Actor Darshan Case | ಸಚಿವರಿಂದ ಲಾಬಿ: ಹೆಸರು ಬಹಿರಂಗಪಡಿಸುವಂತೆ ಸಿಎಂಗೆ ಸುರೇಶ್‌ ಕುಮಾರ್‌ ಒತ್ತಾಯ

"ಹಾಗೆಯೇ ಈವರೆಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿರುವ ವ್ಯಕ್ತಿಗಳು ಮತ್ತು ಸಚಿವರ ಹೆಸರುಗಳನ್ನು ರಾಜ್ಯದ ಜನತೆ ಮುಂದೆ ತಿಳಿಸುವುದು ಅಗತ್ಯವಿದೆ. ಜನತೆಗೆ ಈ ಕುರಿತು ತಿಳಿಯುವ ಹಕ್ಕಿದೆ ಮತ್ತು ಪಾರದರ್ಶಕ ಆಡಳಿತದಲ್ಲಿ ಇದು ಅವಶ್ಯ ಕೂಡ" ಎಂದೂ ಸುರೇಶ್‌ ಕುಮಾರ್ ಒತ್ತಾಯಿಸಿದ್ದಾರೆ.

Update: 2024-06-15 12:37 GMT

ಚಿತ್ರದುರ್ಗದ ರೇಣುಕಾಸ್ವಾಮಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟ ದರ್ಶನ್‌(Actor Darshan) ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಪ್ರಕರಣ ಮುಚ್ಚಿಹಾಕಿ, ನಟನನ್ನು ಬಚಾವು ಮಾಡಲು ರಾಜ್ಯ ಸರ್ಕಾರದ ಕೆಲವು ಸಚಿವರು, ಆಡಳಿತ ಪಕ್ಷದ ಶಾಸಕರು ಹಾಗೂ ಪ್ರತಿಪಕ್ಷಗಳ ಕೆಲವು ಮುಖಂಡರೂ ಯತ್ನಿಸಿದ್ದರು ಎಂಬ ಸಂಗತಿ ಚರ್ಚೆಯಾಗುತ್ತಿದೆ.

ಈ ನಡುವೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳು ಮತ್ತು ಪಕ್ಷದ ಶಾಸಕರು, ಮುಖಂಡರಿಗೆ, ದರ್ಶನ್‌ ಪ್ರಕರಣದ ವಿಷಯದಲ್ಲಿ ಅಹವಾಲು ಹೊತ್ತು ನನ್ನ ಬಳಿ ಬರಬೇಡಿ. ಆ ವಿಷಯದಲ್ಲಿ ಯಾರೂ ನನ್ನನ್ನು ಸಂಪರ್ಕಿಸಬೇಡಿ. ಕಾನೂನು ಅದರ ಕೆಲಸ ಮಾಡಲಿದೆ. ಕೊಲೆಯಂತಹ ಕೃತ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.

ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಹೇಳಿಕೆಯ ಮಾಧ್ಯಮ ವರದಿಗಳನ್ನೇ ಉಲ್ಲೇಖಿಸಿ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಎಸ್‌ ಸುರೇಶ್‌ ಕುಮಾರ್‌ ಅವರು, "ಚಿತ್ರ ನಟ ದರ್ಶನ್‌ ಪ್ರಕರಣದಲ್ಲಿ ತಮ್ಮ ಮೇಲೆ ಯಾರೂ ಒತ್ತಡ ತರಬಾರದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ರಾಜಕೀಯ ನಾಯಕರು ಹಾಗೂ ತಮ್ಮ ಸಚಿವ ಸಂಪುಟದ ಸದಸ್ಯರ ಕುರಿತು ಎಚ್ಚರಿಕೆ ಮಾತುಗಳನ್ನು ಆಡಿರುವುದು ಅತ್ಯಂತ ಸ್ವಾಗತಾರ್ಹ" ಎಂದು ಶ್ಲಾಘಿಸಿದ್ದಾರೆ.

ಆದರೆ, ಅದೇ ವೇಳೆ ಅವರು, "ಹಾಗೆಯೇ ಈವರೆಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿರುವ ವ್ಯಕ್ತಿಗಳು ಮತ್ತು ಸಚಿವರ ಹೆಸರುಗಳನ್ನು ರಾಜ್ಯದ ಜನತೆ ಮುಂದೆ ತಿಳಿಸುವುದು ಅಗತ್ಯವಿದೆ. ಜನತೆಗೆ ಈ ಕುರಿತು ತಿಳಿಯುವ ಹಕ್ಕಿದೆ ಮತ್ತು ಪಾರದರ್ಶಕ ಆಡಳಿತದಲ್ಲಿ ಇದು ಅವಶ್ಯ ಕೂಡ" ಎಂದೂ ಅವರು ಒತ್ತಾಯಿಸಿದ್ದಾರೆ.

ಪ್ರಕರಣದಲ್ಲಿ ಹತ್ಯೆ ನಡೆದ ದಿನದಿಂದಲೂ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರು ಪೊಲೀಸ್‌ ಅಧಿಕಾರಿಗಳಿಗೆ, ಶವ ಪರೀಕ್ಷೆ ವರದಿ ನೀಡುವ ಸರ್ಕಾರಿ ವೈದ್ಯರಿಗೆ ಮತ್ತು ಆಡಳಿತ ಪಕ್ಷದ ಪ್ರಮುಖರಿಗೆ ಕರೆ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು. ಆ ಸಚಿವರು ಆರೋಪಿ ದರ್ಶನ್‌ ಜೊತೆ ಘಟನೆಯ ಬಳಿಕ ನಿರಂತರ ಸಂಪರ್ಕದಲ್ಲಿದ್ದರು ಎಂಬ ವರದಿಗಳು ಇವೆ. 

ಆಡಳಿತ ಪಕ್ಷವಷ್ಟೇ ಅಲ್ಲದೆ; ಪ್ರತಿಪಕ್ಷ ಬಿಜೆಪಿಯ ಪ್ರಮುಖ ನಾಯಕರು ಕೂಡ ನಟ ದರ್ಶನ್‌ ಪರ ಲಾಬಿ ನಡೆಸಿದ್ದರು ಎಂಬ ಮಾತುಗಳೂ ಕೇಳಿಬಂದಿವೆ. 

ಸರ್ಕಾರದ ನಡೆ ಬಗ್ಗೆ ಅನುಮಾನ

ಈ ನಡುವೆ, ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್‌ ಅಧಿಕಾರಿಯನ್ನು ಪ್ರಕರಣದ ಪ್ರಾಥಮಿಕ ತನಿಖೆ ಪ್ರಗತಿಯಲ್ಲಿರುವಾಗಲೇ ದಿಢೀರ್‌ ವರ್ಗಾವಣೆ ಮಾಡಿರುವುದು, ಹತ್ಯೆ ಬಳಿಕ ರೇಣುಕಾಸ್ವಾಮಿ ಶವ ಸಾಗಣೆಗೆ ನಟ ದರ್ಶನ್‌ಗೆ ಮಾರ್ಗದರ್ಶನ ಮಾಡಿರುವ ಆರೋಪ ಕೇಳಿಬಂದಿರುವ ಆರ್‌ ಆರ್‌ ನಗರ ಪೊಲೀಸ್‌ ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇರುವುದು, ವಿಚಾರಣೆ ವೇಳೆ ನಟ ದರ್ಶನ್‌ ಗೆ ವಾಕ್‌ ಮಾಡಲು ಅನುಕೂಲವಾಗುವಂತೆ ಠಾಣೆ ಸುತ್ತ ಶಾಮಿಯಾನದ ಹೊದಿಕೆ ಹಾಕಿರುವುದು ಸೇರಿದಂತೆ ಹಲವು ಸಂಗತಿಗಳು ಪ್ರಕರಣದ ವಿಷಯದಲ್ಲಿ ಸರ್ಕಾರ ಮೃದು ಧೋರಣೆ ತಾಳಿದೆಯೇ? ಎಂಬ ಚರ್ಚೆಗಳಿಗೆ ಕಾರಣವಾಗಿವೆ.

ಈ ನಡುವೆ ಸ್ವತಃ ಮುಖ್ಯಮಂತ್ರಿಗಳೇ ಪ್ರಕರಣದ ವಿಷಯದಲ್ಲಿ ಯಾರೂ ತಮ್ಮ ಬಳಿ ಲಾಬಿ ನಡೆಸಲು ಬರಬೇಡಿ ಎಂದು ಶಾಸಕರು ಮತ್ತು ಸಚಿವರಿಗೆ ಹೇಳಿರುವುದಾಗಿ ವರದಿಯಾಗಿರುವುದು ಅಂತಹ ಅನುಮಾನಗಳಿಗೆ ಇಂಬು ನೀಡಿದೆ. 

Tags:    

Similar News