಜು. 19ಕ್ಕೆ ಮುಂದೂಡಲಾಗಿದೆ. ತಮಗೆ ಜೈಲಿನ ಊಟ ಒಗ್ಗುತ್ತಿಲ್ಲವಾದ್ದರಿಂದ ತಮಗೆ ಮನೆಯೂಟ, ಹಾಸಿಗೆ ಹಾಗೂ ಪುಸ್ತಕ ಓದಲು ಅವಕಾಶ ಕೊಡಬೇಕೆಂದು ಕೋರಿ ದರ್ಶನ್ ಅವರು ತಮ್ಮ ವಕೀಲರ ಪರವಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ನಟ ದರ್ಶನ್ ಪರ ವಕೀಲ ಕೆಎನ್ ಫಣೀಂದ್ರ ಅವರು ದರ್ಶನ್ ಅವರ ಅರ್ಜಿಯ ವಿಚಾರಣೆಗಾಗಿ ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ನ್ಯಾಯಮೂರ್ತಿಗಳು  ಈ ಬಗ್ಗೆ ಕಾನೂನಿನಲ್ಲಿ ಇರೋ ಅವಕಾಶಗಳನ್ನು ಪರಿಶೀಲಿಸಿ ಜಲೈ 19ರಂದು ವಿಚಾರಣೆ ನಡೆಸುವುದಾಗಿ  ಅರ್ಜಿ ವಿಚಾರಣೆ ಮುಂದೂಡಿದ್ದಾರೆ.

ಪ್ರಕರಣದ ಹಿನ್ನಲೆ

ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಆರೋಪಿಗಳಲ್ಲಿ ಒಬ್ಬನಾದ ರಾಘವೇಂದ್ರ ಎಂಬಾತ ರೇಣುಕಾಸ್ವಾಮಿಯನ್ನು ದರ್ಶನ್ ಭೇಟಿ ನೆಪದಲ್ಲಿ ಬೆಂಗಳೂರಿನ ಆರ್ ಆರ್ ನಗರದ ಶೆಡ್‌ಗೆ ಕರೆತಂದಿದ್ದ. ಇದೇ ಶೆಡ್‌ನಲ್ಲಿಯೇ ಜೂನ್ 8 ರಂದು ಆತನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು.

ನಂತರ ದರ್ಶನ್ ಸೂಚನೆ ಮೇರೆಗೆ ರೇಣುಕಾ ಸ್ವಾಮಿಯ ಶವವನ್ನು ಮೋರಿಗೆ ಎಸೆದು ಹೋಗಿದ್ದರು. ಮೋರಿಯಲ್ಲಿ ತೇಲುತ್ತಿದ್ದ ಶವವನ್ನು ಬೀದಿನಾಯಿಗಳು ಕಚ್ಚಿ ಎಳೆದು ತಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿರುವಾಗ ಈ ಕೊಲೆಯ ಹಿಂದಿನ ರೂವಾರಿ ದರ್ಶನ್ ಎಂದು ತಿಳಿದುಬಂದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11 ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಈಗಾಗಲೇ ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಅನೇಕ ಸ್ಥಳಗಳಿಗೆ ತೆರಳಿ ಮಹಜರು ನಡೆಸಲಾಗಿದೆ. ಸದ್ಯ ಈ ಪ್ರಕರಣದಲ್ಲಿ ಭಾಗಿಯಾಗಿರುವ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ವಿಸ್ತರಣೆಯಾಗಿದೆ. 

Tags:    

Similar News