Namma Metro| ಬೆಂಗಳೂರು- ತಮಿಳುನಾಡು ಸಂಪರ್ಕದ ಮೊದಲ ಅಂತಾರಾಜ್ಯ ಮೆಟ್ರೋ ಯೋಜನೆಗೆ ಎಳ್ಳು ನೀರು!
ಕರ್ನಾಟಕ -ತಮಿಳುನಾಡು ರಾಜ್ಯಗಳ ಮೆಟ್ರೋ ಜಾಲದ ವಿದ್ಯುತ್ ವ್ಯವಸ್ಥೆಯಲ್ಲಿನ ವ್ಯತ್ಯಾಸದಿಂದಾಗಿ ಸಮಸ್ಯೆ ಉದ್ಭವಿಸಿದೆ. ಹೀಗಾಗಿ ಬೊಮ್ಮಸಂದ್ರ-ಹೊಸೂರು ನಡುವೆ ಮೆಟ್ರೋವನ್ನು ಒಂದುಗೂಡಿಸಲು ಕಷ್ಟಕರವಾಗಿದೆ.
ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಮಾರ್ಗದ ಮೂಲಕ ಬೆಂಗಳೂರು - ಹೊಸೂರು ಯೋಜನೆಗೆ ಎಳ್ಳು ನೀರು ಬಿಡಲಾಗಿದೆ. ತಾಂತ್ರಿಕವಾಗಿ ಕಾರ್ಯ ಸಾಧುವಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿ. (ಬಿಎಂಆರ್‌ಸಿಎಲ್) ಸ್ಪಷ್ಟಪಡಿಸಿರುವ ಕಾರಣ ಯೋಜನೆಗೆ ಇತಿಶ್ರೀ ಹಾಡಲಾಗಿದೆ.
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮೆಟ್ರೋ ಜಾಲಗಳು ಬಳಸುವ ವಿದ್ಯುತ್ ವ್ಯವಸ್ಥೆಗಳಲ್ಲಿನ ವ್ಯತ್ಯಾಸಗಳಿಂದಾಗಿ ಯೋಜನೆ ಜಾರಿಗೆ ಅನುಕೂಲ ವಾತಾರವಣ ಇಲ್ಲದಾಗಿದೆ. ಹೀಗಾಗಿ ಬೆಂಗಳೂರು ಮತ್ತು ತಮಿಳುನಾಡು ಗಡಿಯ ಹೊಸೂರುವರೆಗಿನ ಮೆಟ್ರೋ ಮಾರ್ಗ ರಚನೆ ಕಷ್ಟಕರವಾಗಿದೆ.
ಬೆಂಗಳೂರು-ಹೊಸೂರು ಮೆಟ್ರೋ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿತ್ತು. ಇದಕ್ಕೆ ಕನ್ನಡ ಪರ ಹೋರಾಟಗಾರರಿಂದ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಈ ನಡುವೆ, ಬಿಎಂಆರ್‌ಸಿಎಲ್ ಅಧ್ಯಯನ ನಡೆಸಿ ʼನಮ್ಮ ಮೆಟ್ರೋʼವನ್ನು ತಮಿಳುನಾಡಿನ ಹೊಸೂರಿಗೆ ವಿಸ್ತರಣೆ ಮಾಡುವ ಯೋಜನೆಯು ತಾಂತ್ರಿಕವಾಗಿ ಕಾರ್ಯಸಾಧುವಲ್ಲ ಎಂಬ ವರದಿಯನ್ನು ನೀಡಿದೆ. ಹೀಗಾಗಿ ಯೋಜನೆಯನ್ನು ಕೈಬಿಡಲಾಗಿದೆ. ತಮಿಳುನಾಡು ಮೆಟ್ರೋ ಸಹ ಈ ಬಗ್ಗೆ ಅಧ್ಯಯನ ನಡೆಸಿದ್ದು, ಆ ಸಂಸ್ಥೆಯು ತಾಂತ್ರಿಕ ಕಾರಣ ನೀಡಿ ಯೋಜನೆ ಪ್ರಸ್ತಾವ ಕಾರ್ಯಸಾಧುವಲ್ಲ ಎಂದು ಹೇಳಿದೆ.
ನಮ್ಮ ಮೆಟ್ರೋ ಮತ್ತು ಚೆನ್ನೈ ಮೆಟ್ರೋ: ತಂತ್ರಜ್ಞಾನದಲ್ಲಿ ವ್ಯತ್ಯಾಸ
ರಾಜ್ಯದ ನಮ್ಮ ಮೆಟ್ರೋ ಮತ್ತು ಚೆನ್ನೈ ಮೆಟ್ರೋ ರೈಲು ವ್ಯವಸ್ಥೆಗಳು ವಿಭಿನ್ನ ವಿದ್ಯುತ್ ಶಕ್ತಿ ಚಾಲಿತ ತಾಂತ್ರಿಕತೆಯನ್ನು ಬಳಕೆ ಮಾಡುತ್ತಿವೆ. ಈ ಕಾರಣಕ್ಕಾಗಿ ಯೋಜನೆ ಜಾರಿ ಸಾಧ್ಯವಿಲ್ಲ. ಚೆನ್ನೈ ಮೆಟ್ರೋ ರೈಲು ಹೊಸೂರು-ಬೊಮ್ಮಸಂದ್ರ ಮಾರ್ಗಕ್ಕಾಗಿ ʼʼ25 ಕೆವಿ ಎಸಿ ಓವರ್‌ಹೆಡ್ ಟ್ರಾಕ್ಷ್ಯನ್ ವ್ಯವಸ್ಥೆ"ಯನ್ನು ಪ್ರಸ್ತಾಪಿಸಿತ್ತು. ಆದರೆ, ನಮ್ಮ ಮೆಟ್ರೋ ಜಾಲವು "750 ಕೆವಿ ಡಿಸಿ ವಿದ್ಯುತ್ ಶಕ್ತಿ"ಯನ್ನು ಬಳಸುತ್ತದೆ. ಎರಡು ವಿಭಿನ್ನ ವಿದ್ಯುತ್ ಶಕ್ತಿ ವ್ಯವಸ್ಥೆಗಳನ್ನು ಸಂಯೋಜಿಸಲು ಸಾಧ್ಯವಿಲ್ಲದ ಕಾರಣ ಯೋಜನೆ ಅನುಷ್ಠಾನ ಅಸಾಧ್ಯ ಎಂದು ಮೆಟ್ರೋ ಮೂಲಗಳು ಹೇಳಿವೆ.
ಕೇಂದ್ರ ಸರ್ಕಾರವು ಬೆಂಗಳೂರು ಮೆಟ್ರೋ ಜಾಲವನ್ನು 470 ಕಿ.ಮೀ.ಗೆ ವಿಸ್ತರಿಸಲು ಯೋಜನೆ ರೂಪಿಸುವಂತೆ ಬಿಎಂಆರ್‌ಸಿಎಲ್‌ಗೆ ಸೂಚಿಸಿತ್ತು. ಇದರ ಭಾಗವಾಗಿ, ಬಿಎಂಆರ್‌ಸಿಎಲ್ ಈ ಯೋಜನೆ ಕುರಿತು ಅಧ್ಯಯನ ನಡೆಸಿತ್ತು. ಎರಡು ವಿಭಿನ್ನ ವಿದ್ಯುತ್ ಶಕ್ತಿ ವ್ಯವಸ್ಥೆಗಳನ್ನು ಸಂಯೋಜಿಸಲು ಸಾಧ್ಯವಿಲ್ಲ ಎಂದು ಬಿಎಂಆರ್‌ಸಿಎಲ್ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ. ಇದು ಯೋಜನೆಯ ಕಾರ್ಯಸಾಧ್ಯತೆಗೆ ಪ್ರಮುಖ ಅಡ್ಡಿಯಾಗಿದೆ. ಪ್ರಸ್ತಾವಿತ ಯೋಜನೆ ಪ್ರಕಾರ ಎರಡೂ ರಾಜ್ಯಗಳ ಗಡಿಯಲ್ಲಿ 300 ಮೀಟರ್ ಅಂತರದಲ್ಲಿ ಎರಡು ನಿಲ್ದಾಣಗಳು ನಿರ್ಮಾಣಗೊಳ್ಳಬೇಕು. ಈ 300 ಮೀಟರ್ ಅನ್ನು ಪಾದಚಾರಿ ಮೇಲೇತುವೆ ಮೂಲಕ ದಾಟಬೇಕು. ಇದು ಸಾಧ್ಯವಿಲ್ಲದ ಕೆಲಸ ಎಂಬುದು ಮೆಟ್ರೋ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಕೈಗಾರಿಕಾ ಪಟ್ಟಣ ಅಭಿವೃದ್ಧಿಗಾಗಿ ಯೋಜನೆ
ಆರ್.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸಿರುವ ಮೆಟ್ರೋ ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ 23ಕಿ.ಮೀ. ವಿಸ್ತರಿಸಿ ಹೊಸೂರು ಸಂಪರ್ಕಿಸುವ ಸಂಬಂಧ ತಮಿಳುನಾಡು ಸರ್ಕಾರ ಉತ್ಸುಕತೆ ತೋರಿತ್ತು. ಹೊಸೂರಿನಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಯನವನ್ನು ಸಹ ನಡೆಸಲಾಯಿತು. ಈ ಯೋಜನೆಯು ಬೆಂಗಳೂರಿಗಿಂತ ಹೊಸೂರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಮತ್ತು ನಗರಕ್ಕೆ ಮತ್ತಷ್ಟು ಹೊರೆಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿತ್ತು. ಈ ನಡುವೆ, ವಿದ್ಯುತ್ ವ್ಯವಸ್ಥೆಯಲ್ಲಿ ಭಿನ್ನತೆ ಇರುವ ಕಾರಣ ಯೋಜನೆಯನ್ನು ಕೈಬಿಡಲಾಗಿದೆ.
ಕನ್ನಡಿಗರಿಂದ ವ್ಯಾಪಕ ವಿರೋಧ
ಹೊಸೂರು ಕೈಗಾರಿಕಾ ಪಟ್ಟಣವನ್ನು ಬಲಪಡಿಸಲು ಹೊಸೂರು-ಬೊಮ್ಮಸಂದ ಮೆಟ್ರೋ ಯೋಜನೆ ಕೈಗೊಳ್ಳುವ ಬಗ್ಗೆ ನೆರೆರಾಜ್ಯ ಉತ್ಸುಕವಾಗಿತ್ತು. ಹೊಸೂರಿಗೆ ಮೆಟ್ರೋ ವಿಸ್ತರಿಸುವುದರಿಂದ ಕನ್ನಡಿಗರಿಗೆ ನಯಾಪೈಸೆ ಪ್ರಯೋಜನವಿಲ್ಲ. ಬದಲಾಗಿ ಇದರಿಂದ ನಮ್ಮ ರಾಜ್ಯದ ಕೈಗಾರಿಕೆಗಳು, ಬಂಡವಾಳ ಹೂಡಿಕೆ ಅಲ್ಲಿಗೆ ಹೋಗಬಹುದು. ಅಲ್ಲಿನ ಕಾರ್ಮಿಕರಿಗೆ ಇದು ಹೆಚ್ಚಿನ ಪ್ರಯೋಜನ ಆಗಲಿದೆ. ಇದರಿಂದ ರಾಜ್ಯಕ್ಕೆ ಲಾಭದ ಹೊರತಾಗಿ ನಷ್ಟವಾಗಲಿದೆ ಎಂದು ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ, ಯಾವುದೇ ಕಾರಣಕ್ಕೂ ಮೆಟ್ರೋವನ್ನು ತಮಿಳುನಾಡಿಗೆ ಸಂಪರ್ಕಿಸಬಾರದು ಎಂದು ಅಭಿಯಾನವನ್ನೂ ಕೈಗೊಂಡಿದ್ದರು.
ಕರ್ನಾಟಕ-ತ.ನಾಡು ಗಡು ಅತ್ತಿಬೆಲೆವರೆಗೆ ಹಳದಿ ಮಾರ್ಗ ವಿಸ್ತರಣೆ
ಬೆಂಗಳೂರಿನ ಆರ್.ವಿ.ರಸ್ತೆ - ಬೊಮ್ಮಸಂದ್ರವರೆಗೆ ಹಳದಿ ಮಾರ್ಗವನ್ನು ವಿಸ್ತರಣೆ ಮಾಡಲಾಗಿದೆ. ಇದೀಗ ಹಳದಿ ಮಾರ್ಗವನ್ನು ಅತ್ತಿಬೆಲೆವರೆಗೆ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ 11 ಕಿ.ಮೀ.ವಿಸ್ತರಣೆಯಾಗಲಿದೆ. ಇದಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಈ ಮಾರ್ಗವು ಆನೇಕಲ್ ತಾಲೂಕಿನ ಕೈಗಾರಿಕಾ ಪ್ರದೇಶಗಳು ಮತ್ತು ಸೂರ್ಯನಗರದಲ್ಲಿ ನಿರ್ಮಾಣವಾಗಲಿರುವ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸಲಿದೆ. ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ 11 ಕಿ.ಮೀ ಅಂತದಲ್ಲಿ ಮೆಟ್ರೋ ವಿಸ್ತರಣೆಯಾಗಲಿದ್ದು, ಈ ಮಾರ್ಗದಲ್ಲಿ ಚಂದಾಪುರ ಮಾರುಕಟ್ಟೆ, ಚಂದಾಪುರ, ರಮಣ ಮರ್ಹರ್ಷಿ ಆಶ್ರಮ, ನೆರಳೂರು, ಯಡವನಹಳ್ಳಿ, ಅತ್ತಿಬೆಲೆ ಮತ್ತು ಅತ್ತಿಬೆಲೆ ಟೋಲ್‌ನಲ್ಲಿ ನಿಲ್ದಾಣಗಳು ನಿರ್ಮಾಣವಾಗಬಹುದು ಎಂದು ಅಂದಾಜಿಸಲಾಗಿದೆ.
ಹೊಸೂರು–ಅತ್ತಿಬೆಲೆ ಕೈಗಾರಿಕಾ–ವಾಣಿಜ್ಯ ಹೃದಯಸ್ಥಾನ
ತಮಿಳುನಾಡು ಗಡಿ ಹೊಸೂರು ಮತ್ತು ರಾಜ್ಯದ ಗಡಿ ಅತ್ತಿಬೆಲೆ ನಡುವೆ ಅಂದಾಜು 10 ಕಿ.ಮೀ ಅಂತರ ಇದ್ದು, ಕೈಗಾರಿಕಾ ಪ್ರದೇಶವಾಗಿದೆ. ಎರಡು ರಾಜ್ಯಗಳ ಗಡಿಭಾಗದಲ್ಲಿ ವಾಹನ ತಯಾರಿಕಾ ಘಟಕಗಳು, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರೋಪಕರಣಗಳ ಕಂಪನಿಗಳಿವೆ. ಅಲ್ಲದೇ, ಪ್ಲಾಸ್ಟಿಕ್, ಪ್ಯಾಕೇಜಿಂಗ್, ಗೃಹೋಪಯೋಗಿ ವಸ್ತುಗಳ ತಯಾರಿಕೆ ಮುಂತಾದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಹ ಕಾರ್ಯನಿರ್ವಹಿಸುತ್ತಿವೆ. ಕೆಲಸ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಮತ್ತು ತಮಿಳುಗರು ತೆರಳುತ್ತಾರೆ. ಇದರಿಂದ ಮೆಟ್ರೋ ಅನುಕೂಲವಾಗಿರುತ್ತಿತ್ತು. ಆದರೆ, ತಾಂತ್ರಿಕ ಕಾರಣದಿಂದಾಗಿ ಸಾಧ್ಯವಾಗುತ್ತಿಲ್ಲ. ಆದರೆ, ಅತ್ತಿಬೆಲೆವರೆಗೆ ವಿಸ್ತರಣೆಯಾದರೂ ಹೊಸೂರಿಗೆ ಕೆಲಸಕ್ಕಾಗಿ ತೆರಳುವವರಿಗೆ ಅನುಕೂಲವಾಗಲಿದೆ. ಅಲ್ಲದೇ, ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಇತರೆ ಪ್ರದೇಶಕ್ಕೆ ಬರುವವರಿಗೂ ಸಹಕಾರಿಯಾಗಲಿದೆ.
ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಸೇರಿದಂತೆ ಸುತ್ತಮುತ್ತ ಐಟಿ-ಬಿಟಿ ಕಂಪನಿಗಳು ಇರುವ ಕಾರಣ ಬಾಡಿಗೆ ದರವು ಹೆಚ್ಚಳವಾಗಿದೆ. ಹೊಸೂರಿನಲ್ಲಿ ಮನೆ ಬಾಡಿಗೆ ಕಡಿಮೆ ಇದ್ದು, ಅಲ್ಲಿ ಮಾಡಿಕೊಂಡು ಇತ್ತ ಕೆಲಸಕ್ಕೆ ತೆರಳಲು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರವೂ ಹಲವರದ್ದಾಗಿದೆ. ಹೊಸೂರಿಗೆ ಪ್ರತಿನಿತ್ಯ ನೂರಾರು ಕಾರ್ಮಿಕರು ತೆರಳುತ್ತಾರೆ. ಅವರಿಗೆ ಅತ್ತಿಬೆಲೆಯಿಂದ ಕೆಲವೇ ಕಿ.ಮೀ. ಅಂತರ ಇರುವ ಕಾರಣ ಬಸ್‌ನಲ್ಲಿ ಸಂಚರಿಸಲು ಬಹುದಾಗಿದೆ. ಇದರಿಂದ ಸಮಯದ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.
ಸೂರ್ಯ ಸಿಟಿ ಅಂತಾರಾಷ್ಟ್ರೀಯ ಸ್ಟೇಡಿಯಂಗೆ ಜೋಡಣೆ
ಸೂರ್ಯ ಸಿಟಿ ಬಳಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ತೀರ್ಮಾನಿಸಲಾಗಿದೆ. ಹೀಗಾಗಿ, ಅಲ್ಲಿಯವರೆಗೆ ಮೆಟ್ರೋ ರೈಲು ಮಾರ್ಗ ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕೆಲಸವನ್ನು ಹೈದರಾಬಾದ್‌ನ ಆರ್.ವಿ.ಅಸೋಸಿಯೇಟ್ಸ್ ಸಂಸ್ಥೆಗೆ ವಹಿಸಲಾಗಿದೆ. ಈ ಮಾರ್ಗವನ್ನು ಜಿಗಣಿ, ಬನ್ನೇರುಘಟ್ಟ ಮಾರ್ಗವಾಗಿ ತೆಗೆದುಕೊಂಡು ಹೋಗಲು ಡಿಪಿಆರ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.