Actor Darshan Case | ಜೈಲಿನಲ್ಲಿ ದರ್ಶನ್ ಭೇಟಿಯಾದ ಚಿಕ್ಕಣ್ಣ ವಿರುದ್ಧ ಕ್ರಮ: ಪೊಲೀಸ್ ಕಮಿಷನರ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಭೇಟಿ ಮಾಡಿರುವ ಸಾಕ್ಷಿದಾರರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದಾರೆ;
'ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಿರುವ ಸಾಕ್ಷಿದಾರರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು' ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಹೇಳಿದ್ದಾರೆ.
'ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವ ಆರೋಪಿಗಳನ್ನು ಯಾರ್ಯಾರು ಭೇಟಿ ಮಾಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಅವರ ವಿರುದ್ಧ ಕಾನೂನು ಕ್ರಮಕ್ಕೆ ಪರಿಶೀಸಲಾಗುತ್ತಿದೆ' ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ರೇಣುಕಾಸ್ವಾಮಿ ಕೊಲೆಗೂ ಮುನ್ನ ಆರೋಪಿ ವಿನಯ್ ಅವರ ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಆರೋಪಿಗಳು ಪಾರ್ಟಿ ನಡೆಸಿದ್ದರು. ಆ ಪಾರ್ಟಿಯಲ್ಲಿ ಆರೋಪಿ ದರ್ಶನ್, ಪವಿತ್ರಾಗೌಡ ಜತೆಗೆ ನಟ ಚಿಕ್ಕಣ್ಣ ಕಾಣಿಸಿಕೊಂಡಿದ್ದರು. ಚಿಕ್ಕಣ್ಣ ಅವರಿಗೆ ನೋಟಿಸ್ ನೀಡಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಅಲ್ಲದೇ, ಚಿಕ್ಕಣ್ಣ ಅವರನ್ನು ಈ ಪ್ರಕರಣದಲ್ಲಿ ಸಾಕ್ಷಿದಾರರನ್ನಾಗಿ ಪರಿಗಣಿಸಿ ನ್ಯಾಯಾಧೀಶರ ಎದುರು ಸಿಆರ್‌ಪಿಸಿ ಕಲಂ 164ರ ಅಡಿ ಹೇಳಿಕೆ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಸಾಕ್ಷಿದಾರರ ಪಟ್ಟಿಯಲ್ಲಿರುವ ಚಿಕ್ಕಣ್ಣ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ದರ್ಶನ್‌ನನ್ನು ಇತ್ತೀಚೆಗೆ ಭೇಟಿಮಾಡಿದ್ದರು. ಸಾಕ್ಷಿದಾರರಾಗಿ ಪ್ರಮುಖ ಆರೋಪಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಇದೀಗ ಚಿಕ್ಕಣ್ಣಗೆ ಸಂಕಷ್ಟ ತಂದಿದೆ.
ಶೀಘ್ರದಲ್ಲೇ ಆರೋಪ ಪಟ್ಟಿ
'ಕೊಲೆ ಪ್ರಕರಣದ ತನಿಖೆ ಬಹತೇಕ ಪೂರ್ಣಗೊಂಡಿದೆ. 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುವುದು' ಎಂದು ಕಮಿಷನರ್ ದಯಾನಂದ ಹೇಳಿದರು.
'ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಗಳು ಬಂದಿವೆ. ಆರೋಪಿಗಳ ಮನೆ ಹಾಗೂ ಕೃತ್ಯದ ನಡೆದ ಸ್ಥಳದಲ್ಲಿ ಜಪ್ತಿ ಮಾಡಲಾಗಿದ್ದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ರವಾನೆ ಮಾಡಲಾಗಿತ್ತು. ಅದರ ವರದಿಗಳು ಮಾತ್ರ ಬರಬೇಕಿದೆ' ಎಂದು ಹೇಳಿದರು.
ಮೆಗ್ಗರ್ ಸಾಧನದಿಂದಲೇ ಸಾವು
'ರೇಣುಕಾಸ್ವಾಮಿ ಅವರನ್ನು ಶೆಡ್‌ಗೆ ಕರೆತಂದ ಬಳಿಕ ಆರೋಪಿಗಳು ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ರೇಣುಕಾಸ್ವಾಮಿ ಅಸ್ವಸ್ಥಗೊಂಡಿದ್ದರು. ನಂತರ, ಮೆಗ್ಗರ್ ಸಾಧನದಿಂದ ಎಲೆಕ್ಟಿಕ್ ಶಾಕ್ ನೀಡಲಾಗಿತ್ತು. ಎಲೆಕ್ಟಿಕ್ ಶಾಕ್ ಕೊಟ್ಟ ಮೇಲೆ ಅವರು ಮೃತಪಟ್ಟಿದ್ದರೆಂದು ಎಫ್ಎಸ್ಎಲ್ ವರದಿ ಹೇಳಿದೆ' ಎಂದು ಮೂಲಗಳು ತಿಳಿಸಿವೆ.