Cyber Fraud | 168 ಕೋಟಿ ರೂ. ನಕಲಿ ಇ – ಬ್ಯಾಂಕ್ ಗ್ಯಾರಂಟಿ ಅಕ್ರಮ ಬಯಲು!

ಒಬ್ಬ ಆರೋಪಿ ಬಂಧನ: ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿಸಿದ ಪೊಲೀಸರು

Update: 2024-03-26 11:38 GMT
ಇ- ವಹಿವಾಟು (ಚಿತ್ರಕೃಪೆ: pexels)

ಕರ್ನಾಟಕದ ಬಹುದೊಡ್ಡ ನಕಲಿ ಎಲೆಕ್ಟ್ರಾನಿಕ್ ಬ್ಯಾಂಕ್ ಗ್ಯಾರೆಂಟಿ ನೀಡುವ ಮೋಸಗಾರರ ಜಾಲವನ್ನು ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರ ತಂಡ ಪತ್ತೆ ಮಾಡಿದೆ. ನಕಲಿ ಇ – ಬ್ಯಾಂಕ್ ಗ್ಯಾರಂಟಿ ಜಾಲದಲ್ಲಿ ಬರೋಬ್ಬರಿ 168 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ?

ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಸೈಬರ್‌ ಕ್ರೈಮ್‌ ಪೊಲೀಸ್ ಠಾಣೆಗೆ ಫೆಬ್ರವರಿ 7ರಂದು ನ್ಯಾಷನಲ್‌ ಇ- ಗವರ್ನೆನಸ್ಸ್‌ ಸರ್ವೀಸಸ್‌ National E Governance Services Limited (NeSL)ನ ಅಧಿಕಾರಿಯೊಬ್ಬರು ದೂರು ಸಲ್ಲಿಸಿದ್ದರು. ಎನ್ಇಎಸ್ಎಲ್ ಸಂಸ್ಥೆಯು ಅರೆಸರ್ಕಾರಿ ಸಂಸ್ಥೆಯಾಗಿದ್ದು, ಯಾವುದೇ ವ್ಯಕ್ತಿಯು ಎಲೆಕ್ಟ್ರಾನಿಕ್ ಬ್ಯಾಂಕ್ ಗ್ಯಾರೆಂಟಿ ನೀಡಿದರೆ , ಅದು ನಿಖರವಾಗಿದೆಯೇ ಎಂದು ಪರಿಶೀಲನೆ ನಡೆಸುತ್ತದೆ.

ಇ- ಬ್ಯಾಂಕ್‌ ಗ್ಯಾರಂಟಿಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ 11 ಜನ ನೀಡಿದ್ದ ಎಲೆಕ್ಟ್ರಾನಿಕ್ ಬ್ಯಾಂಕ್ ಗ್ಯಾರೆಂಟಿಗಳ ಒಟ್ಟು ಮೊತ್ತ 168,13,23,944 (ನೂರ ಅರವತ್ತೆಂಟು ಕೋಟಿಯ ಹದಿಮೂರು ಲಕ್ಷದ ಇಪ್ಪತ್ತಮೂರು ಸಾವಿರದ, ಒಂಬೈನೂರ ನಲವತ್ತಾನಾಲ್ಕು ರೂಪಾಯಿ) ಗಳಾಗಿದ್ದು, ಇವು ನಕಲಿ (Fake) ಎನ್ನುವುದು ದೃಢಪಟ್ಟಿದ್ದು, ನಕಲಿ ಎಲೆಕ್ಟ್ರಾನಿಕ್ ಬ್ಯಾಂಕ್ ಗ್ಯಾರಂಟಿ ಸೃಷ್ಟಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೈಬರ್‌ಕ್ರೈಮ್‌ ಪೊಲೀಸ್ ಠಾಣೆಯ ಅಧಿಕಾರಿಗಳು ಈ ಪ್ರಕರಣದ ತನಿಖೆ ನಡೆಸಿದ್ದು,11 ಜನ ನೀಡಿದ್ದ ದಾಖಲಾತಿ, ಮೊಬೈಲ್ ನಂಬರ್‌ಗಳನ್ನು ಹಾಗೂ ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸಿದ್ದು, ಬ್ಯಾಂಕ್ ಗ್ಯಾರಂಟಿಗಳನ್ನು ಅಪ್ಲೋಡ್ ಮಾಡಿದ 11 ಜನರನ್ನು ತನಿಖೆಗೆ ಒಳಪಡಿಸಿದ್ದಾರೆ. Nesl Portalನಲ್ಲಿ ಈ 11 ಜನರ ದೃಢೀಕರಣ (Authentication)ಕ್ಕಾಗಿ ICICI Bank ಹೆಸರಿನಲ್ಲಿ ಮತ್ತು South Indian Bank ಹೆಸರಿನಲ್ಲಿ ಇ-ಬ್ಯಾಂಕ್ ಗ್ಯಾರಂಟಿ (e-Bank Guaranty) ಗಳನ್ನು ಅಪ್ ಲೋಡ್ ಮಾಡಿರುವುದು ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳು ನಕಲಿ ಇ – ಬ್ಯಾಂಕ್ ಗ್ಯಾರಂಟಿಗಳನ್ನು ಸೃಷ್ಟಿಸಿದ್ದು, 11 ಜನಕ್ಕೆ ಇ- ಬ್ಯಾಂಕ್ ಗ್ಯಾರಂಟಿ ಎಂದು ನಂಬಿಸಿ, ಅಂದಾಜು 5 ಕೋಟಿ ಕಮಿಷನ್ ಹಣ ಪಡೆದಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.


ವಿಶೇಷ ತಂಡ ರಚನೆ

ಗಂಭೀರ ಸ್ವರೂಪದ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಮ್ ಪೊಲೀಸರು ಇಬ್ಬರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದಾರೆ. ಅಲ್ಲದೇ ಆರೋಪಿಗಳ ಪತ್ತೆಗಾಗಿ ನವದೆಹಲಿ ಹಾಗೂ ಉತ್ತರ ಪ್ರದೇಶದ ನೋಯಿಡಾದಲ್ಲಿ ಆರೋಪಿ ಪತ್ತೆಗಾಗಿ ಕರ್ನಾಟಕ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ತನಿಖೆ ವೇಳೆ ಆರೋಪಿಗಳಲ್ಲಿ ಒಬ್ಬ ಕುವೈತ್‌ಗೆ ಹೋಗಿರುವುದು ಖಚಿತವಾಗಿದೆ. ಕೂಡಲೇ ಆತನ ವಿರುದ್ಧ ಪೊಲೀಸರು ಲುಕ್ಔಟ್ ಸರ್ಕ್ಯೂಲರ್ (LOC)ನ್ನು ಹೊರಡಿಸಿದ್ದು, ವಿದೇಶದಲ್ಲಿದ್ದ ಒಬ್ಬ ಆರೋಪಿಯನ್ನು ಮಾರ್ಚ್ 13ರಂದು ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳ ಸಹಾಯದಿಂದ ವಶಕ್ಕೆ ಪಡೆಯಲಾಗಿದ್ದು, ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಆದರೆ, ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಬಂಧಿತ ಆರೋಪಿಯಿಂದ 2 ಲ್ಯಾಪ್‌ಟಾಪ್‌ಗಳು, 6 ಮೊಬೈಲ್‌ಗಳು, 1 ಪೆನ್‌ಡ್ರೈವ್‌ ಹಾಗೂ 10 ವಿವಿಧ ಬ್ಯಾಂಕ್‌ಗಳ ಚೆಕ್ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೈಬರ್‌ ಪೊಲೀಸರು ತಿಳಿಸಿದ್ದಾರೆ. 

ವಿವಿಧ ಜಿಲ್ಲೆಗಳಲ್ಲಿ 5 ಪ್ರಕರಣ ದಾಖಲು

ಬಂಧಿತ ಆರೋಪಿಯ ಮೇಲೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದು, ಆರೋಪಿ ಐದು ಪ್ರಕರಣಗಳಲ್ಲಿ ನಕಲಿ ಇ-ಬಿಜಿ ಸೃಷ್ಟಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೇ ಆರೋಪಿಗಳು ಗುಜರಾತ್ ಮತ್ತು ದೆಹಲಿಯಲ್ಲಿಯೂ ಇದೇ ಮಾದರಿಯ ಕೃತ್ಯ ಎಸಗಿರುವ ಸಾಧ್ಯತೆ ಇದ್ದು, ಸೈಬರ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Tags:    

Similar News