ಯಲ್ಲಾಪುರದಲ್ಲಿ ಘೋರ ದುರಂತ: ಅಂಗನವಾಡಿಯಿಂದ ಮರಳುತ್ತಿದ್ದ ಗರ್ಭಿಣಿ ಮೇಲೆ ಉರುಳಿದ ಆಲದ ಮರ, ಸ್ಥಳದಲ್ಲೇ ಸಾವು

ಅಂಗನವಾಡಿಯಿಂದ ಮಕ್ಕಳೊಂದಿಗೆ ಮನೆಗೆ ವಾಪಸಾಗುತ್ತಿದ್ದಾಗ ರಸ್ತೆಬದಿಯಲ್ಲಿದ್ದ ಬೃಹತ್ ಆಲದ ಮರ ಏಕಾಏಕಿ ಅವರ ಮೇಲೆ ಕುಸಿದುಬಿದ್ದಿದೆ. ಇದರ ಪರಿಣಾಮವಾಗಿ ಸಾವಿತ್ರಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.;

Update: 2025-09-09 04:25 GMT

ಆಲದ ಮರ ಉರುಳಿಬಿದ್ದ ಪರಿಣಾಮ ಗರ್ಭಿಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

Click the Play button to listen to article

ಅಂಗನವಾಡಿ ಕೆಲಸ ಮುಗಿಸಿ ಮನೆಗೆ ಹೆಜ್ಜೆ ಹಾಕುತ್ತಿದ್ದ ಐದು ತಿಂಗಳ ಗರ್ಭಿಣಿಯ ಮೇಲೆ ಹಳೆಯ ಆಲದ ಮರವೊಂದು ಉರುಳಿಬಿದ್ದ ಪರಿಣಾಮ, ಅವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಡೊಮಗೇರಿ-ಕಿರವತ್ತಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಡೊಮಗೇರಿ-ಕಿರವತ್ತಿ ನಿವಾಸಿ ಸಾವಿತ್ರಿ ಬಾಬು ಖರಾತ್ (28) ಮೃತಪಟ್ಟ ದುರ್ದೈವಿ. ಅಂಗನವಾಡಿಯಿಂದ ಮಕ್ಕಳೊಂದಿಗೆ ಮನೆಗೆ ವಾಪಸಾಗುತ್ತಿದ್ದಾಗ ರಸ್ತೆಬದಿಯಲ್ಲಿದ್ದ ಬೃಹತ್ ಆಲದ ಮರ ಏಕಾಏಕಿ ಅವರ ಮೇಲೆ ಕುಸಿದುಬಿದ್ದಿದೆ. ಇದರ ಪರಿಣಾಮವಾಗಿ ಸಾವಿತ್ರಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ನಾಲ್ವರು ಮಕ್ಕಳಿಗೆ ಗಂಭೀರ ಗಾಯ

ಈ ಘಟನೆಯಲ್ಲಿ ಸಾವಿತ್ರಿ ಅವರೊಂದಿಗಿದ್ದ ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಾತಿ ಬಾಬು ಖರಾತ್ (17), ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2) ಮತ್ತು ಶಾಂಭವಿ ಬಾಬು ಖರಾತ್ (4) ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ದುರಂತದ ಸಮಯದಲ್ಲಿ ಜತೆಯಲ್ಲಿದ್ದ ಇನ್ನೂ ಮೂವರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸ್ ಠಾಣೆಯ ಪಿಐ ರಮೇಶ್ ಹಾನಾಪುರ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:    

Similar News