ಸ್ನೇಹಿತನ ಮನೆಗೆ ಹೋಗಿದ್ದ ಮಹಿಳೆ ಮೇಲೆ ಸಾಮಾಹಿಕ ಅತ್ಯಾಚಾರ

ಅತ್ಯಾಚಾರದ ಬಳಿಕ ಆರೋಪಿಗಳು ಯುವತಿಯ ಬ್ಯಾಂಕ್ ಖಾತೆಯಿಂದ ತಮ್ಮ ಬೆಟ್ಟಿಂಗ್ ಆ್ಯಪ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.;

Update: 2025-07-09 11:28 GMT

ಸಾಂದರ್ಭಿಕ ಚಿತ್ರ 

ಸ್ನೇಹಿತನ ಮನೆಗೆಂದು ಹೋಗಿದ್ದ ಯುವತಿಯ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರ ಎಸಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡನಾಗಮಂಗಲದ ಸಾಯಿ ಲೇಔಟ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ

ದೊಡ್ಡನಾಗಮಂಗಲ ಸಾಯಿ ಲೇಔಟ್‌ನಲ್ಲಿ ವಾಸವಾಗಿದ್ದ ಯುವತಿ ತಮ್ಮ ಸ್ನೇಹಿತನ ಮನೆಗೆ ಭೇಟಿ ನೀಡಿದ್ದಳು. ಈ ವೇಳೆ ಇಬ್ಬರು ಅಪರಿಚಿತರು ಅನಧಿಕೃತವಾಗಿ ಪ್ರವೇಶಿಸಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿ, ಅತ್ಯಾಚಾರವೆಸಗಿದ್ದಾರೆ ಎಂದು ವರದಿಯಾಗಿದೆ.

ಅತ್ಯಾಚಾರದ ಬಳಿಕ ಆರೋಪಿಗಳು ಯುವತಿಯ ಬ್ಯಾಂಕ್ ಖಾತೆಯಿಂದ ಬೆಟ್ಟಿಂಗ್ ಆ್ಯಪ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಜತೆಗೆ ಆರೋಪಿಗಳು ಯುವತಿಯ ಮತ್ತು ಆಕೆಯ ಸ್ನೇಹಿತನ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ, ಮನೆಯಲ್ಲಿದ್ದ ಫ್ರಿಡ್ಜ್ ಮತ್ತು ವಾಶಿಂಗ್ ಮೆಷಿನ್‌ನಂತಹ ಗೃಹೋಪಯೋಗಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ ಪೊಲೀಸರು, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ನಡೆಸಿದ್ದಾರೆ. ಇದರ ಆಧಾರದ ಮೇಲೆ ಮೂವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Tags:    

Similar News