ಡಿಸಿಸಿ ಬ್ಯಾಂಕ್ ನ 16 ನಿರ್ದೇಶಕ ಸ್ಥಾನಗಳ ಪೈಕಿ 6 ಅಭ್ಯರ್ಥಿಗಳು ಅವಿರೋಧ ಆಯ್ಕೆ
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಬಣಕ್ಕೆ ಬಿಗ್ ಶಾಕ್ ಆಗಿದ್ದು, ಜಾರಕಿಹೊಳಿ ಬಣದ 6 ಮಂದಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಬಣಕ್ಕೆ ಆಘಾತ ಉಂಟಾಗಿದ್ದು. ಜಾರಕಿಹೊಳಿ ಬಣದ 6 ಮಂದಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಡಿಸಿಸಿ ಬ್ಯಾಂಕ್ ನ 16 ನಿರ್ದೇಶಕ ಸ್ಥಾನಗಳ ಪೈಕಿ 6 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮ ಪತ್ರ ಸಲ್ಲಿಕೆ ಮುಕ್ತಾಯವಾಗಿವೆ. ಹದಿನಾರು ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಕಣದಲ್ಲಿ ಘಟಾನುಘಟಿ ನಾಯಕರೇ ಅಖಾಡಕ್ಕೆ ಧುಮ್ಮಿಕ್ಕಿದ್ದಾರೆ. ಇದೇ 19ರಂದು ಮತದಾನ ನಡೆಯಲಿದ್ದು, ಈವರೆಗೂ ಒಟ್ಟು 64 ನಾಮ ಪತ್ರ ಸಲ್ಲಿಕೆಯಾಗಿವೆ. ಈ ಪೈಕಿ ಆರು ತಾಲೂಕಿನಲ್ಲಿ 6 ಮಂದಿ ಹೊರತುಪಡಿಸಿ, ಉಳಿದವರು ಯಾವುದೇ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಈ ಮೂಲಕ ಆರಂಭದಲ್ಲೇ ಜಾರಕಿಹೊಳಿ ಕುಟುಂಬಕ್ಕೆ ಮೇಲುಗೈ ಸಾಧಿಸಿದೆ.
ಚಿಕ್ಕೋಡಿಯಿಂದ ಗಣೇಶ್ ಹುಕ್ಕೇರಿ, ಯರಗಟ್ಟಿಯಿಂದ ವಿಶ್ವಾಸ ವೈದ್ಯ, ಮೂಡಲಗಿಯಿಂದ ನೀಲಕಂಠ, ಸವದತ್ತಿಯಿಂದ ವಿರೂಪಾಕ್ಷ ಮಾಮನಿ, ಗೋಕಾಕ್ ನಿಂದ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ್, ಬೆಳಗಾವಿಯಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅ.13ರಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ರಾಜಕೀಯ ಭವಿಷ್ಯ ನಿರ್ಧಾರ ಮಾಡುವ ಚುನಾವಣೆಗೆ ಘಟಾನುಘಟಿ ನಾಯಕರೇ ಸ್ಪರ್ಧೆ ಮಾಡುತ್ತಿದ್ದಾರೆ. ಹಾಲಿ, ಮಾಜಿ ಶಾಸಕರು ಸೇರಿದಂತೆ ಮಾಜಿ ಸಂಸದರು ಕೂಡ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಅದರಲ್ಲೂ ಈಗಾಗಲೇ ಜಾರಕಿಹೊಳಿ ಬ್ರದರ್ಸ್ 13 ಜನರ ಒಂದು ತಂಡ ಮಾಡಿಕೊಂಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಥಣಿ, ಕಾಗವಾಡ ಮತ್ತು ಚಿಕ್ಕೋಡಿ ತಾಲೂಕಿನಲ್ಲಿ ಯಾವುದೇ ಅಭ್ಯರ್ಥಿಗಳನ್ನ ಕಣಕ್ಕಿಳಿಸದೇ ಇನ್ನೂಳಿದ ಕಡೆಗಳಲ್ಲಿ ತಮ್ಮವರನ್ನ ಅಖಾಡಕ್ಕಿಳಿಸಿದ್ದಾರೆ. ಇತ್ತ ರಮೇಶ್ ಕತ್ತಿ ಮತ್ತು ಲಕ್ಷ್ಮಣ ಸವದಿ ನಡೆ ಇನ್ನೂ ನಿಗೂಢವಾಗಿದ್ದು ಜಾರಕಿಹೊಳಿ ಸಹೋದರರಿಗೆ ಶಾಕ್ ಕೊಡಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಸದ್ಯ ಆರಂಭಿಕ ಹಂತದಲ್ಲಿ ಜಾರಕಿಹೊಳಿ ಬ್ರದರ್ಸ್ ಮೇಲುಗೈ ಸಾಧಿಸಿದ್ದಾರೆ.
ಒಟ್ಟಿನಲ್ಲಿ ಸಾಕಷ್ಟು ಜಿದ್ದಾಜಿದ್ದಿಗೆ ಕಾರಣವಾಗಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಅ.19ರಂದು ಮತದಾನ ನಡೆಯಲಿದ್ದು ಡಿಸಿಸಿ ಬ್ಯಾಂಕ್ ಹಿಡಿತಕ್ಕೆ ತೆಗೆದುಕೊಳ್ಳಲು ಪೈಪೋಟಿ ನಡೆದಿದೆ. ಯಾರ ತೆಕ್ಕೆಗೆ ಡಿಸಿಸಿ ಬ್ಯಾಂಕ್ ಹೋಗಲಿದೆ ಎಂಬುದು ಕುತೂಹಲ ಹೆಚ್ಚಿಸಿದೆ.