Actor Darshan Case | ದರ್ಶನ್ ಜಾಮೀನು ಅರ್ಜಿ ವಜಾ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಜಾಮೀನು ಕೊಡಲು ನಿರಾಕರಿಸಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್, ಜಾಮೀನು ಕೊಡಲು ನಿರಾಕರಿಸಿದೆ. ಇದರಿಂದ ದರ್ಶನ್ ಜೈಲಿನಲ್ಲೇ ಮುಂದುವರಿಯುವುದು ಅನಿವಾರ್ಯವಾಗಿದೆ. ಅವರು ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.
ದರ್ಶನ್ ಪರ ವಕೀಲ ಸಿ ವಿ ನಾಗೇಶ್ ಅವರು ವಾದ ಮಂಡನೆ ಮಾಡಿದ್ದರು. ದರ್ಶನ್ ವಿರುದ್ಧ ಸಾಕ್ಷಿಗಳನ್ನು ಸೃಷ್ಟಿಸಲಾಗಿದೆ ಎಂದು ವಾದ ಮಂಡಿಸಿದ್ದರು. ಇದಕ್ಕೆ ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ಅವರು ಪ್ರತಿವಾದ ಮಂಡಿಸಿದ್ದರು. ಎರಡೂ ಕಡೆಯ ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯ ದರ್ಶನ್‌ಗೆ ಜಾಮೀನು ನಿರಾಕರಿಸಿದೆ.
ದರ್ಶನ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಲಿದೆ ಎಂಬ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳು, ಜೈಲಿನಿಂದ ಹೊರಬರಲಿರುವ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಕಳೆದ ನಾಲ್ಕೈದು ದಿನಗಳಿಂದ ಜಾಮೀನು ಅರ್ಜಿ ಮೇಲಿನ ನ್ಯಾಯಾಲಯದ ಆದೇಶ ಹೊರಬೀಳುವ ನಿರೀಕ್ಷೆಯಲ್ಲ ಅಭಿಮಾನಿಗಳು ಸದ್ಯ ದರ್ಶನ್ ಅವರನ್ನು ಇಟ್ಟಿರುವ ಬಳ್ಳಾರಿಯ ಕೇಂದ್ರ ಕಾರಾಗೃಹದ ಮುಂದೆ ಭಾರೀ ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದರು. ರಾಜ್ಯದ ಮೂಲೆಮೂಲೆಯ ಅವರ ಅಭಿಮಾನಿಗಳು ತಮ್ಮ ಡಿ ಬಾಸ್ ಸ್ವಾಗತಕ್ಕೆ ಬಳ್ಳಾರಿಗೆ ತೆರಳಿದ್ದರು.
ಆದರೆ, ಇದೀಗ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದರಿಂದ ಅಭಿಮಾನಿಗಳಿಗೆ ದೊಡ್ಡ ನಿರಾಶೆಯಾಗಿದೆ.
ಪವಿತ್ರಾ ಗೌಡಗೂ ಶಾಕ್!
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್ ಗೆಳತಿ ಪವಿತ್ರಾ ಗೌಡಗೂ ಶಾಕ್ ಎದುರಾಗಿದ್ದು ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಇದೇ ವೇಳೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳಾಗಿರುವ ಎ13 ದೀಪಕ್, ಎ8 ರವಿಶಂಕರ್‌ಗೆ ಜಾಮೀನು ಮಂಜೂರು ಮಾಡಲಾಗಿದೆ. ಇನ್ನು ಮೂವರು ವಿನಯ್, ಜಗದೀಶ್, ಪ್ರದೂಷ್ ಅವರ ಜಾಮೀನು ಅರ್ಜಿ ಆದೇಶವನ್ನು ಅ.16ಕ್ಕೆ ಕಾಯ್ದಿರಿಸಲಾಗಿದೆ.
ದರ್ಶನ್ ಮತ್ತು ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 57ನೇ ಸೆಷನ್ಸ್ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿತ್ತು. ವಾದ ವಿವಾದದ ಆಧಾರದಲ್ಲಿ 6 ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಿತ್ತು. ಸರ್ಕಾರದ ಪರವಾಗಿ (ರೇಣುಕಾಸ್ವಾಮಿ ಕೊಲೆ ಕೇಸಿನ ತನಿಖೆ ಕುರಿತು) ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ಅವರು ವಾದ ಮಂಡಿಸಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅವರನ್ನು ಜೂನ್ 11ರಂದು ಬಂಧಿಸಲಾಗಿತ್ತು. ಅವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿತ್ತು. ಆದರೆ, ಅಲ್ಲಿ ಅವರು ಐಷಾರಾಮಿ ವ್ಯವಸ್ಥೆ ಪಡೆದ ಕಾರಣಕ್ಕೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಈಗ ಈ ತೀರ್ಪಿನಿಂದ ಅವರು ಬಳ್ಳಾರಿ ಜೈಲಲ್ಲೇ ಮುಂದುವರಿಯಲಿದ್ದಾರೆ. ಈಗಾಗಲೇ ಅವರು ವಿಚಾರಣಾಧೀನ ಕೈದಿಯಾಗಿ ಬರೋಬ್ಬರಿ ನಾಲ್ಕು ತಿಂಗಳು ಜೈಲಿನಲ್ಲೇ ಕಳೆದಿದ್ದಾರೆ.