Covid Scam Report | ದುಪ್ಪಟ್ಟು ಬೆಲೆಗೆ ಕಾಟ್ ಖರೀದಿ: ಮಂಚದಲ್ಲೇ ನುಂಗಿದರು 25 ಕೋಟಿ!
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮೂರು ಸಾವಿರಕ್ಕೂ ಹೆಚ್ಚು ಐಸಿಯು ಕಾಟ್‌ಗಳನ್ನು ಖರೀದಿಸಿದ್ದು, ಪ್ರತಿ ಕಾಟ್ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ 98,000ರೂ. ಇದ್ದರೂ ಇಲಾಖೆ ತಲಾ ಒಂದು ಕಾಟ್‌ಗೆ ಬರೋಬ್ಬರಿ 1.91 ಲಕ್ಷ ರೂ. ನೀಡಿ, ದುಪ್ಪಟ್ಟು ಬೆಲೆಗೆ ಖರೀದಿಸಿದೆ.;
ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಕೋವಿಡ್ ಹಗರಣದ ಕುರಿತು ತನಿಖೆ ನಡೆಸುತ್ತಿರುವ ನ್ಯಾ, ಜಾನ್ ಮೈಕೆಲ್ ಕುನ್ಹಾ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿರುವ ಆಘಾತಕಾರಿ ಅಂಶಗಳು ಒಂದೊಂದಾಗಿ ಹೊರಬರುತ್ತಿವೆ.
ಕೋವಿಡ್ ಪರೀಕ್ಷೆ, ಔಷಧಿ ಮತ್ತು ವೈದ್ಯಕೀಯ ಸಲಕರಣೆ ಖರೀದಿ, ಆಸ್ಪತ್ರೆ ಮತ್ತು ಕೋವಿಡ್ ಸೆಂಟರ್ ವ್ಯವಹಾರ, ಹೀಗೆ ಕೋವಿಡ್ ಸಂಬಂಧಿತ ಪ್ರತಿ ವ್ಯವಹಾರದಲ್ಲಿಯೂ ಭಾರೀ ಅಕ್ರಮ ನಡೆದಿದೆ ಎಂದು ಹೇಳಿರುವ ತನಿಖಾ ಆಯೋಗ, ಬರೋಬ್ಬರಿ 769 ಕೋಟಿ ಸಾರ್ವಜನಿಕ ತೆರಿಗೆ ಹಣವನ್ನು ನುಂಗಿ ಹಾಕಲಾಗಿದೆ ಎಂದು ತನ್ನ ಮಧ್ಯಂತರ ವರದಿಯಲ್ಲಿ ಹೇಳಿದೆ.
ಕೋವಿಡ್ ಕೇರ್ ಸೆಂಟರ್ ಮತ್ತು ಕೋವಿಡ್ ಆಸ್ಪತ್ರೆಗಳಿಗಾಗಿ ಖರೀದಿಸಿದ ಪ್ರತಿ ಸಲಕರಣೆ, ಸೌಲಭ್ಯದಲ್ಲೂ ದುಪ್ಪಟ್ಟು, ಮೂರು ಪಟ್ಟು ಹಣ ನೀಡಿದ ಖರೀದಿಸಿ ಭಾರೀ ಅವ್ಯವಹಾರ ಎಸಗಲಾಗಿದೆ ಎಂದು ಆಯೋಗದ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಮಧ್ಯಂತರ ವರದಿಯ ಮೂರನೇ ಭಾಗದಲ್ಲಿ ಸರ್ಕಾರ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಆಗಿರುವ ಲೋಪ ಮತ್ತು ಅಕ್ರಮಗಳನ್ನು ವಿವರಿಸಲಾಗಿದ್ದು, ಕೋವಿಡ್ ನಿರ್ವಹಣೆಯ ಸಮಯದಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮೂರು ಸಾವಿರಕ್ಕೂ ಹೆಚ್ಚು ಐಸಿಯು ಕಾಟ್‌ಗಳನ್ನು ಖರೀದಿಸಿದ್ದು, ಪ್ರತಿ ಕಾಟ್ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ 98,000ರೂ. ಇದ್ದರೂ ಇಲಾಖೆ ತಲಾ ಒಂದು ಕಾಟ್‌ಗೆ ಬರೋಬ್ಬರಿ 1.91 ಲಕ್ಷ ರೂ. ನೀಡಿ, ದುಪ್ಪಟ್ಟು ಬೆಲೆಗೆ ಖರೀದಿಸಿದೆ. ಆ ಮೂಲಕ ಕೇವಲ ಕಾಟ್(ಮಂಚ) ಖರೀದಿಯಲ್ಲೇ ಬರೋಬ್ಬರಿ 25.49 ಕೋಟಿ ರೂ. ಅಕ್ರಮ ಎಸಗಿರುವುದು ಸಾಬೀತಾಗಿದೆ ಎಂದು ಕುನ್ಹಾ ಆಯೋಗ ಹೇಳಿರುವುದಾಗಿ ವರದಿಯಾಗಿದೆ.
ವರದಿಯಲ್ಲೇನಿದೆ?
ತಲಾ ಒಂದು ಐಸಿಯು ಕಾಟ್‌ಗೆ ಗರಿಷ್ಠ1.50 ಲಕ್ಷ ರೂ ಪಾವತಿಸಬಹುದು ಎಂದು ಮಿತಿ ಹೇರಿ, 2020ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ವಾಸ್ತವದಲ್ಲಿ 98,000ಕ್ಕೆ ಅಂತಹ ಕಾಟ್ ಮಾರುಕಟ್ಟೆಯಲ್ಲಿ ಲಭ್ಯವಿತ್ತು. ಆದರೂ ಸರ್ಕಾರ ಇದನ್ನು ಪರಿಶೀಲಿಸದೆ, ಒಂದು ಕಾಟ್‌ಗೆ 1.50 ಲಕ್ಷರೂ ದವರೆಗೂ ಪಾವತಿಸಬಹುದು ಎಂದು ಹೇಳಿ ಉದ್ದೇಶಪೂರ್ವಕವಾಗಿ ಅಕ್ರಮ ನಡೆಸಲು ಸರ್ಕಾರವೇ ಕುಮ್ಮಕ್ಕು ನೀಡಿದೆ.
ಆದರೆ, ಗರಿಷ್ಠ ಮಿತಿಯನ್ನೂ ಉಲ್ಲಂಘಿಸಿ ನಿರ್ದೇಶನಾಲಯವು ಹೆಚ್ಚಿನ ದರಕ್ಕೆ ಕಾಟ್‌ಗಳನ್ನು ಖರೀದಿಸಿದೆ. ಐಸಿಯು ಕಾಟ್‌ಗಳ ಖರೀದಿಗೆ ನಿರ್ದೇಶನಾಲಯವು 2020-21ರಲ್ಲಿ ಕೊಟೇಷನ್ ಆಹ್ವಾನಿಸಿತ್ತು. ಟ್ರಯಾನ್ಸ್ ವೆಂಟಿಲೇಟರ್ಸ್ ಕಂಪನಿ ಒಂದು ಐಸಿಯು ಕಾಟ್ ಗೆ ತಲಾ 98,000 ರೂ. , ಬಯೊಮೆಡಿಕ್ ಕಂಪನಿ 1.03 ಲಕ್ಷ ರೂ. ಮತ್ತು ನ್ಯೂಟೆಕ್ ಗ್ಲೋಬಲ್ ಕಂಪನಿ 1.91 ಲಕ್ಷ ರೂ. ದರವನ್ನು ನಮೂದಿಸಿ ಕೊಟೇಷನ್ ಸಲ್ಲಿಸಿದ್ದವು.
ನಿರ್ದೇಶನಾಲಯವು ಯಾವುದೇ ಸೂಕ್ತ ಕಾರಣ ನೀಡದೆ 98,000 ಮತ್ತು 1.03 ಲಕ್ಷ ರೂ ಕೊಟೇಷನ್‌ಗಳನ್ನು ತಿರಸ್ಕರಿಸಿದೆ. ನ್ಯೂಟೆಕ್ ಗ್ಲೋಬಲ್ ಸಲ್ಲಿಸಿದ್ದ 1.91 ಲಕ್ಷ ರೂ ಕೊಟೇಷನ್ ಒಪ್ಪಿಕೊಂಡಿದೆ. ವಾಸ್ತವದಲ್ಲಿ, ಕೊಟೇಷನ್ ಆಹ್ವಾನಿಸಿದ್ದರ ಹಿಂದೆ ಕಡಿಮೆ ಬೆಲೆಗೆ ಖರೀದಿಸುವ ಉದ್ದೇಶವೇ ಇರಲಿಲ್ಲ. ಬದಲಿಗೆ ಕಾಟ್‌ಗಳ ಮಾರುಕಟ್ಟೆ ದರವನ್ನು ತಿಳಿದುಕೊಳ್ಳಲು ಕೊಟೇಷನ್ ಆಹ್ವಾನಿಸಲಾಗಿತ್ತು. ಕೊಟೇಷನ್‌ನಲ್ಲಿ ಉಲ್ಲೇಖಿಸಿದ ದರವನ್ನು ಬಳಸಿಕೊಂಡು, ಮೊದಲೇ ಗುರುತಿಸಲಾಗಿದ್ದ ಪೂರೈಕೆದಾರರ ಜತೆ ಚೌಕಾಸಿ ನಡೆಸಲಾಗಿದೆ. ಮೂರು ಪ್ರತ್ಯೇಕ ಆದೇಶಗಳ ಮೂಲಕ 3,285 ಐಸಿಯು ಕಾಟ್‌ಗಳನ್ನು ಖರೀದಿಸಲಾಗಿದೆ. 150 ಕಾಟ್‌ಗಳನ್ನು ತಲಾ 1.95 ಲಕ್ಷ ರೂ ದರದಲ್ಲಿ ನ್ಯೂಟೆಕ್ ಗ್ಲೋಬಲ್‌ನಿಂದ, 990 ಕಾಟ್‌ಗಳನ್ನು ತಲಾ 1.39 ಲಕ್ಷ ರೂ. ದರದಲ್ಲಿ ಸೇವ್ ಮೆಡಿಕ್‌ನಿಂದ ಮತ್ತು 2,145 ಕಾಟ್‌ಗಳನ್ನು ತಲಾ 1.91 ಲಕ್ಷ ರೂ. ದರದಲ್ಲಿ ನ್ಯೂಟೆಕ್ ಗ್ಲೋಬಲ್‌ನಿಂದ ಖರೀದಿಸಲಾಗಿದೆ. ಈ ಮೂರೂ ಖರೀದಿಯ ಒಟ್ಟು ಮೊತ್ತ 57.68 ಕೋಟಿ ರೂ.ಗಳಾಗುತ್ತದೆ.
ಆದರೆ ಕೊಟೇಷನ್‌ನಲ್ಲಿ 98,000 ಎಂದು ನಮೂದಿಸಿದ್ದ ಕಂಪನಿಯಿಂದಲೇ ಅಷ್ಟೂ ಕಾಟ್‌ಗಳನ್ನು ಖರೀದಿಸಿದ್ದರೆ, ಒಟ್ಟು ವೆಚ್ಚ 32.19 ಕೋಟಿ ರೂ.ಗಳಷ್ಟೇ ಆಗುತ್ತಿತ್ತು. ಆದರೆ 25.49 ಕೋಟಿಯಷ್ಟು ಹೆಚ್ಚುವರಿಯಾಗಿ ಪಾವತಿಸಿ, ಅಷ್ಟೇ ಕಾಟ್‌ಗಳನ್ನು ಖರೀದಿಸಲಾಗಿದೆ. ಐಸಿಯು ಕಾಟ್‌ಗಳ ಖರೀದಿಯಲ್ಲಿ ಅಪಾರ ಪ್ರಮಾಣದ ಅಕ್ರಮ ನಡೆದಿದೆ. ಖಾಸಗಿ ಕಂಪನಿಗಳಿಗೆ ಅಕ್ರಮ ಲಾಭ ಮಾಡಿಕೊಡುವ ಮತ್ತು ಆ ಮೂಲಕ ತಾವೂ ಅಕ್ರಮವಾಗಿ ಗಳಿಸಿಕೊಳ್ಳುವ ಉದ್ದೇಶದಿಂದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳು ಹೆಚ್ಚಿನ ದರದಲ್ಲಿ ಖರೀದಿ ಪ್ರಕ್ರಿಯೆ ನಡೆಸಿದ್ದಾರೆ. ಇದರಲ್ಲಿ ಯಾರಿಗೆಲ್ಲಾ ಲಾಭವಾಗಿದೆ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಬೇಕಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಇತರರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಯೋಗ ತನ್ನ ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿದೆ.
ಐಸಿಯು ಕಾಟ್‌ಗಳು ಮತ್ತು ಸೆಮಿ ಫ್ಲಾನ್ ಕಾಟ್‌ಗಳ ಖರೀದಿ ಆದೇಶ ನೀಡುವ ಸಂದರ್ಭದಲ್ಲಿ ಪೂರೈಕೆದಾರರಿಗೆ 'ಏಳು ದಿನಗಳ ಒಳಗೆ ಪೂರೈಕೆ ಮಾಡಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸಲಾಗುತ್ತದೆ' ಎಂದು ಷರತ್ತು ಹಾಕಲಾಗಿತ್ತು. ಆದರೆ ತೀರಾ ವಿಳಂಬ ಮಾಡಿದ ಸಂದರ್ಭದಲ್ಲೂ ಅಧಿಕಾರಿಗಳು ದಂಡ ವಿಧಿಸದೇ, ಪೂರೈಕೆದಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ʼಐಸಿಯು ಕಾಟ್ ಮತ್ತು ಸೆಮಿ ಫ್ಲಾನ್ ಕಾಟ್‌ಗಳ ಪೂರೈಕೆ ಸಂಬಂಧ ನ್ಯೂಟೆಕ್ ಗ್ಲೋಬಲ್ ಕಂಪನಿಯು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ 49.40 ಕೋಟಿ ರೂ ಬಿಲ್ ಸಲ್ಲಿಸಿದೆ. ನಿರ್ದೇಶನಾಲಯವು ಸಹ ಅಷ್ಟೇ ಮೊತ್ತವನ್ನು ಪಾವತಿಸಿದೆ ಎಂಬ ವಿವರ; ನ್ಯಾಯಮೂರ್ತಿ ಡಿ ಕುನ್ಹಾ ಆಯೋಗಕ್ಕೆ ಕಂಪನಿಯು ನೀಡಿರುವ ದಾಖಲೆಗಳಲ್ಲಿ ಹೇಳಲಾಗಿದೆ. ಆದರೆ, 'ನ್ಯೂಟೆಕ್ ಗ್ಲೋಬಲ್ ಕಂಪನಿಗೆ 52.19 ಕೋಟಿ ರೂ ಬಿಲ್ ಪಾವತಿಸಲಾಗಿದೆ ಎಂದು ನಿರ್ದೇಶನಾಲಯವು ದಾಖಲೆ ಸಲ್ಲಿಸಿದೆ. ಈ ದಾಖಲೆಗಳ ಪ್ರಕಾರ ಬಿಲ್ ಸಲ್ಲಿಕೆಯಾಗದಿದ್ದರೂ, 2.79 ಕೋಟಿ ರೂ.ನಷ್ಟು ಹೆಚ್ಚುವರಿ ಮೊತ್ತವನ್ನು ಕಂಪನಿಗೆ ಪಾವತಿಸಲಾಗಿದೆ. ಕಂಪನಿ ಮತ್ತು ನಿರ್ದೇಶನಾಲಯ ಸಲ್ಲಿಸಿರುವ ದಾಖಲೆಗಳಲ್ಲಿ ಈ ವ್ಯತ್ಯಾಸ ಏಕೆ ಬಂದಿದೆ ಹಾಗೂ ಅಷ್ಟು ದೊಡ್ಡ ಮೊತ್ತ ಯಾರಿಗೆ ಹೋಗಿದೆ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಬೇಕಿದೆ' ಎಂದೂ ಆಯೋಗ ಹೇಳಿರುವುದಾಗಿ ವರದಿಯಾಗಿದೆ.