ವಾಲ್ಮೀಕಿ ನಿಗಮ ಹಗರಣ| ಪ್ರಾಥಮಿಕ ವರದಿ ಬಳಿಕ ನಾಗೇಂದ್ರ ವಿರುದ್ಧ ಕ್ರಮ ಎಂದ ಸಿದ್ದರಾಮಯ್ಯ

Update: 2024-06-03 10:56 GMT

ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರು ರಾಜಿನಾಮೆಯನ್ನು ಕೇಳಿಲ್ಲ ಹಾಗೂ ರಾಜೀನಾಮೆ ಪಡೆಯುವ ವಿಚಾರದಲ್ಲಿ ತಮಗೆ ಯಾರೂ ಯಾವ ಬೆದರಿಕೆಯನ್ನೂ  ಹಾಕಿಲ್ಲ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ  ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದ ಜತೆ ಮಾತನಾಡಿದ ಸಿದ್ದರಾಮಯ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ನಾಗೇಂದ್ರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದರು.  ನಿಗಮದಲ್ಲಿ ಹಗರಣ ಆರೋಪಿಸಿ ಅಧಿಕಾರಿ ಪಿ. ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣ ಹಾಗೂ ಕೋಟ್ಯಂತರ ಹಣ ಖಾಸಗಿಯವರಿಗೆ ವರ್ಗಾವಣೆ ಸಂಬಂಧ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಸಿದ್ದರಾಮಯ್ಯ ರಾಜೀನಾಮೆ ಕೇಳಿಲ್ಲ ಎಂದು ನಿರಾಕರಿಸಿದ್ದಾರೆ.

"ಮುಖ್ಯಮಂತ್ರಿಗಳು ಸಚಿವ ನಾಗೇಂದ್ರ ಅವರನ್ನು ಕರೆದು ರಾಜೀನಾಮೆ ಕೊಡಲು ಹೇಳಿದ್ದಾರಂತೆ. ಆದರೆ ನನ್ನ ರಾಜೀನಾಮೆ ಕೇಳಿದರೆ ಎಲ್ಲರ ವಿಚಾರ ಬಹಿರಂಗ ಮಾಡುತ್ತೇನೆ ಎಂದು ನಾಗೇಂದ್ರ ಬೆದರಿಸಿದ್ದಾರೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದಿಗ್ಧತೆಯಲ್ಲಿದ್ದಾರೆ. ಸಚಿವರ ರಾಜೀನಾಮೆ ಪಡೆಯಲಾಗದಷ್ಟು ಸಿದ್ದರಾಮಯ್ಯ ದುರ್ಬಲರಾಗಿದ್ದಾರೆ," ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದರು. ಈ ಆರೋಪವನ್ನು ನಿರಾಕರಿಸಿದ ಸಿದ್ದರಾಮಯ್ಯ  ಅವರು ನಾಗೇಂದ್ರ ರಾಜೀನಾಮೆ ಪಡೆಯುವ ವಿಚಾರದಲ್ಲಿ ತಮಗೆ ಯಾವ ಬೆದರಿಕೆಯೂ ಇಲ್ಲ ಎಂದು ಹೇಳಿದ್ದಾರೆ.

ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಬಿಜೆಪಿ ಅವರು ಸಚಿವ ನಾಗೇಂದ್ರ ಅವರ ರಾಜಿನಾಮೆಗೆ ಜೂನ್ ಆರರವರೆಗೆ ಗಡುವು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಪ್ರಾಥಮಿಕ ವರದಿ ಪಡೆದು ನಂತರ ರಾಜೀನಾಮೆ ಬಗ್ಗೆ  ತೀರ್ಮಾನಿಸಲಾಗುವುದು ಎಂದರು.

Tags:    

Similar News