ತುಮಕೂರು ಬಸ್ ಅಫಘಾತ; ಪತ್ರಕರ್ತೆ ಸೇರಿ ಮೂವರು ಮಹಿಳೆಯರ ದುರ್ಮರಣ
ಸುಮಾರು 30 ಪ್ರಯಾಣಿಕರನ್ನು ಹೊತ್ತ ಬಸ್ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಮುಂಜಾನೆ 4.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ತುಮಕೂರಿನಲ್ಲಿ (Tumkur news) ಬೆಳ್ಳಂಬೆಳಗ್ಗೆ ನಡೆದ ಭೀಕರ ಬಸ್ ಅಪಘಾತದಲ್ಲಿ ಡೆಲ್ಲಿ ಮೂಲದ ಪತ್ರಕರ್ತೆ ಸೇರಿ ಮೂವರು ಮೃತಪಟ್ಟಿದ್ದಾರೆ. ಬಸ್ ಗೋವಾದಿಂದ ಬೆಂಗಳೂರಿಗೆ ಕಡೆ ಬರುತ್ತಿತ್ತು. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಬಸ್ ಡಿವೈಡರ್‌ಗೆ ಗುದ್ದಿ ಪಲ್ಟಿಯಾಗಿದೆ.
ಮೃತರನ್ನು ಉತ್ತರ ಪ್ರದೇಶ ಲಕ್ನೊ ಮೂಲದ ಉರ್ವಿ ನಯನ್ (28 ವರ್ಷ ), ಪಶ್ಚಿಮ ಬಂಗಾಳದ ಕೋಲ್ಕೊತಾ ಮೂಲದ ಪ್ರಿಯಾಂಕಾ ಮಂಡಲ್ (26 ವರ್ಷ) ಮತ್ತು ಶುಭಾಲಿ ಸಿಂಗ್ (26 ವರ್ಷ) ಎಂದು ಗುರುತಿಸಲಾಗಿದೆ. ಇವರಲ್ಲಿ ಊರ್ವಿ ಡೆಲ್ಲಿ ಮೂಲದ ಪತ್ರಕರ್ತೆಯಾಗಿದ್ದು ನ್ಯೂಸ್ x ಚಾನೆಲ್‌ನ ವರದಿಗಾರ್ತಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂವರು ಗೋವಾದಿಂದ ಬೆಂಗಳೂರು ಕಡೆಗೆ ಬರುತ್ತಿದ್ದರು ಎನ್ನಲಾಗಿದೆ. ಇನ್ನಿಬ್ಬರ ಗುರುತು ಇನ್ನೂ ಪತ್ತೆಯಾಗಬೇಕಾಗಿದೆ. ಇನ್ನು ಬೆಂಗಳೂರಿನ ಟಿಸಿಎಸ್ ನಲ್ಲಿ ಕೆಲಸ ಮಾಡುತಿದ್ದ ಅಂಕಿಂತ್ ಸಿಂಗ್ (30) ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದ ಸನ್ ರೈಸರ್ ಟ್ರಾವೆಲ್ಸ್ ಗೆ ಸೇರಿದ ಬಸ್ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪಘಾತಕ್ಕೀಡಾಗಿದೆ.
ಸುಮಾರು 30 ಪ್ರಯಾಣಿಕರನ್ನು ಹೊತ್ತ ಬಸ್ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಮುಂಜಾನೆ 4.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಕೂಡಲೇ ಅವರನ್ನೆಲ್ಲ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಹಾಗೂ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.