ʻಕಾಂತಾರ: ಚಾಪ್ಟರ್ 1’ಕ್ಕೆ ಸಾವಿನ ಆಘಾತ; ರಾಕೇಶ್ ಪೂಜಾರಿಗೆ ಏನಾಗಿತ್ತು?
ಭಾನುವಾರ ಬೆಳಿಗ್ಗೆ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿರುವುದು ಚಿತ್ರತಂಡಕ್ಕೆ ಆಘಾತ ತಂದಿದೆ.;
ಕಾಂತಾರ ಸಿನಿಮಾಗೆ ಸಂಕಷ್ಟಗಳು ಎದುರಾಗುತ್ತಲೇ ಇವೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ʻಕಾಂತಾರ: ಚಾಪ್ಟರ್ 1’ ಸಿನಿಮಾಗೆ ಆಘಾತಗಳು ಎದುರಾಗುತ್ತಲೇ ಇವೆ.
‘ಕಾಂತಾರ’ ಚಿತ್ರತಂಡ ಸಾಗುತ್ತಿದ್ದ ಬಸ್ ಕೊಲ್ಲೂರಿನಲ್ಲಿ ಅಪಘಾತಕ್ಕೀಡಾಗಿದ್ದ ಘಟನೆ ಬೆನ್ನಲ್ಲೇ ಚಿತ್ರದಲ್ಲಿ ಅಭಿನಯಿಸುತ್ತಿದ್ದ ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯನಟ ರಾಕೇಶ್ ಪೂಜಾರಿ ಸೋಮವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಹಿಂದೆ ‘ಕಾಂತಾರ’ ಸಿನಿಮಾದ ಕಿರಿಯ ಕಲಾವಿದ ಕಪಿಲ್ ಎಂಬುವರು ಕೊಲ್ಲೂರು ಬಳಿಯ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿ ನೀರುಪಾಲಾಗಿದ್ದರು. ಈಗ ಶೂಟಿಂಗ್‌ನಲ್ಲಿ ಭಾಗವಹಿಸಿ ಉಡುಪಿಯಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟಿರುವುದು ಚಿತ್ರತಂಡಕ್ಕೆ ಆಘಾತ ತಂದಿದೆ.
‘ಕಾಮಿಡಿ ಕಿಲಾಡಿಗಳು ಸೀಸನ್ 3’ ರ ವಿನ್ನರ್ ಹಾಗೂ ತಮ್ಮ ಹಾಸ್ಯದಿಂದಲೇ ರಾಕೇಶ್ ಪೂಜಾರಿ ಕರ್ನಾಟಕದ ಮನೆ ಮಾತಾಗಿದ್ದರು. ರಾಕೇಶ್ ಹಲವು ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಹಾಸ್ಯದ ಹೊನಲು ಹರಿಸಿದ್ದರು. ‘ಹಿಟ್ಲರ್ ಕಲ್ಯಾಣ’ ಧಾರವಾಹಿಯಲ್ಲೂ ನಟಿಸಿದ್ದರು.
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಾಕೇಶ್ ಪೂಜಾರಿಗೆ ಒಳ್ಳೆಯ ಪಾತ್ರ ಅರಸಿ ಬಂದಿತ್ತು. ಈ ಚಿತ್ರದಿಂದ ತಮ್ಮ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಗಬಹುದು ಎಂಬ ಆಸೆ ಅವರಲ್ಲಿತ್ತು. ಆದರೆ ವಿಧಿ ರಾಕೇಶ್ ಬದುಕಿನಲ್ಲೇ ಬೇರೆಯದ್ದೇ ಆಟವಾಡಿದೆ ಎಂಬುದು ಹಲವರಿಗೆ ನೋವು ತಂದಿದೆ.
ಕಂಬನಿ ಮಿಡಿದ ನಟಿ ರಕ್ಷಿತಾ
ರಾಕೇಶ್ ಪೂಜಾರಿ ನಿಧನಕ್ಕೆ ರಕ್ಷಿತಾ ಪ್ರೇಮ್ ಕಂಬನಿ ಮಿಡಿದಿದ್ದಾರೆ. ‘ರಾಕೇಶ್ ಬಳಿ ಇನ್ಯಾವಾಗಲೂ ಮಾತನಾಡಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ಹತ್ತಿರವಾದ ಶೋ. ಈ ಶೋನ ಸ್ಪರ್ಧಿ ರಾಕೇಶ್ ಒಳ್ಳೆಯ ವ್ಯಕ್ತಿ. ರಾಕೇಶ್ ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ. ನಿಮ್ಮನ್ನು ಹಾಗೂ ನಿಮ್ಮ ನಗುವನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ರಾಕೇಶ್ ಅವರು ‘ಕಾಮಿಡಿ ಕಿಲಾಡಿಗಳು ಸೀಸನ್ 3’ರ ವಿನ್ನರ್ ಆಗಿದ್ದರು. ನಟಿ ರಕ್ಷಿತಾ ಪ್ರೇಮ್ ಶೋನ ತೀರ್ಪುಗಾರರಾಗಿದ್ದರು. ಹೀಗಾಗಿ, ರಾಕೇಶ್ ಅವರೊಂದಿಗೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು.
34 ವರ್ಷದ ರಾಕೇಶ್ ಪೂಜಾರಿ ಕಡಿಮೆ ರಕ್ತದೊತ್ತಡದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಮೇ 12ರ ಬೆಳಿಗ್ಗೆ 1.30 ರ ಸುಮಾರಿಗೆ ರಾಕೇಶ್ ಮೃತಪಟ್ಟರು ಎಂದು ಅವರ ಆಪ್ತರು ತಿಳಿಸಿದ್ದಾರೆ.
ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಕೇಶ್ ಸುಸ್ತು ಎಂದು ಹೇಳಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.