ಬಿಜೆಪಿಯಲ್ಲಿ ಮತ್ತೆ ಭಿನ್ನಮತ: ವಕ್ಫ್ ವಿಚಾರದಲ್ಲಿ ಹೋರಾಟ; ವಿಜಯೇಂದ್ರ , ಯತ್ನಾಳ್ ಬಣಗಳ ಪ್ರತ್ಯೇಕ ಹೋರಾಟ
ವಕ್ಫ್ ಆಸ್ತಿ ವಿರುದ್ಧ ನ. 25 ರಿಂದ ಡಿ. 25ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಜನಜಾಗೃತಿ ನಡೆಸಲು ಬಸನಗೌಡ ಪಾಟೀಲ ಯತ್ನಾಳ್ ಬಣ ನಿರ್ಧರಿಸಿದರೆ, ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಎರಡು ಹಂತದಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.;
ವಕ್ಫ್ ಮಂಡಳಿ ವಿರುದ್ಧ ಬಿಜೆಪಿ ತನ್ನ ಹೋರಾಟ ತೀವ್ರಗೊಳಿಸಿದೆ. ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಾರಥ್ಯದಲ್ಲಿ ವಕ್ಫ್ ಬೋರ್ಡ್ ಹಾಗೂ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಈ ಮಧ್ಯೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ರಮೇಶ್ ಜಾರಕಿಹೊಳಿ ನೇತೃತ್ವದ ಬಣ ವಕ್ಫ್ ವಿರುದ್ಧ ಪ್ರತ್ಯೇಕ ಜನಜಾಗೃತಿ ಅಭಿಯಾನ ನಡೆಸಲು ಉದ್ದೇಶಿಸಿರುವುದು ಪಕ್ಷದ ನಾಯಕರ ನಡುವಿನ ಭಿನ್ನಮತ ಮುಂದುವರಿದಿರುವುದಕ್ಕೆ ಸಾಕ್ಷಿಯಾಗಿದೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ನಡೆಸಿದ ಮೈಸೂರುವರೆಗಿನ ಪಾದಯಾತ್ರೆಗೆ ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ ಬಣ ನೇರವಾಗಿಯೇ ವಿರೋಧ ವ್ಯಕ್ತಪಡಿಸಿತ್ತು. ಪಾದಯಾತ್ರೆಯಲ್ಲೂ ಭಾಗವಹಿಸಿರಲಿಲ್ಲ. ಈಗ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಾರಥ್ಯಕ್ಕೆ ಸೆಡ್ಡು ಹೊಡೆಯುವಂತೆ ಜನಜಾಗೃತಿ ಅಭಿಯಾನಕ್ಕೆ ತೀರ್ಮಾನಿಸಿರುವುದು ಕುತೂಹಲ ಕೆರಳಿಸಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಹಾಗೂ ಕುಮಾರ್ ಬಂಗಾರಪ್ಪ ಅವರು ನ. 25 ರಿಂದ ಒಂದು ತಿಂಗಳ ಕಾಲ ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನ ನಡೆಸುವುದಾಗಿ ಘೋಷಿಸಿದ್ದಾರೆ. ಅಲ್ಲದೇ ವಕ್ಫ್‌ನಿಂದ ಸಮಸ್ಯೆಗೊಳಗಾದವರಿಗಾಗಿ ಸಹಾಯವಾಣಿ ಆರಂಭಿಸಿದ್ದಾರೆ.
ಅಭಿಯಾನದ ಕುರಿತು ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಸಮರ್ಪಕ ಉತ್ತರ ಕೊಡದೇ, ಇದು ರೈತರ ಪರವಾದ ಹೋರಾಟ. ಎಲ್ಲರೂ ಭಾಗವಹಿಸುತ್ತಾರೆ ಎಂದಷ್ಟೇ ಹೇಳಿದ್ದು ಕೂಡ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳಿಗೆ ಪುಷ್ಠಿ ನೀಡಿದೆ.
ಯಾರೇ ಹೋರಾಟ ಮಾಡಿದರೂ ಬೆಂಬಲ
ಇನ್ನು ಬಸನಗೌಡ ಪಾಟೀಲ, ರಮೇಶಜಾರಕಿಹೊಳಿ ಬಣದ ಜನಜಾಗೃತಿ ಅಭಿಯಾನ ಕುರಿತಂತೆ ಬೆಂಗಳೂರಿನಲ್ಲಿ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ವಕ್ಫ್ ಹಾಗೂ ರೈತರ ವಿಚಾರವಾಗಿ ಯಾರೇ ಹೋರಾಟ ಮಾಡಿದರೂ ಬಿಜೆಪಿ ಬೆಂಬಲ ಇರಲಿದೆ. ಶಾಸಕ ಬಸನಗೌಡ ಯತ್ನಾಳ್ ಅವರು ನಮ್ಮ ಪಕ್ಷದವರೇ ಎಂದು ಹೇಳಿದ್ದಾರೆ.
ಒಂದು ವಾರದಿಂದ ವಕ್ಫ್ ನೋಟಿಸ್ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಎರಡು ಹಂತದಲ್ಲಿ ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದೆ. ಬೆಳಗಾವಿ ಅಧಿವೇಶನ ಆರಂಭದ ದಿನ ಅಲ್ಲಿನ ರೈತರೊಂದಿಗೆ ಹೋರಾಟ ನಡೆಸುತ್ತೇವೆ. 2ನೇ ಹಂತದ ಹೋರಾಟಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ. ರೈತರ ಪರವಾಗಿ ಯಾರು ಬೇಕಾದರೂ ಹೋರಾಟ ಮಾಡಬಹುದು. ಅದಕ್ಕೆ ಯಾವುದೇ ಮುಜುಗರವೂ ಇಲ್ಲ, ತಕರಾರೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಹಾಯವಾಣಿ ಆರಂಭ
ವಕ್ಫ್ ಬೋರ್ಡ್‌ನಿಂದ ಸಮಸ್ಯೆಗೆ ಒಳಗಾದ ರೈತರು ಹಾಗೂ ಸರ್ವಾಜನಿಕರಿಗಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಬಣ ಸಹಾಯವಾಣಿ 9035675734 ಆರಂಭಿಸಿದೆ. ಸಮಸ್ಯೆ ಎದುರಿಸುತ್ತಿರುವವರು ವಾಟ್ಸಾಪ್ ಮೂಲಕ ದೂರು ನೀಡಬಹುದು. ಇಲ್ಲವೇ ಪಕ್ಷದ ನಾಯಕರನ್ನು ಖುದ್ದು ಭೇಟಿ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
1954 ರಿಂದ ಪ್ರಕಟಿಸಿರುವ ವಕ್ಪ್ ಸಂಬಂಧಿತ ಗೆಜೆಟ್ ಅಧಿಸೂಚನೆ ರದ್ದು ಮಾಡಬೇಕು. ರೈತರ ಭೂಮಿ, ದೇವಸ್ಥಾನ ಒಳಗೊಂಡು ವಕ್ಫ್ ಸ್ವಾಧೀನಕ್ಕೆ ಪ್ರಯತ್ನಿಸುತ್ತಿರುವ ಜಾಗಗಳನ್ನು ಶಾಶ್ವತವಾಗಿ ಬಿಟ್ಟು ಕೊಡಬೇಕು. ಅನ್ವರ್ ಮಾಣಿಪ್ಪಾಡಿ ವರದಿಯನ್ನು ಜಾರಿಗೆ ತರಬೇಕು ಎಂಬುದು ಜನಜಾಗೃತಿ ಅಭಿಯಾನದ ಮುಖ್ಯ ಒತ್ತಾಯವಾಗಿದೆ ಎಂದು ತಿಳಿಸಿದರು.
ಈ ಹಿಂದೆ ವಾಲ್ಮೀಕಿ ನಿಗಮ ಹಗರಣ ಸಂಬಂಧ ವಿಜಯೇಂದ್ರ ಬಣ ಪ್ರತಿಭಟನೆ ನಡೆಸುತ್ತಿದ್ದಾಗ, ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟಿಲ ಯತ್ನಾಳ ಬಣ ಪ್ರತ್ಯೇಕವಾಗಿ ಬಳ್ಳಾರಿ ಚಲೋ ಪಾದಯಾತ್ರೆಯನ್ನು ಘೋಷಿಸಿತ್ತು. ಈಗ ವಕ್ಫ್ ವಿವಾದಕ್ಕೆ ಸಂಬಂಧಿಸಿ ಬಿಜೆಪಿ ಉಭಯಬಣಗಳ ಪ್ರತ್ಯೇಕ ಪ್ರತಿಭಟನೆಗಳು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಮತ್ತೆ ಸಾಬೀತುಗೊಳಿಸಿದೆ.