ಇಂದು ಸಚಿವ ಸಂಪುಟ ಸಭೆ ; ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ನಿಷೇಧ ಚರ್ಚೆ?

ರಾಜ್ಯದಲ್ಲಿನ ಸರ್ಕಾರಿ ಶಾಲೆಗಳು, ಮೈದಾನಗಳು, ಉದ್ಯಾನವನಗಳು ಮತ್ತು ಇತರೆ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಶಾಖೆ, ಸಾಂಘಿಕ್ ಅಥವಾ ಬೈಠಕ್‌ಗಳಂತಹ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

Update: 2025-10-16 04:26 GMT
ಆರ್‌ಎಸ್‌ಎಸ್‌
Click the Play button to listen to article

ರಾಜ್ಯದ ಸರ್ಕಾರಿ ಜಾಗಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳನ್ನು ನಿಷೇಧಿಸುವ ಅಥವಾ ನಿರ್ಬಂಧಿಸುವ ಕುರಿತು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.

ರಾಜ್ಯದಲ್ಲಿನ ಸರ್ಕಾರಿ ಶಾಲೆಗಳು, ಮೈದಾನಗಳು, ಉದ್ಯಾನವನಗಳು ಮತ್ತು ಇತರೆ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಶಾಖೆ, ಸಾಂಘಿಕ್ ಅಥವಾ ಬೈಠಕ್‌ಗಳಂತಹ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಈ ಪತ್ರದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ಗೆ ಕಡಿವಾಣ ಹಾಕುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಭಾರೀ ಚರ್ಚೆಗಳು ನಡೆದಿವೆ.

ಈ ವಿಷಯದ ಕುರಿತು ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ವರದಿಯಲ್ಲಿ ತಮಿಳುನಾಡಿನಂತಹ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪರಿಶೀಲಿಸುವಂತೆ ತಿಳಿಸಲಾಗಿತ್ತು ಎನ್ನಲಾಗಿದೆ.

ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಸ್ತಾವನೆ ಮತ್ತು ವರದಿಯ ಕುರಿತು ಸಚಿವರ ಅಭಿಪ್ರಾಯ ಪಡೆಯಲಿದ್ದಾರೆ. ಸಚಿವರ ಅಭಿಪ್ರಾಯಗಳ ನಂತರ, ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಿಷೇಧಿಸುವುದರಿಂದ ಆಗುವ ಸಾಧಕ-ಬಾಧಕಗಳ ಕುರಿತು ಸಚಿವ ಸಂಪುಟದಲ್ಲಿ ಸುದೀರ್ಘ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಸಂಪುಟದಲ್ಲಿ ಒಮ್ಮತದ ಅಭಿಪ್ರಾಯ ಮೂಡಿಬಂದರೆ, ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್‌ನಂತಹ ಸಂಘಟನೆಗಳ ಕಾರ್ಯಕ್ರಮಗಳಿಗೆ ಸಂಪೂರ್ಣ ನಿಷೇಧ ಹೇರುವ ಅಥವಾ ಕಡ್ಡಾಯವಾಗಿ ಸರ್ಕಾರದ ಪೂರ್ವ ಅನುಮತಿ ಪಡೆಯುವುದನ್ನು ಜಾರಿಗೊಳಿಸುವ ಕುರಿತು ಇಂದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ನಿರ್ಧಾರವು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕುವ ನಿರೀಕ್ಷೆಯಿದೆ.

ಪ್ರಿಯಾಂಕ್‌ ಖರ್ಗೆ ಪತ್ರದಲ್ಲಿ ಏನಿದೆ? 

ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರ ಬರೆದಿದ್ದು, ಸರ್ಕಾರಿ ಶಾಲೆಗಳು, ಕಾಲೇಜುಗಳು, ಸಾರ್ವಜನಿಕ ಮೈದಾನಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಆವರಣದಲ್ಲಿ ಆರ್‌ಎಸ್‌ಎಸ್‌ ನಡೆಸುವ 'ಶಾಖೆ' ಮತ್ತು 'ಬೈಠಕ್'ಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ ಎಂದು ಹೇಳಿದ್ದರು. ಇಂತಹ ಚಟುವಟಿಕೆಗಳು ಯುವ ಮನಸ್ಸುಗಳಲ್ಲಿ ವಿಭಜಕ ಆಲೋಚನೆಗಳನ್ನು ಬಿತ್ತಿ, ದೇಶದ ಸಮಗ್ರತೆಗೆ ಧಕ್ಕೆ ತರುತ್ತವೆ. ಆದ್ದರಿಂದ, ಈ ಚಟುವಟಿಕೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹೇಳಿದ್ದರು.

Tags:    

Similar News