2019ರಲ್ಲಿ ಕಾಂಗ್ರೆಸ್ ಒಂದೇ ಸ್ಥಾನ ಗೆದ್ದಿತ್ತು, 2024ರಲ್ಲಿ 9 ಸೀಟು ಗೆದ್ದಿದ್ದು ಹೇಗೆ?; ಬಿಜೆಪಿ ಸಂಸದ ಪಿ.ಸಿ. ಮೋಹನ್ ತಿರುಗೇಟು
ಬಿಹಾರದಲ್ಲಿ ಕಾಂಗ್ರೆಸ್ ಸೋಲಿನ ಭೀತಿಯಿಂದ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಆರೋಪಿಸಿದ್ದಾರೆ.;
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿರುವ ಬಗ್ಗೆ ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರು ತಿರುಗೇಟು ನೀಡಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸತತ 4 ಬಾರಿ ಗೆಲುವು ಸಾಧಿಸಿದ್ದೇನೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ಕಾಂಗ್ರೆಸ್ ಸೋಲಿನ ಭೀತಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೆಂಟ್ರಲ್ ಮತಕ್ಷೇತ್ರದ ಭಾಗವಾದ ಮಹದೇವಪುರದಲ್ಲಿ ಯಾವುದೇ ಮತಗಳ್ಳತನ ಆಗಿಲ್ಲ, ಬಿಹಾರದಲ್ಲಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ(ಎಸ್‌ಐಆರ್) ನಡೆಯುತ್ತಿರುವುದನ್ನು ಸಹಿಸಲಾಗದೇ ರಾಹುಲ್ ಗಾಂಧಿ ಇಂತಹ ಆರೋಪ ಮಾಡುತ್ತಿದ್ದಾರೆ. ಇದೇ ರೀತಿ ಪರಿಷ್ಕರಣೆ ದೇಶದ ಎಲ್ಲ ರಾಜ್ಯಗಳಲ್ಲಿ ನಡೆದರೆ ಮತದಾರರ ಪಟ್ಟಿ ಸ್ವಚ್ಛವಾಗಲಿದೆ. ಅದಕ್ಕೆ ರಾಹುಲ್ ಗಾಂಧಿ ಸಹಕಾರ ನೀಡಲಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 1 ಸೀಟು ಗೆದ್ದಿತ್ತು. 2024ರಲ್ಲಿ 9 ಸ್ಥಾನ ಗೆದ್ದಿದೆ. ಹಾಗಾದರೆ, ಕಾಂಗ್ರೆಸ್ ಕೂಡ ಅಕ್ರಮ ನಡೆಸಿರಬಹುದಲ್ಲವೇ ಎಂದು ಪಿ.ಸಿ.ಮೋಹನ್ ತಿರುಗೇಟು ನೀಡಿದ್ದಾರೆ.
2024ರಲ್ಲಿ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿತ್ತು. ಸರ್ಕಾರದ ಅಧಿಕಾರಿಗಳೇ ಮತದಾರರ ಪಟ್ಟಿ ಸಿದ್ದಪಡಿಸಿರುವುದರಿಂದ ಸರ್ಕಾರಕ್ಕೆ ಅದರ ಮಾಹಿತಿ ಇದ್ದೇ ಇರುತ್ತದೆ. ಬಿಹಾರದಲ್ಲಿ ಕಳ್ಳ ಮತದಾರರನ್ನು ತೆಗೆಯುತ್ತಿರುವುದು ರಾಹುಲ್ ಗಾಂಧಿ ಸಹಿಸುತ್ತಿಲ್ಲ. ಬಿಹಾರ ವಿಧಾನಸಭಾ ಕ್ಷೇತ್ರದ ಸೋಲಿನ ಭೀತಿಯಿಂದ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಪಿ.ಸಿ. ಮೋಹನ್ ಹೇಳಿದ್ದಾರೆ.