ಅರಣ್ಯ ಭೂಮಿ ಒತ್ತುವರಿ ಆರೋಪ | ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು; ತೇಜೋವಧೆ ಹುನ್ನಾರ ಎಂದ ಸಚಿವ

ಸಚಿವ ಬೋಸರಾಜು ಅವರು ತಮ್ಮ ಪತ್ನಿ ಹೆಸರಿನಲ್ಲಿ ರಾಯಚೂರಿನ ರಕ್ಷಿತಾರಣ್ಯ ಪ್ರದೇಶದಲ್ಲಿ 5 ಎಕರೆ 27 ಗುಂಟೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಆರ್ ಟಿ ಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.‌ ಆದರೆ, ಈ ಆರೋಪವನ್ನು ಸಚಿವ ಎನ್.ಎಸ್.ಬೋಸರಾಜು ತಳ್ಳಿ ಹಾಕಿದ್ದಾರೆ.

Update: 2024-10-21 16:00 GMT

ಮುಡಾ ಹಾಗೂ ಕೆಐಎಡಿಬಿ ನಿವೇಶನ ಹಂಚಿಕೆ ಪ್ರಕರಣದ ನಂತರ‌ ಇದೀಗ ಸಿಎಂ ಸಂಪುಟದ ಮತ್ತೊಬ್ಬ ಸಚಿವ ಎನ್.ಎಸ್. ಬೋಸರಾಜು ವಿರುದ್ಧ ಅರಣ್ಯ ಭೂಮಿ ಒತ್ತುವರಿ ಆರೋಪ ಕೇಳಿಬಂದಿದ್ದು, ತನಿಖೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ದೂರೊಂದು ಸಲ್ಲಿಕೆಯಾಗಿದೆ.

ಸಚಿವ ಬೋಸರಾಜು ಅವರು ತಮ್ಮ ಪತ್ನಿ ಹೆಸರಿನಲ್ಲಿ ರಾಯಚೂರಿನ ರಕ್ಷಿತಾರಣ್ಯ ಪ್ರದೇಶದಲ್ಲಿ 5 ಎಕರೆ 27 ಗುಂಟೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಆರ್ ಟಿ ಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.‌ ಆದರೆ, ಈ ಆರೋಪವನ್ನು ಸಚಿವ ಎನ್.ಎಸ್.ಬೋಸರಾಜು ತಳ್ಳಿ ಹಾಕಿದ್ದು, ನನ್ನ ತೇಜೋವಧೆ ಮಾಡುವ ಹುನ್ನಾರ. ನನ್ನ ಕುಟುಂಬ ಯಾವುದೇ‌ ಮೀಸಲು ಅರಣ್ಯ ಒತ್ತುವರಿ‌ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಚಿವರ ವಿರುದ್ಧದ ದೂರು ಏನು?

ರಾಯಚೂರು ರಕ್ಷಿತಾರಾಣ್ಯದಲ್ಲಿ ಸಚಿವ ಬೋಸರಾಜು ಅವರು 5.27 ಎಕರೆ ಅರಣ್ಯ ಭುಮಿ‌ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ದಾಖಲಾಗಿದೆ. ರಾಯಚೂರು ಉಪವಲಯ ಅರಣ್ಯಾಧಿಕಾರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ. ಆ ವರದಿಯಂತೆ ಬೋಸರಾಜು ಅವರ ಪತ್ನಿ ಎನ್.ಎಸ್.ಕೃಷ್ಣವೇಣಿ, ಸಿ.ಎಚ್.ಶ್ರೀನಿವಾಸ್, ಮುತ್ಯಾಲ ತಿರುಮಲ ಹಾಗೂ ವಿ.ಶಿವನಾದ ಆರೋಪಿಗಳಾಗಿದ್ದಾರೆ.

ಅರಣ್ಯ ಭೂಮಿ‌ ಒತ್ತುವರಿಗಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಲ್ಲದೇ ಸೃಜನಪಕ್ಷಪಾತ ಎಸಗಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ .

ಪ್ರಸ್ತುತ ಒತ್ತುವರಿ ಭೂಮಿ ಪ್ರತಿ ಚದರ ಅಡಿಗೆ ಕನಿಷ್ಟ 4 ಸಾವಿರ ರೂ. ದಂತೆ ಮಾರುಕಟ್ಟೆ ದರ ಇದೆ. ಈಗ ಅದು ನೂರಾರು ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದೆ. ಅಧಿಕಾರ ದುರುಪಯೋಗ‌ ಮಾಡಿಕೊಂಡು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ಸಚಿವ ಬೋಸರಾಜು ಅವರ ವಿರುದ್ಧ ತನಿಖೆಗೆ ಅನುಮತಿ ನೀಡಬೇಕು. ಸಂಪುಟದಿಂದ ಕೈ ಬಿಡಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

ತೇಜೋವಧೆಯ ಹುನ್ನಾರ: ಸಚಿವ ಆರೋಪ

ಅರಣ್ಯ ಭೂಮಿ ಒತ್ತುವರಿ ಆರೋಪ‌ ತೇಜೋವಧೆ ಹುನ್ನಾರವಾಗಿದೆ ಎಂದು ಸಚಿವ ಎನ್.ಎಸ್.ಬೋಸರಾಜು ಆರೋಪಿಸಿದ್ದಾರೆ.

ನಾನು ಅಥವಾ ನನ್ನ ಕುಟುಂಬ ಮೀಸಲು ಅರಣ್ಯ ಒತ್ತುವರಿ ಮಾಡಿಕೊಂಡಿಲ್ಲ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಸಲ್ಲಿಸಿದ್ದ ಎಫ್‌.ಓ.ಸಿ ನಂ. 16/2022-23 ನೋಟೀಸನ್ನು 2023 ಏಪ್ರಿಲ್‌ 18 ರಲ್ಲಿ ಹೈಕೋರ್ಟ್ ಕಲಬುರ್ಗಿ ಪೀಠ ಪ್ರಕರಣ ರದ್ದು ಮಾಡಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ ಎಸ್‌ ಭೋಸರಾಜು ಸ್ಪಷ್ಟಪಡಿಸಿದ್ದಾರೆ.

ರಾಜ್ಯಪಾಲರಿಗೆ ದೂರು ನೀಡಿರುವ ಕುರಿತು ಮಾಧ್ಯಮ‌ ಪ್ರಕಟಣೆ ನೀಡಿರುವ ಅವರು, 1987 ರಲ್ಲಿ ನಾನು ಯಾವುದೇ ಹುದ್ದೆಯಲ್ಲಿ ಇರಲಿಲ್ಲ. ಕೃಷಿಗಾಗಿ ಅಂದಿನ ಕಾಲದಲ್ಲಿ ನನ್ನ ಕುಟುಂಬದಿಂದ ಭೂಮಿ ಖರೀದಿಸಲಾಗಿತ್ತು. ಆ ಸಂಧರ್ಭದಲ್ಲಿ ಕಂದಾಯ ದಾಖಲೆಗಳು, ಕ್ರಯಪತ್ರಗಳು ಹಾಗೂ ಇನ್ನಿತರೆ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಲಾಗಿತ್ತು. ಪರಿಶೀಲನೆ ನಂತರ ಮೂಲ ಜಮೀನಿನ ಮಾಲೀಕರಿಂದ ಭೂಮಿ ಖರೀದಿಸಲಾಗಿತ್ತು ಎಂದು ಹೇಳಿದ್ದಾರೆ.

ನಾನು ಮೊದಲ ಬಾರಿ ಶಾಸಕನಾಗಿದ್ದು 1999 ರಲ್ಲಿ. 1987 ರಲ್ಲಿ ಪ್ರಭಾವ ಬೀರಲು ಹೇಗೆ ಸಾಧ್ಯ ಎಂದು ಸಚಿವರು ಪ್ರಶ್ನಿಸಿದ್ದಾರೆ.

ಮೀಸಲು ಅರಣ್ಯ ಕ್ಲೇಮು ನೋಟಿಸ್ ರದ್ದು

ದೂರಿನಲ್ಲಿ ನೀಡಿರುವ ಸರ್ವೇ ನಂಬರ್‌ಗಳಷ್ಟೇ ಅಲ್ಲದೇ ಸುಮಾರು 1700 ಏಕರೆ ಭೂಮಿಯನ್ನು ಮೀಸಲು ಅರಣ್ಯ ಎಂದು ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ನಾವು ಖರೀದಿಸಿದ್ದ ಜಮೀನಿನ ಬಗ್ಗೆಯೂ ಅರಣ್ಯ ಅಧಿಕಾರಿಗಳು ಎಫ್‌.ಓ.ಸಿ ನಂ. 16/2022-23 ನೋಟೀಸ್‌ ನೀಡಿದ್ದರು. ಈ ನೋಟಿಸನ್ನು ಹೈಕೋರ್ಟ್ ಕಲಬುರ್ಗಿ ಪೀಠದಲ್ಲಿ ಪ್ರಶ್ನಿಸಲಾಗಿತ್ತು. ಸಿಆರ್‌ಎಲ್‌.ಪಿ. ನಂ. 201608/2022 ನಲ್ಲಿ ಅಡಿ ನಡೆದ ವಿಚಾರಣೆಯಲ್ಲಿ ಎಫ್‌.ಓ.ಸಿ ನಂ. 16/2022-23 ನೋಟೀಸ್‌ ನ್ಯಾಯಾಲಯ ರದ್ದು ಮಾಡಿದೆ ಎಂದಿದ್ದಾರೆ.

ಹೈಕೋರ್ಟ್ ರದ್ದುಗೊಳಿಸಿರುವ ಪ್ರಕರಣವನ್ನು ಪ್ರಸ್ತಾಪಿಸಿ ಈಗ ರಾಜ್ಯಪಾಲರಿಗೆ ದೂರು ನೀಡಿರುವ ಹಿಂದೆ ರಾಜಕೀಯ ಕುತಂತ್ರ ಸ್ಪಷ್ಟವಾಗಿ ಕಂಡುಬರುತ್ತಿದೆ. 1987 ರಲ್ಲಿ ಮೂಲ ಕ್ರಯಪತ್ರ, ಕಂದಾಯ ಇಲಾಖೆಯ ದಾಖಲಾತಿಗಳು ಹಾಗೂ ಪಟ್ಟ ದಾಖಲಾತಿಯ ಆಧಾರದ ಮೇಲೆ ಕೃಷಿ ಭೂಮಿಯನ್ನು ಖರೀದಿಸಲಾಗಿತ್ತು. ಈ ಬಗ್ಗೆ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ ಸಲ್ಲಿಸುವಲ್ಲಿ ಹಾಗೂ ಜನಪ್ರತಿನಿಧಿಯಾದ ನಂತರ ಲೋಕಾಯುಕ್ತಕ್ಕೆ ಸಲ್ಲಿಸುವ ಆಸ್ತಿ ದಾಖಲಾತಿಯಲ್ಲಿ ಪ್ರತಿವರ್ಷ ಪತ್ನಿಯ ಹೆಸರಿನಲ್ಲಿ ಇರುವ ಜಮೀನಿನ ಬಗ್ಗೆ ಮಾಹಿತಿ ನೀಡುತ್ತಾ ಬಂದಿದ್ದೇನೆ. ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಗಮನಿಸಿದಲ್ಲಿ ಯಾವುದೇ ತಪ್ಪಿಲ್ಲದೇ ಇದ್ದರೂ ನನ್ನ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ತೇಜೋವಧೆ ಮಾಡುವ ಪ್ರಯತ್ನ ಇದಾಗಿದೆ ಎಂದು ದೂರಿದ್ದಾರೆ.

ಇತ್ತೀಚೆಗೆ ಸಚಿವರುಗಳ ಮೇಲೆ ರಾಜ್ಯಪಾಲರಿಗೆ ದೂರು ನೀಡುವುದು ಒಂದು ಹವ್ಯಾಸವಾಗಿಬಿಟ್ಟಿದೆ. ಈ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸಚಿವರಾದ ಎನ್‌ ಎಸ್‌ ಬೋಸರಾಜು ಪ್ರತಿಕ್ರಿಯಿಸಿದ್ದಾರೆ.

Tags:    

Similar News