BACL | ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಶ್ವದರ್ಜೆಯ ಬಿಸಿನೆಸ್‌ ಪಾರ್ಕ್‌ ಆರಂಭಕ್ಕೆ ಚಿಂತನೆ

ರಾಜ್ಯ ಸರ್ಕಾರ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಮೂಲಕ (ಜಿಸಿಸಿ) ಸಿಲಿಕಾನ್‌ ಸಿಟಿ ಬೆಂಗಳೂರನ್ನು ಜಾಗತಿಕ ಕೇಂದ್ರವನ್ನಾಗಿಸುವ ಗುರಿ ಹೊಂದಿದೆ. ಇದರ ಭಾಗವಾಗಿಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಸಿನೆಸ್‌ ಪಾರ್ಕ್‌ ಆರಂಭಕ್ಕೆ ಬಿಎಸಿಎಲ್‌ ಮುಂದಡಿ ಇಟ್ಟಿದೆ.

Update: 2024-10-17 12:26 GMT

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿರುವ ಬೆಂಗಳೂರು ಏರ್‌ಪೋರ್ಟ್‌ ಸಿಟಿಯಲ್ಲಿ ವಿಶ್ವ ದರ್ಜೆಯ ಬಿಸಿನೆಸ್‌ ಪಾರ್ಕ್‌ ಆರಂಭಿಸಲು ಬೆಂಗಳೂರು ಏರ್‌ಪೋರ್ಟ್‌ ಸಿಟಿ ಲಿಮಿಟೆಡ್‌ (BACL) ಚಿಂತನೆ ನಡೆಸಿದೆ. ಉದ್ದೇಶಿತ ಯೋಜನೆಗಾಗಿ ವಿಮಾನ ನಿಲ್ದಾಣ 2 ದಶಲಕ್ಷ ಚದರ ಅಡಿ ವಿಸ್ತೀರ್ಣದ ಜಾಗವನ್ನು ಬಿಎಸಿಎಲ್‌ ತನ್ನ ಸ್ವಾಧೀನಕ್ಕೆ ಪಡೆದಿದೆ.

ರಾಜ್ಯ ಸರ್ಕಾರ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಮೂಲಕ (ಜಿಸಿಸಿ) ಸಿಲಿಕಾನ್‌ ಸಿಟಿ ಬೆಂಗಳೂರನ್ನು ಜಾಗತಿಕ ಕೇಂದ್ರವನ್ನಾಗಿಸುವ ಗುರಿ ಹೊಂದಿದೆ. ಇದರ ಭಾಗವಾಗಿಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಸಿನೆಸ್‌ ಪಾರ್ಕ್‌ ಆರಂಭಿಕ್ಕೆ ಮುಂದಡಿ ಇಟ್ಟಿದೆ. ಇದರಿಂದ ಒಟ್ಟು 3.5 ಲಕ್ಷ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕತೆಗೆ 50 ಶತಕೋಟಿ ಡಾಲರ್‌ ಕೊಡುಗೆ ನೀಡುವ ಗುರಿ ಹೊಂದಲಾಗಿದೆ.

ಏರ್‌ಪೋರ್ಟ್‌ ಸಿಟಿಯಲ್ಲಿ ಪ್ರಮುಖವಾಗಿ ಉದ್ಯಾನ, ವ್ಯಾಪಾರ, ಶಿಕ್ಷಣ, ಆರೋಗ್ಯ ಕೇಂದ್ರಗಳು, ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಕೇಂದ್ರಗಳು, ವಿವಿಧ ಮನರಂಜನಾ ಹಾಗೂ ಆತಿಥ್ಯ ತಾಣಗಳು ತಲೆಯೆತ್ತಲಿವೆ. ಈ ನಗರವನ್ನು ಸುಸ್ಥಿರ, ಆಕರ್ಷಕ ಹಾಗೂ ಮಿಶ್ರ ಬಳಕೆಯ ತಾಣವಾಗಿ ರೂಪಿಸಲು ನಿರ್ಧರಿಲಾಗಿದೆ.

17.7 ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವ ಬಿಸಿನೆಸ್ ಪಾರ್ಕ್, ನಾಲ್ಕು ಬ್ಲಾಕ್‌ಗಳನ್ನು ಒಳಗೊಳ್ಳಲಿದೆ. ಪ್ರತಿ ಬ್ಲಾಕ್‌ 0.5 ಮಿಲಿಯನ್ ಚದರ ಅಡಿಯ ನಗರ ಅರಣ್ಯವಾಗಿ ಮೂಡಿಬರಲಿದೆ. ಬಯೋಫಿಲಿಕ್ ವಿನ್ಯಾಸವು ಉದ್ಯಾನಗಳು, ಬಾಲ್ಕನಿಗಳು ಮತ್ತು ಹಸಿರಿನಿಂದ ಕೂಡಿರುವ ಸ್ಥಳಗಳನ್ನು ಹೊಂದಿರಲಿದೆ. ಈ ಮೂಲಕ ವ್ಯಾಪಾರ ವಹಿವಾಟನ್ನು ಇನ್ನಷ್ಟು ಆಸಕ್ತಿದಾಯಗೊಳಿಸುವ ಉದ್ದೇಶವಿದೆ ಎಂದು ಬಿಎಸಿಎಲ್‌ ತಿಳಿಸಿದೆ.

ಬಿಎಸಿಎಲ್‌ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ರಾವ್ ಮುನುಕುಟ್ಲ ಅವರು ಮಾತನಾಡಿ, ಬೆಂಗಳೂರು ವಿಶ್ವದ ಜಿಸಿಸಿ(ಜಾಗತಿಕ ಸಾಮರ್ಥ್ಯ ಕೇಂದ್ರ) ರಾಜಧಾನಿಯಾಗಿ ಬೆಳೆಯುತ್ತಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಾಹನ ಮತ್ತು ಏರೋಸ್ಪೇಸ್‌ ಕ್ಷೇತ್ರದಲ್ಲಿ ಶೇ 36ರಷ್ಟು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (GCCs) ಕೊಡುಗೆ ನೀಡುತ್ತಿದೆ. ಬೆಂಗಳೂರು ಏರ್‌ಪೋರ್ಟ್ ಸಿಟಿಯಲ್ಲಿ 2 ಮಿಲಿಯನ್ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಬಿಸಿನೆಸ್ ಪಾರ್ಕ್ ಸಾಕಷ್ಟು ನೆಟ್‌ವರ್ಕಿಂಗ್ ಅವಕಾಶ, ಸುಧಾರಿತ ಮೂಲಸೌಕರ್ಯ ಹಾಗೂ ಉನ್ನತ ದರ್ಜೆಯ ಸೌಕರ್ಯಗಳೊಂದಿಗೆ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯದ ಪ್ರಸ್ತುತ ಜಿಸಿಸಿ ನೀತಿಯೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ಮೂಲಕ, ಬೆಂಗಳೂರನ್ನು ಅಂತಾರಾಷ್ಟ್ರೀಯ ವ್ಯವಹಾರಗಳ ಕೇಂದ್ರಬಿಂದುವನ್ನಾಗಿ ಮಾಡಲಾಗುವುದು. ಏರ್‌ಪೋರ್ಟ್‌ ಸಿಟಿಯ ಒಟ್ಟಾರೆ ಅಭಿವೃದ್ಧಿಯ ಶೇ.52 ರಷ್ಟು ಭಾಗವು ವ್ಯಾಪಾರ, ಉದ್ಯಾನಗಳ (ಬಿಸಿನೆಸ್ ಪಾರ್ಕ್) ಜಾಲವಾಗಿರಲಿದೆ ಎಂದು ತಿಳಿಸಿದರು.

ನಿರ್ಮಾಣ ಹಂತದ ಏರ್‌ಪೋರ್ಟ್ ವೆಸ್ಟ್ ಮೆಟ್ರೋ ನಿಲ್ದಾಣವು ಬಿಸಿನೆಸ್ ಪಾರ್ಕ್‌ ಸಮೀಪದಲ್ಲಿದೆ. ಇದರಿಂದ ಉದ್ಯೋಗಿಗಳು, ಸಂದರ್ಶಕರಿಗೆ ವೇಗ ಮತ್ತು ಪರಿಸರ ಸ್ನೇಹಿ ಪ್ರಯಾಣ ಒದಗಿಸಲಿದೆ. ಬೆಂಗಳೂರು ವಿಮಾನ ನಿಲ್ದಾಣ ನಗರವು ಸುಧಾರಿತ ತಂತ್ರಜ್ಞಾನ ಕೇಂದ್ರ ರೂಪಿಸುತ್ತಿದ್ದು, ಇದರಲ್ಲಿ 3D ಮುದ್ರಣ ಸಂಸ್ಥೆ ಮತ್ತು ಹೈಟೆಕ್ ಕೇಂದ್ರ ಪಾಕಶಾಲೆಗಳು ಸೇರಿ ಹಲವು ನಾವಿನ್ಯತೆಯ ಕೇಂದ್ರಗಳೂ ಇರಲಿವೆ ಎಂದರು.

ವಿಮಾನ ನಿಲ್ದಾಣ ಪರಿಸರ ವ್ಯವಸ್ಥೆಯಲ್ಲಿ ದೇಶದ ಪ್ರಪ್ರಥಮ ಕನ್ಸರ್ಟ್ ಅರೆನಾ, ಸಮಾವೇಶ ಮತ್ತು ಪ್ರದರ್ಶನ ಕೇಂದ್ರಗಳನ್ನು ಒಳಗೊಳ್ಳಲಿದೆ. ಈಗಾಗಲೇ ಏರ್‌ಪೋರ್ಟ್‌ ಆವರಣದ ಹೋಟೆಲ್‌ ತಾಜ್ ಬೆಂಗಳೂರು ಮತ್ತು ಪ್ರಸ್ತುತ ನಿರ್ಮಾಣ ಹಂತದಲ್ಲಿರುವ 775 ಕೊಠಡಿಗಳ ಕಾಂಬೋ ಹೋಟೆಲ್ (ವಿವಾಂಟಾ & ಜಿಂಜರ್) ಸೇರಿದಂತೆ ಏರ್‌ಪೋರ್ಟ್ ಸಿಟಿಯೊಳಗೆ 5,200 ಹೋಟೆಲ್ ಕೊಠಡಿಗಳನ್ನು ಒಳಗೊಂಡ ಕಟ್ಟಡಗಳಿ ಬರಲಿವೆ.

ಏರ್‌ಪೋರ್ಟ್ ಸಿಟಿಯು ಅದ್ಭುತ ವಿನ್ಯಾಸದಿಂದ ರೂಪುಗೊಳ್ಳುತ್ತಿದ್ದು, ಇಡೀ ಆವರಣ ತಟಸ್ಥವಾಗಿ ಕಾರ್ಯನಿರ್ವಹಿಸಿ, ನವೀಕರಿಸಬಹುದಾದ ಸಂಪನ್ಮೂಲಗಳಿಂದ ನಿರ್ಮಾಣಗೊಳ್ಳುತ್ತಿದೆ. ಐಜಿಬಿಸಿ ಗ್ರೀನ್ ಸಿಟೀಸ್ ಪ್ಲಾಟಿನಂ ಪ್ರಮಾಣೀಕರಣ ಗಳಿಸಿದೆ. ಅಷ್ಟೇ ಅಲ್ಲದೆ, ಬೃಹತ್‌ ಪ್ರಮಾಣದಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲಾಗುತ್ತಿದ್ದು , ಇದರಿಂದ ಏರ್‌ಪೋರ್ಟ್‌ ಸಿಟಿಯ ನೀರಿನ ಅಗತ್ಯಗಳನ್ನು ಪೂರೈಸಲಿದೆ. ಈ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯ ಪರಿಸರ ಸ್ನೇಹಿ, ಸುಸ್ಥಿರ ಅಭಿವೃದ್ಧಿ ಮಾರ್ಗದರ್ಶನದ ಜವಾಬ್ದಾರಿ ಹಾಗೂ ನಿರ್ವಹಣೆಯ ಧ್ಯೇಯದೊಂದಿಗೆ ಹೊಂದಿಸಲಾಗಿದೆ ಎಂದು ರಾವ್‌ ತಿಳಿಸಿದರು.

ಇನ್ನು ಏರ್‌ಪೋರ್ಟ್‌ ಸಿಟಿಯು ನಿರೀಕ್ಷಿತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಬೃಹತ್‌ ಪ್ರಮಾಣದಲ್ಲಿ ವಿಸ್ತರಿಸಲಿದೆ. ಇದಕ್ಕಾಗಿ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಆಕರ್ಷಿಸುತ್ತಿದ್ದು, ಇದು ರಾಜ್ಯದ ಶೈಕ್ಷಣಿಕ ಮತ್ತು ಆರೋಗ್ಯ ಮೂಲಸೌಕರ್ಯ ಉನ್ನತೀಕರಿಸಲು ಲೈಫ್ ಸೈನ್ಸಸ್ ಪಾರ್ಕ್ ಸ್ಥಾಪಿಸುತ್ತಿದೆ. BIAL ಅಕಾಡೆಮಿ ಮತ್ತು ಏರ್ ಇಂಡಿಯಾ ಅಕಾಡೆಮಿಯಂತಹ ಸಂಸ್ಥೆಗಳು ಮುಂದಿನ ಪೀಳಿಗೆಯ ವಾಯುಯಾನ ಮತ್ತು ವೃತ್ತಿಪರರಿಗೆ ತರಬೇತಿ ನೀಡಲಿವೆ.

ಬೆಂಗಳೂರು ಏರ್‌ಪೋರ್ಟ್‌ ಸಿಟಿಯು ಸುಸ್ಥಿರ, ನವೀನ ಮತ್ತು ಸಂಪರ್ಕಿತ ನಗರಾಭಿವೃದ್ಧಿಯನ್ನು ಸಾಕಾರಗೊಳಿಸುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತಿ ವೇಗವಾಗಿ ಬೆಳೆಯುತ್ತಿರುವ ನಿಲ್ದಾಣ. ಕಳೆದ ವರ್ಷ 37.5 ದಶಲಕ್ಷ ಜನರನ್ನು ನಿರ್ವಹಿಸಿದೆ. 2030 ರ ವೇಳೆಗೆ ತನ್ನ ಸಾಮರ್ಥ್ಯವನ್ನು 90 ದಶಲಕ್ಷ ಪ್ರಯಾಣಿಕರಿಗೆ ವಿಸ್ತರಿಸಲು ಯೋಜಿಸಲಾಗಿದೆ. ಏರೋಸ್ಪೇಸ್ ವಲಯದಲ್ಲಿ ಏರ್‌ಬಸ್ ಮತ್ತು ಬೋಯಿಂಗ್‌ನಂತಹ ಉದ್ಯಮದ ದೈತ್ಯರು ನಗರದ ನುರಿತ ಉದ್ಯೋಗಿಗಳಿಂದ ಲಾಭ ಪಡೆಯಲಿದ್ದಾರೆ ಎಂಬುದು ಬಿಎಸಿಎಲ್‌ ಅಧಿಕಾರಿಗಳ ಮಾತಾಗಿದೆ.

Tags:    

Similar News