ದೇಶಾದ್ಯಂತ HMT ಭೂಮಿ ಒತ್ತುವರಿ ತೆರವಿಗೆ ಕ್ರಮ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ತೀವ್ರ ಸಂಕಷ್ಟದ ಸ್ಥಿತಿಯಲ್ಲಿರುವ HMT- ಮಶೀನ್ & ಟೂಲ್ಸ್ (HMT MTL) ಘಟಕವೂ ಸೇರಿದಂತೆ ಕಂಪನಿ ವ್ಯಾಪ್ತಿಯ ಎಲ್ಲಾ ಭೂಮಿಯ ರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.;
ತೀವ್ರ ಸಂಕಷ್ಟದ ಸ್ಥಿತಿಯಲ್ಲಿರುವ ಇಲ್ಲಿನ HMT- ಮಶೀನ್ & ಟೂಲ್ಸ್ (HMT MTL) ಘಟಕವೂ ಸೇರಿದಂತೆ ನಗರದಲ್ಲಿರುವ ಕಂಪನಿ ವ್ಯಾಪ್ತಿಯ ಎಲ್ಲಾ ಭೂಮಿಯ ರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಹೈದರಾಬಾದ್‌ನಲ್ಲಿರುವ ಎಚ್ ಎಂಟಿ ಕಾರ್ಖಾನೆಗೆ ಭೇಟಿ ನೀಡಿದ ನಂತರ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಜತೆ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ನಾನು ಭಾರೀ ಕೈಗಾರಿಕೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಹೆಚ್ ಎಂಟಿ ಬಗ್ಗೆಯೇ ಸರಣಿ ಸಭೆಗಳನ್ನು ನಡೆಸಿದ್ದೇನೆ. ಕರ್ನಾಟಕದ ಬೆಂಗಳೂರು, ಹರಿಯಾಣದ ಪಿಂಜೋರ್ ನಲ್ಲಿರುವ ಘಟಕಗಳಿಗೆ ಭೇಟಿ ನೀಡಿದ್ದೇನೆ. ದೇಶದ ಎಲ್ಲಾ ಕಡೆಯಲ್ಲೂ ಹೆಚ್ ಎಂಟಿ ಘಟಕಗಳು ಒಂದೇ ರೀತಿಯ ಸಂಕಷ್ಟ ಎದುರಿಸುತ್ತಿವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಅನೇಕ ಕಡೆ ಕಂಪನಿಗೆ ದೊಡ್ಡ ಪ್ರಮಾಣದಲ್ಲಿ ಭೂಮಿ ಇದೆ. ಕೆಲವಡೆ ಅಕ್ರಮ ಒತ್ತುವರಿ ಆಗಿದೆ. ಕಾನೂನು ಕ್ರಮದ ಮೂಲಕ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆಯಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ ಎಂದು ಸಚಿವರು ಹೇಳಿದರು.
ಹೈದರಾಬಾದ್ ನಲ್ಲಿರುವ HMT- ಮಶೀನ್ & ಟೂಲ್ಸ್ (HMT MTL) ಘಟಕ ಕೆಲ ವರ್ಷಗಳ ಹಿಂದೆ ಉತ್ತಮ ಸ್ಥಿತಿಯಲ್ಲಿತ್ತು. ಇಸ್ರೋ, ಸೇನೆ ಸೇರಿದಂತೆ ವಿವಿಧ ವಲಯಗಳ ಬೇಡಿಕೆಗಳಿಗೆ ತಕ್ಕಂತೆ ವಿಸ್ತೃತವಾಗಿ ಉತ್ಪಾದನೆ ಮಾಡುತ್ತಿತ್ತು. ಹಲವು ಕಾರಣಗಳಿಂದಾಗಿ ಅದು ಸಂಕಷ್ಟಕ್ಕೆ ಸಿಲುಕಿದೆ. ಅದಕ್ಕೆ ಮರುಜನ್ಮ ನೀಡುವ ಬಗ್ಗೆ ಮುಕ್ತವಾಗಿ ಚಿಂತನೆ ನಡೆಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ ಕಲ್ಪನೆಯ ಅಡಿಯಲ್ಲಿ ಮಾರ್ಗೋಪಾಯ ಹುಡುಕಲಾಗುವುದು ಎಂದು ಅವರು ಹೇಳಿದರು.
ಕಾರ್ಖಾನೆ ವೀಕ್ಷಣೆ
ಇಡೀ ಕಾರ್ಖಾನೆಯನ್ನು ವೀಕ್ಷಿಸಿದ ಕೇಂದ್ರ ಸಚಿವರು; ಬೃಹತ್ ಯಂತ್ರೋಪಕರಣಗಳು, ಅವುಗಳ ಸುಸ್ಥಿತಿಯ ಬಗ್ಗೆ ತಾಂತ್ರಿಕ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಹಾಲಿ, ನಿವೃತ್ತ ಕಾರ್ಮಿಕರ ಜತೆ ಸಂವಾದ ನಡೆಸಿದ ಅವರು, ಬಳಿಕ ಆಡಳಿತ ಮಂಡಳಿಯ ಸಭೆ ನಡೆಸಿದರು.
ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ರಾಜ್ಯ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮ, ಕಂಪನಿಯ ಅಧ್ಯಕ್ಷ - ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ, ಘಟಕದ ಮುಖ್ಯಸ್ಥ ರಾಜಬಾಬು ಸೇರಿ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಕಾರ್ಮಿಕರ ಮನವಿ ಆಲಿಸಿದ ಸಚಿವರು
ಕಾರ್ಖಾನೆ ವೀಕ್ಷಣೆ ನಂತರ ಹಾಲಿ ಮತ್ತು ನಿವೃತ್ತ ಕಾರ್ಮಿಕರ ಮನವಿ ಆಲಿಸಿದ ಸಚಿವರು, ಅವರ ಭರವಸೆಗಳನ್ನು ಈಡೇರಿಸುವ ಭರವಸೆ ನೀಡಿದರು.
ತಮ್ಮ ಹಲವಾರು ಸಮಸ್ಯೆಗಳನ್ನು ಹೇಳಿಕೊಂಡು ಸಚಿವರ ಮುಂದೆ ಕಣ್ಣೀರಿಟ್ಟ ಕಾರ್ಮಿಕರು, ತಮ್ಮನ್ನು ರಕ್ಷಣೆ ಮಾಡುವಂತೆ ಅಂಗಲಾಚಿ ಬೇಡಿಕೊಂಡಾಗ ಸಚಿವರು ತೀವ್ರ ಭಾವೋದ್ವೇಗಕ್ಕೆ ಒಳಗಾದರು.
ಅವರ ಮನವಿಗೆ ಸ್ಪಂದಿಸಿ, ನಿಮ್ಮ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುವ ಬಗ್ಗೆ ಗಮನ ಕೊಡಲಾಗುವುದು. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.