Actor Darshan Case | ದರ್ಶನ್ ಜೈಲಿನಲ್ಲಿ ವಿಶೇಷ ಆತಿಥ್ಯ: ಮಧ್ಯಂತರ ವರದಿ ಸಲ್ಲಿಸಿದ ಪೊಲೀಸ್ ಕಮಿಷನರ್
ʼಅಂತಿಮ ವರದಿಯನ್ನು ಶೀಘ್ರದಲ್ಲೇ ಪೊಲೀಸ್ ಕಮಿಷನರ್ ಅವರಿಗೆ ಸಲ್ಲಿಸಲಾಗುವುದು. ನ್ಯಾಯಾಲಯಕ್ಕೂ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು' ಎಂದು ಪೊಲೀಸ್ ಮೂಲಗಳು ತಿಳಿಸಿವೆ.;
ನಟ ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ್ ಸೇರಿದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಗಳಿಗೆ ವಿಶೇಷ ಆತಿಥ್ಯ ಕಲ್ಪಿಸಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಆಗ್ನೇಯ ವಿಭಾಗದ ಪೊಲೀಸರು, ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ.
ಅಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು ಈ ವರದಿ ಸಲ್ಲಿಸಿದ್ದಾರೆ. 'ತನಿಖೆಗೆ ಮೂರು ತಂಡ ರಚಿಸಲಾಗಿತ್ತು. ತನಿಖೆ ಬಹುತೇಕ ಮುಗಿದಿದೆ. ಅಂತಿಮ ವರದಿಯನ್ನು ಶೀಘ್ರದಲ್ಲೇ ಪೊಲೀಸ್ ಕಮಿಷನರ್ ಅವರಿಗೆ ಸಲ್ಲಿಸಲಾಗುವುದು. ನ್ಯಾಯಾಲಯಕ್ಕೂ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು' ಎಂದು ಪೊಲೀಸ್ ಮೂಲಗಳು ತಿಳಿಸಿವೆ.
'ಹಣದ ಆಮಿಷಕ್ಕೆ ಒಳಗಾಗಿ ಜೈಲು ಸಿಬ್ಬಂದಿ, ಅಧಿಕಾರಿಗಳು, ವಿಚಾರಣಾಧೀನ ಕೈದಿಗಳಿಗೆ ವಿಶೇಷ ಆತಿಥ್ಯ ಕಲ್ಪಿಸುತ್ತಿದ್ದರು. ಮೊಬೈಲ್ ಬಳಕೆಗೆ ಅವಕಾಶ ನೀಡುತ್ತಿದ್ದರು' ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಎ 2 ಆರೋಪಿಯಾಗಿ ವಿಚಾರಣಾಧೀಣ ಕೈದಿಯಾಗಿ ಜೈಲಿನಲ್ಲಿರುವ ನಟ ದರ್ಶನ್ ಮತ್ತು ಆತನ ಸಹಚರರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವಾಗ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನೊಂದಿಗೆ ಗುಂಪುಗೂಡು ಕುರ್ಚಿ ಮೇಲೆ ಕೂತುಕೊಂಡು ಸಿಗರೇಟು ಸೇದುತ್ತಾ ಇರುವ ಫೋಟೋ ಮತ್ತು ವಿಡಿಯೋ ವೈಲರ್ ಆಗಿದ್ದವು. ಆ ಬಳಿಕ ಜೈಲಿನ ಒಳಗೆ ವಿಶೇಷ ಆತಿಥ್ಯ ಕಲ್ಪಿಸಿರುವ ವಿಷಯ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ನಟ ದರ್ಶನ್ ಮತ್ತು ಆತನ ಸಹಚರರನ್ನು ಬಳ್ಳಾರಿ, ಶಿವಮೊಗ್ಗ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ.