ಕರ್ನಾಟಕಕ್ಕೆ 400 ಹೆಚ್ಚುವರಿ ಎಂ.ಬಿ.ಬಿ.ಎಸ್ ಸೀಟುಗಳು

ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ರಾಜ್ಯ ಸರ್ಕಾರದ ಮನವಿಯನ್ನು ಪರಿಗಣಿಸಿ ಈ ಹೆಚ್ಚುವರಿ ಸೀಟುಗಳಿಗೆ ಅನುಮೋದನೆ ನೀಡಿದೆ.;

Update: 2025-09-03 05:14 GMT

ಸಾಂದರ್ಭಿಕ ಚಿತ್ರ

ವೈದ್ಯರಾಗುವ ಕನಸು ಕಾಣುತ್ತಿರುವ  ವಿದ್ಯಾರ್ಥಿಗಳಿಗೆ ರಾಜ್ಯದಿಂದ ಸುವರ್ಣಾವಕಾಶ. ರಾಜ್ಯವು 400 ಹೆಚ್ಚುವರಿ ಎಂ.ಬಿ.ಬಿ.ಎಸ್. ಸೀಟುಗಳನ್ನು ಪಡೆದುಕೊಂಡಿದ್ದು, ಇವುಗಳನ್ನು ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಸೇರಿಸಲಾಗುತ್ತಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ರಾಜ್ಯ ಸರ್ಕಾರದ ಮನವಿಯನ್ನು ಪರಿಗಣಿಸಿ ಈ ಹೆಚ್ಚುವರಿ ಸೀಟುಗಳಿಗೆ ಅನುಮೋದನೆ ನೀಡಿದೆ. ಮೊದಲು 15 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಹೆಚ್ಚಿಸಲು ಸರ್ಕಾರ ಮನವಿ ಸಲ್ಲಿಸಿತ್ತು. ಆದರೆ ಮೂಲಸೌಕರ್ಯ ಸಮಸ್ಯೆ ಉಲ್ಲೇಖಿಸಿ ಎನ್‌ಎಂಸಿ ಹಲವು ಕಾಲೇಜುಗಳ ವಿನಂತಿ ತಿರಸ್ಕರಿಸಿತ್ತು. ಇದೀಗ ಸರ್ಕಾರ ನೀಡಿದ ಭರವಸೆಯ ಆಧಾರದ ಮೇಲೆ ಎಂಟು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ತಲಾ 50 ಸೀಟುಗಳನ್ನು ಹೆಚ್ಚಿಸಲು ಅನುಮತಿ ದೊರಕಿದೆ.

ಹೆಚ್ಚುವರಿ ಸೀಟು ಪಡೆದ ಸರ್ಕಾರಿ ಕಾಲೇಜುಗಳು

ಇದರೊಂದಿಗೆ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ-ಕಲಬುರಗಿ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ಬೆಂಗಳೂರು) ಈ ಎಂಟು ಸರ್ಕಾರಿ ಕಾಲೇಜುಗಳು ತಲಾ 50 ಹೆಚ್ಚುವರಿ ಸೀಟುಗಳನ್ನು ಪಡೆದಿವೆ. ಈ ಮೂಲಕ ರಾಜ್ಯದಲ್ಲಿ ಲಭ್ಯವಿರುವ ಎಂ.ಬಿ.ಬಿ.ಎಸ್ ಸೀಟುಗಳ ಒಟ್ಟು ಸಂಖ್ಯೆ 9,263ರಿಂದ 9,663ಕ್ಕೆ ಏರಿಕೆಯಾಗಿದೆ. 

ಯಾವ ಕಾಲೇಜುಗಳಿಗೆ ನಿರಾಕರಣೆ?

ಬೀದರ್, ಚಾಮರಾಜನಗರ, ಗದಗ, ಕಾರವಾರ, ಕೊಪ್ಪಳ, ಮಂಡ್ಯ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ವಿನಂತಿಸಲಾದ ಸೀಟುಗಳನ್ನು ತಿರಸ್ಕರಿಸಲಾಗಿದೆ. ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ, ಸರ್ಕಾರವು ತಲಾ 100 ಸೀಟುಗಳನ್ನು ಕೋರಿದ್ದರೂ ಎನ್‌ಎಂಸಿ 50 ಸೀಟುಗಳನ್ನು ಅನುಮೋದಿಸಿದೆ. ಡೀಮ್ಡ್-ಟು-ಬಿ ವಿಶ್ವವಿದ್ಯಾಲಯವಾದ JGMMMC ಹುಬ್ಬಳ್ಳಿಯಲ್ಲಿ 50 ಸೀಟುಗಳ ಹೆಚ್ಚಳಕ್ಕೆ ಎನ್‌ಎಂಸಿ ಅನುಮೋದನೆ ನೀಡಿದೆ.

ಈ ಮಧ್ಯೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕಾರಿಗಳು, ಈ ಹೊಸ ಸೀಟುಗಳನ್ನು ಹೊಸ ಆಯ್ಕೆ ಪ್ರವೇಶಕ್ಕೆ ನಮೂದು ಮಾಡುವ ಅಭ್ಯರ್ಥಿಗಳಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ 

1ನೇ ಸುತ್ತಿನಲ್ಲಿ ವೈದ್ಯಕೀಯ ಸೀಟುಗಳನ್ನು ಪಡೆದು ಆಯ್ಕೆ 2 ಅನ್ನು ಆಯ್ಕೆ ಮಾಡಿಕೊಂಡು ಕೋರ್ಸ್ ಶುಲ್ಕವನ್ನು ಪಾವತಿಸಿದ ವಿದ್ಯಾರ್ಥಿಗಳು ಮತ್ತು ಆಯ್ಕೆ 3 ಅನ್ನು ಆಯ್ಕೆ ಮಾಡಿಕೊಂಡು ಮುಂಜಾಗೃತಾ ಠೇವಣಿ ಪಾವತಿಸಿದ ವಿದ್ಯಾರ್ಥಿಗಳಿಗೆ ಸ್ವಯಂಚಾಲಿತವಾಗಿ ಹಂಚಿಕೆಗೆ ಪರಿಗಣಿಸುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಎಚ್ ತಿಳಿಸಿದ್ದಾರೆ. 

ಕೆಇಎ ಎರಡನೇ ಸುತ್ತಿನ ತಾತ್ಕಾಲಿಕ ಫಲಿತಾಂಶಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 12ರೊಳಗೆ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ (MCC) ತನ್ನ ಹಂಚಿಕೆಯನ್ನು ಪೂರ್ಣಗೊಳಿಸಿದ ಬಳಿಕ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಲಿದೆ. ಈ ಹೆಚ್ಚುವರಿ 400 ಸೀಟುಗಳ ಸೇರ್ಪಡೆ ಹಿನ್ನೆಲೆ, ಈಗಾಗಲೇ ಹೊರಬಂದ ತಾತ್ಕಾಲಿಕ ಫಲಿತಾಂಶದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tags:    

Similar News